ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜುಲೈ 2027 › 14 ಜುಲೈ
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 14 ಜುಲೈ 2027
ಬುಧವಾರ · ಸಾಮಾನ್ಯ ಕಾಲದ 15ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 15ನೇ ವಾರದ ಬುಧವಾರ
ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಹಸಿರು
ಸಂತ ಕಮಿಲಸ್ ಡಿ ಲೆಲ್ಲಿಸ್, ಧರ್ಮಗುರು · ಐಚ್ಛಿಕ ಸ್ಮರಣೆ
ದಿನದ ವಾಚನಗಳು
ಮೊದಲನೆಯ ವಾಚನ
1ಮೋಶೆಯು ತನ್ನ ಮಾವನಾದ, ಮಿದ್ಯಾನ್ಯರ ಯಾಜಕನಾದ ಇತ್ರೋನನ ಮಂದೆಯನ್ನು ಮೇಯಿಸುತ್ತಿರಲಾಗಿ ಆ ಮಂದೆಯನ್ನು ಅಡವಿಯ ಮತ್ತೊಂದುಭಾಗಕ್ಕೆ ನಡಿಸಿಕೊಂಡು ಹೋಗುತ್ತಾ, “ಹೋರೇಬ್” ಎಂಬ ದೇವರ ಬೆಟ್ಟಕ್ಕೆ ಬಂದನು. 2ಆಗ ಯೆಹೋವನ ದೂತನು ಮುಳ್ಳಿನ ಪೊದೆಯೊಳಗಿನಿಂದ ಉರಿಯುವ ಬೆಂಕಿ ಜ್ವಾಲೆಯಲ್ಲಿ ಅವನಿಗೆ ಕಾಣಿಸಿಕೊಂಡನು. ಮೋಶೆಯು ಕಣ್ಣೆತ್ತಿ ನೋಡಿದಾಗ, ಆ ಮುಳ್ಳಿನ ಪೊದೆಯು ಬೆಂಕಿಯಿಂದ ಉರಿಯುತ್ತಿತ್ತು; ಆದರೆ ಅದು ಸುಟ್ಟು ಹೋಗಲಿಲ್ಲ. 3ಆಗ ಮೋಶೆ, “ಇದೇನು ಆಶ್ಚರ್ಯ! ಪೊದೆಯು ಸುಟ್ಟು ಹೋಗುತ್ತಿಲ್ಲವಲ್ಲಾ! ಇದನ್ನು ಹತ್ತಿರಕ್ಕೆ ಹೋಗಿ ನೋಡುವೆನು” ಅಂದುಕೊಂಡನು. 4ಅವನು ಅದನ್ನು ನೋಡುವುದಕ್ಕೆ ಹತ್ತಿರ ಬರುವುದನ್ನು ಯೆಹೋವನು ಕಂಡನು. ಆಗ ದೇವರು ಆ ಪೊದೆಯೊಳಗಿಂದ “ಮೋಶೆಯೇ, ಮೋಶೆಯೇ” ಎಂದು ಅವನನ್ನು ಕರೆದನು. ಅದಕ್ಕೆ ಮೋಶೆ, “ಇಗೋ ಇದ್ದೇನೆ” ಅಂದನು. 5ದೇವರು ಅವನಿಗೆ, “ನೀನು ಪೊದೆಯ ಹತ್ತಿರ ಬರಬೇಡ! ನಿನ್ನ ಕಾಲಿನ ಕೆರಗಳನ್ನು ತೆಗೆದುಹಾಕು, ಯಾಕೆಂದರೆ ನೀನು ನಿಂತಿರುವ ಸ್ಥಳವು ಪರಿಶುದ್ಧ ಸ್ಥಳವಾಗಿದೆ” ಎಂದು ಹೇಳಿದನು. 6ಇದಲ್ಲದೆ ಆತನು ಅವನಿಗೆ, “ನಾನು ನಿನ್ನ ತಂದೆಯಾದ, ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರೂ ಆಗಿದ್ದೇನೆ” ಎಂದು ಹೇಳಿದನು. ಮೋಶೆಯು ದೇವರನ್ನು ನೋಡುವುದಕ್ಕೆ ಭಯಪಟ್ಟು ಮುಖವನ್ನು ಮುಚ್ಚಿಕೊಂಡನು. 9ಈಗ ಇಸ್ರಾಯೇಲರ ಕೂಗು ನನಗೆ ಮುಟ್ಟಿದೆ. ಐಗುಪ್ತ್ಯರು ಅವರಿಗೆ ಕೊಡುವ ಉಪದ್ರವವನ್ನು ನಾನು ನೋಡಿದ್ದೇನೆ. 10ಆದುದರಿಂದ ಈಗ ಬಾ, ನನ್ನ ಜನರಾದ ಇಸ್ರಾಯೇಲರನ್ನು ಐಗುಪ್ತ ದೇಶದಿಂದ ಹೊರಗೆ ಬರಮಾಡುವುದಕ್ಕೆ ನಿನ್ನನ್ನು ಫರೋಹನ ಬಳಿಗೆ ಕಳುಹಿಸುತ್ತೇನೆ” ಅಂದನು. 11ಆಗ ಮೋಶೆಯು ದೇವರಿಗೆ, “ಫರೋಹನ ಬಳಿಗೆ ಹೋಗುವುದಕ್ಕೂ ಮತ್ತು ಇಸ್ರಾಯೇಲರನ್ನು ಐಗುಪ್ತದೇಶದಿಂದ ಕರೆದುಕೊಂಡು ಬರುವುದಕ್ಕೂ ನಾನು ಎಷ್ಟರವನು?” ಎಂದು ಹೇಳಿದನು. 12ಅದಕ್ಕೆ ದೇವರು, “ನಿಶ್ಚಯವಾಗಿ ನಾನು ನಿನ್ನ ಸಂಗಡ ಇರುವೆನು. ನೀನು ನನ್ನ ಜನರನ್ನು ಐಗುಪ್ತದೇಶದಿಂದ ಹೊರಗೆ ತಂದಾಗ ನೀವು ಈ ಬೆಟ್ಟದಲ್ಲೇ ನನ್ನನ್ನು ಆರಾಧಿಸುವಿರಿ. ನಿನ್ನನ್ನು ಕಳುಹಿಸಿದವನು ನಾನೇ ಎಂಬುವುದಕ್ಕೆ ಇದು ನಿನಗೆ ಗುರುತಾಗಿರುವುದು” ಅಂದನು.
ಪ್ರತಿವಚನ ಕೀರ್ತನೆ
1ದಾವೀದನ ಕೀರ್ತನೆ. ನನ್ನ ಮನವೇ, ಯೆಹೋವನನ್ನು ಕೊಂಡಾಡು; ನನ್ನ ಸರ್ವೇಂದ್ರಿಯಗಳೇ, ಆತನ ಪವಿತ್ರ ನಾಮವನ್ನು ಕೀರ್ತಿಸಿರಿ. 2ನನ್ನ ಮನವೇ, ಯೆಹೋವನನ್ನು ಕೊಂಡಾಡು; ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ. 3ಆತನು ನಿನ್ನ ಎಲ್ಲಾ ಅಪರಾಧಗಳನ್ನು ಕ್ಷಮಿಸುವವನೂ, ಸಮಸ್ತ ರೋಗಗಳನ್ನು ವಾಸಿಮಾಡುವವನೂ, 4ನಿನ್ನ ಜೀವವನ್ನು ನಾಶನದಿಂದ ತಪ್ಪಿಸುವವನೂ, ಶಾಶ್ವತ ಪ್ರೀತಿ ಮತ್ತು ಕರುಣೆಯೆಂಬ ಕಿರೀಟದಿಂದ ನಿನ್ನನ್ನು ಶೃಂಗರಿಸುವವನೂ ಆಗಿದ್ದಾನೆ. 6ಯೆಹೋವನು ನೀತಿಯನ್ನು ಸಾಧಿಸುವವನಾಗಿ, ಕುಗ್ಗಿಹೋದವರೆಲ್ಲರ ನ್ಯಾಯವನ್ನು ಸ್ಥಾಪಿಸುತ್ತಾನೆ. 7ಆತನು ಮೋಶೆಗೆ ತನ್ನ ಮಾರ್ಗವನ್ನೂ, ಇಸ್ರಾಯೇಲರಿಗೆ ತನ್ನ ಕೃತ್ಯಗಳನ್ನೂ ಪ್ರಕಟಿಸಿದನು.
ಸುವಾರ್ತೆ
25ಅದೇ ಸಮಯದಲ್ಲಿ ಯೇಸು ಹೇಳಿದ್ದೇನೆಂದರೆ, “ತಂದೆಯೇ! ಪರಲೋಕದ ಭೂಲೋಕದ ಒಡೆಯನೇ, ನೀನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಈ ವಿಷಯಗಳನ್ನು ಮರೆಮಾಡಿ ಚಿಕ್ಕ ಮಕ್ಕಳಿಗೆ ಅದನ್ನು ಪ್ರಕಟಪಡಿಸಿರುವಿ ಎಂದು ನಿನ್ನನ್ನು ಕೊಂಡಾಡುತ್ತೇನೆ. 26ಹೌದು ತಂದೆಯೇ, ಹೀಗೆ ಮಾಡುವುದೇ ಒಳ್ಳೆಯದೆಂದು ನಿನ್ನ ದೃಷ್ಟಿಗೆ ತೋಚಿತು. 27ನನ್ನ ತಂದೆಯು ಎಲ್ಲವನ್ನು ನನಗೆ ಒಪ್ಪಿಸಿದ್ದಾನೆ. ತಂದೆಯ ಹೊರತು ಇನ್ನಾವನೂ ಮಗನನ್ನು ತಿಳಿದವನಲ್ಲ. ಮಗನ ಹೊರತು ಇನ್ನಾವನೂ ತಂದೆಯನ್ನು ತಿಳಿದವನಲ್ಲ. ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಪಡಿಸುವುದಕ್ಕೆ ಇಚ್ಛಿಸುತ್ತಾನೋ ಅವನು ಆತನನ್ನು ತಿಳಿದವನಾಗಿದ್ದಾನೆ.
ಇಂದಿನ ಸಂತರು
- ಸಂತ ಕಮಿಲಸ್ ಡಿ ಲೆಲ್ಲಿಸ್, ಧರ್ಮಗುರು
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು