Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಅಕ್ಟೋಬರ್ 2027 › 13 ಅಕ್ಟೋಬರ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 13 ಅಕ್ಟೋಬರ್ 2027

ಬುಧವಾರ · ಸಾಮಾನ್ಯ ಕಾಲದ 28ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 28ನೇ ವಾರದ ಬುಧವಾರ

ವಾರದ ದಿನ · ಆರಾಧನಾ ಬಣ್ಣ: ಹಸಿರು

ದಿನದ ವಾಚನಗಳು

ಮೊದಲನೆಯ ವಾಚನ

ರೋಮಾ 2:1–11

1ಆದ್ದರಿಂದ ಎಲೈ ಮನುಷ್ಯನೇ, ಮತ್ತೊಬ್ಬರಲ್ಲಿ ದೋಷ ಹುಡುಕುವ ನೀನು ಯಾವನಾದರೂ ಸರಿಯೇ, ನಿನಗೆ ಅದರಿಂದ ಕ್ಷಮೆಯಿಲ್ಲ. ಯಾಕೆಂದರೆ, ಮತ್ತೊಬ್ಬರಲ್ಲಿ ದೋಷ ಹುಡುಕುವುದರಿಂದ ನಿನ್ನನ್ನು ನೀನೇ ದೋಷಿಯೆಂದು ತೀರ್ಪುಮಾಡಿಕೊಂಡ ಹಾಗಾಯಿತು. ಮತ್ತೊಬ್ಬರಲ್ಲಿ ದೋಷವೆಣಿಸುವ ನೀನು ಆ ದೋಷಗಳನ್ನೇ ಮಾಡುತ್ತೀಯಲ್ಲಾ. 2ಅಂಥವುಗಳನ್ನು ಅನುಸರಿಸುವವರ ವಿಷಯದಲ್ಲಿ ದೇವರು ಕೊಡುವ ತೀರ್ಪು ಸತ್ಯಕ್ಕನುಸಾರವಾಗಿಯೇ ಇರುವುದೆಂದು ನಾವು ಬಲ್ಲೆವು. 3ಇದನ್ನು ಪರಿಗಣಿಸು ಎಲೈ ಮನುಷ್ಯನೇ, ಅಂಥವುಗಳನ್ನು ಅನುಸರಿಸುವವರಲ್ಲಿ ದೋಷಹುಡುಕಿ, ನೀನು ಅವುಗಳನ್ನೇ ಮಾಡುತ್ತಿರುವಲ್ಲಿ ದೇವರ ದಂಡನೆಯ ತೀರ್ಪನ್ನು ತಪ್ಪಿಸಿಕೊಂಡೇನೆಂದು ಯೋಚಿಸುತ್ತೀಯೋ? 4ಅಥವಾ ಆತನ ಅಪಾರವಾದ ದಯೆ, ಸಹನೆ, ದೀರ್ಘಶಾಂತಿಗಳನ್ನು ಕೇವಲವಾಗಿ ಯೋಚಿಸಿ, ನಿನ್ನ ಮನಸ್ಸು ಮಾರ್ಪಡಿಸಿಕೊಳ್ಳುವಂತೆ ಪ್ರೆರೇಪಿಸುವ ದೇವರ ಒಳ್ಳೆತನದ ಅರಿವು ನಿನಗಿಲ್ಲವೋ? 5ನೀನು ನಿನ್ನ ಮೊಂಡತನವನ್ನೂ, ಪಶ್ಚಾತ್ತಾಪವಿಲ್ಲದ ಮನಸ್ಸನ್ನೂ ಅನುಸರಿಸಿ ನ್ಯಾಯತೀರ್ಪಿನ ದಿನದವರೆಗೂ ನಿನಗಾಗಿ ದೇವರ ಕೋಪವನ್ನು ಸಂಗ್ರಹಿಸಿಕೊಳ್ಳುತ್ತಾ ಇದ್ದೀ. 6ದೇವರು ಪ್ರತಿಯೊಬ್ಬರಿಗೆ ಅವರವರ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವನು, 7ಯಾರು ಪ್ರಶಂಸೆ, ಗೌರವ, ಮತ್ತು ಭ್ರಷ್ಟರಹಿತ ಜೀವನ ಹೊಂದಬೇಕೆಂದು ಒಳ್ಳೆಯದನ್ನು ಬೇಸರಗೊಳ್ಳದೆ ಮಾಡುತ್ತಾರೋ, ಅವರಿಗೆ ನಿತ್ಯಜೀವವನ್ನು ಕೊಡುವನು. 8ಯಾರು ಸ್ವಾರ್ಥಸಾಧಕರಾಗಿದ್ದು, ಸತ್ಯವನ್ನು ಅನುಸರಿಸದೆ ಅನ್ಯಾಯವನ್ನು ಅನುಸರಿಸುತ್ತಾರೋ, ಅವರ ಮೇಲೆ ದೇವರ ಕೋಪ ಮತ್ತು ರೌದ್ರಗಳು ಬರುವವು. 9ಯೆಹೂದ್ಯರಿಗೆ ಮೊದಲು ಅನಂತರ ಗ್ರೀಕರಿಗೆ, ಕೆಟ್ಟದ್ದನ್ನು ಅನುಸರಿಸುವ ಪ್ರತಿಯೊಬ್ಬ ಮನುಷ್ಯನ ಮೇಲೂ ಸಂಕಟವೂ, ಯಾತನೆಯೂ ಬರುವವು. 10ಯೆಹೂದ್ಯರಿಗೆ ಮೊದಲು, ಅನಂತರ ಗ್ರೀಕರಿಗೆ, ಒಳ್ಳೆಯದನ್ನು ಅನುಸರಿಸುವ ಪ್ರತಿಯೊಬ್ಬನಿಗೆ ಗೌರವವೂ, ಮಾನವೂ, ಮನಶಾಂತಿಯೂ ಉಂಟಾಗುವವು. 11ದೇವರಲ್ಲಿ ಪಕ್ಷಪಾತವಿಲ್ಲ.

ಪ್ರತಿವಚನ ಕೀರ್ತನೆ

ಕೀರ್ತ 62:1–2, 5–6, 8

1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಯೆದುತೂನನ ರೀತಿಯಲ್ಲಿ ಹಾಡತಕ್ಕದ್ದು; ದಾವೀದನ ಕೀರ್ತನೆ. ನನ್ನ ಮನಸ್ಸು ದೇವರನ್ನೇ ನಂಬಿ ಶಾಂತವಾಗಿರುವುದು. ನನ್ನ ರಕ್ಷಣೆಯು ಆತನಿಂದಲೇ. 2ಆತನೇ ನನಗೆ ಶರಣನೂ, ರಕ್ಷಕನೂ ಮತ್ತು ದುರ್ಗವೂ; ನಾನು ಕದಲಿದರೂ ಬೀಳೆನು. 5ನನ್ನ ಮನವೇ, ದೇವರನ್ನೇ ನಂಬಿ ಶಾಂತವಾಗಿರು. ನನ್ನ ನಿರೀಕ್ಷೆಯು ನೆರವೇರುವುದು ಆತನಿಂದಲೇ. 6ಆತನೇ ನನಗೆ ಶರಣನೂ, ರಕ್ಷಕನೂ ಮತ್ತು ದುರ್ಗವೂ; ನಾನು ಕದಲುವುದಿಲ್ಲ. 8ಜನರೇ, ಯಾವಾಗಲೂ ಆತನನ್ನೇ ನಂಬಿ, ನಿಮ್ಮ ಹೃದಯವನ್ನು ಆತನ ಮುಂದೆ ತೆರೆಯಿರಿ; ದೇವರು ನಮ್ಮ ಆಶ್ರಯವು. ಸೆಲಾ

ಸುವಾರ್ತೆ

ಲೂಕ 11:42–46

42“ಅಯ್ಯೋ ಫರಿಸಾಯರೇ, ನೀವು ಪುದೀನ, ಮರುಗಪತ್ರೆ ಸದಾಪು ಮುಂತಾದ ಸಕಲ ವಿಧವಾದ ಸೊಪ್ಪುಗಳಲ್ಲಿ ಹತ್ತರಲ್ಲೊಂದು ಪಾಲು ಕೊಡುತ್ತೀರಿ ಸರಿ, ಆದರೆ ನ್ಯಾಯವನ್ನೂ ದೇವರ ಪ್ರೀತಿಯನ್ನೂ ಲಕ್ಷಿಸದೆ ಬಿಟ್ಟಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯ ಮಾಡದೆ, ಇವುಗಳನ್ನು ಮಾಡಬೇಕಾಗಿತ್ತು. 43“ಅಯ್ಯೋ ಫರಿಸಾಯರೇ, ಸಭಾಮಂದಿರಗಳಲ್ಲಿ ಉನ್ನತ ಸ್ಥಾನಗಳನ್ನೂ ಅಂಗಡಿ ಬೀದಿಗಳಲ್ಲಿ ವಂದನೆಗಳನ್ನೂ ನೀವು ಬಯಸುತ್ತೀರಿ. 44ನಿಮ್ಮ ಗತಿಯನ್ನು ಏನು ಹೇಳಲಿ, ನೆಲಸಮವಾದ ಸಮಾಧಿಗಳ ಹಾಗಿದ್ದೀರಿ. ಅವುಗಳ ಮೇಲೆ ತಿರುಗಾಡುವ ಜನರಿಗೆ ಇವು ಸಮಾಧಿಗಳೆಂದು ತಿಳಿಯದು” ಎಂದು ಹೇಳಿದನು. 45ಇದನ್ನು ಕೇಳಿ ಒಬ್ಬ ಧರ್ಮೋಪದೇಶಕನು ಯೇಸುವಿಗೆ, “ಬೋಧಕನೇ, ಈ ಮಾತುಗಳನ್ನು ಹೇಳುವುದರಿಂದ ನಮ್ಮನ್ನೂ ನಿಂದಿಸಿದ ಹಾಗಾಯಿತು” ಎಂದು ಹೇಳಲು, 46ಆತನು, “ಧರ್ಮೋಪದೇಶಕರೇ, ನಿಮ್ಮ ಗತಿಯನ್ನೂ ಏನು ಹೇಳಲಿ? ನೀವು ಜನರ ಮೇಲೆ ಹೊರಲಾರದ ಹೊರೆಗಳನ್ನು ಹೊರಿಸುತ್ತೀರಿ, ನೀವಾದರೋ ಆ ಹೊರೆಗಳನ್ನು ಒಂದು ಬೆರಳಿನಿಂದಲೂ ಮುಟ್ಟುವುದಿಲ್ಲ.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು