Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಫೆಬ್ರವರಿ 2027 › 13 ಫೆಬ್ರವರಿ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 13 ಫೆಬ್ರವರಿ 2027

ಶನಿವಾರ · ತಪಸ್ಸು ಕಾಲ: ಬೂದಿ ಬುಧವಾರದ ನಂತರದ ದಿನಗಳು

ಹಬ್ಬಗಳು ಮತ್ತು ಸಂತರು

ಬೂದಿ ಬುಧವಾರದ ನಂತರದ ಶನಿವಾರ

ವಾರದ ದಿನ · ಆರಾಧನಾ ಬಣ್ಣ: ನೇರಳೆ

ದಿನದ ವಾಚನಗಳು

ಮೊದಲನೆಯ ವಾಚನ

ಯೆಶಾ 58:9–14

9ಆಗ ನೀವು ಕೂಗಿದರೆ ಯೆಹೋವನು ಉತ್ತರಕೊಡುವನು, ಮೊರೆಯಿಟ್ಟು ಕರೆದರೆ, “ಇಗೋ, ಇದ್ದೇನೆ” ಅನ್ನುವನು. ನೀವು ನಿಮ್ಮ ಮಧ್ಯದೊಳಗಿಂದ ನೊಗವನ್ನು, ಇನ್ನೊಬ್ಬರನ್ನು ದೂಷಣೆಗೆ ಗುರಿಮಾಡಿ ತೋರುವ ಬೆರಳನ್ನು, ಕೆಡುಕಿನ ನುಡಿಯನ್ನು ಬಿಟ್ಟು, 10ನಿಮಗೆ ಪ್ರಿಯವಾದದ್ದನ್ನು ಹಸಿದವರಿಗೆ ಒದಗಿಸಿ, ಕುಗ್ಗಿದವರ ಆಶೆಯನ್ನು ನೆರವೇರಿಸಿದರೆ, ಆಗ ನಿಮಗೆ ಕತ್ತಲಲ್ಲಿ ಬೆಳಕು ಉದಯಿಸುವುದು, ನಿಮ್ಮ ಅಂಧಕಾರವು ಪರಿಹಾರವಾಗಿ ಮಧ್ಯಾಹ್ನವಾಗುವುದು. 11ಮತ್ತು ಯೆಹೋವನು ನಿಮ್ಮನ್ನು ನಿತ್ಯವೂ ನಡೆಸುತ್ತಾ, ಮರುಭೂಮಿಯಲ್ಲಿಯೂ ನಿಮ್ಮ ಆತ್ಮವನ್ನು ತೃಪ್ತಿಗೊಳಿಸಿ, ನಿಮ್ಮ ಎಲುಬುಗಳನ್ನು ಬಲಗೊಳಿಸುವನು; ನೀವು ತಂಪಾದ ತೋಟಕ್ಕೂ, ನೀರಿಗೆ ಮೋಸವಿಲ್ಲದ ಬುಗ್ಗೆಗೂ ಸಮಾನವಾಗುವಿರಿ. 12ನಿಮ್ಮ ಸಂತಾನದವರು ಪುರಾತನಕಾಲದಲ್ಲಿ ಹಾಳಾದ ನಿವೇಶನಗಳನ್ನು ಪುನಃ ಕಟ್ಟುವರು. ನೀವು ತಲತಲಾಂತರಗಳಿಂದ ಹಾಳುಬಿದ್ದಿರುವ ಅಸ್ತಿವಾರಗಳ ಮೇಲೆ ಕಟ್ಟಡಗಳನ್ನು ಎಬ್ಬಿಸುವಿರಿ; “ಬಿದ್ದ ಗೋಡೆಯನ್ನು ಕಟ್ಟುವ ಜನಾಂಗ, ಹಾದಿಗಳನ್ನು ತಿರುಗಾಡುವ ಸ್ಥಿತಿಗೆ ತರುವ ಜನಾಂಗ” ಎಂಬ ಬಿರುದುಗಳು ನಿಮಗುಂಟಾಗುವವು. 13ನೀವು ಸಬ್ಬತ್ ದಿನವನ್ನು ಅಗಮ್ಯವಾದದ್ದೆಂದು ತಿಳಿದು, ಆ ನನ್ನ ಪರಿಶುದ್ಧ ದಿನದಲ್ಲಿ ನಿಮ್ಮ ನಿತ್ಯದ ಕೆಲಸವನ್ನು ಮಾಡದೆ, ಸ್ವಇಚ್ಛೆಯಂತೆ ನಡೆಯದೆ, ಸ್ವಕಾರ್ಯದಲ್ಲಿ ನಿರತರಾಗದೆ, ಹರಟೆಹರಟದೆ, ಯೆಹೋವನ ಸಬ್ಬತ್ ಎಂಬ ಪರಿಶುದ್ಧದಿನವು ಉಲ್ಲಾಸಕರವೂ, ಮಾನ್ಯವೂ ಆದದ್ದೆಂದು ಘನಪಡಿಸಿದರೆ, 14ಆಗ ನೀವು ಯೆಹೋವನಲ್ಲಿ ಉಲ್ಲಾಸಪಡುವಿರಿ ಮತ್ತು ನಾನು ನಿಮ್ಮನ್ನು ಭೂಮಿಯ ಉನ್ನತವಾದ ಪ್ರದೇಶಗಳ ಮೇಲೆ ಹತ್ತಿಸಿ, ನಿಮ್ಮ ಪಿತೃವಾದ ಯಾಕೋಬನ ಸ್ವತ್ತನ್ನು ನೀವು ಅನುಭವಿಸುವಂತೆ ಮಾಡುವೆನು. ಯೆಹೋವನೇ ಇದನ್ನು ನುಡಿದಿದ್ದಾನೆ.

ಪ್ರತಿವಚನ ಕೀರ್ತನೆ

ಕೀರ್ತ 86:1–6

1ದಾವೀದನ ಕೀರ್ತನೆ. ಯೆಹೋವನೇ, ಕಿವಿಗೊಡು; ನನಗೆ ಸದುತ್ತರವನ್ನು ದಯಪಾಲಿಸು; ಕುಗ್ಗಿದವನೂ, ದಿಕ್ಕಿಲ್ಲದವನೂ ಆಗಿದ್ದೇನೆ. 2ನಾನು ನಿನ್ನ ಭಕ್ತನು; ನನ್ನ ಪ್ರಾಣವನ್ನು ಉಳಿಸು; ನೀನೇ ನನ್ನ ದೇವರು; ನಿನ್ನಲ್ಲಿ ಭರವಸವಿಟ್ಟಿರುವ ನಿನ್ನ ಸೇವಕನನ್ನು ರಕ್ಷಿಸು. 3ಕರ್ತನೇ, ಕರುಣಿಸು; ದಿನವೆಲ್ಲಾ ನಿನಗೆ ಮೊರೆಯಿಡುತ್ತೇನೆ. 4ಕರ್ತನೇ, ನಿನ್ನ ಸೇವಕನ ಹೃದಯವನ್ನು ಆನಂದಗೊಳಿಸು; ನಿನ್ನನ್ನೇ ನಿರೀಕ್ಷಿಸುತ್ತಿರುವೆನಲ್ಲಾ. 5ಕರ್ತನೇ, ನೀನು ಒಳ್ಳೆಯವನೂ, ಕ್ಷಮಿಸುವವನೂ, ನಿನಗೆ ಮೊರೆಯಿಡುವವರೆಲ್ಲರಲ್ಲಿ ಕೃಪಾಪೂರ್ಣನೂ ಆಗಿದ್ದಿಯಲ್ಲಾ. 6ಯೆಹೋವನೇ, ನನ್ನ ಪ್ರಾರ್ಥನೆಗೆ ಕಿವಿಗೊಡು; ನನ್ನ ವಿಜ್ಞಾಪನೆಗಳ ಕೂಗನ್ನು ಲಾಲಿಸು.

ಸುವಾರ್ತೆ

ಲೂಕ 5:27–32

27ಅನಂತರ ಯೇಸು ಹೊರಟು ಸುಂಕ ವಸೂಲಿಮಾಡುವ ಸ್ಥಳದಲ್ಲಿ ಕುಳಿತಿದ್ದ ಲೇವಿಯೆಂಬ ಒಬ್ಬ ಸುಂಕದವನನ್ನು ಕಂಡು, “ನನ್ನನ್ನು ಹಿಂಬಾಲಿಸು” ಎಂದು ಅವನನ್ನು ಕರೆಯಲು, 28ಅವನು ಎಲ್ಲವನ್ನೂ ಬಿಟ್ಟು ಎದ್ದು ಆತನ ಹಿಂದೆ ಹೋದನು. 29ತರುವಾಯ ಲೇವಿಯು ತನ್ನ ಮನೆಯಲ್ಲಿ ಯೇಸುವಿಗೆ ಒಂದು ದೊಡ್ಡ ಔತಣವನ್ನು ಏರ್ಪಡಿಸಿರಲು, ಸುಂಕದವರೂ ಇತರರೂ ಗುಂಪಾಗಿ ಕೂಡಿ ಬಂದು ಅವರ ಸಂಗಡ ಊಟಕ್ಕೆ ಕುಳಿತುಕೊಂಡಿದ್ದರು. 30ಅದನ್ನು ಕಂಡು ಫರಿಸಾಯರು ಮತ್ತು ಅವರ ಪಂಥಕ್ಕೆ ಸೇರಿದ ಶಾಸ್ತ್ರಿಗಳೂ ಆತನ ಶಿಷ್ಯರ ಮೇಲೆ ಗೊಣಗುಟ್ಟುತ್ತಾ, “ನೀವು ಸುಂಕದವರ ಮತ್ತು ಪಾಪಿಗಳ ಸಂಗಡ ಊಟಮಾಡುವುದೇಕೆ?” ಎಂದು ಕೇಳಿದರು. 31ಅದಕ್ಕೆ ಯೇಸು, “ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು; 32ನಾನು ನೀತಿವಂತರನ್ನಲ್ಲ, ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ಪಾಪಿಗಳನ್ನು ಕರೆಯುವುದಕ್ಕೆ ಬಂದಿದ್ದೇನೆ” ಎಂದು ಅವರಿಗೆ ಉತ್ತರಕೊಟ್ಟನು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು