20ಯೋಷೀಯನು ದೇವಾಲಯದ ವಿಷಯದಲ್ಲಿ ಈ ಎಲ್ಲಾ ವ್ಯವಸ್ಥೆಯನ್ನು ಮಾಡಿದನಂತರ ಐಗುಪ್ತದ ಅರಸನಾದ ನೆಕೋ ಎಂಬುವವನು ಯುದ್ಧಮಾಡುವುದಕ್ಕೋಸ್ಕರ ಯೂಫ್ರೆಟಿಸ್ ನದಿಯ ತೀರದಲ್ಲಿದ್ದ ಕರ್ಕೆಮೀಷಿಗೆ ಹೋದನು.
21ಯೋಷೀಯನು ಅವನಿಗೆ ವಿರುದ್ಧವಾಗಿ ಹೊರಡಲು ನೆಕೋವನು ಅವನ ಬಳಿಗೆ ದೂತರನ್ನು ಕಳುಹಿಸಿ, “ಯೆಹೂದದ ಅರಸನೇ, ನನ್ನ ಗೊಡವೆ ನಿನಗೇಕೆ? ನಾನು ಈ ಸಾರಿ ಯುದ್ಧಕ್ಕೆ ಹೊರಟದ್ದು ನಿನಗೆ ವಿರುದ್ಧವಾಗಿ ಅಲ್ಲ. ನನ್ನ ಶತ್ರುವಂಶಕ್ಕೆ ವಿರುದ್ಧವಾಗಿ, ನಾನು ಮುನ್ನುಗ್ಗಬೇಕೆಂದು ದೇವರ ಅಪ್ಪಣೆಯಾಗಿದೆ. ನನ್ನೊಂದಿಗಿರುವ ದೇವರಿಗೆ ವಿರುದ್ಧ ಕೈಯೆತ್ತುವುದನ್ನು ಬಿಡು. ಇಲ್ಲವಾದರೆ ಆತನು ನಿನ್ನನ್ನು ನಾಶಮಾಡುವನು” ಎಂದು ಹೇಳಿಸಿದನು.
22ಆದರೆ ಯೋಷೀಯನು ಅವನನ್ನು ಬಿಟ್ಟು ಹಿಂದಿರುಗಲಿಲ್ಲ. ದೈವೋಕ್ತಿಯಾಗಿದ್ದ ನೆಕೋವಿನ ಮಾತಿಗೆ ಕಿವಿಗೊಡದೆ, ವೇಷಹಾಕಿಕೊಂಡು ಅವನೊಡನೆ ಕಾದಾಡುವುದಕ್ಕೆ ಮೆಗಿದ್ದೋ ಬಯಲಿಗೆ ಹೋದನು.
23ಅಲ್ಲಿ ಬಿಲ್ಲುಗಾರರು ಅರಸನಾದ ಯೋಷೀಯನಿಗೆ ಬಾಣವನ್ನೆಸೆದಾಗ ಅವನು ತನ್ನ ಸೇವಕರಿಗೆ, “ನನಗೆ ದೊಡ್ಡ ಗಾಯವಾಯಿತು, ನನ್ನನ್ನು ಆಚೆಗೆ ತೆಗೆದುಕೊಂಡು ಹೋಗಿರಿ” ಎಂದನು.
24ಸೇವಕರು ಅವನನ್ನು ಯುದ್ಧರಥದಿಂದಿಳಿಸಿ, ಅವನ ಎರಡನೆಯ ರಥದಲ್ಲಿ ಮಲಗಿಸಿ ಯೆರೂಸಲೇಮಿಗೆ ತೆಗೆದುಕೊಂಡು ಹೋಗಲು ಅಲ್ಲಿ ಸತ್ತನು. ಅವನ ಶವವನ್ನು ಅವನ ಪೂರ್ವಿಕರ ಸ್ಮಶಾನದಲ್ಲಿ ಸಮಾಧಿಮಾಡಿದರು. ಎಲ್ಲಾ ಯೆಹೂದ್ಯರೂ ಯೆರೂಸಲೇಮಿನವರೂ ಯೋಷೀಯನ ವಿಷಯವಾಗಿ ಗೋಳಾಡಿದರು.
25ಯೆರೆಮೀಯನು ಯೋಷೀಯನನ್ನು ಕುರಿತು ಶೋಕಗೀತವನ್ನು ರಚಿಸಿದನು. ಎಲ್ಲಾ ಗಾಯಕರೂ ಗಾಯಕಿಯರೂ ಅವನನ್ನು ಇಂದಿನ ವರೆಗೆ ತಮ್ಮ ಶೋಕಗೀತಗಳಲ್ಲಿ ವರ್ಣಿಸುತ್ತಿರುತ್ತಾರೆ. ಆ ಗೀತೆಗಳನ್ನು ಹಾಡುವುದು ಇಸ್ರಾಯೇಲರಲ್ಲಿ ಒಂದು ಪದ್ಧತಿಯಾಗಿದೆ. ಅವು ಶೋಕಗೀತಗ್ರಂಥದಲ್ಲಿ ಬರೆದಿರುತ್ತವೆ.
26ಯೋಷೀಯನ ಉಳಿದ ಚರಿತ್ರೆಯೂ ಯೆಹೋವನ ಧರ್ಮಶಾಸ್ತ್ರ ಅನುಸಾರವಾದ ಅವನ ಭಕ್ತಿಕಾರ್ಯಗಳೂ,
27ಅವನ ಪೂರ್ವೋತ್ತರ ವೃತ್ತಾಂತವೂ ಇಸ್ರಾಯೇಲರ ಮತ್ತು ಯೆಹೂದ್ಯ ರಾಜರ ಗ್ರಂಥದಲ್ಲಿ ಬರೆದಿರುತ್ತವೆ.