1ಯೆಹೋವನ ನಾಮಮಹತ್ತಿನಿಂದ ಸೊಲೊಮೋನನಿಗುಂಟಾದ ಕೀರ್ತಿಯನ್ನು ಕುರಿತು ಶೆಬೆದ ರಾಣಿಯು ಕೇಳಿ, ಅವನನ್ನು ಒಗಟುಗಳಿಂದ ಪರೀಕ್ಷಿಸುವುದಕ್ಕಾಗಿ ಬಂದಳು.
2ಆಕೆಯು ಸುಗಂಧದ್ರವ್ಯ, ಅಪರಿಮಿತವಾದ ಬಂಗಾರ, ರತ್ನ ಇವುಗಳನ್ನು ಒಂಟೆಗಳ ಮೇಲೆ ಹೇರಿಸಿಕೊಂಡು, ಮಹಾಪರಿವಾರದೊಡನೆ ಯೆರೂಸಲೇಮಿಗೆ ಬಂದು ತನ್ನ ಮನಸ್ಸಿನಲ್ಲಿ ಗೊತ್ತುಮಾಡಿಕೊಂಡಿದ್ದ ಎಲ್ಲಾ ವಿಷಯಗಳನ್ನು ಕುರಿತು ಸೊಲೊಮೋನನೊಡನೆ ಸಂಭಾಷಿಸಿದಳು.
3ಸೊಲೊಮೋನನು ಆಕೆಯ ಎಲ್ಲಾ ಪ್ರಶ್ನೆಗಳಿಗೂ ಉತ್ತರಕೊಟ್ಟನು. ಅವುಗಳಲ್ಲಿ ಸೊಲೊಮೋನನಿಗೆ ತಿಳಿಯದಂಥದ್ದು ಒಂದೂ ಇರಲಿಲ್ಲವಾದುದರಿಂದ ಅವನು ಅವೆಲ್ಲವುಗಳಿಗೆ ಉತ್ತರಕೊಟ್ಟನು.
4ಶೆಬೆದ ರಾಣಿಯು ಸೊಲೊಮೋನನ ಎಲ್ಲಾ ಜ್ಞಾನ, ಅವನು ಕಟ್ಟಿಸಿದ ಅರಮನೆ,
5ಅವನ ಭೋಜನಪೀಠದ ಆಹಾರ, ಆ ಪೀಠದ ಸುತ್ತಲಿರುವ ಉದ್ಯೋಗಸ್ಥರ ಆಸನಗಳು, ಅವನ ಪರಿಚಾರಕರ ಸೇವಾಕ್ರಮ, ಅವರ ಉಡುಪುಗಳು, ಅವನ ಪಾನಕಗಳು ಇವುಗಳನ್ನೂ ಮತ್ತು ಅವನು ಯೆಹೋವನ ಆಲಯದಲ್ಲಿ ಸಮರ್ಪಿಸುತ್ತಿದ್ದ ಸರ್ವಾಂಗಹೋಮಗಳನ್ನೂ ನೋಡಿದಾಗ ವಿಸ್ಮಿತಳಾಗಿ ಹೋದಳು.
6ಅವಳು ಅರಸನಿಗೆ, “ನಾನು ನನ್ನ ದೇಶದಲ್ಲಿ ನಿನ್ನ ಜ್ಞಾನವನ್ನು, ಕೃತ್ಯಗಳನ್ನೂ ಕುರಿತು ಕೇಳಿದ್ದು ಸತ್ಯವಾಗಿದೆ.
7ನಾನಾಗಿ ಇಲ್ಲಿಗೆ ಬಂದು ಕಣ್ಣಾರೆ ನೋಡುವುದಕ್ಕಿಂತ ಮೊದಲು ಜನರು ಹೇಳಿದ ಸುದ್ದಿಯನ್ನು ನಂಬಿರಲಿಲ್ಲ. ಈಗ ಇಲ್ಲಿ ಬಂದು ನೋಡಿದರೆ ನಿನ್ನ ಜ್ಞಾನವೈಭವಗಳು ನಾನು ಕೇಳಿದ್ದಕ್ಕಿಂತ ಹೆಚ್ಚಾಗಿವೆ. ಜನರು ಇದರಲ್ಲಿ ಅರ್ಧವನ್ನಾದರೂ ಹೇಳಲಿಲ್ಲ.
8ನಿನ್ನ ಪ್ರಜೆಗಳು ಸದಾ ನಿನ್ನ ಮುಂದೆ ನಿಂತುಕೊಂಡು ನಿನ್ನ ಜ್ಞಾನವಾಕ್ಯಗಳನ್ನು ಕೇಳುವ ನಿನ್ನ ಸೇವಕರು ಧನ್ಯರು.
9ನಿನ್ನನ್ನು ಮೆಚ್ಚಿ ಇಸ್ರಾಯೇಲ್ ಸಿಂಹಾಸನದ ಮೇಲೆ ಕುಳ್ಳಿರಿಸಿದ ನಿನ್ನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಆತನು ಇಸ್ರಾಯೇಲರನ್ನು ಸದಾ ಪ್ರೀತಿಸುವವನಾದುದರಿಂದ ಅವರ ನೀತಿನ್ಯಾಯಗಳನ್ನು ಸ್ಥಾಪಿಸುವುದಕ್ಕೋಸ್ಕರ ನಿನ್ನನ್ನೇ ಅರಸನನ್ನಾಗಿ ನೇಮಿಸಿದ್ದಾನೆ” ಎಂದು ಹೇಳಿದಳು.
10ಆಕೆಯು ಅರಸನಿಗೆ ನೂರಿಪ್ಪತ್ತು ತಲಾಂತು ಬಂಗಾರವನ್ನೂ, ಅಪರಿಮಿತ ಸುಗಂಧದ್ರವ್ಯವನ್ನೂ ಮತ್ತು ರತ್ನಗಳನ್ನೂ ಕೊಟ್ಟಳು. ಶೆಬೆದ ರಾಣಿಯು ಅರಸನಾದ ಸೊಲೊಮೋನನಿಗೆ ಕೊಟ್ಟಷ್ಟು ಸುಗಂಧದ್ರವ್ಯವನ್ನು ಅವನಿಗೆ ಪುನಃ ಯಾರು ಕೊಡಲಿಲ್ಲ. ಬರಲೇ ಇಲ್ಲ.
11ಹೀರಾಮನ ಹಡಗುಗಳು ಓಫೀರ್ ದೇಶದಿಂದ ಬಂಗಾರದ ಹೊರತಾಗಿ ಸುಗಂಧದ ಮರವನ್ನೂ ಮತ್ತು ರತ್ನಗಳನ್ನೂ ರಾಶಿ ರಾಶಿಯಾಗಿ ತಂದವು.
12ಅರಸನು ಸುಗಂಧದ ಮರದಿಂದ ಯೆಹೋವನ ಆಲಯ ಮತ್ತು ಅರಮನೆ ಇವುಗಳಿಗೆ ಸ್ತಂಭಗಳನ್ನು, ಗಾಯಕರಿಗೋಸ್ಕರ ಕಿನ್ನರಿಗಳನ್ನೂ, ಸ್ವರಮಂಡಲಗಳನ್ನೂ ಮಾಡಿಸಿದನು. ಆಗ ಬಂದಷ್ಟು ಸುಗಂಧದ ಮರವು ಇಂದಿನ ವರೆಗೂ ಆ ದೇಶಕ್ಕೆ ಬರಲಿಲ್ಲ ಮತ್ತು ಕಾಣಲಿಲ್ಲ.
13ಅರಸನಾದ ಸೊಲೊಮೋನನು ಶೆಬೆದ ರಾಣಿಗೆ ತಾನಾಗಿ ರಾಜಮರ್ಯಾದೆಯಿಂದ ಕೊಟ್ಟ ವಸ್ತುಗಳಲ್ಲದೆ ಆಕೆಯು ಕೇಳಿದವುಗಳೆಲ್ಲವನ್ನು ಕೊಟ್ಟುಬಿಟ್ಟನು. ಅನಂತರ ಆಕೆಯು ತನ್ನ ಪರಿವಾರದೊಡನೆ ಸ್ವದೇಶಕ್ಕೆ ಹೊರಟುಹೋದಳು.