ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಸೆಪ್ಟೆಂಬರ್ 2027 › 5 ಸೆಪ್ಟೆಂಬರ್
ಆರ್ಥೊಡಾಕ್ಸ್ ಪಂಚಾಂಗ · ಆಗಸ್ಟ್ 23 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 5 ಸೆಪ್ಟೆಂಬರ್ 2027
ಭಾನುವಾರ · ಸ್ವರ 2
ಹಬ್ಬಗಳು ಮತ್ತು ಸಂತರು
ಪಂಚಾಶತ್ತಮದ ನಂತರದ 11ನೇ ಭಾನುವಾರ
ಉಪವಾಸ
ಉಪವಾಸವಿಲ್ಲ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಉದಯಕಾಲದ 11ನೇ ಸುವಾರ್ತೆ
15ಅವರ ಊಟವಾದ ಮೇಲೆ ಯೇಸು ಸೀಮೋನ್ ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ಇವರಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತಿಯೋ?” ಎಂದು ಕೇಳಲು ಅವನು “ಹೌದು, ಕರ್ತನೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂದು ನೀನೇ ಬಲ್ಲೆ” ಎಂದನು. ಆತನು ಅವನಿಗೆ, “ನನ್ನ ಕುರಿಮರಿಗಳನ್ನು ಮೇಯಿಸು” ಎಂದು ಹೇಳಿದನು. 16ಆತನು ತಿರುಗಿ ಎರಡನೆಯ ಸಾರಿ ಅವನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ?” ಎಂದು ಕೇಳಲು, ಅವನು ಹೌದು ಕರ್ತನೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂದು ನೀನೇ ಬಲ್ಲೆ ಎಂದನು. ಆತನು ಅವನಿಗೆ “ನನ್ನ ಕುರಿಗಳನ್ನು ಪಾಲಿಸು” ಎಂದು ಹೇಳಿದನು. 17ಯೇಸು ಮೂರನೆಯ ಸಾರಿ, “ಯೋಹಾನನ ಮಗನಾದ ಸೀಮೋನನೇ ನೀನು ನನ್ನ ಮೇಲೆ ಮಮತೆ ಇಟ್ಟಿದ್ದಿಯೋ?” ಎಂದು ಕೇಳಿದನು, ಮೂರನೆಯ ಸಾರಿ ಆತನು, “ನನ್ನ ಮೇಲೆ ಮಮತೆ ಇಟ್ಟಿದ್ದೀಯೋ?” ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು, “ಕರ್ತನೇ, ನಿನಗೆ ಎಲ್ಲವೂ ತಿಳಿದಿದೆ. ನಾನು ನಿನ್ನ ಮೇಲೆ ಮಮತೆ ಇಟ್ಟೀದ್ದೇನೆಂದು ನಿನಗೆ ತಿಳಿದಿದೆ” ಎಂದನು. ಆಗ ಅವನಿಗೆ ಯೇಸು “ನನ್ನ ಕುರಿಗಳನ್ನು ಮೇಯಿಸು” ಎಂದನು. 18“ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ಯುವಕನಾಗಿದ್ದಾಗ ನೀನೇ ನಿನ್ನ ಉಡುಪನ್ನು ಧರಿಸಿಕೊಂಡು ಇಷ್ಟಬಂದ ಕಡೆಗೆ ತಿರುಗಾಡುತ್ತಿದ್ದೀ. ಆದರೆ ನೀನು ಮುದುಕನಾದಾಗ ನಿನ್ನ ಕೈಗಳನ್ನು ಚಾಚುವಿ, ಆಗ ಮತ್ತೊಬ್ಬನು ನಿನ್ನ ನಡುವನ್ನು ಕಟ್ಟಿ ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ಹೊತ್ತುಕೊಂಡು ಹೋಗುವನು” ಎಂದು ಹೇಳಿದನು. 19ಅವನು ಎಂಥಾ ಮರಣದಿಂದ ದೇವರನ್ನು ಮಹಿಮೆಪಡಿಸುವನು ಎಂಬುದನ್ನು ಯೇಸು ಈ ಮಾತಿನಿಂದ ಸೂಚಿಸಿದನು. ಆತನು ಇದನ್ನು ಹೇಳಿ ಪೇತ್ರನಿಗೆ “ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. 20ಪೇತ್ರನು ಹಿಂತಿರುಗಿ ನೋಡಿದಾಗ, ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಹಿಂದೆ ಬರುವುದನ್ನು ಕಂಡನು. ಆ ಶಿಷ್ಯನು ಊಟದ ಸಮಯದಲ್ಲಿ ಯೇಸುವಿನ ಎದೆಗೆ ಒರಗಿಕೊಂಡು, “ಕರ್ತನೇ, ನಿನ್ನನ್ನು ಹಿಡಿದುಕೊಡುವವನು ಯಾರು?” ಎಂದು ಕೇಳಿದವನೇ. 21ಇವನನ್ನು ಪೇತ್ರನು ನೋಡಿ ಯೇಸುವಿಗೆ, “ಕರ್ತನೇ, ಇವನ ಬಗ್ಗೆ ಏನು ಹೇಳುತ್ತೀಯಾ?” ಎಂದು ಕೇಳಲು, 22ಯೇಸು ಅವನಿಗೆ “ನಾನು ಬರುವ ತನಕ ಇವನು ಉಳಿದಿರಬೇಕೆಂಬುದು ನನಗೆ ಮನಸ್ಸಾಗಿದ್ದರೆ ಅದರಿಂದ ನಿನಗೇನು? ನೀನು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. 23ಆದುದರಿಂದ ಆ ಶಿಷ್ಯನು ಸಾಯುವುದಿಲ್ಲವೆಂಬ ಮಾತು ಸಹೋದರರಲ್ಲಿ ಹಬ್ಬಿತು. ಆದರೆ ಅವನು ಸಾಯುವುದಿಲ್ಲವೆಂದು ಯೇಸು ಅವನಿಗೆ ಹೇಳಲಿಲ್ಲ. “ನಾನು ಬರುವ ತನಕ ಅವನು ಉಳಿದಿರಬೇಕೆಂದು ನನಗೆ ಮನಸ್ಸಿದ್ದರೆ ಅದು ನಿನಗೇನು?” ಎಂದು ಮಾತ್ರ ಹೇಳಿದನು. 24ಈ ವಿಷಯವಾಗಿ ಸಾಕ್ಷಿಕೊಟ್ಟು, ಇವುಗಳನ್ನು ಬರೆದ ಶಿಷ್ಯನು ಇವನೇ. ಇವನ ಸಾಕ್ಷಿಯು ಸತ್ಯವೆಂದು ನಾವು ಬಲ್ಲೆವು. 25ಇದಲ್ಲದೆ ಯೇಸುವು ಮಾಡಿದ ಇನ್ನೂ ಬೇರೆ ಅನೇಕ ಸಂಗತಿಗಳು ಸಹ ಇವೆ. ಅವುಗಳನ್ನೆಲ್ಲಾ ಒಂದೊಂದಾಗಿ ಬರೆಯುವುದಾದರೆ, ಆ ಪುಸ್ತಕಗಳು ಲೋಕವೇ ಹಿಡಿಸಲಾರದಷ್ಟಾಗುವುದು ಎಂದು ನಾನು ಭಾವಿಸುತ್ತೇನೆ.
ಪತ್ರಿಕೆ
2ಇತರರಿಗೆ ನಾನು ಅಪೊಸ್ತಲನಲ್ಲದಿದ್ದರೂ ನಿಮಗಾದರೋ ಅಪೊಸ್ತಲನಾಗಿದ್ದೇನೆ. ನಾನು ಕರ್ತನ ಅಪೊಸ್ತಲನಾಗಿದ್ದೇನೆಂಬುದಕ್ಕೆ ನೀವೇ ನನ್ನ ಮುದ್ರೆಯಾಗಿದ್ದಿರಿ. 3ನನ್ನನ್ನು ವಿಮರ್ಶಿಸುವವರಿಗೆ ನನ್ನ ಪ್ರತ್ಯುತ್ತರವೇನೆಂದರೆ, 4ಅನ್ನ, ಪಾನಗಳಿಗೆ ನಮಗೆ ಹಕ್ಕಿಲ್ಲವೇ? 5ಕ್ರೈಸ್ತವಿಶ್ವಾಸಿಯಾದ ಹೆಂಡತಿಯನ್ನು ಕರೆದುಕೊಂಡು ಸಂಚರಿಸುವುದಕ್ಕೆ ಮಿಕ್ಕಾದ ಅಪೊಸ್ತಲರಂತೆಯೂ, ಕರ್ತನ ಸಹೋದರರಂತೆಯ, ಮತ್ತು ಕೇಫನಂತೆಯೂ ನಮಗೆ ಹಕ್ಕಿಲ್ಲವೇ? 6ಅಥವಾ, ದುಡಿಯದೆ ಜೀವಿಸುವುದಕ್ಕೆ ನನಗೂ ಬಾರ್ನಬನಿಗೂ ಹಕ್ಕಿಲ್ಲವೇ? 7ಯಾವ ಸಿಪಾಯಿಯಾದರೂ ಸ್ವಂತ ಖರ್ಚಿನಿಂದ ಸೇವೆ ಮಾಡುವುದುಂಟೋ? ದ್ರಾಕ್ಷಾತೋಟವನ್ನು ಮಾಡಿದವನು ಅದರ ಫಲವನ್ನು ತಿನ್ನದೇ ಇರುವುದುಂಟೋ? ತನ್ನ ಹಿಂಡನ್ನು ಸಾಕುವವನು ಅವುಗಳ ಹಾಲನ್ನು ಕುಡಿಯದೆ ಜೀವಿಸುವುದುಂಟೋ? 8ನಾನು ಹೇಳಿದ್ದು ಬರೀ ಲೋಕವಾಡಿಕೆಯ ಮಾತೋ? ಧರ್ಮಶಾಸ್ತ್ರವೂ ಇದನ್ನು ಹೇಳುವುದಿಲ್ಲವೋ? 9“ಕಣತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದೆಂದು” ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿದೆ. ದೇವರು ಚಿಂತಿಸುವುದು ಎತ್ತುಗಳಿಗಾಗಿಯೋ? 10ಖಂಡಿತವಾಗಿ ನಮಗೋಸ್ಕರವಾಗಿಯೇ ಆತನು ಹೇಳುತ್ತಾನಲ್ಲವೇ? ಹೌದು, ನಮಗೋಸ್ಕರ ಬರೆಯಲ್ಪಟ್ಟಿದೆ. ಉಳುವವನು ಬೆಳೆಯಲ್ಲಿ ತನಗೆ ಪಾಲು ದೊರಕುವ ನಿರೀಕ್ಷೆಯಿಂದ ಉಳಬೇಕು, ಹಾಗೂ ಒಕ್ಕುವವನು ತನಗೆ ಸುಗ್ಗಿಯಲ್ಲಿ ಪಾಲು ದೊರಕುವುದೆಂದು ನಿರೀಕ್ಷೆಯಲ್ಲಿ ಒಕ್ಕಬೇಕು. 11ನಾವು ನಿಮ್ಮಲ್ಲಿ ಆತ್ಮೀಕವಾದ ಬೀಜವನ್ನು ಬಿತ್ತಿದ ಮೇಲೆ ನಿಮ್ಮಿಂದ ಭೌತಿಕವಾದ ಪೈರನ್ನು ಕೊಯ್ಯುವುದು ದೊಡ್ಡ ವಿಷಯವೋ? 12ಈ ಅಧಿಕಾರ ಇತರರಿಗೆ ನಿಮ್ಮ ಮೇಲೆ ಇದ್ದರೆ ನಮಗೆ ಎಷ್ಟೋ ಹೆಚ್ಚಾಗಿ ಇರಬೇಕಲ್ಲಾ? ಆದರೂ ನಾವು ಆ ಅಧಿಕಾರವನ್ನು ಚಲಾಯಿಸಲಿಲ್ಲ, ಕ್ರಿಸ್ತನ ಸುವಾರ್ತೆಗೆ ಅಡ್ಡಿಮಾಡಬಾರದೆಂದು ಎಲ್ಲವನ್ನು ಸಹಿಸಿಕೊಂಡೆವು.
ಪತ್ರಿಕೆ (ದೇವಮಾತೆ)
5ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ. 6ಆತನು ದೇವಸ್ವರೂಪನಾಗಿದ್ದರೂ, ದೇವರಿಗೆ ಸರಿಸಮಾನನಾಗಿರುವನೆಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೆ, 7ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸಮನಾದನು. ಮನುಷ್ಯನಾಕಾರದಲ್ಲಿ ಕಾಣಿಸಿಕೊಂಡನು. 8ಆತನು ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು. 9ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ, ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. 10ಆದ್ದರಿಂದ ಸ್ವರ್ಗ ಮರ್ತ್ಯ ಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಮೊಣಕಾಲೂರಿ ಅಡ್ಡಬಿದ್ದು, 11ತಂದೆಯಾದ ದೇವರ ಮಹಿಮೆಗಾಗಿ ಪ್ರತಿಯೊಂದು ನಾಲಿಗೆಯು ಯೇಸು ಕ್ರಿಸ್ತನನ್ನು ಕರ್ತನೆಂದು ಅರಿಕೆಮಾಡುವುದು.
ಸುವಾರ್ತೆ
23ಆದುದರಿಂದ ಪರಲೋಕ ರಾಜ್ಯವು ತನ್ನ ಸೇವಕರಿಂದ ಲೆಕ್ಕವನ್ನು ತೆಗೆದುಕೊಳ್ಳಬೇಕೆಂದಿದ್ದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ. 24ಅವನು ಲೆಕ್ಕ ತೆಗೆದುಕೊಳ್ಳುವುದಕ್ಕೆ ಪ್ರಾರಂಭಮಾಡಿದಾಗ ಹತ್ತು ಸಾವಿರ ಬಂಗಾರದ ನಾಣ್ಯ ನೀಡಬೇಕಿದ್ದ ಸೇವಕನನ್ನು ಅವನ ಬಳಿಗೆ ಕರತಂದರು. 25ಆ ಸಾಲ ತೀರಿಸುವುದಕ್ಕೆ ಅವನಲ್ಲಿ ಏನೂ ಇಲ್ಲದುದರಿಂದ ಅವನ ಒಡೆಯನು ಅವನನ್ನೂ, ಅವನ ಹೆಂಡತಿ, ಮಕ್ಕಳನ್ನೂ ಅವನಿಗಿದ್ದದ್ದೆಲ್ಲವನ್ನೂ ಮಾರಿ ಅದನ್ನು ತೀರಿಸಬೇಕೆಂದು ಅಪ್ಪಣೆ ಮಾಡಿದನು. 26ಆ ಸೇವಕನು ಮೊಣಕಾಲೂರಿ ತನ್ನ ತಲೆಯನ್ನು ಬಾಗಿ ಅವನಿಗೆ, ‘ಒಡೆಯನೇ, ನನ್ನ ಮೇಲೆ ತಾಳ್ಮೆಯಿರಲಿ, ನಿನ್ನದೆಲ್ಲವನ್ನೂ ನಾನು ಕೊಟ್ಟು ತೀರಿಸುತ್ತೇನೆಂದು’ ಹೇಳಿದನು. 27ಆ ಸೇವಕನ ಒಡೆಯನು ಕನಿಕರಪಟ್ಟು ಅವನನ್ನು ಬಿಡಿಸಿ ಆ ಸಾಲವನ್ನೆಲ್ಲಾ ಮನ್ನಿಸಿಬಿಟ್ಟನು. 28ತರುವಾಯ ಆ ಸೇವಕನು ಹೊರಕ್ಕೆ ಬಂದು ತನಗೆ ನೂರು ಬೆಳ್ಳಿ ನಾಣ್ಯ ಕೊಡಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಕಂಡು ಅವನನ್ನು ಹಿಡಿದು ಕುತ್ತಿಗೆ ಹಿಸುಕಿ, ‘ನನ್ನ ಸಾಲ ತೀರಿಸು’ ಎಂದು ಹೇಳಿದನು. 29ಆದರೆ ಅವನ ಜೊತೆ ಸೇವಕನು ಮೊಣಕಾಲೂರಿ, ‘ನನ್ನ ಮೇಲೆ ತಾಳ್ಮೆಯಿರಲಿ ನಾನು ತೀರಿಸುತ್ತೇನೆ’ ಎಂದು ಬೇಡಿಕೊಂಡನು. 30ಆದರೆ ಅವನು ಒಪ್ಪದೆ ಹೊರಟುಹೋಗಿ ಆ ಸಾಲ ತೀರಿಸುವ ತನಕ ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು. 31ಅವನ ಜೊತೆ ಸೇವಕರು ನಡೆದ ಸಂಗತಿಯನ್ನು ನೋಡಿ ಬಹಳವಾಗಿ ದುಃಖಪಟ್ಟು ತಮ್ಮ ಒಡೆಯನ ಬಳಿಗೆ ಬಂದು ನಡೆದದ್ದನ್ನೆಲ್ಲಾ ಆತನಿಗೆ ತಿಳಿಸಿದರು. 32ಆಗ ಅವನ ಒಡೆಯನು ಅವನನ್ನು ಕರಸಿ, ‘ಓ, ದುಷ್ಟ ಸೇವಕನೇ, ನೀನು ನನ್ನನ್ನು ಬೇಡಿಕೊಂಡದ್ದರಿಂದ ನಿನ್ನ ಸಾಲವನ್ನೆಲ್ಲಾ ನಾನು ಮನ್ನಿಸಿಬಿಟ್ಟೆನಲ್ಲವೇ? 33ನಾನು ನಿನ್ನನ್ನು ಕರುಣಿಸಿದ ಹಾಗೆ ನೀನು ಸಹ ನಿನ್ನ ಜೊತೆ ಸೇವಕನನ್ನು ಕರುಣಿಸಬಾರದಾಗಿತ್ತೇ?’ ಎಂದು ಹೇಳಿ, 34ಒಡೆಯನು ಸಿಟ್ಟುಗೊಂಡು ತನಗೆ ಕೊಡಬೇಕಾದ ಸಾಲವನ್ನು ತೀರಿಸುವ ತನಕ ಅವನನ್ನು ಪೀಡಿಸುವವರ ಕೈಗೆ ಒಪ್ಪಿಸಿದನು. 35ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸಹೋದರನಿಗೆ ಹೃದಯಪೂರ್ವಕವಾಗಿ ಕ್ಷಮಿಸದೇ ಹೋದರೆ ಪರಲೋಕದಲ್ಲಿರುವ ನನ್ನ ತಂದೆಯು ನಿಮಗೂ ಹಾಗೆಯೇ ಮಾಡುವನು” ಅಂದನು.
ಸುವಾರ್ತೆ (ದೇವಮಾತೆ)
38ಅವರು ಸಂಚಾರಮಾಡುತ್ತಿರುವಾಗ ಆತನು ಒಂದು ಹಳ್ಳಿಗೆ ಬಂದನು. ಅಲ್ಲಿ ಮಾರ್ಥಳೆಂಬ ಒಬ್ಬ ಸ್ತ್ರೀಯು ಆತನನ್ನು ತನ್ನ ಮನೆಯಲ್ಲಿ ಉಳಿಸಿಕೊಂಡಳು. 39ಆಕೆಗೆ ಮರಿಯಳೆಂಬ ಒಬ್ಬ ತಂಗಿ ಇದ್ದಳು. ಈಕೆಯು ಯೇಸುವಿನ ಪಾದಗಳ ಬಳಿಯಲ್ಲಿ ಕುಳಿತುಕೊಂಡು ಆತನ ವಾಕ್ಯವನ್ನು ಕೇಳುತ್ತಿದ್ದಳು. 40ಆದರೆ ಮಾರ್ಥಳು ಉಪಚಾರ ಸೇವೆಯ ವಿಷಯವಾಗಿ ಬಹಳ ಬೇಸತ್ತು ಯೇಸುವಿನ ಬಳಿಗೆ ಬಂದು, “ಕರ್ತನೇ, ನನ್ನ ತಂಗಿಯು ಸೇವೆಗೆ ನನ್ನೊಬ್ಬಳನ್ನೇ ಬಿಟ್ಟಿದ್ದಾಳೆ, ಇದಕ್ಕೆ ನಿನಗೆ ಚಿಂತೆಯಿಲ್ಲವೋ? ನನಗೆ ನೆರವಾಗಬೇಕೆಂದು ಆಕೆಗೆ ಹೇಳು” ಅಂದಳು. 41ಆದರೆ, ಕರ್ತನು ಆಕೆಗೆ, “ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯಗಳಿಗಾಗಿ ಚಿಂತೆಯಲ್ಲಿಯೂ ಗಡಿಬಿಡಿಯಲ್ಲಿಯೂ ಸಿಕ್ಕಿಕೊಂಡಿದ್ದೀ. 42ಆದರೆ ಅಗತ್ಯವಾದದ್ದು ಒಂದೇ, ಮರಿಯಳು ಆ ಉತ್ತಮ ಭಾಗವನ್ನು ಆರಿಸಿಕೊಂಡಿದ್ದಾಳೆ, ಅದು ಆಕೆಯಿಂದ ತೆಗೆಯಲ್ಪಡುವುದಿಲ್ಲ” ಎಂದು ಉತ್ತರಕೊಟ್ಟನು. 11:27ಯೇಸು ಈ ಮಾತುಗಳನ್ನು ಹೇಳುತ್ತಿರುವಾಗ ಜನರಲ್ಲಿ ಒಬ್ಬ ಸ್ತ್ರೀಯು, “ನಿನ್ನನ್ನು ಹೊತ್ತ ಗರ್ಭವೂ, ನೀನು ಕುಡಿದ ಮೊಲೆಗಳೂ ಧನ್ಯವಾದವುಗಳು” ಎಂದು ಕೂಗಿದಳು. 28ಅದಕ್ಕೆ ಯೇಸು, “ಹಾಗನ್ನ ಬೇಡ, ದೇವರ ವಾಕ್ಯವನ್ನು ಕೇಳಿ ಅದನ್ನು ಅನುಸರಿಸುವವನು ಹೆಚ್ಚು ಧನ್ಯನು” ಅಂದನು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 23 ಆಗಸ್ಟ್ ಎಂದರೆ ನಾಗರಿಕ ಪಂಚಾಂಗದ 5 ಸೆಪ್ಟೆಂಬರ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು