Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ನವೆಂಬರ್ 2026 › 25 ನವೆಂಬರ್

ಆರ್ಥೊಡಾಕ್ಸ್ ಪಂಚಾಂಗ · ನವೆಂಬರ್ 12 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 25 ನವೆಂಬರ್ 2026

ಬುಧವಾರ · ಪಂಚಾಶತ್ತಮದ ನಂತರದ 26ನೇ ವಾರ · ಸ್ವರ 8

ಹಬ್ಬಗಳು ಮತ್ತು ಸಂತರು

Saint John the Merciful, Patriarch of Alexandria († c. 616–620)

ಉಪವಾಸದ ದಿನ

ಉಪವಾಸ: ಎಣ್ಣೆಯೊಂದಿಗೆ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಪತ್ರಿಕೆ

1 ತಿಮೊ 1:18–20; 2:8–15

18ಮಗನಾದ ತಿಮೊಥೆಯನೇ, ನಿನ್ನ ವಿಷಯದಲ್ಲಿ ಮೊದಲು ಉಂಟಾಗಿದ್ದ ಪ್ರವಾದನೆಗಳನ್ನು ನೆನಪಿಸಿಕೊಂಡು, ನೀನು ಅವುಗಳಿಂದ ಧೈರ್ಯಹೊಂದಿ ಒಳ್ಳೆಯ ಯುದ್ಧವನ್ನು ನಡೆಸಬೇಕೆಂದು ನಿನಗೆ ಆಜ್ಞಾಪಿಸುತ್ತಿದ್ದೇನೆ. 19ನಂಬಿಕೆಯನ್ನೂ ಒಳ್ಳೆಯ ಮನಸ್ಸಾಕ್ಷಿಯನ್ನೂ ಗಟ್ಟಿಯಾಗಿ ಹಿಡಿದುಕೊಂಡಿರು. ಕೆಲವರು ಒಳ್ಳೆಯ ಮನಸ್ಸಾಕ್ಷಿಯನ್ನು ತಳ್ಳಿಬಿಟ್ಟು ನಂಬಿಕೆಯ ವಿಷಯದಲ್ಲಿ ಹಡಗು ಒಡೆದು, ನಷ್ಟಪಟ್ಟವರಂತೆ ಇದ್ದಾರೆ. 20ಹುಮೆನಾಯನೂ ಅಲೆಕ್ಸಾಂದರನೂ ಇಂಥವರೇ. ಇವರು ದೇವದೂಷಣೆ ಮಾಡಬಾರದೆಂಬುದನ್ನು ಕಲಿತುಕೊಳ್ಳುವಂತೆ ಇವರನ್ನು ಸೈತಾನನಿಗೆ ಒಪ್ಪಿಸಿಕೊಟ್ಟೆನು. 2:8ಹೀಗಿರಲಾಗಿ ಪುರುಷರು ಎಲ್ಲಾ ಸ್ಥಳಗಳಲ್ಲಿ ಕೋಪವೂ ವಾಗ್ವಾದವೂ ಇಲ್ಲದವರಾಗಿ, ಭಕ್ತಿಪೂರ್ವಕವಾಗಿ ಪವಿತ್ರ ಕೈಗಳನ್ನೆತ್ತಿ ಪ್ರಾರ್ಥಿಸಬೇಕೆಂದು ಅಪೇಕ್ಷಿಸುತ್ತೇನೆ. 9ಹಾಗೆಯೇ ಸ್ತ್ರೀಯರು ಮಾನಸ್ಥೆಯರಾಗಿಯೂ, ಸಭ್ಯತೆಯುಳ್ಳವರಾಗಿಯೂ ಇದ್ದು, ಗೌರವಕ್ಕೆ ತಕ್ಕ ಉಡುಪನ್ನೂ ಧರಿಸಿಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆಯನ್ನು ಹೆಣೆಯುವುದು, ಚಿನ್ನ, ಮುತ್ತು, ಬೆಲೆಯುಳ್ಳ ವಸ್ತ್ರ 10ಮುಂತಾದವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ ದೇವಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ಯುಕ್ತವಾಗಿರುವ ಪ್ರಕಾರ ಸತ್ಕ್ರಿಯೆಗಳಿಂದಲೇ ಅಲಂಕರಿಸಿಕೊಳ್ಳಬೇಕು. 11ಸ್ತ್ರೀಯರು ಮೌನವಾಗಿದ್ದು ಪೂರ್ಣ ಅಧೀನತೆಯಿಂದ ಉಪದೇಶವನ್ನು ಕಲಿಯಬೇಕು. 12ಉಪದೇಶಮಾಡುವುದಕ್ಕಾಗಲಿ ಪುರುಷರ ಮೇಲೆ ಅಧಿಕಾರ ನಡಿಸುವುದಕ್ಕಾಗಲಿ ಸ್ತ್ರೀಯರಿಗೆ ನಾನು ಅಪ್ಪಣೆ ಕೊಡುವುದಿಲ್ಲ. ಅವರು ಮೌನವಾಗಿರಬೇಕು. 13ಮೊದಲು ಸೃಷ್ಟಿಸಲ್ಪಟವನು ಆದಾಮನಲ್ಲವೇ, ಆಮೇಲೆ ಹವ್ವಳು. 14ಇದಲ್ಲದೆ ಆದಾಮನು ವಂಚಿಸಲ್ಪಡಲಿಲ್ಲ, ಸ್ತ್ರೀಯು ವಂಚಿಸಲ್ಪಟ್ಟು ಅಪರಾಧಿಯಾದಳು. 15ಆದರೂ ಸ್ತ್ರೀಯರು ಸ್ವಸ್ಥಬುದ್ಧಿಯಿಂದ ನಂಬಿಕೆಯಲ್ಲಿಯೂ, ಪ್ರೀತಿಯಲ್ಲಿಯೂ, ಪರಿಶುದ್ಧತೆಯಲ್ಲಿಯೂ ನೆಲೆಗೊಂಡಿದ್ದರೆ ಮಕ್ಕಳನ್ನು ಹೆರುವುದರಲ್ಲಿ ರಕ್ಷಣೆಹೊಂದುವರು.

ಪತ್ರಿಕೆ (ಗುರುವಾರಕ್ಕೆ)

1 ತಿಮೊ 3:1–13

1ಸಭಾಧ್ಯಕ್ಷನ ಉದ್ಯೋಗವನ್ನು ಪಡೆದುಕೊಳ್ಳಬೇಕೆಂದಿರುವವನು ಒಳ್ಳೆಯ ಕೆಲಸವನ್ನು ಅಪೇಕ್ಷಿಸುವವನಾಗಿದ್ದಾನೆಂಬ ಮಾತು ನಂಬತಕ್ಕದ್ದಾಗಿದೆ. 2ಸಭಾಧ್ಯಕ್ಷನು ದೋಷಾರೋಪಣೆಯಿಲ್ಲದವನೂ, ಏಕಪತ್ನಿಯುಳ್ಳವನೂ, ಶಾಂತನೂ, ಜಿತೇಂದ್ರಿಯನೂ, ಮಾನಸ್ಥನೂ, ಅತಿಥಿಸತ್ಕಾರಮಾಡುವವನೂ, ಬೋಧಿಸಲು ಶಕ್ತನಾಗಿರಬೇಕು. 3ಅವನು ಕುಡಕನು, ಜಗಳವಾಡುವವನೂ ಆಗಿರದೆ, ಸಾತ್ವಿಕನೂ, ಹೊಡೆದಾಡದವನೂ ದ್ರವ್ಯಾಶೆಯಿಲ್ಲದವನೂ ಆಗಿರಬೇಕು. 4ಪೂರ್ಣಗೌರವದಿಂದ ತನ್ನ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡು, ಸ್ವಂತ ಮನೆಯವರನ್ನು ಚೆನ್ನಾಗಿ ನಡೆಸುವವನಾಗಿರಬೇಕು. 5ಸ್ವಂತ ಮನೆಯವರನ್ನು ನಡೆಸುವುದಕ್ಕೆ ತಿಳಿಯದವನು ದೇವರ ಸಭೆಯನ್ನು ಹೇಗೆ ಪರಾಂಬರಿಸುವನು? 6ಅವನು ಹೊಸದಾಗಿ ಸಭೆಯಲ್ಲಿ ಸೇರಿದವನಾಗಿರಬಾರದು, ಅಂಥವನಾದರೆ ಉಬ್ಬಿಕೊಂಡು ಸೈತಾನನಿಗೆ ಪ್ರಾಪ್ತವಾದ ಶಿಕ್ಷಾವಿಧಿಗೆ ಒಳಗಾದಾನು. 7ಇದಲ್ಲದೆ ಅವನು ಹೊರಗಣವರಿಂದ ಒಳ್ಳೆಯವನೆನ್ನಿಸಿಕೊಂಡಿರಬೇಕು, ಇಲ್ಲದಿದ್ದರೆ ನಿಂದೆಗೆ ಗುರಿಯಾಗುವನು ಮತ್ತು ಸೈತಾನನ ತಂತ್ರಗಳೊಳಗೆ ಸಿಕ್ಕಿಬಿದ್ದಾನು. 8ಅದೇ ರೀತಿಯಾಗಿ ಸಭಾಸೇವಕರು ಗೌರವವುಳ್ಳವರಾಗಿರಬೇಕು. ಅವರು ಎರಡು ಮಾತಿನವರೂ, ಮದ್ಯಾಸಕ್ತರೂ, ನೀಚಲಾಭವನ್ನು ಅಪೇಕ್ಷಿಸುವವರೂ ಆಗಿರದೆ, 9ನಂಬಿಕೆಯಿಂದ ಪ್ರಕಟವಾಗಿರುವ ಸತ್ಯಾರ್ಥವನ್ನು ಶುದ್ಧ ಮನಸ್ಸಾಕ್ಷಿಯಿಂದ ಕೈಕೊಳ್ಳುವವರಾಗಿರಬೇಕು. 10ಇದಲ್ಲದೆ ಅವರು ಮೊದಲು ಪರೀಕ್ಷಿಸಲ್ಪಡಬೇಕು, ತರುವಾಯ ಅವರ ಮೇಲೆ ಯಾರೂ ತಪ್ಪುಹೊರಿಸದಿದ್ದರೆ ಸಭಾಸೇವಕರ ಉದ್ಯೋಗವನ್ನು ನೆರವೇರಿಸಲಿ. 11ಹಾಗೆಯೇ ಸಭಾಸೇವಕಿಯರಾದ ಸ್ತ್ರೀಯರೂ ಗೌರವವುಳ್ಳವರಾಗಿರಬೇಕು, ಚಾಡಿಹೇಳುವವರಾಗಿರದೆ, ಸ್ವಸ್ಥಬುದ್ಧಿಯುಳ್ಳವರೂ, ಎಲ್ಲಾ ವಿಷಯಗಳಲ್ಲಿ ನಂಬಿಗಸ್ತರಾಗಿಯೂ ಇರಬೇಕು. 12ಸಭಾಸೇವಕರು ಏಕಪತ್ನಿಯುಳ್ಳವರೂ, ತಮ್ಮ ಮಕ್ಕಳನ್ನೂ ಮನೆಯವರನ್ನೂ ಚೆನ್ನಾಗಿ ನಡಿಸುವವರೂ ಆಗಿರಬೇಕು. 13ಸಭಾಸೇವಕರಾಗಿ ಚೆನ್ನಾಗಿ ಕೆಲಸ ಮಾಡಿರುವವರು ತಮಗೆ ಒಳ್ಳೆಯ ಪದವಿಯನ್ನೂ, ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಸಂಬಂಧವಾಗಿ ಬಹುಧೈರ್ಯವನ್ನೂ ಸಂಪಾದಿಸಿಕೊಳ್ಳುತ್ತಾರೆ.

ಸುವಾರ್ತೆ

ಲೂಕ 12:48–59

48ತಿಳಿಯದೆ ಅಜಾಗರೂಕನಾಗಿದ್ದರೆ ಕಡಿಮೆ ಶಿಕ್ಷೆಗೆ ಗುರಿಯಾಗುತ್ತಾನೆ. ಯಾವನಿಗೆ ಬಹಳವಾಗಿ ಕೊಡಲ್ಪಟ್ಟಿದೆಯೋ ಅವನ ಕಡೆಯಿಂದ ಬಹಳವಾಗಿ ನಿರೀಕ್ಷಿಸಲ್ಪಡುವುದು. ಇದಲ್ಲದೆ ಯಾವನ ವಶಕ್ಕೆ ಬಹಳವಾಗಿ ಒಪ್ಪಿಸಿದೆಯೋ ಅವನ ಕಡೆಯಿಂದ ಇನ್ನೂ ಹೆಚ್ಚಾಗಿ ಕೇಳಲ್ಪಡುವುದು. 49“ನಾನು ಭೂಮಿಯ ಮೇಲೆ ಬೆಂಕಿಯನ್ನು ಹಾಕಬೇಕೆಂದು ಬಂದೆನು. ಅದು ಇಷ್ಟರೊಳಗೆ ಹತ್ತಿಕೊಂಡಿದ್ದರೆ ನನಗೆ ಎಷ್ಟೋ ಸಂತೋಷ. 50ಆದರೆ ನಾನು ಹೊಂದತಕ್ಕ ದೀಕ್ಷಾಸ್ನಾನ ಒಂದುಂಟು, ಅದು ನೆರವೇರುವ ತನಕ ನನಗೆ ನೆಮ್ಮದಿಯಿಲ್ಲ. 51ನಾನು ಭೂಮಿಯಲ್ಲಿ ಸಮಾಧಾನವನ್ನುಂಟು ಮಾಡುವುದಕ್ಕೆ ಬಂದೆನೆಂದು ಭಾವಿಸುತ್ತೀರೋ? ಅದಕ್ಕೆ ಬರಲಿಲ್ಲ, ಭಿನ್ನಭೇದಗಳನ್ನು ಉಂಟುಮಾಡುವದಕ್ಕೆ ಬಂದೆನೆಂದು ನಿಮಗೆ ಒತ್ತಿ ಹೇಳುತ್ತೇನೆ. 52ಹೇಗೆಂದರೆ, ಒಂದೇ ಮನೆಯಲ್ಲಿರುವ ಐದು ಮಂದಿಯೊಳಗೆ ಇಬ್ಬರಿಗೆ ವಿರೋಧವಾಗಿ ಮೂವರು, ಮೂವರಿಗೆ ವಿರೋಧವಾಗಿ ಇಬ್ಬರೂ ಏಳುವರು. 53ಮಗನಿಗೆ ವಿರೋಧವಾಗಿ ತಂದೆಯು, ತಂದೆಗೆ ವಿರೋಧವಾಗಿ ಮಗನು, ಮಗಳಿಗೆ ವಿರೋಧವಾಗಿ ತಾಯಿಯು, ತಾಯಿಗೆ ವಿರೋಧವಾಗಿ ಮಗಳು, ಸೊಸೆಗೆ ವಿರೋಧವಾಗಿ ಅತ್ತೆಯು. ಅತ್ತೆಗೆ ವಿರೋಧವಾಗಿ ಸೊಸೆಯು ಪರಸ್ಪರ ಭಿನ್ನಭೇದವುಳ್ಳವರಾಗಿ ವಿಂಗಡಿಸಿ ಹೋಗುವರು” ಅಂದನು. 54ಇದಲ್ಲದೆ ಯೇಸು ಜನಸಮೂಹಕ್ಕೆ ಹೇಳಿದ್ದೇನಂದರೆ, “ಪಶ್ಚಿಮ ದಿಕ್ಕಿನಲ್ಲಿ ಮೋಡ ಏಳುವುದನ್ನು ನೀವು ನೋಡಿದ ಕೂಡಲೆ ಮಳೆ ಬರುತ್ತದೆ ಅನ್ನುತ್ತೀರಿ, ಹಾಗೆಯೇ ಆಗುತ್ತದೆ. 55ದಕ್ಷಿಣ ದಿಕ್ಕಿನಿಂದ ಗಾಳಿ ಬೀಸಲಾಗಿ ಸೆಕೆ ಹುಟ್ಟುತ್ತದೆ ಅನ್ನುತ್ತೀರಿ. ಅದೂ ಹಾಗೆಯೇ ಆಗುತ್ತದೆ. 56ಕಪಟಿಗಳೇ, ನೀವು ಭೂಮ್ಯಾಕಾಶಗಳ ಲಕ್ಷಣಗಳನ್ನು ಸರಿಯಾಗಿ ಅರಿತುಕೊಳ್ಳಬಲ್ಲಿರಿ, ಆದರೆ ಪ್ರಸ್ತುತ ಕಾಲವನ್ನು ವಿವರಿಸುವ ಸಾಮರ್ಥ್ಯವನ್ನು ಹೊಂದದೆ ಹೋಗಿದ್ದಿರಾ? 57“ಇದಲ್ಲದೆ ನ್ಯಾಯವಾದದ್ದು ಯಾವುದೆಂದು ನೀವೇ ಯಾಕೆ ತೀರ್ಮಾನ ಮಾಡಿಕೊಳ್ಳುವುದಿಲ್ಲ? 58ನೀನು ಪ್ರತಿವಾದಿಯ ಸಂಗಡ ನ್ಯಾಯಾಧಿಪತಿಯ ಬಳಿಗೆ ಹೋಗುತ್ತಿರುವಾಗ ದಾರಿಯಲ್ಲಿಯೇ ಜಗಳವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸು. ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಬಳಿಗೆ ಎಳಕೊಂಡು ಹೋದಾನು. ನ್ಯಾಯಾಧಿಪತಿಯು ನಿನ್ನನ್ನು ಸೆರೆ ಯಜಮಾನನ ವಶಕ್ಕೆ ಒಪ್ಪಿಸಾನು. ಸೆರೆಯಜಮಾನನು ನಿನ್ನನ್ನು ಸೆರೆಮನೆಯಲ್ಲಿ ಹಾಕಿಯಾನು. 59ನೀನು ಕೊನೆಯ ಕಾಸನ್ನು ಕೊಟ್ಟು ತೀರಿಸುವವರೆಗೂ ಅಲ್ಲಿಂದ ಹೊರ ಬರುವುದಕ್ಕೆ ಸಾಧ್ಯವಿಲ್ಲವೆಂದು ನಾನು ನಿನಗೆ ಒತ್ತಿ ಹೇಳುತ್ತೇನೆ” ಅಂದನು.

ಸುವಾರ್ತೆ (ಗುರುವಾರಕ್ಕೆ)

ಲೂಕ 13:1–9

1ಅದೇ ಸಮಯದಲ್ಲಿ ಕೆಲವರು ಯೇಸುವಿನ ಹತ್ತಿರದಲ್ಲಿದ್ದು, ಪಿಲಾತನು ಗಲಿಲಾಯದವರ ರಕ್ತವನ್ನು ಅವರು ಕೊಟ್ಟ ಬಲಿಗಳ ಸಂಗಡ ಬೆರಸಿದನೆಂದು ಆತನಿಗೆ ತಿಳಿಸಿದರು. 2ಅದಕ್ಕೆ ಯೇಸು ಅವರಿಗೆ, “ಆ ಗಲಿಲಾಯದವರು ಇಂಥಾ ಕೊಲೆಯನ್ನು ಅನುಭವಿಸಿದ್ದರಿಂದ ಅವರನ್ನು ಎಲ್ಲಾ ಗಲಿಲಾಯದವರಿಗಿಂತ ಪಾಪಿಷ್ಠರೆಂದು ಭಾವಿಸುತ್ತೀರೋ? 3ಹಾಗೆ ಭಾವಿಸಕೂಡದೆಂದು ನಿಮಗೆ ಹೇಳುತ್ತೇನೆ. ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನೀವೆಲ್ಲರೂ ಅವರಂತೆ ನಾಶವಾಗುವಿರಿ. 4ಇಲ್ಲವೆ ಸಿಲೊವಾಮಿನಲ್ಲಿ ಗೋಪುರ ಬಿದ್ದು ಸತ್ತ ಆ ಹದಿನೆಂಟು ಮಂದಿಯು ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ಕೆಟ್ಟವರೆಂದು ನೀವು ಭಾವಿಸುತ್ತೀರೋ? 5ಹಾಗಲ್ಲವೆಂದು ನಿಮಗೆ ಹೇಳುತ್ತೇನೆ. ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನೀವೆಲ್ಲರೂ ಅವರಂತೆ ನಾಶವಾಗುವಿರಿ” ಎಂದು ಹೇಳಿದನು. 6ಆ ಮೇಲೆ ಯೇಸು ಒಂದು ಸಾಮ್ಯವನ್ನು ಹೇಳಿದನು. ಅದೇನೆಂದರೆ, “ಒಬ್ಬನು ತನ್ನ ದ್ರಾಕ್ಷಿಯ ತೋಟದಲ್ಲಿ ಒಂದು ಅಂಜೂರದ ಗಿಡವನ್ನು ನೆಡಿಸಿದನು. ಸ್ವಲ್ಪಕಾಲದ ನಂತರ ಅವನು ಆ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಬಂದನು. ಸಿಕ್ಕಲಿಲ್ಲ. 7ಬಳಿಕ ಅವನು ತೋಟಗಾರನಿಗೆ, ‘ನೋಡು, ನಾನು ಮೂರು ವರ್ಷದಿಂದಲೂ ಈ ಅಂಜೂರದ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಬಂದಿದ್ದೇನೆ; ಆದರೂ ನನಗೆ ಸಿಕ್ಕಲಿಲ್ಲ. ಇದನ್ನು ಕಡಿದು ಹಾಕು. ಇದರಿಂದ ಭೂಮಿಯು ಯಾಕೆ ವ್ಯರ್ಥವಾಗಬೇಕು’ ಎಂದು ಹೇಳಿದನು. 8ಅದಕ್ಕೆ ಆ ತೋಟಗಾರನು, ‘ಯಜಮಾನನೇ ಈ ವರ್ಷವೂ ಇದನ್ನು ಬಿಡು, ಅಷ್ಟರಲ್ಲಿ ನಾನು ಇದರ ಸುತ್ತಲು ಅಗೆದು ಗೊಬ್ಬರ ಹಾಕುತ್ತೇನೆ. 9ಮುಂದೆ ಅದರಲ್ಲಿ ಹಣ್ಣು ಬಿಟ್ಟರೆ ಸರಿ, ಇಲ್ಲದಿದ್ದರೆ ಇದನ್ನು ಕಡಿದುಹಾಕಬಹುದು’” ಎಂದು ಉತ್ತರ ಕೊಟ್ಟನು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 12 ನವೆಂಬರ್ ಎಂದರೆ ನಾಗರಿಕ ಪಂಚಾಂಗದ 25 ನವೆಂಬರ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು