Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಡಿಸೆಂಬರ್ 2027 › 22 ಡಿಸೆಂಬರ್

ಆರ್ಥೊಡಾಕ್ಸ್ ಪಂಚಾಂಗ · ಡಿಸೆಂಬರ್ 9 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 22 ಡಿಸೆಂಬರ್ 2027

ಬುಧವಾರ · ಪಂಚಾಶತ್ತಮದ ನಂತರದ 27ನೇ ವಾರ · ಸ್ವರ 1

ಹಬ್ಬಗಳು ಮತ್ತು ಸಂತರು

Conception by Righteous Anna, of the Most Holy Mother of God

ಕ್ರಿಸ್ತ ಜನನದ ಉಪವಾಸ

ಉಪವಾಸ: ಎಣ್ಣೆಯೊಂದಿಗೆ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಪತ್ರಿಕೆ

1 ತಿಮೊ 5:22–6:11

22ಅವಸರದಿಂದ ಯಾರ ತಲೆಯ ಮೇಲೆಯಾದರೂ ಹಸ್ತವನ್ನಿಟ್ಟು ಸಭೆಯ ನಾಯಕತ್ವಕ್ಕೆ ನೇಮಿಸಬೇಡ. ಮತ್ತೊಬ್ಬರು ಮಾಡಿದ ಪಾಪದಲ್ಲಿ ನೀನು ಪಾಲುಗಾರನಾಗದೆ, ನೀನು ಶುದ್ಧನಾಗಿರುವ ಹಾಗೆ ನೋಡಿಕೋ. 23ಇನ್ನು ಮೇಲೆ ನೀರನ್ನು ಮಾತ್ರ ಕುಡಿಯುವವನಾಗಿರದೆ, ನಿನ್ನ ಅಜೀರ್ಣದ ಮತ್ತು ನಿನಗೆ ಆಗಾಗ್ಗೆ ಉಂಟಾಗುವ ಅಸ್ವಸ್ಥತೆಯ ಪರಿಹಾರಕ್ಕಾಗಿ ದ್ರಾಕ್ಷಾರಸವನ್ನು ಸ್ವಲ್ಪವಾಗಿ ತೆಗೆದುಕೊ. 24ಕೆಲವರ ಪಾಪಕೃತ್ಯಗಳು ತೀರ್ಪಿಗೆ ಮುಂಚೆಯೇ ಬಯಲಾಗುತ್ತವೆ, ಬೇರೆ ಕೆಲವರ ಪಾಪಕೃತ್ಯಗಳು ಮರೆಯಾಗಿದ್ದು ತರುವಾಯ ತಿಳಿದುಬರುತ್ತವೆ. 25ಹಾಗೆಯೇ ಕೆಲವು ಸತ್ಕ್ರಿಯೆಗಳು ಪ್ರಸಿದ್ಧವಾಗಿವೆ, ಬೇರೆ ಕೆಲವು ಸತ್ಕ್ರಿಯೆಗಳು ಬೆಳಕಿಗೆ ಬಾರದ್ದಿದ್ದರೂ ಮರೆಯಾಗಿರಲಾರವು. 6:1ದಾಸತ್ವ ನೊಗದ ಅಧೀನದಲ್ಲಿರುವವರು ತಮ್ಮ ಯಜಮಾನರನ್ನು ಪೂರ್ಣ ಗೌರವಕ್ಕೂ ಯೋಗ್ಯರೆಂದೆಣಿಸಲಿ, ಇಲ್ಲದಿದ್ದರೆ ದೇವರ ನಾಮಕ್ಕೂ ನಾವು ಹೊಂದಿರುವ ಉಪದೇಶಕ್ಕೂ ನಿಂದನೆ ಉಂಟಾಗುತ್ತದೆ. 2ಯಾರಿಗಾದರೂ ಕ್ರಿಸ್ತನನ್ನು ನಂಬುವವರಾದ ಯಜಮಾನರಿದ್ದರೆ, ಅವರು ಆ ಯಜಮಾನರನ್ನು ಸಹೋದರರೆಂದು ಉದಾಸೀನಮಾಡದೆ, ತಮ್ಮ ಸೇವೆಯ ಫಲವನ್ನು ಹೊಂದುವವರು, ನಂಬಿಗಸ್ತರು, ಪ್ರಿಯರೂ ಆಗಿದ್ದಾರೆಂದು ತಿಳಿದು ಅವರಿಗೆ ಇನ್ನು ಹೆಚ್ಚಾದ ಸಂತೋಷದಿಂದಲೇ ಸೇವೆಮಾಡಬೇಕು. ಈ ಉಪದೇಶವನ್ನು ಮಾಡಿ ಅವರನ್ನು ಎಚ್ಚರಿಸು. 3ಯಾವನಾದರೂ ಭಿನ್ನವಾದ ಉಪದೇಶವನ್ನು ಮಾಡಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಸ್ವಸ್ಥವಾದ ಮಾತುಗಳಿಗೂ, ಭಕ್ತಾನುಸಾರವಾದ ಉಪದೇಶಗಳಿಗೂ ಸಮ್ಮತಿಸದೆ ಹೋದರೆ, 4ಅವನು ಅಹಂಭಾವಿಯೂ ಅಜ್ಞಾನಿಯೂ ಆಗಿದ್ದು, ನಿಂದನೆ ವಾಗ್ವಾದಗಳನ್ನುಂಟು ಮಾಡುವ ಭ್ರಾಂತಿಯಲ್ಲಿದ್ದಾನೆ. ಇವುಗಳಿಂದ ಹೊಟ್ಟೆಕಿಚ್ಚು, ಜಗಳ, ದೂಷಣೆ, ದುಸ್ಸಂಶಯ ಮುಂತಾದವುಗಳು ಉಂಟಾಗುತ್ತವೆ. 5ಇದಲ್ಲದೆ ಬುದ್ಧಿಗೆಟ್ಟು ಸತ್ಯವಿಹೀನರಾಗಿದ್ದು ದೇವಭಕ್ತಿಯನ್ನು ಲಾಭಸಾಧನವೆಂದೆಣಿಸುವ ಈ ಮನುಷ್ಯರಲ್ಲಿ ನಿತ್ಯವಾದ ಕಚ್ಚಾಟಗಳು ಉಂಟಾಗುತ್ತವೆ. 6ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ. 7ನಾವು ಲೋಕದೊಳಕ್ಕೆ ಏನೂ ತೆಗೆದುಕೊಂಡು ಬರಲಿಲ್ಲವಾದ್ದರಿಂದ, ಅದರೊಳಗಿಂದ ಏನೂ ತೆಗೆದುಕೊಂಡು ಹೋಗಲಾರೆವು. 8ನಮಗೆ ಅನ್ನ ವಸ್ತ್ರಗಳಿದ್ದರೆ ಸಾಕು, ನಾವು ಸಂತುಷ್ಟರಾಗುತ್ತವೆ. 9ಐಶ್ವರ್ಯವಂತರಾಗಬೇಕೆಂದು ಮನಸ್ಸುಮಾಡುವವರು ದುಷ್ಟ್ರೇರಣೆಯೆಂಬ ಬಲೆಯಲ್ಲಿ ಸಿಕ್ಕಿಕೊಂಡು, ಬುದ್ಧಿಗೆ ವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಸೆಗಳಲ್ಲಿ ಬೀಳುತ್ತಾರೆ. ಇಂಥ ಆಸೆಗಳು ಮನುಷ್ಯರನ್ನು ಸಂಹಾರ ವಿನಾಶಗಳಲ್ಲಿ ಸಿಕ್ಕಿಸುತ್ತವೆ. 10ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು, ಅದರಿಂದ ಕ್ರಿಸ್ತ ನಂಬಿಕೆಯನ್ನು ಬಿಟ್ಟು, ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ. 11ಎಲೈ, ದೇವರ ಮನುಷ್ಯನೇ, ನೀನಾದರೋ ಇವುಗಳಿಗೆ ದೂರವಾಗಿರು. ನೀತಿ, ಭಕ್ತಿ, ನಂಬಿಕೆ, ಪ್ರೀತಿ, ಸ್ಥಿರಚಿತ್ತ ಹಾಗೂ ಸಾತ್ವಿಕತ್ವ ಇವುಗಳನ್ನು ಸಂಪಾದಿಸುವುದಕ್ಕೆ ಪ್ರಯಾಸಪಡು.

ಪತ್ರಿಕೆ (ಸಂತ ಅನ್ನ)

ಗಲಾ 4:22–31

22ಅದರಲ್ಲಿ ಬರೆದಿರುವುದೇನಂದರೆ, ಅಬ್ರಹಾಮನಿಗೆ ಇಬ್ಬರು ಮಕ್ಕಳಿದ್ದರು. ಒಬ್ಬನು ದಾಸಿಯಲ್ಲಿ ಹುಟ್ಟಿದವನು, ಮತ್ತೊಬ್ಬನು ಸ್ವತಂತ್ರಳಾದವಳಲ್ಲಿ ಹುಟ್ಟಿದವನು. 23ದಾಸಿಯ ಮಗನು ಶರೀರಕ್ಕನುಸಾರವಾಗಿ ಹುಟ್ಟಿದವನು, ಸ್ವತಂತ್ರಳಾದವಳ ಮಗನಾದರೋ ವಾಗ್ದಾನದ ಮೂಲಕ ಹುಟ್ಟಿದವನು. 24ಈ ಸಂಗತಿಗಳು ಹೋಲಿಕೆಗಳಾಗಿವೆ. ಹೇಗೆಂದರೆ ಆ ಇಬ್ಬರು ಸ್ತ್ರೀಯರು ಎರಡು ಒಡಂಬಡಿಕೆಗಳೇ, ಒಂದು ಒಡಂಬಡಿಕೆಯು ಸೀನಾಯಿ ಪರ್ವತದಿಂದ ಉಂಟಾಗಿ ದಾಸತ್ವದಲ್ಲಿರಬೇಕಾದ ಮಕ್ಕಳನ್ನು ಹೆರುವಂಥದು, ಅದೇ ಹಾಗರಳು. 25ಹಾಗರಳು ಅಂದರೆ ಅರಬಸ್ಥಾನದಲ್ಲಿರುವ ಸೀನಾಯಿ ಪರ್ವತವನ್ನು ಸೂಚಿಸುವಂತಹದ್ದು ಈಗಿನ ಯೆರೂಸಲೇಮಿಗೆ ಎಂಬುವಳಿಗೆ ಹೋಲಿಕೆಯಾಗಿದ್ದಾಳೆ, ಏಕೆಂದರೆ ಆಕೆಯು ತನ್ನ ಮಕ್ಕಳೊಂದಿಗೆ ಈಗ ದಾಸತ್ವದಲ್ಲಿದ್ದಾಳೆ. 26ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ. 27“ಹೆರದ ಬಂಜೆಯೇ, ಆನಂದಿಸು. ಪ್ರಸವವೇದನೆಯಿಲ್ಲದವಳೇ, ಹರ್ಷೋದ್ಗಾರಮಾಡು, ಗಂಡನುಳ್ಳವಳಿಗಿಂತ ಗಂಡಬಿಟ್ಟವಳಿಗೆ ಮಕ್ಕಳು ಹೆಚ್ಚು” ಎಂದು ಬರೆದಿದೆಯಲ್ಲಾ. 28ಸಹೋದರರೇ, ನಾವು ಇಸಾಕನಂತೆ ವಾಗ್ದಾನದ ಫಲವಾಗಿ ಹುಟ್ಟಿದ ಮಕ್ಕಳಾಗಿದ್ದೇವೆ. 29ಆದರೆ ಪೂರ್ವದಲ್ಲಿ ಶಾರೀರಿಕವಾಗಿ ಹುಟ್ಟಿದವನು, ದೇವರಾತ್ಮಬಲದಿಂದ ಹುಟ್ಟಿದವನನ್ನು ಹಿಂಸೆಪಡಿಸಿದಂತೆಯೇ ಈಗಲೂ ಆಗುತ್ತಿದೆ. 30ಆದರೆ ದೇವರ ವಾಕ್ಯವು ಏನು ಹೇಳುತ್ತದೆ? “ದಾಸಿಯನ್ನೂ ಅವಳ ಮಗನನ್ನೂ ಹೊರಗೆ ಹಾಕು. ದಾಸಿಯ ಮಗನು ಸ್ವತಂತ್ರಳ ಮಗನೊಂದಿಗೆ ಎಷ್ಟು ಮಾತ್ರಕ್ಕೂ ಬಾಧ್ಯಸ್ಥನಾಗಬಾರದು” ಎಂದು ಹೇಳುತ್ತದೆ. 31ಸಹೋದರರೇ, ನಾವು ದಾಸಿಯ ಮಕ್ಕಳಲ್ಲ, ಸ್ವತಂತ್ರಳಾದವಳ ಮಕ್ಕಳೇ ಎಂದು ತಿಳಿದುಕೊಳ್ಳಿರಿ.

ಸುವಾರ್ತೆ

ಲೂಕ 21:5–7, 10–11, 20–24

5ಕೆಲವರು ದೇವಾಲಯದ ವಿಷಯದಲ್ಲಿ ಅದು ಅಂದವಾದ ಕಲ್ಲುಗಳಿಂದಲೂ ಕಾಣಿಕೆಯ ವಸ್ತುಗಳಿಂದಲೂ ಅಲಂಕಾರವಾಗಿದೆ ಎಂದು ಹೇಳುತ್ತಿರುವಾಗ, 6ಯೇಸು, “ನೀವು ಇವುಗಳನ್ನು ನೋಡುತ್ತಿದ್ದೀರಲ್ಲಾ, ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದೆ ಎಲ್ಲಾ ಕೆಡವಲ್ಪಡುವ ದಿನಗಳು ಬರುವವು” ಅಂದನು. 7ಅವರು, “ಬೋಧಕನೇ, ಅದು ಯಾವಾಗ ಆಗುವುದು? ಅದು ಸಂಭವಿಸುವಾಗ ಯಾವ ಸೂಚನೆಗಳುಂಟಾಗುವುವು?” ಎಂದು ಆತನನ್ನು ಕೇಳಲು, 10ಮತ್ತು ಯೇಸು ಅವರಿಗೆ ಹೇಳಿದ್ದೇನಂದರೆ, “ಜನಕ್ಕೆ ವಿರೋಧವಾಗಿ ಜನರೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು. 11ಮತ್ತು ಮಹಾಭೂಕಂಪಗಳಾಗುವವು, ಅಲ್ಲಲ್ಲಿ ಬರಗಳೂ ಉಪದ್ರವಗಳೂ ಬರುವವು, ಭಯಾನಕ ಘಟನೆಗಳೂ ಮಹಾ ಸೂಚನೆಗಳೂ ಆಕಾಶದಲ್ಲಿ ತೋರುವವು. 20“ಆದರೆ ಸೈನಿಕರ ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವುದನ್ನು ನೀವು ಕಾಣುವಾಗ ಅದು ನಾಶವಾಗುವ ಕಾಲ ಸಮೀಪವಾಯಿತೆಂದು ತಿಳಿದುಕೊಳ್ಳಿರಿ. 21ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ. ಆ ಪಟ್ಟಣದಲ್ಲಿರುವವರು ಅದರೊಳಗಿಂದ ಹೊರಟುಹೋಗಲಿ. ಹಳ್ಳಿಯವರು ಅದರೊಳಕ್ಕೆ ಹೋಗದಿರಲಿ. 22ಏಕೆಂದರೆ ಬರೆದಿರುವುದೆಲ್ಲಾ ನೆರವೇರುವುದಕ್ಕಾಗಿ ಅವು ದಂಡನೆಯ ದಿನಗಳಾಗಿವೆ. 23ಆ ದಿನಗಳಲ್ಲಿ ಗರ್ಭಿಣಿಯರಿಗೂ ಬಾಣಂತಿಯರಿಗೂ ಆಗುವ ಕಷ್ಟವನ್ನು ಏನು ಹೇಳಲಿ! ಈ ಸೀಮೆಯ ಮೇಲೆ ಮಹಾವಿಪತ್ತೂ ಈ ಜನರ ಮೇಲೆ ಕ್ರೋಧವು ಉಂಟಾಗುವವು. 24ಅವರು ಕತ್ತಿಯ ಬಾಯಿಗೆ ಗುರಿಯಾಗುವರು. ಅವರು ಸೆರೆಯಾಗಿ ಅನ್ಯದೇಶಗಳಿಗೆಲ್ಲಾ ಹಿಡಿದುಕೊಂಡು ಹೋಗುವರು. ಅನ್ಯದೇಶದವರ ಸಮಯಗಳು ಪೂರೈಸುವ ತನಕ ಯೆರೂಸಲೇಮ್ ಪಟ್ಟಣವು ಅನ್ಯದೇಶದವರಿಂದ ತುಳಿದಾಡಲ್ಪಡುತ್ತಿರುವುದು.

ಸುವಾರ್ತೆ (ಸಂತ ಅನ್ನ)

ಲೂಕ 8:16–21

16“ಇದಲ್ಲದೆ ಯಾರೂ ದೀಪವನ್ನು ಹಚ್ಚಿ ಪಾತ್ರೆಯಿಂದ ಮುಚ್ಚುವುದಿಲ್ಲ, ಮಂಚದ ಕೆಳಗೂ ಇಡುವುದಿಲ್ಲ. ಮನೆಯೊಳಗೆ ಬರುವವರಿಗೆ ಬೆಳಕು ಕಾಣಿಸುವಂತೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ. 17ಬೆಳಕಿಗೆ ಬಾರದ ಯಾವ ರಹಸ್ಯವೂ ಇಲ್ಲ ಮತ್ತು ಪ್ರಕಟವಾಗದೆ ಇರುವಂಥ ಒಂದು ಗುಟ್ಟೂ ಇರುವುದಿಲ್ಲ, ಅದು ಬಟ್ಟಬಯಲಾಗುವುದು. 18ಆದುದರಿಂದ ನೀವು ಹೇಗೆ ಕಿವಿಗೊಡಬೇಕೋ ನೋಡಿಕೊಳ್ಳಿರಿ, ಏಕೆಂದರೆ ಇದ್ದವನಿಗೆ ಕೊಡಲ್ಪಡುವುದು; ಇಲ್ಲದವನ ಕಡೆಯಿಂದ ಅವನು ತನ್ನದೆಂದು ಎಣಿಸುವಂಥದೂ ತೆಗೆಯಲ್ಪಡುವುದು” ಅಂದನು. 19ಯೇಸುವಿನ ತಾಯಿಯೂ ತಮ್ಮಂದಿರೂ ಆತನಿದ್ದಲ್ಲಿಗೆ ಬಂದು ಜನರ ಗುಂಪಿನ ನಿಮಿತ್ತ ಆತನ ಬಳಿಗೆ ಹೋಗಲಾರದೆ ಇದ್ದರು. 20ಜನರು ಆತನಿಗೆ, “ನಿನ್ನ ತಾಯಿಯು, ನಿನ್ನ ಸಹೋದರರು ನಿನ್ನನ್ನು ಕಾಣಬೇಕೆಂದು ಹೊರಗೆ ನಿಂತಿದ್ದಾರೆ” ಎಂದು ಹೇಳಿದಾಗ, 21ಆತನು ಅವರಿಗೆ, “ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನಗೆ ತಾಯಿಯು ಸಹೋದರರು ಆಗಿದ್ದಾರೆ” ಎಂದು ಉತ್ತರಕೊಟ್ಟನು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 9 ಡಿಸೆಂಬರ್ ಎಂದರೆ ನಾಗರಿಕ ಪಂಚಾಂಗದ 22 ಡಿಸೆಂಬರ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು