ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜನವರಿ 2027 › 23 ಜನವರಿ
ಆರ್ಥೊಡಾಕ್ಸ್ ಪಂಚಾಂಗ · ಜನವರಿ 10 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 23 ಜನವರಿ 2027
ಶನಿವಾರ · ಪಂಚಾಶತ್ತಮದ ನಂತರದ 34ನೇ ವಾರ · ಸ್ವರ 8
ಹಬ್ಬಗಳು ಮತ್ತು ಸಂತರು
ದೇವಪ್ರತ್ಯಕ್ಷತೆಯ ನಂತರದ ಶನಿವಾರ
ಉಪವಾಸ
ಉಪವಾಸವಿಲ್ಲ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಪತ್ರಿಕೆ (ದೇವಪ್ರತ್ಯಕ್ಷತೆಯ ನಂತರದ ಶನಿವಾರ)
10ಕಡೆಯದಾಗಿ, ನೀವು ಕರ್ತನಲ್ಲಿಯೂ ಆತನ ಅತ್ಯಧಿಕವಾದ ಶಕ್ತಿಯಲ್ಲಿಯೂ ಬಲಗೊಳ್ಳಿರಿ. 11ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವುದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ. 12ನಮಗೆ ಹೋರಾಟವಿರುವುದು ಮನುಷ್ಯಮಾತ್ರದವರ ಸಂಗಡವಲ್ಲ. ರಾಜತ್ವಗಳ ಮೇಲೆಯೂ, ಅಧಿಕಾರಿಗಳ ಮೇಲೆಯೂ, ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ, ಆಕಾಶ ಮಂಡಲಗಳಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ. 13ಆದ್ದರಿಂದ ಆ ದುಷ್ಟ ದಿನದಲ್ಲಿ ವೈರಿಗಳನ್ನು ಎದುರಿಸುವುದಕ್ಕೂ ಮಾಡಬೇಕಾದದ್ದೆಲ್ಲವನ್ನು ಮಾಡಿ ದೃಢವಾಗಿ ನಿಲ್ಲುವುದಕ್ಕೂ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ. 14ಸತ್ಯವೆಂಬ ನಡುಕಟ್ಟನ್ನು ಸೊಂಟಕ್ಕೆ ಕಟ್ಟಿಕೊಂಡು, ನೀತಿಯೆಂಬ ಎದೆಕವಚವನ್ನು ಧರಿಸಿಕೊಂಡು, 15ಸಮಾಧಾನದ ಸುವಾರ್ತೆಯನ್ನು ಪ್ರಚುರಪಡಿಸುವುದಕ್ಕೆ ಸಿದ್ಧ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ನಿಲ್ಲಿರಿ. 16ಎಲ್ಲಾದಕ್ಕಿಂತ ಹೆಚ್ಚಾಗಿ ನಂಬಿಕೆಯೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಅದರಿಂದ ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ನಂದಿಸುವುದಕ್ಕೆ ಶಕ್ತರಾಗುವಿರಿ. 17ಇದಲ್ಲದೆ ರಕ್ಷಣೆಯೆಂಬ ಶಿರಸ್ತ್ರಾಣವನ್ನು ಇಟ್ಟುಕೊಂಡು ಪವಿತ್ರಾತ್ಮನು ಕೊಡುವ ದೇವರ ವಾಕ್ಯವೆಂಬ ಕತ್ತಿಯನ್ನು ಹಿಡಿದುಕೊಳ್ಳಿರಿ.
ಪತ್ರಿಕೆ
11ಆದಕಾರಣ ಹಿಂದೊಮ್ಮೆ ನೀವು ಜನ್ಮದಿಂದ ಅನ್ಯಜನರಾಗಿದ್ದೀರಿ ಎಂಬುದು ನಿಮಗೆ ನೆನಪಿರಲಿ. ಶರೀರದಲ್ಲಿ ಮನುಷ್ಯನಿಂದ ಸುನ್ನತಿಯನ್ನು ಮಾಡಿಸಿಕೊಂಡು ಸುನ್ನತಿಯವರೆನ್ನಿಸಿಕೊಳ್ಳುವವರಿಂದ ‘ಸುನ್ನತಿಯಿಲ್ಲದವರು’ ಎಂದು ಕರೆಯಲ್ಪಟ್ಟಿದ್ದೀರಿ. 12ಅಂದು ನೀವು ಕ್ರಿಸ್ತನಿಂದ ದೂರವಿದವರೂ, ಇಸ್ರಾಯೇಲ್ಯರ ಹಕ್ಕಿನಲ್ಲಿ ಪಾಲಿಲ್ಲದವರೂ, ವಾಗ್ದಾನಕ್ಕೆ ಸಂಬಂಧವಾದ ಒಡಂಬಡಿಕೆಗಳಲ್ಲಿ ಪರಕೀಯರೂ, ಯಾವ ನಿರೀಕ್ಷೆಯಿಲ್ಲದವರೂ ಮತ್ತು ಲೋಕದಲ್ಲಿ ದೇವರಿಲ್ಲದವರೂ ಆಗಿದ್ದಿರೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ. 13ಈಗಲಾದರೋ, ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವಿನಲ್ಲಿ ಆತನ ರಕ್ತದ ಮೂಲಕ ಸಮೀಪಸ್ಥರಾಗಿದ್ದೀರಿ.
ಸುವಾರ್ತೆ (ದೇವಪ್ರತ್ಯಕ್ಷತೆಯ ನಂತರದ ಶನಿವಾರ)
1ಆಗ ಯೇಸು ಸೈತಾನನಿಂದ ಶೋಧಿಸಲ್ಪಡುವುದಕ್ಕಾಗಿ ದೇವರಾತ್ಮನು ಆತನನ್ನು ಅಡವಿಗೆ ನಡೆಸಿದನು. 2ಆತನು ನಲವತ್ತು ದಿನ ಹಗಲಿರುಳು ಉಪವಾಸವಿದ್ದ ತರುವಾಯ ಆತನಿಗೆ ಹಸಿವಾಯಿತು. 3ಆಗ ಸೈತಾನನು ಆತನ ಬಳಿಗೆ ಬಂದು, “ನೀನು ದೇವರ ಮಗನಾಗಿದ್ದರೆ ಈ ಕಲ್ಲುಗಳಿಗೆ ರೊಟ್ಟಿಯಾಗುವಂತೆ ಅಪ್ಪಣೆಕೊಡು” ಎಂದು ಹೇಳಲು, 4ಯೇಸು, “‘ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವುದಿಲ್ಲ, ಆದರೆ ದೇವರ ಬಾಯಿಂದ ಬರುವ ಪ್ರತಿಯೊಂದು ನುಡಿಯಿಂದಲೂ ಬದುಕುವನು’ ಎಂದು ಬರೆದಿದೆ” ಅಂದನು. 5ಆಗ ಸೈತಾನನು ಯೇಸುವನ್ನು ಪರಿಶುದ್ಧ ಪಟ್ಟಣಕ್ಕೆ ಕರೆದುಕೊಂಡು ಹೋಗಿ ದೇವಾಲಯದ ಗೋಪುರದ ಮೇಲೆ ನಿಲ್ಲಿಸಿ 6ಯೇಸುವಿಗೆ, “ನೀನು ದೇವರ ಮಗನೇ ಆಗಿದ್ದರೆ ಇಲ್ಲಿಂದ ಕೆಳಕ್ಕೆ ದುಮುಕು; ‘ದೇವರು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು; ನಿನ್ನ ಕಾಲು ಕಲ್ಲಿಗೆ ತಗಲದಂತೆ ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು’ ಎಂಬುದಾಗಿ ಬರೆದಿದೆಯಲ್ಲಾ” ಎಂದು ಹೇಳಿದನು. 7ಅದಕ್ಕೆ ಯೇಸು, “ನಿನ್ನ ದೇವರಾಗಿರುವ ಕರ್ತನನ್ನು ಪರೀಕ್ಷಿಸಬಾರದು ಎಂಬುದಾಗಿಯೂ ಬರೆದಿದೆ” ಅಂದನು. 8ಬಳಿಕ ಸೈತಾನನು ಆತನನ್ನು ಬಹಳ ಎತ್ತರವಾದ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಆತನಿಗೆ ತೋರಿಸಿ, 9ಯೇಸುವಿಗೆ, “ನೀನು ನನಗೆ ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವುಗಳನ್ನೆಲ್ಲಾ ನಿನಗೆ ಕೊಡುವೆನು” ಅಂದನು. 10ಯೇಸು ಅವನಿಗೆ, “ಸೈತಾನನೇ, ನೀನು ತೊಲಗಿ ಹೋಗು. ‘ನಿನ್ನ ದೇವರಾಗಿರುವ ಕರ್ತನನ್ನು ಮಾತ್ರ ಆರಾಧಿಸಬೇಕು ಆತನೊಬ್ಬನನ್ನೇ ಸೇವಿಸಬೇಕು’ ಎಂಬುದಾಗಿ ಬರೆದಿದೆಯಲ್ಲಾ” ಎಂದು ಹೇಳಿದನು. 11ಆಗ ಸೈತಾನನು ಆತನನ್ನು ಬಿಟ್ಟು ಹೊರಟು ಹೋದನು, ಆಗ ದೇವದೂತರು ಬಂದು ಆತನಿಗೆ ಉಪಚಾರ ಮಾಡಿದರು.
ಸುವಾರ್ತೆ
18ತರುವಾಯ ಯೇಸು ಕೇಳಿದ್ದೇನಂದರೆ, “ದೇವರ ರಾಜ್ಯವು ಏನನ್ನು ಹೋಲುತ್ತದೆ? ಅದನ್ನು ನಾನು ಯಾವುದಕ್ಕೆ ಹೋಲಿಸಲಿ? 19ಅದು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬ ಮನುಷ್ಯನು ಅದನ್ನು ತೆಗೆದುಕೊಂಡು ಹೋಗಿ ತನ್ನ ತೋಟದಲ್ಲಿ ಹಾಕಿದನು. ಅದು ಬೆಳೆದು ಮರವಾಯಿತು. ಮತ್ತು ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿದವು” ಅಂದನು. 20ಆತನು ಇನ್ನೂ ಹೇಳಿದ್ದೇನಂದರೆ, “ದೇವರ ರಾಜ್ಯವನ್ನು ನಾನು ಯಾವುದಕ್ಕೆ ಹೋಲಿಸಲಿ? 21ಅದು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಹೆಂಗಸು ತೆಗೆದು ಮೂರು ಸೇರು ಹಿಟ್ಟಿನಲ್ಲಿ ಕಲಸಿಡಲು ಆ ಹಿಟ್ಟೆಲ್ಲಾ ಹುಳಿಯಾಯಿತು” ಅಂದನು. 22ಯೇಸು ಊರೂರಿಗೂ ಗ್ರಾಮ ಗ್ರಾಮಕ್ಕೂ ಹೋಗಿ ಉಪದೇಶ ಮಾಡುತ್ತಾ ಯೆರೂಸಲೇಮಿಗೆ ಪ್ರಯಾಣ ಮಾಡುತ್ತಿದ್ದನು. 23ಆಗ ಒಬ್ಬನು, “ಕರ್ತನೇ, ರಕ್ಷಣೆ ಹೊಂದುವವರು ಸ್ವಲ್ಪ ಜನರೋ?” ಎಂದು ಕೇಳಲು, 24ಆತನು ಅವರಿಗೆ, “ಇಕ್ಕಟ್ಟಾದ ಬಾಗಿಲಿನಿಂದ ಒಳಗೆ ಹೋಗುವುದಕ್ಕೆ ಪ್ರಯಾಸಪಡಿರಿ. ಏಕೆಂದರೆ ಬಹು ಜನರು ಒಳಗೆ ಹೋಗುವುದಕ್ಕೆ ನೋಡುವರು. ಆದರೆ ಅವರಿಂದಾಗುವುದಿಲ್ಲ ಎಂದು ನಿಮಗೆ ಹೇಳುತ್ತೇನೆ. 25ಮನೆ ಯಜಮಾನನು ಎದ್ದು ಬಾಗಿಲು ಮುಚ್ಚಿದ ಮೇಲೆ ನೀವು ಹೊರಗೆ ನಿಂತುಕೊಂಡು ಬಾಗಿಲು ತಟ್ಟಿ, ‘ಕರ್ತನೇ ನಮಗೆ ಬಾಗಿಲು ತೆರೆಯಿರಿ’ ಎಂದು ಬಾಗಿಲು ಬಡಿಯುವುದಕ್ಕೆ ತೊಡಗುವಾಗ ಅವನು, ‘ನೀವು ಎಲ್ಲಿಯವರೋ? ನಿಮ್ಮ ಗುರುತು ನನಗಿಲ್ಲ’ ಅಂದಾನು 26ಅದಕ್ಕೆ ನೀವು, ‘ನಿನ್ನ ಸಂಗಡ ನಾವು ಊಟ ಮಾಡಿದೆವು, ಕುಡಿದೆವು, ನಮ್ಮ ಬೀದಿಗಳಲ್ಲಿ ನೀನು ಉಪದೇಶ ಮಾಡಿದ್ದಿ’ ಎಂದು ಹೇಳುವುದಕ್ಕೆ ತೊಡಗುವಿರಿ. 27ಆದರೆ ಅವನು, ‘ನೀವು ಎಲ್ಲಿಯವರೋ? ನಿಮ್ಮ ಗುರುತು ನನಗಿಲ್ಲ. ಅಧರ್ಮಮಾಡುವ ನೀವೆಲ್ಲರೂ ನನ್ನ ಕಡೆಯಿಂದ ಹೊರಟು ಹೋಗಿರಿ’ ಎಂದು ನಿಮಗೆ ಹೇಳುತ್ತೇನೆ ಅನ್ನುವನು. 28ಅಬ್ರಹಾಮ, ಇಸಾಕ, ಯಾಕೋಬರು ಮತ್ತು ಎಲ್ಲಾ ಪ್ರವಾದಿಗಳು ದೇವರ ರಾಜ್ಯದಲ್ಲಿರುವುದನ್ನೂ ನೀವು ನೋಡುವಿರಿ. ಆದರೆ ನಿಮ್ಮನ್ನು ಮಾತ್ರ ಹೊರಗೆ ಹಾಕಲಾಗುವುದು ಅಲ್ಲಿ ನಿಮಗೆ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಉಂಟಾಗುವವು. 29ಇದಲ್ಲದೆ ಪೂರ್ವ ಪಶ್ಚಿಮ ಉತ್ತರ ದಕ್ಷಿಣಗಳಿಂದಲೂ ಜನರು ಬಂದು ದೇವರ ರಾಜ್ಯದಲ್ಲಿ ಔತಣಕ್ಕೆ ಕುಳಿತುಕೊಳ್ಳುವರು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 10 ಜನವರಿ ಎಂದರೆ ನಾಗರಿಕ ಪಂಚಾಂಗದ 23 ಜನವರಿ. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು