ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಫೆಬ್ರವರಿ 2027 › 14 ಫೆಬ್ರವರಿ
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 14 ಫೆಬ್ರವರಿ 2027
ಭಾನುವಾರ · ತಪಸ್ಸು ಕಾಲದ ಮೊದಲನೆಯ ವಾರ
ಹಬ್ಬಗಳು ಮತ್ತು ಸಂತರು
ತಪಸ್ಸು ಕಾಲದ ಮೊದಲನೆಯ ಭಾನುವಾರ
ಭಾನುವಾರ · ಆರಾಧನಾ ಬಣ್ಣ: ನೇರಳೆ
ದಿನದ ವಾಚನಗಳು
ಮೊದಲನೆಯ ವಾಚನ
8ಇದಲ್ಲದೆ ದೇವರು ನೋಹನಿಗೂ ಅವನ ಮಕ್ಕಳಿಗೂ, 9“ಕೇಳಿರಿ ನಾನು ನಿಮ್ಮೊಂದಿಗೂ, ನಿಮ್ಮ ತರುವಾಯ ನಿಮ್ಮ ಸಂತತಿಯವರೊಂದಿಗೂ, ಒಡಂಬಡಿಕೆ ಮಾಡಿಕೊಳ್ಳುವೆನು. 10ನಿಮ್ಮೊಂದಿಗೆ ನಾವೆಯಿಂದ ಹೊರಟು ಬಂದ ಪಶು ಪಕ್ಷಿ, ಮೃಗ, ಸಕಲ ಭೂಜಂತುಗಳೊಂದಿಗೂ ನನ್ನ ಒಡಂಬಡಿಕೆಯನ್ನು ಸ್ಥಾಪಿಸುತ್ತೇನೆ. 11ಆ ಒಡಂಬಡಿಕೆ ಯಾವುದೆಂದರೆ, ಇನ್ನು ಮೇಲೆ ಯಾವ ಪ್ರಾಣಿಗಳೂ ಜಲಪ್ರಳಯದಿಂದ ನಾಶವಾಗುವುದಿಲ್ಲ; ಇನ್ನು ಮುಂದೆ ಭೂಮಿಯನ್ನು ಹಾಳುಮಾಡುವ ಜಲಪ್ರಳಯವು ಬರುವುದೇ ಇಲ್ಲ” ಎಂದು ಹೇಳಿದನು. 12ದೇವರು ಪುನಃ ಹೇಳಿದ್ದೇನಂದರೆ, “ನಾನು ನಿಮ್ಮನ್ನೂ ನಿಮ್ಮ ಸಂಗಡ ಇರುವ ಸಮಸ್ತ ಜೀವರಾಶಿಗಳನ್ನೂ ಕುರಿತು ತಲತಲಾಂತರಗಳಲ್ಲಿಯೂ ಮಾಡುವ ಈ ಒಡಂಬಡಿಕೆಗೆ ಮೇಘಗಳಲ್ಲಿ ನಾನು ಇಟ್ಟಿರುವ ಈ ಕಾಮನಬಿಲ್ಲೇ ಗುರುತಾಗಿರುವುದು. 13ನನಗೂ ಭೂಜೀವಿಗಳಿಗೂ ಮಾಡಿಕೊಂಡ ಒಡಂಬಡಿಕೆಗೆ ಇದೇ ಗುರುತಾಗಿರಲಿ. 14ನಾನು ಭೂಲೋಕದ ಮೇಲೆ ಮೇಘಗಳನ್ನು ಕವಿಸುವಾಗ ಆ ಕಾಮನಬಿಲ್ಲು ಮೇಘಗಳಲ್ಲಿ ಕಂಡುಬರುವುದು. 15ಆಗ ನಾನು ನಿಮ್ಮನ್ನೂ, ಎಲ್ಲಾ ಜೀವರಾಶಿಗಳನ್ನೂ ಕುರಿತು ಮಾಡಿದ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವೆನು. ಇನ್ನು ಮುಂದೆ ನೀರು ಹೆಚ್ಚಿ ಎಲ್ಲಾ ಭೂಜೀವಿಗಳನ್ನು ಹಾಳುಮಾಡುವ ಪ್ರಳಯವಾಗುವುದಿಲ್ಲ.
ಪ್ರತಿವಚನ ಕೀರ್ತನೆ
4ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಯಪಡಿಸು; ನೀನು ಒಪ್ಪುವ ದಾರಿಯನ್ನು ತೋರಿಸು. 5ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡೆಸುತ್ತಾ ಉಪದೇಶಿಸು; ನೀನೇ ನನ್ನನ್ನು ರಕ್ಷಿಸುವ ದೇವರು; ಹಗಲೆಲ್ಲಾ ನಿನ್ನನ್ನೇ ನಿರೀಕ್ಷಿಸುವವನಾಗಿದ್ದೇನೆ. 6ಯೆಹೋವನೇ, ನೀನು ಆದಿಯಿಂದಲೂ ನನ್ನನ್ನು ಕರುಣಿಸುವವನಾಗಿ, ನನಗೆ ಮಾಡಿದ ಮಹೋಪಕಾರಗಳನ್ನು ನೆನಸಿಕೋ. 7ಯೆಹೋವನೇ, ನನ್ನ ಯೌವನದ ತಪ್ಪುಗಳನ್ನೂ ಮತ್ತು ದ್ರೋಹಗಳನ್ನೂ ಮನಸ್ಸಿನಲ್ಲಿಡದೆ, ನಿನ್ನ ಕೃಪೆಗೆ ತಕ್ಕಂತೆ ದಯಾಪೂರ್ವಕವಾಗಿ ನನ್ನನ್ನು ನೆನಪುಮಾಡಿಕೋ. 8ಯೆಹೋವನು ದಯಾಳುವೂ, ಸತ್ಯಸ್ವರೂಪನೂ ಆಗಿದ್ದಾನೆ; ದಾರಿತಪ್ಪಿದವರನ್ನು ಬೋಧಿಸಿ ಸನ್ಮಾರ್ಗದಲ್ಲಿ ನಡೆಸುವನು. 9ಆತನು ದೀನರನ್ನು ತನ್ನ ವಿಧಿಗನುಗುಣವಾಗಿ ನಡೆಸುವನು; ಅವರಿಗೆ ತನ್ನ ಮಾರ್ಗವನ್ನು ತೋರಿಸುವನು.
ಎರಡನೆಯ ವಾಚನ
18ಕ್ರಿಸ್ತನು ಸಹ ನೀತಿವಂತನಾಗಿದ್ದು ಅನೀತಿವಂತರಿಗೋಸ್ಕರ ಪ್ರಾಣ ಕೊಟ್ಟು ನಮ್ಮನ್ನು ದೇವರ ಬಳಿಗೆ ಸೇರಿಸುವುದಕ್ಕಾಗಿ ಒಂದೇ ಸಾರಿ ಪಾಪನಿವಾರಣೆಗೋಸ್ಕರ ಬಾಧೆಪಟ್ಟು ಸತ್ತನು. ಆತನು ಶರೀರಸಂಬಂಧವಾಗಿ ಕೊಲ್ಲಲ್ಪಟ್ಟು, ಆತ್ಮ ಸಂಬಂಧವಾಗಿ ತಿರುಗಿ ಬದುಕುವವನಾದನು. 19ಇದಲ್ಲದೆ ಆತನು ಆತ್ಮರೂಪನಾಗಿ ಸೆರೆಯಲ್ಲಿದ್ದ ಆತ್ಮಗಳ ಬಳಿಗೆ ಹೋಗಿ ಸುವಾರ್ತೆಯನ್ನು ಸಾರಿದನು. 20ಅಂದರೆ ಪೂರ್ವಕಾಲದಲ್ಲಿ ನೋಹನು ನಾವೆಯನ್ನು ಕಟ್ಟುತ್ತಿರಲು ದೇವರು ದೀರ್ಘಶಾಂತಿಯಿಂದ ಕಾದಿದ್ದಾಗ ಅವರು ಆತನಿಗೆ ಅವಿಧೇಯರಾಗಿದ್ದರು. ಆ ನಾವೆಯೊಳಗೆ ಸೇರಿದ ಎಂಟು ಜನರು ಮಾತ್ರ ನೀರಿನೊಳಗಿನಿಂದ ರಕ್ಷಿಸಲ್ಪಟ್ಟರು. 21ಆ ನೀರಿಗೆ ಅನುರೂಪವಾದ ದೀಕ್ಷಾಸ್ನಾನವು ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ. ಅದು ದೇಹದ ಮೇಲಿನ ಕೊಳೆಯನ್ನು ಹೊಗಲಾಡಿಸುವಂಥದ್ದಲ್ಲ. ಆದರೆ ಒಳ್ಳೆಯ ಮನಸ್ಸಾಕ್ಷಿ ಬೇಕೆಂದು ದೇವರಿಗೆ ವಿಜ್ಞಾಪಿಸಿಕೊಳ್ಳುವಂಥದಾಗಿದೆ. 22ಆತನು ಪರಲೋಕಕ್ಕೆ ಹೋಗಿ ದೇವರ ಬಲಗಡೆಯಲ್ಲಿದ್ದಾನೆ, ದೇವದೂತರು, ಅಧಿಕಾರಿಗಳು ಮತ್ತು ಶಕ್ತಿಗಳೂ ಆತನ ಸ್ವಾಧೀನವಾಗಿವೆ.
ಸುವಾರ್ತೆ
12ಕೂಡಲೇ ಪವಿತ್ರಾತ್ಮ ಪ್ರೇರಿತನಾಗಿ ಯೇಸು ಅಡವಿಗೆ ಹೋದನು. 13ಆತನು ನಲವತ್ತು ದಿನ ಅಡವಿಯಲ್ಲಿ ಕಾಡುಮೃಗಗಳೊಂದಿಗೆ ಇದ್ದು ಸೈತಾನನಿಂದ ಶೋಧಿಸಲ್ಪಟ್ಟನು ಮತ್ತು ದೇವದೂತರು ಯೇಸುವಿಗೆ ಉಪಚಾರ ಮಾಡಿದರು. 14ಯೋಹಾನನು ಬಂಧಿತನಾದ ತರುವಾಯ ಯೇಸು ಗಲಿಲಾಯಕ್ಕೆ ಬಂದು ದೇವರ ಸುವಾರ್ತೆಯನ್ನು ಹೀಗೆ ಸಾರಿ ಹೇಳಿದನು, 15“ಕಾಲವು ಪರಿಪೂರ್ಣವಾಯಿತು, ದೇವರ ರಾಜ್ಯವು ಸಮೀಪಿಸಿತು; ಪಶ್ಚಾತ್ತಾಪಪಟ್ಟು ಸುವಾರ್ತೆಯನ್ನು ನಂಬಿರಿ.”
ಇಂದಿನ ಸಂತರು
- ಸಂತರಾದ ಸಿರಿಲ್, ಸನ್ಯಾಸಿ, ಮತ್ತು ಮೆಥೋಡಿಯಸ್, ಧರ್ಮಾಧ್ಯಕ್ಷ
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು