Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ನವೆಂಬರ್ 2026 › 30 ನವೆಂಬರ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 30 ನವೆಂಬರ್ 2026

ಸೋಮವಾರ · ಆಗಮನ ಕಾಲದ ಮೊದಲನೆಯ ವಾರ

ಹಬ್ಬಗಳು ಮತ್ತು ಸಂತರು

ಸಂತ ಅಂದ್ರೆಯ, ಅಪೊಸ್ತಲ

ಹಬ್ಬ · ಆರಾಧನಾ ಬಣ್ಣ: ಕೆಂಪು

ದಿನದ ವಾಚನಗಳು

ಮೊದಲನೆಯ ವಾಚನ

ರೋಮಾ 10:9–18

9ಅದೇನೆಂದರೆ ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆಮಾಡಿಕೊಂಡು ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಿನಗೆ ರಕ್ಷಣೆಯಾಗುವುದು ಎಂಬುದೇ. 10ಹೃದಯದಿಂದ ನಂಬುವುದರ ಮೂಲಕ ನೀತಿಯು ದೊರಕುತ್ತದೆ. ಬಾಯಿಂದ ಅರಿಕೆಮಾಡುವುದರ ಮೂಲಕ ರಕ್ಷಣೆಯಾಗುತ್ತದೆ. 11“ಆತನ ಮೇಲೆ ನಂಬಿಕೆಯಿಡುವ ಒಬ್ಬನಾದರೂ ಆಶಾಭಂಗಪಡುವುದಿಲ್ಲವೆಂದು” ಧರ್ಮಶಾಸ್ತ್ರವು ಹೇಳುತ್ತದೆ. 12ಈ ವಿಷಯದಲ್ಲಿ ಯೆಹೂದ್ಯರಿಗೂ ಅಥವಾ ಗ್ರೀಕನಿಗೂ ಹೆಚ್ಚು ಕಡಿಮೆ ಏನೂ ಇಲ್ಲ. ಎಲ್ಲರಿಗೂ ಒಬ್ಬನೇ ಕರ್ತನು; ಆತನು ತನ್ನ ನಾಮವನ್ನು ಹೇಳಿಕೊಳ್ಳುವವರಿಗೆ ಹೇರಳವಾಗಿ ಕೊಡುವುದಕ್ಕೆ ಶಕ್ತನಾಗಿದ್ದಾನೆ. 13ಆದ್ದರಿಂದ ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೂ ರಕ್ಷಣೆಯಾಗುವುದೆಂದು ಬರೆದಿದೆ. 14ಆದರೆ ಅವರು ನಂಬದೆ ಇರುವುದರಿಂದ ಆತನ ನಾಮವನ್ನು ಹೇಳಿಕೊಳ್ಳುವುದಾದರೂ ಹೇಗೆ? ಮತ್ತು ಆತನ ಸುದ್ದಿಯನ್ನು ಕೇಳದಿರುವಲ್ಲಿ ಆತನನ್ನು ನಂಬುವುದಾದರೂ ಹೇಗೆ? ಪ್ರಚಾರಪಡಿಸುವವನಿಲ್ಲದೆ ಕೇಳುವುದಾದರೂ ಹೇಗೆ? ಸುವಾರ್ತೆಸಾರುವವರನ್ನು ಕಳುಹಿಸದೆ ಸಾರುವುದು ಹೇಗೆ? 15ಇದಕ್ಕೆ ಸರಿಯಾಗಿ “ಶುಭದ ಸುವಾರ್ತೆಯನ್ನು ಸಾರುವವರ ಪಾದಗಳು ಎಷ್ಟೋ ಮನೋಹರವಾಗಿವೆ” ಎಂದು ಬರೆದಿದೆ. 16ಆದರೂ ಆ ಶುಭವರ್ತಮಾನಕ್ಕೆ ಎಲ್ಲರೂ ಕಿವಿಗೊಡಲಿಲ್ಲ. ಈ ವಿಷಯದಲ್ಲಿ ಯೆಶಾಯನು, “ಕರ್ತನೇ, ನಾವು ಸಾರಿದ ಸುವಾರ್ತೆಯನ್ನು ಯಾರು ನಂಬಿದರು?” ಎಂದು ನುಡಿಯುತ್ತಾನೆ. 17ಆದಕಾರಣ ಸಾರಿದ ಸುವಾರ್ತೆಯನ್ನು ಕೇಳುವುದರಿಂದ ನಂಬಿಕೆಯು ಹುಟ್ಟುತ್ತದೆ, ಕೇಳಿಸಿಕೊಳ್ಳುವುದು ಕ್ರಿಸ್ತನ ವಾಕ್ಯವಾಗಿದೆ. 18ಆದರೂ “ಅವರಿಗೆ ಕೇಳಿಸಲಿಲ್ಲವೇನೋ?” ಎಂದು ಹೇಳುತ್ತೇನೆ. ಹೌದು ನಿಶ್ಚಯವಾಗಿ ಕೇಳಿಸಿಕೊಂಡಿದ್ದರು. “ಸಾರುವವರ ಧ್ವನಿಯು ಭೂಮಿಯಲ್ಲೆಲ್ಲಾ ಪ್ರಸರಿಸಿತು, ಅವರ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿದವು.”

ಪ್ರತಿವಚನ ಕೀರ್ತನೆ

ಕೀರ್ತ 19:1–4

1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ. ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ. 2ದಿನವು ದಿನಕ್ಕೆ ದೇವರ ಮಹಿಮೆಯನ್ನು ತಿಳಿಸುತ್ತಿರುವುದು; ರಾತ್ರಿಯು ರಾತ್ರಿಗೆ ಜ್ಞಾನವನ್ನು ಪ್ರಕಟಿಸುತ್ತಿರುವುದು. 3ಶಬ್ದವಿಲ್ಲ, ಮಾತಿಲ್ಲ, ಅವುಗಳ ಸ್ವರ ಕೇಳಿಸುವುದಿಲ್ಲ. 4ಆದರೂ ಅವುಗಳ ಪ್ರಭುತ್ವವು ಭೂಮಿಯಲ್ಲೆಲ್ಲಾ ಪ್ರಸರಿಸಿದೆ; ಅವುಗಳ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿರುತ್ತವೆ. ಅಲ್ಲಿ ದೇವರು ಸೂರ್ಯನಿಗೋಸ್ಕರ ಗುಡಾರವನ್ನು ಏರ್ಪಡಿಸಿದ್ದಾನೆ.

ಸುವಾರ್ತೆ

ಮತ್ತಾ 4:18–22

18ಯೇಸು ಗಲಿಲಾಯ ಸಮುದ್ರದ ತೀರದಲ್ಲಿ ನಡೆದು ಹೋಗುವಾಗ ಪೇತ್ರನೆನಿಸಿಕೊಳ್ಳುವ ಸೀಮೋನ ಮತ್ತು ಅವನ ಸಹೋದರನಾದ ಅಂದ್ರೆಯನು ಸಮುದ್ರದಲ್ಲಿ ಬಲೆಬೀಸುವುದನ್ನು ಕಂಡನು; ಅವರು ಬೆಸ್ತರಾಗಿದ್ದರು. 19ಅವರಿಗೆ ಆತನು, “ನನ್ನನ್ನು ಹಿಂಬಾಲಿಸಿರಿ, ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು” ಎಂದು ಹೇಳುತ್ತಲೇ, 20ತಕ್ಷಣ ಅವರು ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು. 21ಯೇಸು ಅಲ್ಲಿಂದ ಮುಂದೆ ಹೋಗುತ್ತಿರುವಾಗ ಇನ್ನಿಬ್ಬರು ಅಣ್ಣ ತಮ್ಮಂದಿರನ್ನು ಅಂದರೆ ಜೆಬೆದಾಯನ ಮಗನಾದ ಯಾಕೋಬನನ್ನೂ ಅವನ ತಮ್ಮನಾದ ಯೋಹಾನನ್ನೂ ಕಂಡನು; ಇವರು ತಮ್ಮ ತಂದೆಯಾದ ಜೆಬೆದಾಯನ ಸಂಗಡ ದೋಣಿಯಲ್ಲಿ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದರು. ಆತನು ಅವರನ್ನು ಕರೆದನು. 22ಕೂಡಲೆ ಅವರು ದೋಣಿಯನ್ನು ಮತ್ತು ತಮ್ಮ ತಂದೆಯನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು