Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಅಕ್ಟೋಬರ್ 2027 › 14 ಅಕ್ಟೋಬರ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 14 ಅಕ್ಟೋಬರ್ 2027

ಗುರುವಾರ · ಸಾಮಾನ್ಯ ಕಾಲದ 28ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 28ನೇ ವಾರದ ಗುರುವಾರ

ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಹಸಿರು

ಸಂತ ಕ್ಯಾಲಿಸ್ಟಸ್ I, ಪೋಪ್ ಮತ್ತು ಹುತಾತ್ಮ · ಐಚ್ಛಿಕ ಸ್ಮರಣೆ

ದಿನದ ವಾಚನಗಳು

ಮೊದಲನೆಯ ವಾಚನ

ರೋಮಾ 3:21–30

21ಈಗಲಾದರೋ ದೇವರಿಂದ ದೊರಕುವ ನೀತಿಯು ನಂಬುವವರೆಲ್ಲರಿಗೆ ಧರ್ಮಶಾಸ್ತ್ರ ನಿಯಮಗಳಿಲ್ಲದೆ ಪ್ರಕಟವಾಗಿದೆ. ಅದು ಮೋಶೆಯ ಧರ್ಮಶಾಸ್ತ್ರದಿಂದಲೂ ಪ್ರವಾದಿಗಳ ನುಡಿಗಳಿಂದಲೂ ಸಾಕ್ಷಿಗೊಂಡಿರುತ್ತವೆ. 22ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವುದರ ಮೂಲಕವೇ ವಿಶ್ವಾಸಿಗಳೆಲ್ಲರಿಗೆ ದೇವರ ನೀತಿಯು ಉಂಟಾಗುತ್ತದೆ. ಇದರಲ್ಲಿ ಯಾವ ತಾರತಮ್ಯವನ್ನು ಮಾಡುವುದಿಲ್ಲ. 23ಎಲ್ಲರೂ ಪಾಪ ಮಾಡಿ ದೇವರ ಮಹಿಮೆಯನ್ನು ಹೊಂದದೇ ಹೋಗಿದ್ದಾರೆ. 24ಅವರು ನೀತಿವಂತರೆಂದು ನಿರ್ಣಯ ಹೊಂದುವುದು ದೇವರ ಉಚಿತಾರ್ಥವಾದ ಕೃಪೆಯಿಂದಲೇ ಅದು ಕ್ರಿಸ್ತ ಯೇಸುವಿನಿಂದಾದ ಪಾಪ ವಿಮೋಚನೆಯ ಮೂಲಕವಾಗಿ ಆಗುವುದು. 25ಪೂರ್ವ ಕಾಲದಲ್ಲಿ ಮಾನವರ ಪಾಪವನ್ನು ದಂಡಿಸದೆ ತಾಳ್ಮೆಯಿಂದಿದ್ದ ದೇವರು, ನಂಬಿಕೆಯುಳ್ಳವರಿಗೆ ಪಾಪಕ್ಷಮೆಯನ್ನು ತರುವ ಸಲುವಾಗಿ ಯೇಸುಕ್ರಿಸ್ತನನ್ನು ರಕ್ತಧಾರೆ ಎರೆಯುವಂತೆ ಮಾಡಿದನು. 26ಯೇಸುಕ್ರಿಸ್ತನಲ್ಲಿ ನಂಬಿಕೆ ಇಡುವವರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುವುದಕ್ಕಾಗಿಯು ತಾನು ಸತ್ಯಸ್ವರೂಪನೂ, ನೀತಿವಂತನೂ ಎಂದು ವ್ಯಕ್ತಪಡಿಸುವ ಸಲುವಾಗಿಯೂ ಪ್ರಸ್ತುತ ಕಾಲದಲ್ಲಿ ದೇವರು ಹೀಗೆ ಮಾಡಿದರು. 27ಹಾಗಾದರೆ ನಮ್ಮನ್ನು ನಾವು ಹೊಗಳಿಕೊಳ್ಳುವುದಕ್ಕೆ ಅವಕಾಶವೆಲ್ಲಿ? ಅದು ಇಲ್ಲದೆ ಹೋಯಿತು. ಯಾವ ಆಧಾರದಿಂದ? ಕರ್ಮಮಾರ್ಗವನ್ನು ಅನುಸರಿಸುವುದರಿಂದಲೋ? ಅಲ್ಲ. ನಂಬಿಕೆಮಾರ್ಗವನ್ನು ಅನುಸರಿಸುವುದರಿಂದಲೇ. 28ಧರ್ಮಶಾಸ್ತ್ರ ಸಂಬಂಧವಾದ ಕರ್ಮಗಳಿಲ್ಲದೆ ನಂಬಿಕೆಯಿಂದಲೇ ಮನುಷ್ಯರು ನೀತಿವಂತರೆಂದು ನಿರ್ಣಯಿಸಲ್ಪಡುವರೆಂಬುದಾಗಿ ನಿಶ್ಚಯಮಾಡಿಕೊಂಡಿದ್ದೇವಲ್ಲಾ 29ದೇವರು ಯೆಹೂದ್ಯರಿಗೆ ಮಾತ್ರ ದೇವರಾಗಿದ್ದಾನೋ? ಹೌದು ದೇವರು ಒಬ್ಬನೇ ಹೀಗಿರಲಾಗಿ ಆತನು ಅನ್ಯಜನರಿಗೂ ಸಹ ದೇವರಾಗಿದ್ದಾನೆ. 30ಆತನು ಸುನ್ನತಿಯವರನ್ನು ನೀತಿವಂತರೆಂದು ನಿರ್ಣಯಿಸುವುದಕ್ಕೆ ಅವರ ನಂಬಿಕೆಯೇ ಆಧಾರ. ಹಾಗೆಯೇ ಸುನ್ನತಿಯಿಲ್ಲದವರನ್ನು ನಿರ್ಣಯಿಸುವುದಕ್ಕೂ ನಂಬಿಕೆಯೇ ಕಾರಣ.

ಪ್ರತಿವಚನ ಕೀರ್ತನೆ

ಕೀರ್ತ 130:1–6

1ಯಾತ್ರಾಗೀತೆ. ಯೆಹೋವನೇ, ಪಾತಾಳದಲ್ಲಿದ್ದು ನಿನ್ನನ್ನು ಕೂಗಿಕೊಳ್ಳುತ್ತೇನೆ. 2ಕರ್ತನೇ, ನನ್ನ ಮೊರೆಯನ್ನು ಕೇಳು; ನನ್ನ ವಿಜ್ಞಾಪನೆಯ ಶಬ್ದಕ್ಕೆ ಕಿವಿದೆರೆ. 3ಕರ್ತನೇ, ಯೆಹೋವನೇ, ನೀನು ಪಾಪಗಳನ್ನು ಲೆಕ್ಕಿಸುವುದಾದರೆ ನಿನ್ನ ಮುಂದೆ ಯಾರು ನಿಲ್ಲಲು ಸಾಧ್ಯ? 4ನೀನು ಪಾಪವನ್ನು ಕ್ಷಮಿಸುವವನಾದುದರಿಂದ, ಮನುಷ್ಯರ ಭಯಭಕ್ತಿಗೆ ನೀನೇ ಪಾತ್ರನು. 5ನಾನು ಯೆಹೋವನನ್ನು ಎದುರುನೋಡುತ್ತೇನೆ; ನನ್ನ ಪ್ರಾಣವು ಆತನನ್ನು ಕಾದುಕೊಂಡಿದೆ; ಆತನ ನುಡಿಯನ್ನು ನಿರೀಕ್ಷಿಸಿಕೊಂಡಿದ್ದೇನೆ. 6ಕಾವಲುಗಾರರು ಬೆಳಗಾಗುವುದನ್ನು ಮುನ್ನೋಡುತ್ತಾರಲ್ಲಾ; ಕಾವಲುಗಾರರು ಬೆಳಗಾಗುವುದನ್ನು ಮುನ್ನೋಡುವುದಕ್ಕಿಂತ ವಿಶೇಷವಾಗಿ, ನನ್ನ ಅಂತರಾತ್ಮವು ಕರ್ತನನ್ನು ಮುನ್ನೋಡುತ್ತದೆ.

ಸುವಾರ್ತೆ

ಲೂಕ 11:47–54

47ನಿಮ್ಮ ಗತಿಯನ್ನು ಏನು ಹೇಳಲಿ? ನೀವು ಪ್ರವಾದಿಗಳ ಗೋರಿಗಳನ್ನು ಕಟ್ಟುತ್ತೀರಿ. ಅವರನ್ನು ಕೊಂದವರು ನಿಮ್ಮ ಪೂರ್ವಿಕರೇ. 48ಹೀಗಿರುವುದರಿಂದ ನಿಮ್ಮ ಪೂರ್ವಿಕರು ಮಾಡಿದ್ದಕ್ಕೆ ನೀವೇ ಸಾಕ್ಷಿಗಳಾಗಿರುವವರಲ್ಲದೆ ಅವರ ಕೃತ್ಯಗಳಿಗೆ ಒಪ್ಪಿಕೊಂಡ ಹಾಗಾಯಿತು. ಹೇಗೆಂದರೆ ಅವರು ಪ್ರವಾದಿಗಳನ್ನು ಕೊಂದರು, ನೀವು ಗೋರಿಗಳನ್ನು ಕಟ್ಟುತ್ತೀರಿ. 49ಆದುದರಿಂದ ದೇವರ ಜ್ಞಾನವು ಹೇಳಿದ್ದೇನಂದರೆ, ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಅಪೊಸ್ತಲರನ್ನೂ ಕಳುಹಿಸುವೆನು, ಅವರಲ್ಲಿ ಕೆಲವರನ್ನು ಕೊಲ್ಲುವರು, ಕೆಲವರನ್ನು ಹಿಂಸೆಪಡಿಸುವರು.’ 50ಹೀಗೆ ಲೋಕಾದಿಯಿಂದ ಸುರಿಸಲಾದ ಎಲ್ಲಾ ಪ್ರವಾದಿಗಳ ರಕ್ತಕ್ಕೂ ಅಂದರೆ, ಹೇಬೆಲನ ರಕ್ತ ಮೊದಲುಗೊಂಡು, ಯಜ್ಞವೇದಿಗೂ ದೇವಾಲಯಕ್ಕೂ ನಡುವೆ ಕೊಲ್ಲಲ್ಪಟ್ಟ ಜಕರೀಯನ ರಕ್ತದವರೆಗೂ ಈ ಸಂತತಿಯವರು ಲೆಕ್ಕಕೊಡಬೇಕಾಗುವುದು ಎಂಬುದೇ. ಹೌದು, ಈ ಸಂತತಿಯವರೇ ಉತ್ತರಕೊಡಬೇಕೆಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. 52ಅಯ್ಯೋ ಧರ್ಮೋಪದೇಶಕರೇ, ದೈವಿಕ ಜ್ಞಾನದ ಬೀಗದ ಕೈಯನ್ನು ನಿಮ್ಮಲ್ಲೇ ಇಟ್ಟುಕೊಂಡಿದ್ದೀರಿ. ನೀವೂ ಒಳಕ್ಕೆ ಪ್ರವೇಶಿಸಲಿಲ್ಲ, ಒಳಕ್ಕೆ ಹೋಗ ಬಯಸುವವರಿಗೂ ಅಡ್ಡಿಮಾಡಿದೀರಿ” ಅಂದನು. 53ಬಳಿಕ ಯೇಸು ಅಲ್ಲಿಂದ ಹೊರಗೆ ಬಂದಾಗ ಶಾಸ್ತ್ರಿಗಳೂ ಫರಿಸಾಯರೂ ಆತನನ್ನು ಕಠಿಣವಾಗಿ ಕೆಣಕಿ, ವಿರೋಧಿಸಿ ಅನೇಕ ವಿಷಯಗಳನ್ನು ಕುರಿತು ಆತನನ್ನು ಅಡ್ಡಾದಿಡ್ಡೀ ಪ್ರಶ್ನೆಮಾಡುತ್ತಾ, 54ಆತನ ಮಾತಿನಲ್ಲಿ ಏನಾದರೂ ತಪ್ಪು ಕಂಡುಹಿಡಿಯಲೇಬೇಕೆಂದು ಹೊಂಚುಹಾಕುತ್ತಿದ್ದರು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು