ಮುಖಪುಟ › ದೈನಂದಿನ ಬೈಬಲ್ ವಾಚನಗಳು › ನವೆಂಬರ್ 2026 › 28 ನವೆಂಬರ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 28 ನವೆಂಬರ್ 2026
ಶನಿವಾರ · ಸಾಮಾನ್ಯ ಕಾಲದ 34ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 34ನೇ ವಾರದ ಶನಿವಾರ
ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಹಸಿರು
ಶನಿವಾರದ ಪೂಜ್ಯ ಕನ್ಯೆ ಮರಿಯಳ ಸ್ಮರಣೆ · ಐಚ್ಛಿಕ ಸ್ಮರಣೆ
ದಿನದ ವಾಚನಗಳು
ಮೊದಲನೆಯ ವಾಚನ
1ಆ ಮೇಲೆ ಅವನು ಸ್ಫಟಿಕದಂತೆ ಅತಿಶುದ್ಧವಾಗಿದ್ದ ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಯಜ್ಞದ ಕುರಿಮರಿಯಾದಾತನ ಸಿಂಹಾಸನದಿಂದ ಹೊರಟು, 2ಪಟ್ಟಣದ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲಿ ಜೀವವೃಕ್ಷವಿತ್ತು. ಅದು ಪ್ರತಿ ತಿಂಗಳು ಒಂದೊಂದ್ದು ತರಹದ ಫಲವನ್ನು ಬಿಡುತ್ತಾ ಹನ್ನೆರಡು ತರಹದ ಫಲಗಳನ್ನು ಕೊಡುತ್ತದೆ. ಆ ಮರದ ಎಲೆಗಳು ಜನಾಂಗಗಳವರನ್ನು ವಾಸಿಮಾಡುವಂಥದಾಗಿದ್ದವು. 3ಇನ್ನೂ ಯಾವ ಶಾಪವು ಇರುವುದಿಲ್ಲ. ಆ ಪಟ್ಟಣದಲ್ಲಿ ದೇವರ ಮತ್ತು ಯಜ್ಞದ ಕುರಿಮರಿಯಾದಾತನ ಸಿಂಹಾಸನವಿರುವುದು. ಆತನ ಸೇವಕರು ಆತನಿಗೆ ಸೇವೆ ಮಾಡುವರು. 4ಅವರು ಆತನ ಮುಖವನ್ನು ನೋಡುವರು. ಅವರ ಹಣೆಯ ಮೇಲೆ ಆತನ ಹೆಸರು ಇರುವುದು. 5ಇನ್ನು ರಾತ್ರಿಯೇ ಇರುವುದಿಲ್ಲ. ಅವರಿಗೆ ದೀಪದ ಬೆಳಕೂ ಸೂರ್ಯನ ಬೆಳಕೂ ಬೇಕಾಗಿರುವುದಿಲ್ಲ. ದೇವರಾದ ಕರ್ತನೇ ಅವರಿಗೆ ಬೆಳಕಾಗಿರುವನು. ಅವರು ಯುಗಯುಗಾಂತರಗಳಲ್ಲಿಯೂ ಆಳುವರು. 6ಆ ಮೇಲೆ ದೇವದೂತನು ನನಗೆ, “ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ. ಪ್ರವಾದಿಗಳ ಆತ್ಮಗಳನ್ನು ಪ್ರೇರೇಪಿಸುವ ದೇವರಾದ ಕರ್ತನು ಅತಿಶೀಘ್ರದಲ್ಲಿ ಸಂಭವಿಸತಕ್ಕ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವುದಕ್ಕಾಗಿ ತನ್ನ ದೇವದೂತನನ್ನು ಕಳುಹಿಸಿಕೊಟ್ಟನು. 7“ಇಗೋ ನೋಡು! ನಾನು ಅತಿಬೇಗನೆ ಬರುತ್ತೇನೆ! ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾ ವಾಕ್ಯಗಳನ್ನು ಕೈಕೊಂಡು ನಡೆಯುವವನು ಧನ್ಯನು” ಎಂದು ಹೇಳಿದನು.
ಪ್ರತಿವಚನ ಕೀರ್ತನೆ
1ಬನ್ನಿರಿ, ಯೆಹೋವನಿಗೆ ಉತ್ಸಾಹದಿಂದ ಹಾಡೋಣ; ನಮ್ಮ ರಕ್ಷಕನಾದ ಶರಣನಿಗೆ ಜಯಘೋಷ ಮಾಡೋಣ. 2ಕೃತಜ್ಞತಾಸ್ತುತಿಯೊಡನೆ ಆತನ ಸನ್ನಿಧಿಗೆ ಸೇರೋಣ; ಕೀರ್ತನೆಗಳಿಂದ ಆತನಿಗೆ ಜಯಘೋಷ ಮಾಡೋಣ. 3ಯೆಹೋವನು ಮಹಾದೇವರೂ, ಎಲ್ಲಾ ದೇವರುಗಳಲ್ಲಿ ಮಹಾರಾಜನೂ ಆಗಿದ್ದಾನೆ. 4ಭೂಮಿಯ ಅಗಾಧವು ಆತನ ಕೈಯಲ್ಲಿರುತ್ತದೆ; ಪರ್ವತಶಿಖರಗಳು ಆತನವೇ. 5ಆತನೇ ಸಮುದ್ರವನ್ನು ನಿರ್ಮಿಸಿದವನು; ಅದು ಆತನದೇ, ಒಣನೆಲವು ಆತನ ಕೈಕೆಲಸವೇ. 6ಬನ್ನಿರಿ; ನಮ್ಮ ನಿರ್ಮಾಣಿಕನಾದ ಯೆಹೋವನಿಗೆ ಸಾಷ್ಟಾಂಗವೆರಗಿ ಆರಾಧಿಸೋಣ. 7ಆತನು ನಮ್ಮ ದೇವರು; ನಾವೋ ಆತನು ಪಾಲಿಸುವ ಪ್ರಜೆಯೂ, ಆತನ ಕೈಕೆಳಗಿರುವ ಹಿಂಡೂ ಆಗಿದ್ದೇವೆ. ನೀವು ಈ ಹೊತ್ತು ಆತನ ಶಬ್ದಕ್ಕೆ ಕಿವಿಗೊಟ್ಟರೆ ಎಷ್ಟೋ ಒಳ್ಳೇಯದು.
ಸುವಾರ್ತೆ
34“ನಿಮ್ಮ ವಿಷಯದಲ್ಲಿ ಜಾಗರೂಕರಾಗಿರಿ. ಅತಿ ಭೋಜನದ ಮದದಿಂದಲೂ, ಅಮಲಿನಿಂದಲೂ, ಪ್ರಾಪಂಚಿಕವಾದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿನವು ನಿಮ್ಮ ಮೇಲೆ ಉರುಲಿನಂತೆ ಫಕ್ಕನೆ ಬಂದೀತು. 35ಆ ದಿನವು ಭೂನಿವಾಸಿಗಳೆಲ್ಲರ ಮೇಲೆ ಬರುವುದು. 36ಆದರೆ ಅಂದು ಬರುವುದಕ್ಕಿರುವ ಇವೆಲ್ಲವುಗಳಿಂದ ತಪ್ಪಿಸಿಕೊಳ್ಳುವುದಕ್ಕೂ, ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವುದಕ್ಕೂ, ನೀವು ಪೂರ್ಣ ಶಕ್ತರಾಗುವಂತೆ, ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆಮಾಡಿಕೊಳ್ಳುತ್ತಾ ಎಚ್ಚರವಾಗಿರಿ” ಅಂದನು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ A, ವಾರದ ದಿನಗಳ ವರ್ಷ II.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು