Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಅಕ್ಟೋಬರ್ 2026 › 4 ಅಕ್ಟೋಬರ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 4 ಅಕ್ಟೋಬರ್ 2026

ಭಾನುವಾರ · ಸಾಮಾನ್ಯ ಕಾಲದ 27ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 27ನೇ ಭಾನುವಾರ

ಭಾನುವಾರ · ಆರಾಧನಾ ಬಣ್ಣ: ಹಸಿರು

ದಿನದ ವಾಚನಗಳು

ಮೊದಲನೆಯ ವಾಚನ

ಯೆಶಾ 5:1–7

1ನನ್ನ ಪ್ರಿಯನಾದವನ ಬಗ್ಗೆ ಮತ್ತು ಅವನ ತೋಟವನ್ನೂ ಕುರಿತು ಒಂದು ಗೀತೆಯನ್ನು ಹಾಡುವೆನು. ಕೇಳಿರಿ, ಫಲವತ್ತಾದ ಗುಡ್ಡದ ಮೇಲೆ ನನ್ನ ಅತಿಪ್ರಿಯನಿಗೆ ದ್ರಾಕ್ಷಿಯ ತೋಟವಿತ್ತು. 2ಅವನು ಅದನ್ನು ಅಗೆದು, ಕಲ್ಲುಗಳನ್ನು ತೆಗೆದುಹಾಕಿ, ಒಳ್ಳೆಯ ದ್ರಾಕ್ಷಿಯ ಸಸಿಗಳನ್ನು ನೆಟ್ಟು, ಮಧ್ಯದಲ್ಲಿ ಗೋಪುರವನ್ನು ಕಟ್ಟಿ, ದ್ರಾಕ್ಷಿಯ ತೊಟ್ಟಿಯನ್ನು ಕೊರೆಯಿಸಿ, ತೋಟವು ಒಳ್ಳೆಯ ಸಿಹಿ ದ್ರಾಕ್ಷಿಯ ಹಣ್ಣನ್ನು ಕೊಡುವುದೆಂದು ಎದುರುನೋಡುತ್ತಿರಲು, ಅದು ಹುಳಿ ಹಣ್ಣನ್ನು ಕೊಟ್ಟಿತು. 3ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಜನರೇ, ಈಗ ನನಗೂ, ನನ್ನ ದ್ರಾಕ್ಷಿಯ ತೋಟಕ್ಕೂ ನ್ಯಾಯತೀರಿಸಿರಿ. 4ನನ್ನ ದ್ರಾಕ್ಷಿಯ ತೋಟದಲ್ಲಿ ಹಿಂದೆ ನಾನು ಮಾಡಿದ್ದಕ್ಕಿಂತಲೂ ಇನ್ನೂ ಹೆಚ್ಚಾಗಿ ಇನ್ನೇನು ಮಾಡಬೇಕಾಗಿತ್ತು? ಅದು ಒಳ್ಳೆಯ ದ್ರಾಕ್ಷಿಯ ಫಲವನ್ನು ಕೊಡುವುದೆಂದು ನಾನು ನಿರೀಕ್ಷಿಸುತ್ತಿರಲು, ಅದು ಹುಳಿ ಹಣ್ಣನ್ನು ಏಕೆ ಕೊಟ್ಟಿತು? 5ನನ್ನ ದ್ರಾಕ್ಷಿಯ ತೋಟವನ್ನು ಏನು ಮಾಡುವೆನು ಎಂದು ಈಗ ನಿಮಗೆ ತಿಳಿಸುತ್ತೇನೆ. ಅದರ ಮುಳ್ಳು ಬೇಲಿಯನ್ನು ಕೀಳುವೆನು. ದನಗಳು ಅದನ್ನು ಮೇಯ್ದುಬಿಡುವುದು. ಅದರ ಗೋಡೆಯನ್ನು ಕೆಡವಿ ಹಾಕುವೆನು. ಅದು ಜನರ ತುಳಿದಾಟಕ್ಕೆ ಈಡಾಗುವುದು. 6ಅದನ್ನು ಹಾಳುಮಾಡುವೆನು. ದ್ರಾಕ್ಷಿಯ ತೋಟವನ್ನು ಯಾರೂ ಕುಡಿ ಕತ್ತರಿಸಿ ಅಗೆಯುವುದಿಲ್ಲ. ಅದರಲ್ಲಿ ಮುಳ್ಳುಕಳೆ ಬೆಳೆಯುವುದು. ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಅಪ್ಪಣೆ ಕೊಡುವೆನು. 7ಸೇನಾಧೀಶ್ವರನಾದ ಯೆಹೋವನ ದ್ರಾಕ್ಷಿಯ ತೋಟವು ಇಸ್ರಾಯೇಲರ ಮನೆಯೇ, ಯೆಹೂದದ ಜನವೇ, ಆತನ ಇಷ್ಟದ ಗಿಡ. ಆತನು ನ್ಯಾಯವನ್ನು ನಿರೀಕ್ಷಿಸಲು ನರಹತ್ಯೆ, ನೀತಿಯನ್ನು ನಿರೀಕ್ಷಿಸಿಲು ಗೋಳಾಟವೂ ಸಿಕ್ಕಿತ್ತು.

ಪ್ರತಿವಚನ ಕೀರ್ತನೆ

ಕೀರ್ತ 80:8, 11–15, 18–19

8ನೀನು ಐಗುಪ್ತ ದೇಶದಿಂದ ಒಂದು ದ್ರಾಕ್ಷಾಲತೆಯನ್ನು ತಂದು, ಜನಾಂಗಗಳನ್ನು ಹೊರಗೆ ಹಾಕಿ, ಅದನ್ನು ನೆಟ್ಟಿದ್ದಿ. 11ಅದರ ಕೊಂಬೆಗಳು ಸಮುದ್ರದವರೆಗೂ, ಅದರ ಚಿಗುರುಗಳು ಮಹಾನದಿಯವರೆಗೂ ಹರಡಿಕೊಂಡವು. 12ನೀನು ಅದರ ಬೇಲಿಯನ್ನೇಕೆ ಮುರಿದುಹಾಕಿದಿ? ದಾರಿಗರೆಲ್ಲರು ಅದರ ಫಲವನ್ನು ಕಿತ್ತುಬಿಡುತ್ತಾರೆ. 13ಕಾಡುಹಂದಿಯು ಅದನ್ನು ನಿರ್ಮೂಲಮಾಡುತ್ತದೆ; ಅರಣ್ಯಮೃಗಗಳು ಅದನ್ನು ತಿಂದುಹಾಕುತ್ತವೆ. 14ಸೇನಾಧೀಶ್ವರನಾದ ದೇವರೇ, ಅಭಿಮುಖನಾಗಬೇಕು; ನೀನು ಪರಲೋಕದಿಂದ ಕಟಾಕ್ಷಿಸಿ, ಈ ದ್ರಾಕ್ಷಾಲತೆಯನ್ನು ಪರಾಂಬರಿಸು. 15ನಿನ್ನ ಬಲಗೈ ನೆಟ್ಟು, ಸಾಕಿ, ಬೆಳೆಸಿದ ಸಸಿಯನ್ನು ಕಾಪಾಡು. 18ಆಗ ನಾವು ನಿನ್ನಿಂದ ಅಗಲುವುದಿಲ್ಲ. ನಿನ್ನ ಹೆಸರನ್ನು ಹೇಳಿಕೊಂಡು ಆರಾಧಿಸುವಂತೆ ನಮ್ಮನ್ನು ಚೈತನ್ಯಗೊಳಿಸು. 19ಸೇನಾಧೀಶ್ವರನಾದ ಯೆಹೋವ ದೇವರೇ, ನಮ್ಮನ್ನು ತಿರುಗಿ ಉನ್ನತಸ್ಥಿತಿಗೇರಿಸು. ಪ್ರಸನ್ನಮುಖದಿಂದ ನೋಡು; ಆಗ ಉದ್ಧಾರವಾಗುವೆವು.

ಎರಡನೆಯ ವಾಚನ

ಫಿಲಿಪ್ಪಿ 4:6–9

6ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯಗಳಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ಕರ್ತನಿಗೆ ತಿಳಿಯಪಡಿಸಿರಿ. 7ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವರ ಶಾಂತಿಯು ನಿಮ್ಮ ಹೃದಯಗಳನ್ನೂ, ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಪಾಡುವುದು. 8ಕಡೆಯದಾಗಿ, ಸಹೋದರರೇ, ಯಾವುದು ಸತ್ಯವೂ, ಮಾನ್ಯವೂ, ನ್ಯಾಯವೂ, ಶುದ್ಧವೂ, ಪ್ರೀತಿಕರವೂ, ಮನೋಹರವೂ ಆಗಿದೆಯೋ, ಯಾವುದು ಸದ್ಗುಣವಾಗಿದೆಯೋ, ಯಾವುದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳ ಬಗ್ಗೆ ಚಿಂತಿಸುವವರಾಗಿರಿ. 9ನೀವು ಯಾವುದನ್ನು ನನ್ನಿಂದ ಕಲಿತು ಹೊಂದಿದ್ದೀರೋ, ಮತ್ತು ಯಾವುದನ್ನು ನನ್ನಲ್ಲಿ ಕೇಳಿ ಕಂಡಿರುವಿರೋ ಅದನ್ನೇ ಮಾಡುತ್ತಾ ಬನ್ನಿರಿ. ಹೀಗೆ ಮಾಡಿದರೆ ಶಾಂತಿದಾಯಕನಾದ ದೇವರು ನಿಮ್ಮೊಂದಿಗಿರುವನು.

ಸುವಾರ್ತೆ

ಮತ್ತಾ 21:33–43

33“ಮತ್ತೊಂದು ಸಾಮ್ಯವನ್ನು ಕೇಳಿರಿ, ಒಬ್ಬ ಮನೆಯ ಯಜಮಾನನಿದ್ದನು. ಅವನು ಒಂದು ದ್ರಾಕ್ಷಾತೋಟವನ್ನು ನೆಟ್ಟು ಅದರ ಸುತ್ತಲೂ ಬೇಲಿಹಾಕಿಸಿ, ಅದರಲ್ಲಿ ದ್ರಾಕ್ಷಿಯ ಗಾಣವನ್ನು ಹಾಕಿಸಿ, ಕಾವಲು ಗೋಪುರವನ್ನು ಕಟ್ಟಿಸಿ, ದ್ರಾಕ್ಷಿಯ ತೋಟಗಾರರಿಗೆ ಅದನ್ನು ಗುತ್ತಿಗೆಗೆ ಕೊಟ್ಟು, ಅವನು ಬೇರೊಂದು ದೇಶಕ್ಕೆ ಹೋದನು. 34ಫಲಕಾಲ ಹತ್ತಿರವಾದಾಗ ತನಗೆ ಬರಬೇಕಾದ ಹಣ್ಣುಗಳನ್ನು ತೆಗೆದುಕೊಂಡು ಬರುವುದಕ್ಕಾಗಿ ಆ ತೋಟಗಾರರ ಬಳಿಗೆ ತನ್ನ ಆಳುಗಳನ್ನು ಕಳುಹಿಸಲು, 35ತೋಟಗಾರರು ಅವನ ಆಳುಗಳನ್ನು ಹಿಡಿದು ಒಬ್ಬನನ್ನು ಹೊಡೆದರು, ಮತ್ತೊಬ್ಬನನ್ನು ಕಡಿದು ಹಾಕಿದರು, ಇನ್ನೊಬ್ಬನನ್ನು ಕಲ್ಲೆಸೆದು ಕೊಂದರು. 36ಆ ಯಜಮಾನನು ಪುನಃ ಮೊದಲಿನವರಿಗಿಂತ ಹೆಚ್ಚು ಮಂದಿ ಆಳುಗಳನ್ನು ಕಳುಹಿಸಿದನು, ಅವರು ಅವರಿಗೂ ಹಾಗೆಯೇ ಮಾಡಿದರು. 37ಕಡೆಯಲ್ಲಿ ‘ನನ್ನ ಮಗನಿಗಾದರೂ ಮರ್ಯಾದೆ ತೋರಿಸಾರು’ ಅಂದುಕೊಂಡು ತನ್ನ ಮಗನನ್ನು ಅವರ ಬಳಿಗೆ ಕಳುಹಿಸಿದನು. 38ಆದರೆ ಆ ತೋಟಗಾರರು ಅವನ ಮಗನನ್ನು ಕಂಡು, ‘ಇವನೇ ಉತ್ತರಾಧಿಕಾರಿ, ಬನ್ನಿ ಇವನನ್ನು ಕೊಂದು ಹಾಕೋಣ, ಇವನ ಸ್ವತ್ತನ್ನು ನಾವೇ ತೆಗೆದುಕೊಳ್ಳೋಣ’ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡು 39ಅವನನ್ನು ಹಿಡಿದು ದ್ರಾಕ್ಷಾತೋಟದಿಂದ ಹೊರಕ್ಕೆ ದೊಬ್ಬಿ ಕೊಂದು ಹಾಕಿದರು. 40ಹಾಗಾದರೆ ದ್ರಾಕ್ಷಾತೋಟದ ಧಣಿಯು ಬಂದಾಗ ಆ ತೋಟಗಾರರಿಗೆ ಏನು ಮಾಡುವನು?” ಅಂದನು. 41ಅವರು ಆತನಿಗೆ, “ಆ ಕೆಡುಕರನ್ನು ಕ್ರೂರವಾಗಿ ಸಂಹರಿಸಿ ತಕ್ಕಕಾಲಕ್ಕೆ ಹಣ್ಣುಗಳನ್ನು ತನಗೆ ಸಲ್ಲಿಸುವಂಥ ಬೇರೆ ತೋಟಗಾರರಿಗೆ ತನ್ನ ತೋಟವನ್ನು ಗುತ್ತಿಗೆಗೆ ಕೊಡುವನು” ಎಂದು ಹೇಳಿದರು. 42ಯೇಸು ಅವರಿಗೆ, “‘ಮನೆ ಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು; ಇದು ಕರ್ತನಿಂದಲೇ ಆಯಿತು; ಮತ್ತು ನಮ್ಮ ಕಣ್ಣುಗಳಿಗೆ ಅದು ಆಶ್ಚರ್ಯವಾಗಿ ತೋರುತ್ತದೆ ಎಂಬ ಮಾತನ್ನು ನೀವು ಶಾಸ್ತ್ರದಲ್ಲಿ ಎಂದಾದರೂ ಓದಲಿಲ್ಲವೋ?’ 43ಆದುದರಿಂದ ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಾಂಗಕ್ಕೆ ಕೊಡಲಾಗುವುದು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ A, ವಾರದ ದಿನಗಳ ವರ್ಷ II.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು