Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜನವರಿ 2027 › 7 ಜನವರಿ

ಆರ್ಥೊಡಾಕ್ಸ್ ಪಂಚಾಂಗ · ಡಿಸೆಂಬರ್ 25 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 7 ಜನವರಿ 2027

ಗುರುವಾರ · ಪಂಚಾಶತ್ತಮದ ನಂತರದ 32ನೇ ವಾರ · ಸ್ವರ 6

ಹಬ್ಬಗಳು ಮತ್ತು ಸಂತರು

The Nativity of our Lord God and Savior Jesus Christ

ಕ್ರಿಸ್ಮಸ್ ಕಾಲ (ಸ್ವ್ಯಾತ್ಕಿ)

ಉಪವಾಸವಿಲ್ಲ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಉದಯಕಾಲದ ಪ್ರಾರ್ಥನೆ: ಸುವಾರ್ತೆ

ಮತ್ತಾ 1:18–25

18ಯೇಸು ಕ್ರಿಸ್ತನ ಜನನವು ಹೇಗಾಯಿತಂದರೆ, ಆತನ ತಾಯಿಯಾದ ಮರಿಯಳಿಗೂ ಯೋಸೇಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಮದುವೆಯಾಗಿ ಕೂಡಿಬಾಳುವುದಕ್ಕಿಂತ ಮೊದಲೇ ಮರಿಯಳು ಪವಿತ್ರಾತ್ಮನ ಶಕ್ತಿಯಿಂದ ಗರ್ಭಧರಿಸಿದ್ದು ತಿಳಿದುಬಂತು. 19ಆದರೆ ಆಕೆಯ ಗಂಡನಾದ ಯೋಸೇಫನು ನೀತಿವಂತನಾಗಿದ್ದ ಕಾರಣ ಮರಿಯಳನ್ನು ಬಯಲಿಗೆ ತಂದು ಅವಮಾನಕ್ಕೆ ಗುರಿಮಾಡದೆ ನಿಶ್ಚಿತಾರ್ಥವನ್ನು ರಹಸ್ಯವಾಗಿ ಮುರಿದುಬಿಡಬೇಕೆಂದು ಆಲೋಚಿಸಿದ್ದನು. 20ಅವನು ಇದನ್ನು ಕುರಿತು ಆಲೋಚಿಸುತ್ತಿರುವಾಗ, ದೇವದೂತನು ಅವನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ದಾವೀದನ ಮಗನಾದ ಯೋಸೇಫನೇ, ನೀನು ಮರಿಯಳನ್ನು ಹೆಂಡತಿಯಾಗಿ ಸೇರಿಸಿಕೊಳ್ಳುವುದಕ್ಕೆ ಅಂಜಬೇಡ. ಆಕೆ ಗರ್ಭವತಿಯಾದದ್ದು ಪವಿತ್ರಾತ್ಮನಿಂದಲೇ. 21ಆಕೆಯು ಒಬ್ಬ ಮಗನನ್ನು ಹೆರುವಳು; ನೀನು ಆತನಿಗೆ ‘ಯೇಸು’ ಎಂದು ಹೆಸರಿಡಬೇಕು; ಏಕೆಂದರೆ ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ರಕ್ಷಿಸುವನು,” ಅಂದನು. 22ಕರ್ತನು ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು; ಆ ಮಾತು ಏನೆಂದರೆ, 23“ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹೆರುವಳು; ಆತನಿಗೆ ಇಮ್ಮಾನುವೇಲ್ ಎಂದು ಹೆಸರಿಡುವರು. ‘ದೇವರು ನಮ್ಮ ಕೂಡ ಇದ್ದಾನೆಂದು’ ಈ ಹೆಸರಿನ ಅರ್ಥ.” 24ಆಗ ಯೋಸೇಫನು ಎಚ್ಚೆತ್ತು ದೇವದೂತನು ಅಪ್ಪಣೆಕೊಟ್ಟ ಪ್ರಕಾರ ಮರಿಯಳನ್ನು ಹೆಂಡತಿಯನ್ನಾಗಿ ಸ್ವೀಕರಿಸಿಕೊಂಡನು. 25ಆದರೆ ಆಕೆಯು ಗಂಡು ಮಗುವಿಗೆ ಜನ್ಮನೀಡುವವರೆಗೂ ಆಕೆಯೊಡನೆ ಶರೀರ ಸಂಬಂಧವಿಲ್ಲದೆ ಇದ್ದನು. ಮತ್ತು ಯೋಸೇಫನು ಆ ಮಗುವಿಗೆ ‘ಯೇಸು’ ಎಂದು ಹೆಸರಿಟ್ಟನು.

ಪತ್ರಿಕೆ (ಜನನದ ಹಬ್ಬ)

ಗಲಾ 4:4–7

4ಆದರೆ ಸೂಕ್ತಸಮಯ ಬಂದಾಗ ದೇವರು ತನ್ನ ಮಗನನ್ನು ಕಳುಹಿಸಿಕೊಟ್ಟನು. ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು ಬಿಡಿಸಬೇಕೆಂತಲೂ, ಪುತ್ರರ ಬಾಧ್ಯತೆಯ ಪದವಿಯನ್ನು ನಮಗೆ ದೊರಕಿಸಿಕೊಡಬೇಕೆಂತಲೂ ಆತನು ಸ್ತ್ರೀಯಲ್ಲಿ ಹುಟ್ಟಿದವನಾಗಿಯೂ, ಧರ್ಮಶಾಸ್ತ್ರಾಧೀನನಾಗಿಯೂ ಬಂದನು. 6ನೀವು ಪುತ್ರರಾಗಿರುವುದರಿಂದ ದೇವರು, “ಅಪ್ಪಾ ತಂದೆಯೇ” ಎಂದು ಕೂಗುವ ತನ್ನ ಮಗನ ಆತ್ಮನನ್ನು ನಮ್ಮ ಹೃದಯಗಳಲ್ಲಿ ಕಳುಹಿಸಿಕೊಟ್ಟನು. 7ಹೀಗಿರುವಲ್ಲಿ ಇನ್ನು ನೀನು ಸೇವಕನಲ್ಲ, ಮಗನಾಗಿದ್ದೀ. ಮಗನೆಂದ ಮೇಲೆ ದೇವರ ಮೂಲಕ ವಾರಸುದಾರನು ಆಗಿದ್ದೀ.

ಸುವಾರ್ತೆ (ಜನನದ ಹಬ್ಬ)

ಮತ್ತಾ 2:1–12

1ಅರಸನಾದ ಹೆರೋದನ ಕಾಲದಲ್ಲಿ; ಯೂದಾಯ ಸೀಮೆಯ ಬೇತ್ಲೆಹೇಮ್ ಎಂಬ ಊರಿನಲ್ಲಿ ಯೇಸು ಹುಟ್ಟಿದಾಗ ಪೂರ್ವದೇಶದ ಜ್ಞಾನಿಗಳು ಯೆರೂಸಲೇಮಿಗೆ ಬಂದು, 2“ಯೆಹೂದ್ಯರ ಅರಸನಾಗಿ ಹುಟ್ಟಿದಾತನು ಎಲ್ಲಿದ್ದಾನೆ? ಆತನನ್ನು ಸೂಚಿಸುವ ನಕ್ಷತ್ರವನ್ನು ನಾವು ಪೂರ್ವದಿಕ್ಕಿನಲ್ಲಿ ಕಂಡು ಆತನಿಗೆ ಅಡ್ಡಬಿದ್ದು ನಮಸ್ಕರಿಸುವುದಕ್ಕಾಗಿ ಬಂದೆವು” ಎಂದರು. 3ಇದನ್ನು ಕೇಳಿ ಅರಸನಾದ ಹೆರೋದನು ತಳಮಳಪಟ್ಟನು ಮತ್ತು ಅವನೊಂದಿಗೆ ಯೆರೂಸಲೇಮಿನವರೆಲ್ಲರೂ ಕಳವಳಪಟ್ಟರು. 4ಅವನು ಯೆಹೂದ್ಯರ ಎಲ್ಲಾ ಮುಖ್ಯಯಾಜಕರನ್ನೂ ಶಾಸ್ತ್ರಿಗಳನ್ನೂ ಕೂಡಿಸಿ, “ಕ್ರಿಸ್ತನು ಹುಟ್ಟಬೇಕಾದದ್ದು ಎಲ್ಲಿ” ಎಂದು ಅವರನ್ನು ಕೇಳಿದನು. 5ಅವರು ಅವನಿಗೆ, “ಯೂದಾಯದ ಬೇತ್ಲೆಹೇಮಿನಲ್ಲಿಯೇ; ಏಕೆಂದರೆ, 6“‘ಯೆಹೂದ ಸೀಮೆಯ ಬೇತ್ಲೆಹೇಮೇ, ಯೆಹೂದದ ಮುಖ್ಯಪಟ್ಟಣಗಳಲ್ಲಿ ನೀನು ಎಷ್ಟು ಮಾತ್ರಕ್ಕೂ ಸಣ್ಣದಲ್ಲ. ಏಕೆಂದರೆ ನನ್ನ ಪ್ರಜೆಯಾದ ಇಸ್ರಾಯೇಲನ್ನು ಆಳತಕ್ಕ ಒಬ್ಬ ಅಧಿಪತಿಯು ನಿನ್ನೊಳಗಿಂದಲೇ ಉದಯಿಸುವನು.’ ಎಂಬುದಾಗಿ ಪ್ರವಾದಿಯ ಮುಖಾಂತರ ಬರೆಯಲ್ಪಟಿದೆ” ಎಂದು ಹೇಳಿದರು. 7ಆಗ ಹೆರೋದನು ಯಾರಿಗೂ ತಿಳಿಯದಂತೆ ಆ ಜ್ಞಾನಿಗಳನ್ನು ಕರೆಯಿಸಿ ಆ ನಕ್ಷತ್ರವು ಕಾಣಿಸಿದ ಗಳಿಗೆಯನ್ನು ಅವರಿಂದ ನಿಖರವಾಗಿ ತಿಳಿದುಕೊಂಡು, 8“ನೀವು ಹೋಗಿ ಆ ಕೂಸಿನ ವಿಷಯದಲ್ಲಿ ಚೆನ್ನಾಗಿ ವಿಚಾರಣೆ ಮಾಡಿರಿ; ಅದು ಸಿಕ್ಕಿದ ಮೇಲೆ ನನಗೆ ತಿಳಿಸಿರಿ; ನಾನು ಸಹ ಬಂದು ಆ ಕೂಸಿಗೆ ಅಡ್ಡಬಿದ್ದು ನಮಸ್ಕರಿಸುವೆನು” ಎಂದು ಹೇಳಿ ಜ್ಞಾನಿಗಳನ್ನು ಬೇತ್ಲೆಹೇಮಿಗೆ ಕಳುಹಿಸಿಕೊಟ್ಟನು. 9ಅವರು ಅರಸನ ಮಾತನ್ನು ಕೇಳಿ ಹೊರಟಾಗ ಪೂರ್ವದಿಕ್ಕಿನಲ್ಲಿ ಕಂಡ ನಕ್ಷತ್ರವು ಪುನಃ ಕಾಣಿಸಿಕೊಂಡು ಆ ಕೂಸು ಇದ್ದ ಸ್ಥಳದ ಮೇಲೆ ಬಂದು ನಿಲ್ಲುವ ತನಕ ಅವರ ಮುಂದಾಗಿ ಹೋಗುತಿತ್ತು. 10ಅವರು ನಕ್ಷತ್ರವನ್ನು ಕಂಡು ಪರಮಾನಂದದಿಂದ ಸಂತೋಷಿಸಿದರು. 11ಅವರು ಆ ಮನೆಯೊಳಕ್ಕೆ ಹೋಗಿ ಆ ಕೂಸನ್ನು ಅದರ ತಾಯಿಯಾದ ಮರಿಯಳ ಬಳಿಯಲ್ಲಿ ಕಂಡು ಅದಕ್ಕೆ ಸಾಷ್ಟಾಂಗನಮಸ್ಕಾರ ಮಾಡಿ ತಮ್ಮ ನಿಕ್ಷೇಪದ ಗಂಟುಗಳನ್ನು ಬಿಚ್ಚಿ ಅದಕ್ಕೆ ಚಿನ್ನ, ಪರಿಮಳದ್ರವ್ಯ ಮತ್ತು ರಕ್ತಬೋಳಗಳನ್ನು ಮಗುವಿಗೆ ಕಾಣಿಕೆಯಾಗಿ ಅರ್ಪಿಸಿದರು. 12ದೇವರು ಕನಸಿನಲ್ಲಿ ಅವರಿಗೆ, ನೀವು ಹೆರೋದನ ಬಳಿಗೆ ಹಿಂದಿರುಗಿ ಹೋಗಬಾರದೆಂದು ಆಜ್ಞೆ ನೀಡಿದ್ದರಿಂದ ಅವರು ಮತ್ತೊಂದು ದಾರಿಯಿಂದ ತಮ್ಮ ದೇಶಕ್ಕೆ ಹೊರಟುಹೋದರು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 25 ಡಿಸೆಂಬರ್ ಎಂದರೆ ನಾಗರಿಕ ಪಂಚಾಂಗದ 7 ಜನವರಿ. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು