Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಅಕ್ಟೋಬರ್ 2026 › 9 ಅಕ್ಟೋಬರ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 9 ಅಕ್ಟೋಬರ್ 2026

ಶುಕ್ರವಾರ · ಸಾಮಾನ್ಯ ಕಾಲದ 27ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 27ನೇ ವಾರದ ಶುಕ್ರವಾರ

ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಹಸಿರು

ಸಂತ ಡೆನಿಸ್, ಧರ್ಮಾಧ್ಯಕ್ಷ, ಮತ್ತು ಸಂಗಡಿಗರು, ಹುತಾತ್ಮರು · ಐಚ್ಛಿಕ ಸ್ಮರಣೆ

ಸಂತ ಜಾನ್ ಲಿಯೊನಾರ್ಡಿ, ಧರ್ಮಗುರು · ಐಚ್ಛಿಕ ಸ್ಮರಣೆ

ಸಂತ ಜಾನ್ ಹೆನ್ರಿ ನ್ಯೂಮನ್, ಧರ್ಮಗುರು ಮತ್ತು ಧರ್ಮಸಭೆಯ ಪಂಡಿತ · ಐಚ್ಛಿಕ ಸ್ಮರಣೆ

ಉಪವಾಸ ಮತ್ತು ಪ್ರಾಯಶ್ಚಿತ್ತ

ಪ್ರಾಯಶ್ಚಿತ್ತದ ದಿನ

ಪ್ರತಿ ಶುಕ್ರವಾರವೂ ಪ್ರಾಯಶ್ಚಿತ್ತದ ದಿನ; ಅದನ್ನು ಹೇಗೆ ಆಚರಿಸಬೇಕು ಎಂಬುದನ್ನು ಪ್ರತಿಯೊಂದು ಬಿಷಪರ ಸಮ್ಮೇಳನ ನಿರ್ಧರಿಸುತ್ತದೆ: ಮಾಂಸ ವರ್ಜನೆ ಅಥವಾ ಬೇರೊಂದು ಪ್ರಾಯಶ್ಚಿತ್ತ ಕಾರ್ಯ. ಉಪವಾಸ 18 ರಿಂದ 59 ವರ್ಷದವರಿಗೆ, ಮಾಂಸ ವರ್ಜನೆ 14 ವರ್ಷದಿಂದ ಕಡ್ಡಾಯ.

ದಿನದ ವಾಚನಗಳು

ಮೊದಲನೆಯ ವಾಚನ

ಗಲಾ 3:7–17

7ಆದ್ದರಿಂದ ನಂಬುವವರೇ ಅಬ್ರಹಾಮನ ಮಕ್ಕಳೆಂದು ತಿಳಿದುಕೊಳ್ಳಿರಿ. 8ದೇವರು ಅನ್ಯಜನರನ್ನು ನಂಬಿಕೆಯ ನಿಮಿತ್ತವಾಗಿಯೇ ನೀತಿವಂತರೆಂದು ನಿರ್ಣಯಿಸುವನೆಂಬುದಾಗಿರುವ ವೇದವಾಕ್ಯವನ್ನು ಮೊದಲೇ ಕಂಡು ಅಬ್ರಹಾಮನಿಗೆ, “ನಿನ್ನ ಮೂಲಕ ಎಲ್ಲಾ ಜನಾಂಗಗಳವರಿಗೆ ಆಶೀರ್ವಾದವುಂಟಾಗುವುದೆಂಬ” ಸುವಾರ್ತೆಯನ್ನು ಮುಂಚಿತವಾಗಿಯೇ ತಿಳಿಸಿತು. 9ಹೀಗಿರಲಾಗಿ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವವರು, ನಂಬಿಕೆಯಿಟ್ಟ ಅಬ್ರಹಾಮನೊಂದಿಗೆ ಆಶೀರ್ವಾದವನ್ನು ಹೊಂದುವರು. 10ಮೋಶೆಯ ಧರ್ಮಶಾಸ್ತ್ರದ ನೇಮನಿಷ್ಠೆಗಳನ್ನು ಆಧಾರಮಾಡಿಕೊಂಡಿರುವವರೆಲ್ಲರೂ ಶಾಪಾಗ್ರಸ್ತರಾಗಿದಾರೆ. ಹೇಗೆಂದರೆ, “ಧರ್ಮಶಾಸ್ತ್ರದಲ್ಲಿ ಬರೆದಿರುವವುಗಳೆಲ್ಲವನ್ನೂ ಪ್ರತಿನಿತ್ಯವೂ ಪಾಲಿಸದಿರುವ ಪ್ರತಿಯೊಬ್ಬನು ಶಾಪಗ್ರಸ್ತನೇ” ಎಂದು ಧರ್ಮಶಾಸ್ತ್ರದಲ್ಲಿ ಬರೆದಿದೆ. 11ಇದಲ್ಲದೆ ಧರ್ಮಶಾಸ್ತ್ರದಿಂದ ಯಾರೂ ದೇವರ ಸನ್ನಿಧಿಯಲ್ಲಿ ನೀತಿವಂತರಾಗಲು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿದೆ, ಏಕೆಂದರೆ “ನೀತಿವಂತನು ನಂಬಿಕೆಯಿಂದಲೇ ಬದುಕುವನು” ಎಂದು ಪ್ರಕಟವಾಗಿದೆ. 12ಹಾಗೆಯೇ ಮೋಶೆಯ ಧರ್ಮಶಾಸ್ತ್ರಕ್ಕೆ ನಂಬಿಕೆಯು ಆಧಾರವಾಗಿಲ್ಲ, “ಅದರ ನೇಮಗಳನ್ನು ಆಚರಿಸುವವನೇ ಅವುಗಳ ಮೂಲಕ ಬದುಕುವನು” ಎಂದು ಬರೆದಿದೆ. 13ಯೇಸು ಕ್ರಿಸ್ತನು ನಮನ್ನು ಶಾಪದಿಂದ ಬಿಡಿಸುವುದಕ್ಕಾಗಿ ತಾನೇ ಶಾಪಗ್ರಸ್ತನಾದನು. ಏಕೆಂದರೆ ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ “ಮರಕ್ಕೆ ತೂಗುಹಾಕಲ್ಪಟ್ಟು ಪ್ರತಿಯೊಬ್ಬನು ಶಾಪಗ್ರಸ್ತನು” ಎಂದು ತಿಳಿದಿದ್ದೇವೆ. 14ಅಬ್ರಹಾಮನಿಗೆ ಉಂಟಾದ ಆಶೀರ್ವಾದವು, ಕ್ರಿಸ್ತ ಯೇಸುವಿನಲ್ಲಿ ಅನ್ಯಜನರಿಗೆಲ್ಲ ಸಿಗುವಂತೆಯೂ ಮತ್ತು ದೇವರು ವಾಗ್ದಾನ ಮಾಡಿದ ಪರಿಶುದ್ಧಾತ್ಮನು ನಮಗೆ ನಂಬಿಕೆಯ ಮೂಲಕ ದೊರಕುವಂತೆಯೂ, ತನ್ನ ಮರಣದ ಮೂಲಕ ಕ್ರಿಸ್ತನು ನಮ್ಮನ್ನು ಕೊಂಡುಕೊಂಡನು. 15ಸಹೋದರರೇ, ದೈನಂದಿನ ಜೀವನದಿಂದ ಒಂದು ದೃಷ್ಟಾಂತವನ್ನು ನಿಮಗೆ ಹೇಳುತ್ತೇನೆ, ಒಬ್ಬನು ಮತ್ತೊಬ್ಬನೊಡನೆ ಸ್ಥಿರಪಡಿಸಿದ ಒಂದು ಒಪ್ಪಂದವು ಕೇವಲ ಮನುಷ್ಯನದ್ದಾಗಿದ್ದರೂ, ಅದನ್ನು ಯಾರೂ ರದ್ದುಮಾಡುವಂತಿಲ್ಲ ಮತ್ತು ಅದಕ್ಕೆ ಏನನ್ನೂ ಸೇರಿಸುವಂತಿಲ್ಲ. 16ಹಾಗೆಯೇ, ದೇವರು ಅಬ್ರಹಾಮನಿಗೆ ಮತ್ತು ಅವನಿಂದ ಬರುವ ಪೀಳಿಗೆಗೆ ವಾಗ್ದಾನ ಮಾಡಿದನು. ಆದರೆ “ಪೀಳಿಗೆ” ಎಂದು ಹೇಳಿದಾಗ, ಅದು ವಂಶದಲ್ಲಿ ಇರುವ ಎಲ್ಲರಿಗೂ ಅನ್ವಯಿಸದೇ, ಅಬ್ರಹಾಮನ ವಂಶಕ್ಕೆ ಸೇರಿದ ಒಬ್ಬ ವ್ಯಕ್ತಿಯನ್ನೇ ಸೂಚಿಸುತ್ತದೆ. ಆ ಒಬ್ಬನು ಕ್ರಿಸ್ತನೇ. 17ನಾನು ಹೇಳಬಯಸುವುದೇನೆಂದರೆ, ದೇವರು ಮೊದಲು ಅನುಮೋದಿಸಿದ ಒಡಂಬಡಿಕೆಯನ್ನು, ನಾನೂರ ಮೂವತ್ತು ವರ್ಷಗಳ ನಂತರ ಬಂದ ಮೋಶೆಯ ಧರ್ಮಶಾಸ್ತ್ರವು ಅದನ್ನು ನಿರರ್ಥಕಗೊಳಿಸಿ, ಆ ವಾಗ್ದಾನವನ್ನು ಬರಿದಾಗಿಮಾಡಲು ಸಾಧ್ಯವಿಲ್ಲ.

ಪ್ರತಿವಚನ ಕೀರ್ತನೆ

ಕೀರ್ತ 111:1–6

1ಯೆಹೋವನಿಗೆ ಸ್ತೋತ್ರ! ನಾನು ಯೆಹೋವನನ್ನು ಕೊಂಡಾಡುವೆನು; ಯಥಾರ್ಥರ ಕೂಟದಲ್ಲಿಯೂ, ನೆರೆದ ಸಭೆಯಲ್ಲಿಯೂ, ಮನಃಪೂರ್ವಕವಾಗಿ ಕೀರ್ತಿಸುವೆನು. 2ಯೆಹೋವನ ಕೃತ್ಯಗಳು ಮಹತ್ತಾದವುಗಳು; ಅವುಗಳಲ್ಲಿ ಸಂತೋಷಿಸುವವರು ಅವುಗಳನ್ನೇ ಧ್ಯಾನಿಸುವರು. 3ಆತನ ಕಾರ್ಯವು ಘನ, ಮಾನಗಳುಳ್ಳದ್ದು; ಆತನ ನೀತಿಯು ಸದಾಕಾಲವೂ ಇರುವುದು. 4ಆತನು ತನ್ನ ಅದ್ಭುತಕೃತ್ಯಗಳ ಜ್ಞಾಪಕವನ್ನು ಉಳಿಯಮಾಡಿದ್ದಾನೆ. ಯೆಹೋವನು ಕೃಪೆಯೂ, ಕನಿಕರವೂ ಉಳ್ಳವನು. 5ತನ್ನಲ್ಲಿ ಭಯಭಕ್ತಿಯುಳ್ಳವರಿಗೆ ಆಹಾರವನ್ನು ಕೊಟ್ಟಿದ್ದಾನೆ; ತನ್ನ ಒಡಂಬಡಿಕೆಯನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಂಡಿದ್ದಾನೆ 6ಆತನು ಅನ್ಯಜನಗಳ ಸ್ವತ್ತನ್ನು ತನ್ನ ಪ್ರಜೆಗೆ ಕೊಡುವುದರ ಮೂಲಕ ಸ್ವಪ್ರತಾಪವನ್ನು ತೋರ್ಪಡಿಸಿದ್ದಾನೆ.

ಸುವಾರ್ತೆ

ಲೂಕ 11:15–26

15ಆದರೆ ಅವರಲ್ಲಿ ಕೆಲವರು, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ” ಅಂದರು. 16ಬೇರೆ ಕೆಲವರು ಆತನನ್ನು ಪರೀಕ್ಷಿಸುವುದಕ್ಕಾಗಿ, “ನೀನು ಪರಲೋಕದಿಂದ ಒಂದು ಸೂಚಕಕಾರ್ಯವನ್ನು ಮಾಡಿತೋರಿಸು” ಎಂದು ಕೇಳಿದರು. 17ಯೇಸು ಅವರ ಆಲೋಚನೆಗಳನ್ನು ಅರಿತುಕೊಂಡು ಅವರಿಗೆ ಹೇಳಿದ್ದೇನಂದರೆ, “ತಮ್ಮತಮ್ಮೊಳಗೆ ಭೇದ ಹುಟ್ಟಿದ ರಾಜ್ಯವು ನಾಶವಾಗುವುದು ಮತ್ತು ತನ್ನಲ್ಲಿ ಕಚ್ಚಾಡಿ ಭೇದಹುಟ್ಟಿಸುವ ಕುಟುಂಬ ಬಿದ್ದುಹೋಗುವುದು. 18ಅದರಂತೆ ಸೈತಾನ ಪಕ್ಷದವರು ಒಬ್ಬರ ವಿರುದ್ಧ ಒಬ್ಬರು ಜಗಳ ಆಡಿದರೆ ಅವನ ರಾಜ್ಯವು ಹೇಗೆ ಉಳಿದೀತು? ಬೆಲ್ಜೆಬೂಲನ ಬಲದಿಂದ ದೆವ್ವಗಳನ್ನು ಬಿಡಿಸುತ್ತೀ ಎಂದು ನನಗೆ ಹೇಳುತ್ತೀರಲ್ಲಾ, 19ನಾನು ಬೆಲ್ಜೆಬೂಲನ ಬಲದಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಬಲದಿಂದ ಬಿಡಿಸುತ್ತಾರೆ? ಆದುದರಿಂದ ನೀವು ಹೇಳುವುದು ತಪ್ಪೆಂದು ನಿಮ್ಮವರೇ ತೀರ್ಪುಕೊಡುವರು. 20ನಾನು ದೇವರ ಬಲದಿಂದಲೇ ದೆವ್ವಗಳನ್ನು ಬಿಡಿಸುವುದಾದರೆ ದೇವರ ರಾಜ್ಯವು ನಿಮ್ಮಲ್ಲಿಗೆ ಈಗಾಗಲೇ ಬಂದಿದೆ ಎಂಬುದು ಸ್ಪಷ್ಟ. 21“ಒಬ್ಬ ಬಲಿಷ್ಠನು ಸರ್ವಾಯುಧಗಳನ್ನು ಧರಿಸಿಕೊಂಡು ತನ್ನ ಮನೆಯನ್ನು ಕಾಪಾಡಿಕೊಂಡಿರುವಾಗ ಅವನ ವಸ್ತುಗಳು ಭದ್ರವಾಗಿಯೇ ಇರುವವು; 22ಆದರೆ ಅವನಿಗಿಂತ ಬಲಿಷ್ಠನು ಬಂದು ಅವನನ್ನು ಗೆದ್ದು ಅವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು, ಸುಲಿಗೆಮಾಡಿದ್ದನ್ನು ಹಂಚಿಕೊಡುತ್ತಾನೆ. 23ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನ ಜೊತೆಯಲ್ಲಿ ಒಟ್ಟುಗೂಡಿಸದವನು ಚದರಿಸುವವನಾಗುತ್ತಾನೆ. 24“ಬೋಧನೆಯನ್ನು ಮುಂದುವರಿಸುತ್ತಾ ಯೇಸು, ದೆವ್ವವು ಮನುಷ್ಯನನ್ನು ಬಿಟ್ಟುಹೋದ ಮೇಲೆ ವಿಶ್ರಾಂತಿಯನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ತಿರುಗಾಡುತ್ತದೆ. ವಿಶ್ರಾಂತಿ ಸಿಕ್ಕದ ಕಾರಣ ಅದು, ‘ನಾನು ಬಿಟ್ಟು ಬಂದ ನನ್ನ ಮನೆಗೆ ಹಿಂತಿರುಗಿ ಹೋಗುತ್ತೇನೆ’ ಅಂದುಕೊಂಡು ಬಂದು, 25ಆ ಮನೆ ಗುಡಿಸಿ ವ್ಯವಸ್ಥಿತವಾಗಿರುವುದನ್ನು ಕಂಡು ಹೊರಟುಹೋಗಿ, 26ತನಗಿಂತ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುವುದು. ಅವು ಒಳಹೊಕ್ಕು ಅಲ್ಲಿ ವಾಸಮಾಡುವವು, ಆಗ ಆ ಮನುಷ್ಯನ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗುವುದು” ಅಂದನು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ A, ವಾರದ ದಿನಗಳ ವರ್ಷ II.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು