Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಅಕ್ಟೋಬರ್ 2026 › 18 ಅಕ್ಟೋಬರ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 18 ಅಕ್ಟೋಬರ್ 2026

ಭಾನುವಾರ · ಸಾಮಾನ್ಯ ಕಾಲದ 29ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 29ನೇ ಭಾನುವಾರ

ಭಾನುವಾರ · ಆರಾಧನಾ ಬಣ್ಣ: ಹಸಿರು

ದಿನದ ವಾಚನಗಳು

ಮೊದಲನೆಯ ವಾಚನ

ಯೆಶಾ 45:1, 4–6

1ಯೆಹೋವನು ಯಾರ ಕೈಹಿಡಿದು, ಯಾರ ಎದುರಿಗೆ ಜನಾಂಗಗಳನ್ನು ತುಳಿದು, ರಾಜರ ನಡುಕಟ್ಟನ್ನು ಬಿಚ್ಚಿ, ಯಾರ ಮುಂದೆ ಹೆಬ್ಬಾಗಿಲುಗಳನ್ನು ತೆರೆದು, ಮುಚ್ಚಲ್ಲಿಲ್ಲವೋ, ತಾನು ಅಭಿಷೇಕಿಸಿದ ಆ ಕೋರೆಷನಿಗೆ ಹೀಗೆನ್ನುತ್ತಾನೆ, 4ನನ್ನ ಸೇವಕನಾದ ಯಾಕೋಬನಿಗಾಗಿ, ನಾನು ಆದುಕೊಂಡ ಇಸ್ರಾಯೇಲಿಗಾಗಿ ಹೆಸರು ಹಿಡಿದು ನಿನ್ನನ್ನು ಕರೆದಿದ್ದೇನೆ. ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ಬಿರುದನ್ನು ದಯಪಾಲಿಸಿದ್ದೇನೆ. 5ನಾನೇ ಯೆಹೋವನು, ಇನ್ನು ಯಾರೂ ಇಲ್ಲ, ನನ್ನ ಹೊರತು ಯಾವ ದೇವರೂ ಇಲ್ಲ. ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ನಡುಕಟ್ಟುವೆನು. 6ಪೂರ್ವದಿಂದ ಪಶ್ಚಿಮದ ತನಕ ಇರುವವರೆಲ್ಲರೂ ಇದನ್ನು ನೋಡಿ, ನನ್ನ ಹೊರತು ಯಾರೂ ಇಲ್ಲ, ನಾನೇ ಯೆಹೋವನು.

ಪ್ರತಿವಚನ ಕೀರ್ತನೆ

ಕೀರ್ತ 96:1, 3–5, 7–10

1ಯೆಹೋವನಿಗೆ ಹೊಸ ಕೀರ್ತನೆಯನ್ನು ಹಾಡಿರಿ; ಎಲ್ಲಾ ಭೂನಿವಾಸಿಗಳೇ, ಯೆಹೋವನಿಗೆ ಹಾಡಿರಿ. 3ಜನಾಂಗಗಳಲ್ಲಿ ಆತನ ಘನತೆಯನ್ನೂ, ಎಲ್ಲಾ ಜನರಲ್ಲಿ ಆತನ ಅದ್ಭುತಕೃತ್ಯಗಳನ್ನೂ ಪ್ರಸಿದ್ಧಪಡಿಸಿರಿ. 4ಯೆಹೋವನು ದೊಡ್ಡವನೂ, ಬಹು ಸ್ತುತ್ಯನೂ ಆಗಿದ್ದಾನೆ; ಎಲ್ಲಾ ದೇವರುಗಳಲ್ಲಿ ಆತನೇ ಮಹಾದೇವರು. 5ಜನಾಂಗಗಳ ದೇವತೆಗಳೆಲ್ಲಾ ಬೊಂಬೆಗಳೇ; ಯೆಹೋವನಾದರೋ ಗಗನಮಂಡಲವನ್ನು ನಿರ್ಮಿಸಿದನು. 7ಭೂಜನಾಂಗಗಳೇ, ಬಲಪ್ರಭಾವಗಳು ಯೆಹೋವನವೇ, ಯೆಹೋವನವೇ, ಎಂದು ಹೇಳಿ ಆತನನ್ನು ಘನಪಡಿಸಿರಿ. 8ಯೆಹೋವನ ನಾಮಕ್ಕೆ ಯೋಗ್ಯವಾದ ಘನವನ್ನು ಸಲ್ಲಿಸಿರಿ; ಕಾಣಿಕೆಯೊಡನೆ ಆತನ ಅಂಗಳಗಳಿಗೆ ಬನ್ನಿರಿ. 9ಪರಿಶುದ್ಧತ್ವವೆಂಬ ಭೂಷಣದೊಡನೆ ಯೆಹೋವನಿಗೆ ನಮಸ್ಕರಿಸಿರಿ; ಎಲ್ಲಾ ಭೂನಿವಾಸಿಗಳೇ, ಆತನ ಮುಂದೆ ಭಯಭಕ್ತಿಯಿಂದಿರಿ. 10ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; ಭೂಮಿಯು ಸ್ಥಿರವಾಗಿರುವುದು, ಕದಲುವುದಿಲ್ಲ; ಸರ್ವರಿಗೂ ನ್ಯಾಯಾನುಸಾರವಾಗಿ ತೀರ್ಪುಕೊಡುವನೆಂದು ಜನಾಂಗಗಳಲ್ಲಿ ಪ್ರಸಿದ್ಧಪಡಿಸಿರಿ.

ಎರಡನೆಯ ವಾಚನ

1 ಥೆಸ 1:1–5

1ತಂದೆಯಾದ ದೇವರಲ್ಲಿಯೂ ಕರ್ತನಾದ ಯೇಸು ಕ್ರಿಸ್ತನಲ್ಲಿಯೂ ಇರುವ ಥೆಸಲೋನಿಕದ ಸಭೆಗೆ ಪೌಲ ಸಿಲ್ವಾನ, ತಿಮೊಥೆಯ ಎಂಬ ನಾವು ಬರೆಯುವುದೇನಂದರೆ, ನಿಮಗೆ ಕೃಪೆಯೂ ಶಾಂತಿಯೂ ಉಂಟಾಗಲಿ. 2ನಾವು ನಂಬಿಕೆಯ ಫಲವಾದ ನಿಮ್ಮ ಕಾರ್ಯವನ್ನೂ, ಪ್ರೀತಿಪೂರ್ವಕವಾದ ನಿಮ್ಮ ಪ್ರಯಾಸವನ್ನೂ ಮತ್ತು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೇಲಿನ ನೀವಿಟ್ಟಿರುವ ಅಚಲವಾದ ನಿರೀಕ್ಷೆಯನ್ನೂ ನಮ್ಮ ತಂದೆಯಾದ ದೇವರ ಮುಂದೆ ಎಡೆಬಿಡದೆ ಜ್ಞಾಪಕ ಮಾಡಿಕೊಂಡು, ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮನ್ನು ಸ್ಮರಿಸುತ್ತಾ, ನಿಮ್ಮೆಲ್ಲರಿಗಾಗಿ ದೇವರಿಗೆ ಯಾವಾಗಲೂ ಕೃತಜ್ಞತಾಸ್ತುತಿ ಮಾಡುತ್ತೇವೆ. 4ದೇವರಿಂದ ಪ್ರೀತಿಸಲ್ಪಟ್ಟಿರುವ ಸಹೋದರರೇ, ಆತನು ನಿಮ್ಮನ್ನು ಆರಿಸಿಕೊಂಡನೆಂಬದನ್ನೂ ಬಲ್ಲೆವು. 5ಯಾಕೆಂದರೆ ನಾವು ನಿಮ್ಮಲ್ಲಿ ಸಾರಿದ ಸುವಾರ್ತೆಯು ಬರೀ ಮಾತಾಗಿ ಬಾರದೆ ಶಕ್ತಿಯೊಡನೆಯೂ ಪವಿತ್ರಾತ್ಮದೊಡನೆಯೂ ಮತ್ತು ಬಹು ನಿಶ್ಚಯದೊಡನೆಯೂ ಬಂತೆಂಬುದನ್ನು ನೀವೂ ಬಲ್ಲಿರಿ. ಯಾಕೆಂದರೆ ನಾವು ನಿಮ್ಮಲ್ಲಿದ್ದುಕೊಂಡು ನಿಮಗೋಸ್ಕರ ಹೇಗೆ ವರ್ತಿಸಿದ್ದೇವೆಂಬುದನ್ನು ನೀವು ಗಮನಿಸಿದ್ದೀರಿ.

ಸುವಾರ್ತೆ

ಮತ್ತಾ 22:15–21

15ಅನಂತರ ಫರಿಸಾಯರು ಹೊರಟು ಯೇಸುವನ್ನು ಮಾತಿನಲ್ಲಿ ಹೇಗೆ ಸಿಕ್ಕಿಸೋಣ ಎಂದು ಕೂಡಿ ಆಲೋಚಿಸಿಕೊಂಡು 16ಆತನ ಬಳಿಗೆ ತಮ್ಮ ಶಿಷ್ಯರನ್ನು ಹೆರೋದ್ಯರ ಜೊತೆಮಾಡಿ ಕಳುಹಿಸಿದರು. ಇವರು ಯೇಸುವಿಗೆ, “ಗುರುವೇ, ನೀನು ಸತ್ಯವಂತನು, ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವನು, ಯಾರಿಗೂ ಹೆದರದವನು; ನೀನು ಜನರ ದಾಕ್ಷಿಣ್ಯಕ್ಕೆ ತಕ್ಕಂತೆ ಮಾತನಾಡುವವನಲ್ಲ ಎಂದು ಬಲ್ಲೆವು. 17ಹೀಗಿರಲಾಗಿ ಕೈಸರನಿಗೆ ಸುಂಕ ಕೊಡುವುದು ನಿಯಮ ಬದ್ಧವೋ? ನಿನಗೆ ಹೇಗೆ ತೋರುತ್ತದೆ? ನಮಗೆ ಹೇಳು” ಅಂದರು. 18ಯೇಸು ಅವರ ಕೆಡುಕನ್ನು ಅರಿತುಕೊಂಡವನಾಗಿ, “ಕಪಟಿಗಳೇ, ನನ್ನನ್ನು ಏಕೆ ಪರೀಕ್ಷೆಮಾಡುತ್ತೀರಿ? 19ಸುಂಕಕ್ಕೆ ಕೊಡುವ ನಾಣ್ಯವನ್ನು ನನಗೆ ತೋರಿಸಿರಿ” ಅನ್ನಲು ಅವರು ಆತನಿಗೆ ಒಂದು ನಾಣ್ಯವನ್ನು ತಂದು ಕೊಟ್ಟರು. 20ಆತನು, “ಈ ಸ್ವರೂಪವು ಈ ಮುದ್ರೆಯೂ ಯಾರದು?” ಎಂದು ಕೇಳಿದ್ದಕ್ಕೆ 21ಅವರು, “ಕೈಸರನದು” ಅಂದರು. ಆಗ ಆತನು ಅವರಿಗೆ, “ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ” ಎಂದು ಹೇಳಿದನು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ A, ವಾರದ ದಿನಗಳ ವರ್ಷ II.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು