Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಸೆಪ್ಟೆಂಬರ್ 2027 › 24 ಸೆಪ್ಟೆಂಬರ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 24 ಸೆಪ್ಟೆಂಬರ್ 2027

ಶುಕ್ರವಾರ · ಸಾಮಾನ್ಯ ಕಾಲದ 25ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 25ನೇ ವಾರದ ಶುಕ್ರವಾರ

ವಾರದ ದಿನ · ಆರಾಧನಾ ಬಣ್ಣ: ಹಸಿರು

ಉಪವಾಸ ಮತ್ತು ಪ್ರಾಯಶ್ಚಿತ್ತ

ಪ್ರಾಯಶ್ಚಿತ್ತದ ದಿನ

ಪ್ರತಿ ಶುಕ್ರವಾರವೂ ಪ್ರಾಯಶ್ಚಿತ್ತದ ದಿನ; ಅದನ್ನು ಹೇಗೆ ಆಚರಿಸಬೇಕು ಎಂಬುದನ್ನು ಪ್ರತಿಯೊಂದು ಬಿಷಪರ ಸಮ್ಮೇಳನ ನಿರ್ಧರಿಸುತ್ತದೆ: ಮಾಂಸ ವರ್ಜನೆ ಅಥವಾ ಬೇರೊಂದು ಪ್ರಾಯಶ್ಚಿತ್ತ ಕಾರ್ಯ. ಉಪವಾಸ 18 ರಿಂದ 59 ವರ್ಷದವರಿಗೆ, ಮಾಂಸ ವರ್ಜನೆ 14 ವರ್ಷದಿಂದ ಕಡ್ಡಾಯ.

ದಿನದ ವಾಚನಗಳು

ಮೊದಲನೆಯ ವಾಚನ

ಹಗ್ಗಾ 2:1–9

1ದಾರ್ಯಾವೆಷನ ಆಳ್ವಿಕೆಯ ಏಳನೆಯ ತಿಂಗಳಿನ ಇಪ್ಪತ್ತೊಂದನೆಯ ದಿನದಲ್ಲಿ ಯೆಹೋವನು ಪ್ರವಾದಿಯಾದ ಹಗ್ಗಾಯನ ಮೂಲಕ ಮತ್ತೊಮ್ಮೆ ಈ ವಾಕ್ಯವನ್ನು ಕೊಟ್ಟು, 2“ಶೆಯಲ್ತೀಯೇಲನಿಗೆ ಹುಟ್ಟಿದ ಯೆಹೂದ ದೇಶಾಧಿಪತಿಯಾದ ಜೆರುಬ್ಬಾಬೆಲ್, ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವ, ನೆರೆದಿದ್ದ ಜನರನ್ನು ಕೂಡಿಸಿ, 3‘ಈ ಆಲಯದ ಪೂರ್ವ ವೈಭವವನ್ನು ನೋಡಿದವರು, ನಿಮ್ಮಲ್ಲಿ ಎಷ್ಟು ಮಂದಿ ಉಳಿದಿದ್ದೀರಿ? ಇದರ ಈಗಿನ ಸ್ಥಿತಿಯು ನಿಮಗೆ ಹೇಗೆ ತೋರುತ್ತದೆ? ನಿಮ್ಮ ದೃಷ್ಟಿಗೆ ಏನೂ ಇಲ್ಲವಾಗಿ ತೋರುತ್ತಿದೆಯಲ್ಲವೇ?’ 4ಯೆಹೋವನು ಇಂತೆನ್ನುತ್ತಾನೆ, ‘ಜೆರುಬ್ಬಾಬೆಲನೇ ಈಗ ಧೈರ್ಯವಾಗಿರು; ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವನೇ, ಧೈರ್ಯವಾಗಿರು; ದೇಶೀಯರೇ, ನೀವೆಲ್ಲರೂ ಧೈರ್ಯಗೊಂಡು ಕೆಲಸ ನಡಿಸಿರಿ’ ಇದು ಯೆಹೋವನ ನುಡಿ; ‘ನಾನು ನಿಮ್ಮೊಂದಿಗೆ ಇದ್ದೇನೆ’ ಎಂದು ಸೇನಾಧೀಶ್ವರ ಯೆಹೋವನು ನುಡಿಯುತ್ತಾನೆ. 5‘ನೀವು ಐಗುಪ್ತದಿಂದ ಪಾರಾಗಿ ಬಂದಾಗ, ನಾನು ನಿಮಗೆ ವಾಗ್ದಾನವಾಗಿ ಕೊಟ್ಟ ಮಾತನ್ನು ನೆರವೇರಿಸುವೆನು; ನನ್ನ ಆತ್ಮನು ನಿಮ್ಮ ಮಧ್ಯದಲ್ಲಿ ನೆಲೆಗೊಂಡಿರುವನು; ಹೆದರಬೇಡಿರಿ.’ 6ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ‘ಸ್ವಲ್ಪ ಕಾಲದ ಮೇಲೆ, ನಾನು ಇನ್ನೊಂದೇ ಸಾರಿ ಆಕಾಶವನ್ನೂ, ಭೂಮಿಯನ್ನೂ, ಸಮುದ್ರವನ್ನೂ, ಒಣನೆಲವನ್ನೂ ಅದುರಿಸಿ ಸಕಲಜನಾಂಗಗಳನ್ನು ನಡುಗಿಸುವೆನು; 7ಆಗ ಸಮಸ್ತ ಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು, ಈ ಆಲಯವನ್ನು ವೈಭವದಿಂದ ತುಂಬಿಸುವೆನು’ ಇದು ಸೇನಾಧೀಶ್ವರನಾದ ಯೆಹೋವನ ನುಡಿ. 8‘ಬೆಳ್ಳಿಯೆಲ್ಲಾ ನನ್ನದು, ಬಂಗಾರವೆಲ್ಲಾ ನನ್ನದು’ ಇದು ಸೇನಾಧೀಶ್ವರನಾದ ಯೆಹೋವನ ನುಡಿ. 9‘ಈ ಆಲಯದ ಮುಂದಿನ ವೈಭವವು ಹಿಂದಿನ ವೈಭವಕ್ಕಿಂತ ವಿಶೇಷವಾಗಿರುವುದು’ ಇದು ಸೇನಾಧೀಶ್ವರನಾದ ಯೆಹೋವನ ನುಡಿ. ‘ಈ ಸ್ಥಳದಲ್ಲಿ ಸಮಾಧಾನವನ್ನು ಅನುಗ್ರಹಿಸುವೆನು’” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

ಪ್ರತಿವಚನ ಕೀರ್ತನೆ

ಕೀರ್ತ 43:1–4

1ದೇವರೇ, ನ್ಯಾಯವನ್ನು ತೀರಿಸು; ನನಗೋಸ್ಕರ ವ್ಯಾಜ್ಯವನ್ನು ನಡೆಸಿ ಭಕ್ತಿ ಇಲ್ಲದ ಜನಾಂಗದಿಂದ ತಪ್ಪಿಸು, ದುರಾಚಾರಿಗಳಾದ ಮೋಸಗಾರರಿಂದ ನನ್ನನ್ನು ಬಿಡಿಸು. 2ದೇವರೇ, ನೀನು ನನಗೆ ದುರ್ಗಸ್ಥಾನವಲ್ಲವೇ; ಏಕೆ ನನ್ನನ್ನು ತಳ್ಳಿಬಿಟ್ಟೆ? ನಾನು ಏಕೆ ಶತ್ರುಬಾಧೆಯಿಂದ ದುಃಖಿಸುತ್ತಾ ವಿಕಾರಿಯಾಗಿ ಅಲೆಯಬೇಕು? 3ನಿನ್ನ ಬೆಳಕನ್ನು, ನಿನ್ನ ಸತ್ಯಪ್ರಸನ್ನತೆಗಳನ್ನು ಕಳುಹಿಸು; ಅವು ನಿನ್ನ ಪರಿಶುದ್ಧಪರ್ವತಕ್ಕೆ ನನ್ನನ್ನು ಕರೆದುಕೊಂಡು ಹೋಗಿ ನಿನ್ನ ನಿವಾಸಕ್ಕೆ ಬರಮಾಡಲಿ. 4ದೇವರೇ, ನನ್ನ ದೇವರೇ, ಆಗ ನಾನು ನಿನ್ನ ಯಜ್ಞವೇದಿಯ ಬಳಿಗೆ, ನನ್ನ ಆನಂದನಿಧಿಯಾಗಿರುವ ನಿನ್ನ ಹತ್ತಿರಕ್ಕೆ ಸೇರಿ, ಕಿನ್ನರಿಯನ್ನು ನುಡಿಸುತ್ತಾ ನಿನ್ನನ್ನು ಕೊಂಡಾಡುವೆನು.

ಸುವಾರ್ತೆ

ಲೂಕ 9:18–22

18ಒಂದು ದಿನ ಯೇಸುವು ಏಕಾಂತವಾಗಿ ಪ್ರಾರ್ಥನೆಮಾಡುತ್ತಿರುವಾಗ ಆತನ ಶಿಷ್ಯರು ಆತನ ಸಂಗಡ ಇದ್ದರು. ಅನಂತರ ಆತನು ಅವರಿಗೆ, “ಜನರು ನನ್ನನ್ನು ಕುರಿತು ಏನು ಹೇಳುತ್ತಾರೆ?” ಎಂದು ಶಿಷ್ಯರನ್ನು ಕೇಳಲು, 19ಅವರು, “ನಿನ್ನನ್ನು ಸ್ನಾನಿಕನಾದ ಯೋಹಾನನು ಎಂದೂ, ಕೆಲವರು ಎಲೀಯನು ಎಂದೂ, ಇನ್ನು ಕೆಲವರು ಪೂರ್ವದ ಪ್ರವಾದಿಗಳಲ್ಲಿ ಯಾರೋ ಒಬ್ಬನು ಜೀವದಿಂದ ಎದ್ದಿದ್ದಾನೆ ಎಂದು ಅನ್ನುತ್ತಿದ್ದಾರೆ” ಎಂದು ಹೇಳಿದರು. 20ಯೇಸು ಅವರನ್ನು, “ಆದರೆ ನೀವು ನನ್ನನ್ನು ಯಾರು ಅನ್ನುತ್ತೀರಿ?” ಎಂದು ಕೇಳಲಾಗಿ ಪೇತ್ರನು, “ನೀನು ದೇವರಿಂದ ಬರಬೇಕಾಗಿರುವ ಕ್ರಿಸ್ತನು” ಎಂದು ಉತ್ತರ ಕೊಟ್ಟನು. 21ಆಗ ಯೇಸುವು, ಇದನ್ನು ಯಾರಿಗೂ ಹೇಳಬೇಡಿರಿ ಎಂದು ಬಹು ಖಂಡಿತವಾಗಿ ಅವರಿಗೆ ಅಪ್ಪಣೆ ಕೊಟ್ಟನು. 22ಯೇಸು ಅವರಿಗೆ, “ಮನುಷ್ಯಕುಮಾರನು ಬಹು ಕಷ್ಟಗಳನ್ನನುಭವಿಸಿ, ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ಶಾಸ್ತ್ರಿಗಳಿಂದಲೂ ನಿರಾಕರಿಸಲ್ಪಟ್ಟು ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡಬೇಕಾಗಿದೆ” ಎಂದು ಹೇಳಿದನು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು