Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ನವೆಂಬರ್ 2027 › 25 ನವೆಂಬರ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 25 ನವೆಂಬರ್ 2027

ಗುರುವಾರ · ಸಾಮಾನ್ಯ ಕಾಲದ 34ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 34ನೇ ವಾರದ ಗುರುವಾರ

ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಹಸಿರು

ಅಲೆಕ್ಸಾಂಡ್ರಿಯಾದ ಸಂತ ಕ್ಯಾಥರೀನ್, ಕನ್ಯೆ ಮತ್ತು ಹುತಾತ್ಮ · ಐಚ್ಛಿಕ ಸ್ಮರಣೆ

ದಿನದ ವಾಚನಗಳು

ಮೊದಲನೆಯ ವಾಚನ

ದಾನಿ 6:11–27

11ಆಗ ಆ ಜನರು ಗುಂಪಾಗಿ ಕೂಡಿ ದಾನಿಯೇಲನು ತನ್ನ ದೇವರ ಸಮ್ಮುಖದಲ್ಲಿ ಪ್ರಾರ್ಥಿಸಿ ವಿಜ್ಞಾಪಿಸುತ್ತಿರುವುದನ್ನು ಕಂಡರು. 12ಅವರು ರಾಜನ ಬಳಿಗೆ ಬಂದು ರಾಜಾಜ್ಞೆಯ ಪ್ರಸ್ತಾಪವನ್ನೆತ್ತಿ, “ರಾಜನೇ, ಯಾರಾದರೂ ಮೂವತ್ತು ದಿನಗಳ ತನಕ ನಿನ್ನ ಹೊರತು ಬೇರೆ ಯಾವ ದೇವರಿಗಾಗಲಿ, ಮನುಷ್ಯನಿಗಾಗಲಿ ಪ್ರಾರ್ಥನೆವಿಜ್ಞಾಪನೆ ಮಾಡಿದರೆ ಅವನು ಸಿಂಹಗಳ ಗವಿಯಲ್ಲಿ ಹಾಕಲ್ಪಡಬೇಕು ಎಂಬ ನಿಬಂಧನೆಗೆ ರುಜು ಹಾಕಿದ್ದೀಯಲ್ಲಾ” ಎಂದು ಕೇಳಲು, ರಾಜನು, “ಹೌದು, ಮೇದ್ಯರ ಮತ್ತು ಪಾರಸಿಯರ ರದ್ದಾಗದ ಧರ್ಮವಿಧಿಗಳಂತೆ ಇದು ಸ್ಥಿರವಾದ ನಿಬಂಧನೆ” ಎಂದು ಉತ್ತರಕೊಟ್ಟನು. 13ಆಗ ಅವರು ರಾಜನ ಸನ್ನಿಧಿಯಲ್ಲಿ, “ರಾಜನೇ, ಯೆಹೂದದಿಂದ ಸೆರೆಯಾಗಿ ತಂದವರಲ್ಲಿ ಒಬ್ಬನಾದ ಆ ದಾನಿಯೇಲನು ನಿನ್ನನ್ನಾಗಲಿ, ನಿನ್ನ ಹಸ್ತಾಕ್ಷರದ ನಿಬಂಧನೆಯನ್ನಾಗಲಿ, ಲಕ್ಷ್ಯಕ್ಕೆ ತಾರದೆ ದಿನಕ್ಕೆ ಮೂರಾವರ್ತಿ ಅವನ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದಾನೆ” ಎಂದು ಅರಿಕೆ ಮಾಡಿದರು. 14ಆದರೆ ರಾಜನು ಈ ಮಾತುಗಳನ್ನು ಕೇಳಿ ಬಹಳ ವ್ಯಸನಗೊಂಡು ದಾನಿಯೇಲನನ್ನು ಇದರಿಂದ ತಪ್ಪಿಸಬೇಕೆಂದು ಮನಸ್ಸುಮಾಡಿ ಇವನನ್ನು ಹೇಗೆ ರಕ್ಷಿಸಲಿ ಎಂದು ಸೂರ್ಯಾಸ್ತಮಾನದ ತನಕ ಆಲೋಚಿಸುತ್ತಿದ್ದನು. 15ಇದನ್ನು ತಿಳಿದು ಆ ಜನರು ರಾಜನ ಬಳಿಗೆ ಕೂಡಿಬಂದು, “ಪ್ರಭುವೇ, ರಾಜನು ವಿಧಿಸಿದ ಯಾವ ನಿಬಂಧನೆಯಾಗಲಿ, ನಿಯಮವಾಗಲಿ ರದ್ದಾಗಬಾರದು ಎಂಬ ಧರ್ಮಸೂತ್ರವು ಮೇದ್ಯಯರಲ್ಲಿಯೂ, ಪಾರಸಿಯರಲ್ಲಿಯೂ ಉಂಟೆಂಬುದು ನಿನಗೆ ಗೊತ್ತಿರಲಿ” ಎಂದು ಹೇಳಿದರು. ಇದರಿಂದ ಅನಿವಾರ್ಯವಾಗಿ ರಾಜನು ಅಪ್ಪಣೆ ಕೊಡಲೇ ಬೇಕಾಯಿತು. 16ದಾನಿಯೇಲನನ್ನು ತಂದು ಸಿಂಹಗಳ ಗವಿಯಲ್ಲಿ ರಾಜನ ಅಪ್ಪಣೆಯಂತೆ ಹಾಕಿಬಿಟ್ಟರು. ಆಗ ರಾಜನು ದಾನಿಯೇಲನಿಗೆ, “ನೀನು ನಿತ್ಯವೂ ಆರಾಧಿಸುವ ದೇವರು ನಿನ್ನನ್ನುದ್ಧರಿಸಲಿ” ಎಂದು ಹರಸಿದನು. 17ಕೂಡಲೆ ಬಂಡೆಯನ್ನು ತಂದು ಗವಿಯ ಬಾಯನ್ನು ಮುಚ್ಚಿದರು. ದಾನಿಯೇಲನ ಈ ಶಿಕ್ಷೆಯನ್ನು ಯಾರು ಬದಲಾಯಿಸದಂತೆ ರಾಜನ ಮುದ್ರೆಯಿಂದಲೂ, ತನ್ನ ಮುಖಂಡರ ಮುದ್ರೆಯಿಂದಲೂ ಅದಕ್ಕೆ ಮುದ್ರೆಯನ್ನು ಹಾಕಿ ಭದ್ರ ಮಾಡಲಾಯಿತು. 18ರಾಜನು ಅರಮನೆಯಲ್ಲಿ ವಿನೋದವಾದ್ಯಗಳನ್ನು ತನ್ನ ಮುಂದೆ ತರಿಸದೆ, ಉಪವಾಸವಾಗಿ ರಾತ್ರಿಯನ್ನು ಕಳೆದನು; ಅವನಿಗೆ ನಿದ್ರೆ ಬರಲಿಲ್ಲ. 19ಮರುದಿನ ಬೆಳಿಗ್ಗೆ ರಾಜನು ಉದಯದಲ್ಲೇ ಎದ್ದು ಸಿಂಹಗಳ ಗವಿಯ ಬಳಿಗೆ ತ್ವರೆಯಾಗಿ ಹೋದನು. 20ದಾನಿಯೇಲನಿದ್ದ ಗವಿಯ ಸಮೀಪಕ್ಕೆ ಬಂದು, ಅವನು ದುಃಖ ಧ್ವನಿಯಿಂದ ದಾನಿಯೇಲನನ್ನು ಕೂಗಿ, “ದಾನಿಯೇಲನೇ, ಜೀವ ಸ್ವರೂಪನಾದ ದೇವರ ಸೇವಕನೇ, ನೀನು ನಿತ್ಯವೂ ಭಜಿಸುವ ನಿನ್ನ ದೇವರು ನಿನ್ನನ್ನು ಸಿಂಹಗಳಿಂದ ಉದ್ಧರಿಸಲು ಶಕ್ತನಾದನೋ?” ಎಂದು ಕೇಳಿದನು. 21ಅದಕ್ಕೆ ದಾನಿಯೇಲನು ರಾಜನಿಗೆ, “ಅರಸನೇ, ಚಿರಂಜೀವಿಯಾಗಿರು! 22ನನ್ನ ದೇವರು ತನ್ನ ದೂತನನ್ನು ಕಳುಹಿಸಿ ಸಿಂಹಗಳ ಬಾಯಿಗಳನ್ನು ಬಂಧಿಸಿದನು. ಅವುಗಳಿಂದ ನನಗೆ ಯಾವ ಹಾನಿಯೂ ಆಗಲಿಲ್ಲ. ಏಕೆಂದರೆ ಆತನ ದೃಷ್ಟಿಗೆ ನಾನು ನಿರ್ಮಲನಾಗಿ ಕಂಡುಬಂದೆನು. ರಾಜನಾದ ನಿನಗೂ ಯಾವ ದ್ರೋಹವನ್ನೂ ಮಾಡಲಿಲ್ಲ” ಎಂದು ಹೇಳಿದನು. 23ಅದನ್ನು ಕೇಳಿ ರಾಜನು ಬಹಳ ಸಂತೋಷಪಟ್ಟು, ದಾನಿಯೇಲನನ್ನು ಗವಿಯೊಳಗಿಂದ ಮೇಲಕ್ಕೆ ಎತ್ತಬೇಕೆಂದು ಅಪ್ಪಣೆಮಾಡಲು ಅವನನ್ನು ಅಲ್ಲಿಂದ ಮೇಲಕ್ಕೆತ್ತಿದರು. ಅವನು ತನ್ನ ದೇವರಲ್ಲಿ ಭರವಸವಿಟ್ಟ ಕಾರಣ ಅವನಿಗೆ ಯಾವ ಹಾನಿಯೂ ಆಗಿರಲಿಲ್ಲ. 24ಅನಂತರ ರಾಜನು ಆಜ್ಞಾಪಿಸಲು ದಾನಿಯೇಲನ ಮೇಲೆ ದೂರು ಹೊರಿಸಿದವರನ್ನು ತಂದು ಅವರನ್ನೂ, ಅವರ ಹೆಂಡತಿ ಮಕ್ಕಳನ್ನು ಸಿಂಹಗಳ ಗವಿಯಲ್ಲಿ ಹಾಕಿಬಿಟ್ಟರು. ಅವರು ಗವಿಯ ತಳವನ್ನು ಮುಟ್ಟುವುದರೊಳಗೆ ಸಿಂಹಗಳು ಅವರ ಮೇಲೆ ಹಾರಿ, ಅವರ ಎಲ್ಲಾ ಎಲುಬುಗಳನ್ನು ಚೂರುಚೂರು ಮಾಡಿದವು. 25ಆಗ ರಾಜನಾದ ದಾರ್ಯಾವೆಷನು ಲೋಕದಲ್ಲೆಲ್ಲಾ ವಾಸಿಸುವ ಸಕಲ ಜನಾಂಗ, ಕುಲ, ಭಾಷೆಗಳವರಿಗೆ ಈ ಪ್ರಸಿದ್ಧ ಪತ್ರವನ್ನು ಬರೆಯಿಸಿ, ಅದನ್ನು ಅನುಸರಿಸಿ ನಡೆಯಲು ಆಜ್ಞೆಮಾಡಿದನು. ದಾನಿಯೇಲನ ದೇವರ ದಯೆಯಿಂದ ನಿಮಗೆ ಸುಖವು ಹೆಚ್ಚೆಚ್ಚಾಗಲಿ! 26“ನಾನು ಆಳುವ ರಾಜ್ಯದವರೆಲ್ಲರೂ ದಾನಿಯೇಲನ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕೆಂದು ಆಜ್ಞಾಪಿಸುತ್ತೇನೆ; ಆತನೇ ಜೀವಸ್ವರೂಪನಾದ ಸನಾತನ ದೇವರು, ಆತನ ರಾಜ್ಯವು ಎಂದಿಗೂ ಅಳಿಯದು, ಆತನ ಆಳ್ವಿಕೆಯು ಶಾಶ್ವತವಾಗಿರುವುದು; 27ಆತನು ಉದ್ಧರಿಸುವವನೂ, ರಕ್ಷಿಸುವವನೂ, ಭೂಮ್ಯಾಕಾಶಗಳಲ್ಲಿ ಅದ್ಭುತಮಹತ್ವಗಳನ್ನು ನಡೆಸುವವನೂ ಆಗಿದ್ದಾನೆ; ಆತನೇ ದಾನಿಯೇಲನನ್ನು ಸಿಂಹಗಳ ಬಾಯಿಂದ ತಪ್ಪಿಸಿದನು.”

ಪ್ರತಿವಚನ ಕೀರ್ತನೆ

ಈ ಅನುವಾದದಲ್ಲಿ ಇಲ್ಲ

ಸುವಾರ್ತೆ

ಲೂಕ 21:20–28

20“ಆದರೆ ಸೈನಿಕರ ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವುದನ್ನು ನೀವು ಕಾಣುವಾಗ ಅದು ನಾಶವಾಗುವ ಕಾಲ ಸಮೀಪವಾಯಿತೆಂದು ತಿಳಿದುಕೊಳ್ಳಿರಿ. 21ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ. ಆ ಪಟ್ಟಣದಲ್ಲಿರುವವರು ಅದರೊಳಗಿಂದ ಹೊರಟುಹೋಗಲಿ. ಹಳ್ಳಿಯವರು ಅದರೊಳಕ್ಕೆ ಹೋಗದಿರಲಿ. 22ಏಕೆಂದರೆ ಬರೆದಿರುವುದೆಲ್ಲಾ ನೆರವೇರುವುದಕ್ಕಾಗಿ ಅವು ದಂಡನೆಯ ದಿನಗಳಾಗಿವೆ. 23ಆ ದಿನಗಳಲ್ಲಿ ಗರ್ಭಿಣಿಯರಿಗೂ ಬಾಣಂತಿಯರಿಗೂ ಆಗುವ ಕಷ್ಟವನ್ನು ಏನು ಹೇಳಲಿ! ಈ ಸೀಮೆಯ ಮೇಲೆ ಮಹಾವಿಪತ್ತೂ ಈ ಜನರ ಮೇಲೆ ಕ್ರೋಧವು ಉಂಟಾಗುವವು. 24ಅವರು ಕತ್ತಿಯ ಬಾಯಿಗೆ ಗುರಿಯಾಗುವರು. ಅವರು ಸೆರೆಯಾಗಿ ಅನ್ಯದೇಶಗಳಿಗೆಲ್ಲಾ ಹಿಡಿದುಕೊಂಡು ಹೋಗುವರು. ಅನ್ಯದೇಶದವರ ಸಮಯಗಳು ಪೂರೈಸುವ ತನಕ ಯೆರೂಸಲೇಮ್ ಪಟ್ಟಣವು ಅನ್ಯದೇಶದವರಿಂದ ತುಳಿದಾಡಲ್ಪಡುತ್ತಿರುವುದು. 25“ಇದಲ್ಲದೆ ಸೂರ್ಯ ಚಂದ್ರ ನಕ್ಷತ್ರಗಳಲ್ಲಿ ಸೂಚನೆಗಳು ತೋರುವವು. ಭೋರ್ಗರೆಯುವ ಸಮುದ್ರ ಮತ್ತು ಅಲೆಗಳ ಘೋಷದ ನಿಮಿತ್ತವಾಗಿ ಭೂಮಿಯ ಮೇಲೆ ಜನಗಳಿಗೆ ದಿಕ್ಕುಕಾಣದೆ ಸಂಕಟವು ಉಂಟಾಗುವುದು. 26ಆಕಾಶದ ಶಕ್ತಿಗಳು ಕದಲುವುದರಿಂದ ಮನುಷ್ಯರು ಭಯಹಿಡಿದವರಾಗಿ ಲೋಕಕ್ಕೆ ಏನು ಬರುವುದೋ ಎಂದು ಎದುರು ನೋಡುತ್ತಾ ಪ್ರಾಣಹೋದಂತಾಗುವರು. 27ಆಗ ಮನುಷ್ಯಕುಮಾರನು ಬಲದಿಂದಲೂ ಬಹು ಮಹಿಮೆಯಿಂದಲೂ ಮೇಘದಲ್ಲಿ ಬರುವುದನ್ನು ಕಾಣುವರು. 28ಆದರೆ ಇವು ಸಂಭವಿಸುವುದಕ್ಕೆ ತೊಡಗುವಾಗ, ನಿಮ್ಮ ತಲೆಯೆತ್ತಿರಿ, ಏಕೆಂದರೆ ನಿಮ್ಮ ಬಿಡುಗಡೆಯು ಸಮೀಪವಾಗಿದೆ” ಅಂದನು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು