Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜುಲೈ 2027 › 16 ಜುಲೈ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 16 ಜುಲೈ 2027

ಶುಕ್ರವಾರ · ಸಾಮಾನ್ಯ ಕಾಲದ 15ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 15ನೇ ವಾರದ ಶುಕ್ರವಾರ

ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಹಸಿರು

ಕರ್ಮೆಲ್ ಬೆಟ್ಟದ ಮಾತೆ · ಐಚ್ಛಿಕ ಸ್ಮರಣೆ

ಉಪವಾಸ ಮತ್ತು ಪ್ರಾಯಶ್ಚಿತ್ತ

ಪ್ರಾಯಶ್ಚಿತ್ತದ ದಿನ

ಪ್ರತಿ ಶುಕ್ರವಾರವೂ ಪ್ರಾಯಶ್ಚಿತ್ತದ ದಿನ; ಅದನ್ನು ಹೇಗೆ ಆಚರಿಸಬೇಕು ಎಂಬುದನ್ನು ಪ್ರತಿಯೊಂದು ಬಿಷಪರ ಸಮ್ಮೇಳನ ನಿರ್ಧರಿಸುತ್ತದೆ: ಮಾಂಸ ವರ್ಜನೆ ಅಥವಾ ಬೇರೊಂದು ಪ್ರಾಯಶ್ಚಿತ್ತ ಕಾರ್ಯ. ಉಪವಾಸ 18 ರಿಂದ 59 ವರ್ಷದವರಿಗೆ, ಮಾಂಸ ವರ್ಜನೆ 14 ವರ್ಷದಿಂದ ಕಡ್ಡಾಯ.

ದಿನದ ವಾಚನಗಳು

ಮೊದಲನೆಯ ವಾಚನ

ವಿಮೋ 11:10–12:14

10ಮೋಶೆ ಮತ್ತು ಆರೋನರು ಫರೋಹನ ಮುಂದೆ ಆ ಮಹತ್ಕಾರ್ಯಗಳನ್ನೆಲ್ಲಾ ಮಾಡಿದರು. ಆದರೆ ಯೆಹೋವನು ಫರೋಹನ ಹೃದಯವನ್ನು ಕಠಿಣಮಾಡಿದ್ದರಿಂದ ಫರೋಹನು ಇಸ್ರಾಯೇಲರಿಗೆ ತನ್ನ ದೇಶವನ್ನು ಬಿಟ್ಟು ಹೋಗುವುದಕ್ಕೆ ಅಪ್ಪಣೆ ಕೊಡದೆ ಹೋದನು. 12:1ಐಗುಪ್ತ ದೇಶದಲ್ಲಿ ಯೆಹೋವನು ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, 2“ಎಲ್ಲಾ ತಿಂಗಳುಗಳಲ್ಲಿ ಇದೇ ನಿಮಗೆ ಮೊದಲ ತಿಂಗಳಾಗಿರಬೇಕು. ಇದೇ ನಿಮಗೆ ಪ್ರತಿ ವರ್ಷದ ಮೊದಲನೆಯ ತಿಂಗಳಾಗಿರುವುದು. 3ಇದರ ವಿಷಯದಲ್ಲಿ ನೀವು ಇಸ್ರಾಯೇಲರ ಸಮೂಹಕ್ಕೆಲ್ಲಾ ಹೀಗೆ ಅಪ್ಪಣೆಮಾಡಬೇಕು, ‘ಈ ತಿಂಗಳಿನ ಹತ್ತನೆಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊಂದು ಮನೆಯವರು ಒಂದೊಂದು ಕುರಿಮರಿಯನ್ನಾಗಲಿ, ಆಡುಮರಿಯನ್ನಾಗಲಿ ತೆಗೆದುಕೊಳ್ಳಬೇಕು. 4ಕುಟುಂಬವು ಚಿಕ್ಕದಾಗಿದ್ದರೆ, ಒಂದು ಕುರಿಮರಿಯನ್ನು ಪೂರ್ಣವಾಗಿ ತಿನ್ನುವುದಕ್ಕೆ ಆಗದೆ ಹೋದ ಪಕ್ಷಕ್ಕೆ ನೆರೆಮನೆಯ ಕುಟುಂಬದವರೊಂದಿಗೆ ಸೇರಿ, ಒಬ್ಬೊಬ್ಬನು ಎಷ್ಟೆಷ್ಟು ತಿನ್ನುವನೆಂದು ಗೊತ್ತುಮಾಡಿಕೊಂಡು ಜನಗಳ ಸಂಖ್ಯಾನುಸಾರ ಮರಿಗಳನ್ನು ತೆಗೆದುಕೊಳ್ಳಲಿ. 5ಆ ಮರಿಯು ಊನವಿಲ್ಲದ ಒಂದು ವರ್ಷದ ಗಂಡುಮರಿಯಾಗಿರಬೇಕು. ನೀವು ಕುರಿಗಳಿಂದಾಗಲಿ ಅಥವಾ ಆಡುಗಳಿಂದಾಗಲಿ ಅದನ್ನು ತೆಗೆದುಕೊಳ್ಳಬಹುದು. 6ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಂಡಿದ್ದು, ಆ ದಿನದ ಸಂಜೆ ವೇಳೆಯಲ್ಲಿ ಇಸ್ರಾಯೇಲರ ಸಮೂಹದವರೆಲ್ಲರೂ ಒಟ್ಟಿಗೆ ಸೇರಿ ಅವುಗಳನ್ನು ವಧಿಸಬೇಕು. 7ಅವರು ಅವುಗಳ ರಕ್ತದಲ್ಲಿ ಸ್ವಲ್ಪವನ್ನು ತೆಗೆದು ತಾವು ಆ ಭೋಜನವನ್ನು ಮಾಡುವ ಮನೆಬಾಗಿಲಿನ ಎರಡು ನಿಲುವುಪಟ್ಟಿಗಳಿಗೂ, ಮೇಲಿನ ಪಟ್ಟಿಗೂ ಹಚ್ಚಬೇಕು. 8ಆ ರಾತ್ರಿಯಲ್ಲಿಯೇ ಆ ಮಾಂಸವನ್ನು ಭೋಜನಮಾಡಬೇಕು. ಅದನ್ನು ಬೆಂಕಿಯಲ್ಲಿ ಸುಟ್ಟು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿಯಾದ ಸೊಪ್ಪಿನ ಪಲ್ಯಗಳ ಸಂಗಡ ಊಟಮಾಡಬೇಕು. 9ಅದನ್ನು ಹಸಿಯಾಗಿಯೂ ನೀರಿನಲ್ಲಿ ಬೇಯಿಸಿಯೂ ತಿನ್ನಕೂಡದು. ಅದರ ತಲೆ, ತೊಡೆ, ಹೊಟ್ಟೆ, ಇವುಗಳ ಸಹಿತವಾಗಿ ಬೆಂಕಿಯಲ್ಲೇ ಸುಟ್ಟು ತಿನ್ನಬೇಕು. 10ಮರುದಿನದ ಬೆಳಗಿನವರೆಗೆ ಅದರಲ್ಲಿ ಸ್ವಲ್ಪವನ್ನಾದರೂ ಉಳಿಸಕೂಡದು, ಬೆಳಗಿನವರೆಗೆ ಉಳಿದದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು. 11ಆ ಭೋಜನವನ್ನು ಮಾಡಬೇಕಾದ ಕ್ರಮ ಹೇಗೆಂದರೆ: ನೀವು ನಡುವನ್ನು ಕಟ್ಟಿಕೊಂಡು, ಕೆರವನ್ನು ಮೆಟ್ಟಿಕೊಂಡು, ಕೋಲುಹಿಡಿದು, ತ್ವರೆಯಾಗಿ ಮಾಡಬೇಕು. ಇದು ಯೆಹೋವನಿಗೆ ಆಚರಿಸತಕ್ಕ ಪಸ್ಕಹಬ್ಬವು. 12ಆ ರಾತ್ರಿ ನಾನು ಐಗುಪ್ತದೇಶದ ಮೇಲೆ ಹಾದುಹೋಗಿ ಮನುಷ್ಯರಲ್ಲಾಗಲಿ, ಪಶುಗಳಲ್ಲಾಗಲಿ, ಚೊಚ್ಚಲಾಗಿರುವುದನ್ನೆಲ್ಲಾ ಸಂಹರಿಸುವೆನು. ಐಗುಪ್ತ ದೇಶದ ಸಮಸ್ತ ದೇವತೆಗಳಿಗೂ ನ್ಯಾಯತೀರಿಸುವೆನು. ನಾನೇ ಯೆಹೋವನು. 13ಆದರೆ ನೀವು ಇರುವ ಎಲ್ಲಾ ಮನೆಗಳ ಬಾಗಿಲಿಗೆ ಹಚ್ಚಿರುವ ರಕ್ತವು ನಿಮಗೆ ಗುರುತಾಗಿರುವುದು. ಆ ರಕ್ತವನ್ನು ನಾನು ನೋಡುವಾಗ ನಿಮಗೆ ಯಾವ ನಷ್ಟವನ್ನೂ ಮಾಡದೇ ಮುಂದಕ್ಕೆ ದಾಟಿಹೋಗುವೆನು. ನಾನು ಐಗುಪ್ತ್ಯದವರನ್ನು ಸಂಹರಿಸುವಾಗ ನಿಮಗೆ ಯಾವ ಹಾನಿಯೂ ಉಂಟಾಗುವುದಿಲ್ಲ. 14ಈ ದಿನವು ನಿಮಗೆ ಜ್ಞಾಪಕಾರ್ಥವಾಗಿರುವುದು. ಯೆಹೋವನ ಘನಕ್ಕಾಗಿ ಆ ಹಬ್ಬವನ್ನು ತಲತಲಾಂತರಕ್ಕೂ ಆಚರಿಸಬೇಕು. ಅದನ್ನು ಶಾಶ್ವತನಿಯಮವೆಂದು ಎಂದೆಂದಿಗೂ ಆಚರಿಸಬೇಕು.

ಪ್ರತಿವಚನ ಕೀರ್ತನೆ

ಕೀರ್ತ 116:12–13, 15–18

12ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ? 13ರಕ್ಷಣಾಪಾತ್ರೆಯನ್ನು ತೆಗೆದುಕೊಂಡು, ಯೆಹೋವನ ನಾಮವನ್ನು ಪ್ರಖ್ಯಾತಿಪಡಿಸುವೆನು. 15ಯೆಹೋವನು ತನ್ನ ಭಕ್ತರ ಮರಣವನ್ನು ಅಲ್ಪವೆಂದು ಎಣಿಸುವುದಿಲ್ಲ. 16ಯೆಹೋವನೇ, ಕರುಣಿಸು, ನಾನು ನಿನ್ನ ಸೇವಕನು; ನಿನ್ನ ದಾಸಿಯ ಮಗನೂ, ನಿನ್ನ ದಾಸನೂ ಆಗಿದ್ದೇನೆ. ನನ್ನ ಬಂಧನಗಳನ್ನು ಬಿಚ್ಚಿಬಿಟ್ಟಿದ್ದಿ. 17ನಾನು ನಿನಗೆ ಕೃತಜ್ಞತಾ ಯಜ್ಞಗಳನ್ನು ಸಮರ್ಪಿಸುವೆನು; ಯೆಹೋವನ ನಾಮವನ್ನು ಪ್ರಖ್ಯಾತಿಪಡಿಸುವೆನು. 18ಯೆರೂಸಲೇಮೇ, ನಿನ್ನ ಮಧ್ಯದಲ್ಲಿ, ಯೆಹೋವನ ಮಂದಿರದ ಅಂಗಳಗಳಲ್ಲಿ,

ಸುವಾರ್ತೆ

ಮತ್ತಾ 12:1–8

1ಆ ಸಬ್ಬತ್ ದಿನದಲ್ಲಿ ಯೇಸು ಪೈರಿನ ಹೊಲಗಳ ಮೂಲಕ ಹಾದುಹೋಗುತ್ತಿರುವಾಗ ಆತನ ಶಿಷ್ಯರು ಹಸಿದಿದ್ದರಿಂದ ತೆನೆಗಳನ್ನು ಕಿತ್ತು ತಿನ್ನಲಾರಂಭಿಸಿದರು. 2ಆದರೆ ಫರಿಸಾಯರು ಅದನ್ನು ಕಂಡು, “ನೋಡು ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ಮಾಡಬಾರದ ಕೆಲಸವನ್ನು ಮಾಡುತ್ತಾರೆ” ಎಂದು ಆತನಿಗೆ ಹೇಳಿದರು. 3ಆತನು ಅವರಿಗೆ, “ದಾವೀದನು ತಾನೂ ತನ್ನ ಸಂಗಡ ಇದ್ದವರೂ ಹಸಿದಾಗ ಏನು ಮಾಡಿದನೆಂಬುದನ್ನು ನೀವು ಓದಲಿಲ್ಲವೋ? 4ಅವನು ದೇವಮಂದಿರದೊಳಕ್ಕೆ ಹೋಗಿ ಯಾಜಕರು ಮಾತ್ರವೇ ಹೊರತು ಬೇರೆ ಯಾರು ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನು ಅವನು, ಅವನ ಸಂಗಡ ಇದ್ದವರು ತಿಂದನಲ್ಲವೇ. 5ಇದಲ್ಲದೆ ಸಬ್ಬತ್ ದಿನದಲ್ಲಿ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನವನ್ನು ಹೊಲೆಮಾಡಿದಾಗ್ಯೂ ಅವರು ನಿರಪರಾಧಿಗಳಾಗಿದ್ದಾರೆ. ಇದನ್ನು ನೀವು ಧರ್ಮಶಾಸ್ತ್ರದಲ್ಲಿ ಓದಲಿಲ್ಲವೋ? 6ಆದರೆ ಇಲ್ಲಿ ದೇವಾಲಯಕ್ಕಿಂತ ದೊಡ್ಡವನು ಇದ್ದಾನೆಂದು ನಿಮಗೆ ಹೇಳುತ್ತೇನೆ. 7‘ನಾನು ಯಜ್ಞವನ್ನಲ್ಲ, ಕರುಣೆಯನ್ನೇ ಅಪೇಕ್ಷಿಸುತ್ತೇನೆ’ ಎಂಬುದರ ಅರ್ಥವನ್ನು ನೀವು ತಿಳಿದಿದ್ದರೆ ನಿರಪರಾಧಿಗಳನ್ನು ಅಪರಾಧಿಗಳೆಂದು ತೀರ್ಪುಮಾಡುತ್ತಿರಲಿಲ್ಲಾ. 8ಮನುಷ್ಯಕುಮಾರನು ಸಬ್ಬತ್ ದಿನಕ್ಕೆ ಕರ್ತನಾಗಿದ್ದಾನೆಂದು” ಹೇಳಿದನು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು