ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜುಲೈ 2027 › 13 ಜುಲೈ
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 13 ಜುಲೈ 2027
ಮಂಗಳವಾರ · ಸಾಮಾನ್ಯ ಕಾಲದ 15ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 15ನೇ ವಾರದ ಮಂಗಳವಾರ
ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಹಸಿರು
ಸಂತ ಹೆನ್ರಿ · ಐಚ್ಛಿಕ ಸ್ಮರಣೆ
ದಿನದ ವಾಚನಗಳು
ಮೊದಲನೆಯ ವಾಚನ
1ಆ ನಂತರ ಲೇವಿಯ ವಂಶದವನಾದ ಒಬ್ಬನು ಲೇವಿ ಕುಲದ ಕನ್ಯೆಯನ್ನು ಮದುವೆ ಮಾಡಿಕೊಂಡನು. 2ಆಕೆಯು ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತಳು. ಅದು ಸುಂದರವಾದ ಕೂಸೆಂದು ತಿಳಿದು ಮೂರು ತಿಂಗಳು ಅದನ್ನು ಬಚ್ಚಿಟ್ಟಳು. 3ಆಕೆ ಅದನ್ನು ಇನ್ನು ಹೆಚ್ಚುಕಾಲ ಮರೆಮಾಡಲಾಗದೆ, ಆಪಿನ ಪೆಟ್ಟಿಗೆಯನ್ನು ತೆಗೆದುಕೊಂಡು ಜೇಡಿಮಣ್ಣನ್ನೂ ರಾಳವನ್ನು ಹಚ್ಚಿ, ಕೂಸನ್ನು ಅದರಲ್ಲಿ ಮಲಗಿಸಿ, ನೈಲ್ ನದಿಯ ಅಂಚಿನಲ್ಲಿರುವ ಜಂಬುಹುಲ್ಲಿನಲ್ಲಿ ಇಟ್ಟಳು. 4ಕೂಸಿಗೆ ಏನಾಗುವುದೆಂದು ತಿಳಿದುಕೊಳ್ಳುವುದಕ್ಕೆ, ಆ ಕೂಸಿನ ಅಕ್ಕ ಸ್ವಲ್ಪ ದೂರದಲ್ಲಿ ನಿಂತುಕೊಂಡಳು. 5ಅಷ್ಟರಲ್ಲಿ ಫರೋಹನ ಮಗಳು ಸ್ನಾನಕ್ಕಾಗಿ ನೈಲ್ ನದಿಯ ಬಳಿಗೆ ಬಂದಳು. ಆಕೆಯ ಸೇವಕಿಯರು ನದಿಯ ದಡದಲ್ಲಿ ತಿರುಗಾಡುತ್ತಿದ್ದರು. ಆಕೆ ಜಂಬುಹುಲ್ಲಿನ ಪೆಟ್ಟಿಗೆಯನ್ನು ಕಂಡು, ದಾಸಿಯೊಬ್ಬಳನ್ನು ಕಳುಹಿಸಿ ಅದನ್ನು ತರಿಸಿದಳು. 6ಪೆಟ್ಟಿಗೆಯನ್ನು ತೆರೆದು ನೋಡುವಾಗ, ಆಹಾ! ಅಳುವ ಕೂಸು. ಆಕೆಗೆ ಅದರ ಮೇಲೆ ಕನಿಕರಹುಟ್ಟಿ, “ಇದು ಇಬ್ರಿಯರ ಮಕ್ಕಳಲ್ಲಿ ಒಂದಾಗಿರಬಹುದು” ಎಂದುಕೊಂಡಳು. 7ಆಗಲೇ ಮಗುವಿನ ಅಕ್ಕ ಬಂದು, “ಫರೋಹನ ಮಗಳಿಗೆ ನಿನಗೋಸ್ಕರ ಈ ಕೂಸನ್ನು ಮೊಲೆಕೊಟ್ಟು ಸಾಕುವುದಕ್ಕೆ ಇಬ್ರಿಯ ಸ್ತ್ರೀಯರಲ್ಲಿ ಒಬ್ಬ ದಾದಿಯನ್ನು ನಾನು ಕರೆದುಕೊಂಡು ಬರಬಹುದೋ?” ಎಂದು ಕೇಳಿದಳು. 8ಫರೋಹನ ಮಗಳು ಆಕೆಗೆ, “ಹೋಗು ಕರೆದುಕೊಂಡು ಬಾ” ಎಂದಳು. ಆ ಹುಡುಗಿ ಹೋಗಿ ಕೂಸಿನ ತಾಯಿಯನ್ನೇ ಕರೆದುತಂದಳು. 9ಫರೋಹನ ಮಗಳು ಮಗುವಿನ ತಾಯಿಗೆ, “ನೀನು ಈ ಮಗುವನ್ನು ತೆಗೆದುಕೊಂಡು ಹೋಗಿ ನನಗೋಸ್ಕರ ಹಾಲುಕೊಟ್ಟು ಸಾಕಬೇಕು. ನಾನು ನಿನಗೆ ಸಂಬಳವನ್ನು ಕೊಡುವೆನು” ಎಂದು ಹೇಳಿದಳು. ಆ ಸ್ತ್ರೀಯು ಕೂಸನ್ನು ತೆಗೆದುಕೊಂಡು ಹೋಗಿ ಸಾಕಿದಳು. 10ಆ ಹುಡುಗನು ಬೆಳೆದಾಗ, ಅವನನ್ನು ಫರೋಹನ ಮಗಳ ಬಳಿಗೆ ತೆಗೆದುಕೊಂಡು ಬಂದಳು, ಅವನು ಆಕೆಗೆ ಮಗನಾದನು. “ಇವನನ್ನು ನೀರಿನೊಳಗಿನಿಂದ ಎಳೆದುಕೊಂಡಿದ್ದೇನೆ,” ಎಂದು ಹೇಳಿ ಆಕೆಯು ಅವನಿಗೆ “ಮೋಶೆ” ಎಂದು ಹೆಸರಿಟ್ಟಳು. 11ಮೋಶೆಯು ದೊಡ್ಡವನಾದ ಮೇಲೆ, ಸ್ವಜನರ ಬಳಿಗೆ ಹೋಗಿ ಅವರ ಬಿಟ್ಟೀಕೆಲಸಗಳನ್ನು ನೋಡುತ್ತಿದ್ದನು. ಆಗ ಒಬ್ಬ ಐಗುಪ್ತ್ಯದವನು ತನ್ನ ಸ್ವಂತ ಜನರಾದ ಸಹೋದರರಲ್ಲಿ ಒಬ್ಬನಾದ ಇಬ್ರಿಯನನ್ನು ಹೊಡೆಯುವುದನ್ನು ಕಂಡನು. 12ಮೋಶೆ ಅತ್ತಿತ್ತ ನೋಡಿ, ಯಾರೂ ಇಲ್ಲವೆಂದು ತಿಳಿದು, ಆ ಐಗುಪ್ತ್ಯದವನನ್ನು ಹೊಡೆದು ಕೊಂದುಹಾಕಿ ಅವನ ಶವವನ್ನು ಮರಳಿನಲ್ಲಿ ಮುಚ್ಚಿಹಾಕಿದನು. 13ಮರುದಿನ ಅವನು ಮತ್ತೆ ಹೊರಗೆ ಹೋದಾಗ, ಇಬ್ರಿಯರಾದ ಇಬ್ಬರು ಜಗಳವಾಡುತ್ತಿದ್ದರು. ಅನ್ಯಾಯಮಾಡುತ್ತಿದ್ದವನಿಗೆ ಅವನು, “ಏನಯ್ಯಾ, ನೀನು ಯಾಕೆ ಸ್ವಕುಲದವರನ್ನು ಹೊಡೆಯುತ್ತೀ?” ಎಂದು ಕೇಳಿದನು. 14ಆ ಮನುಷ್ಯನು ಅವನಿಗೆ, “ನಿನ್ನನ್ನು ನಮ್ಮ ಮೇಲೆ ಅಧಿಕಾರಿಯನ್ನಾಗಿಯೂ, ನ್ಯಾಯಾಧಿಪತಿಯನ್ನಾಗಿಯೂ, ಇಟ್ಟವರು ಯಾರು? ಆ ಐಗುಪ್ತ್ಯನನ್ನು ಕೊಂದು ಹಾಕಿದಂತೆ ನನ್ನನ್ನೂ ಕೊಂದುಹಾಕಬೇಕೆಂದಿದ್ದಿಯೋ?” ಅಂದನು. ಈ ಮಾತನ್ನು ಕೇಳಿ ಮೋಶೆಯು ಭಯಪಟ್ಟು, “ನಿಶ್ಚಯವಾಗಿ ನಾನು ಮಾಡಿದ ಕಾರ್ಯವು ಬಯಲಿಗೆ ಬಂತಲ್ಲಾ” ಅಂದುಕೊಂಡನು. 15ನಡೆದ ಸಂಗತಿಯು ಫರೋಹನಿಗೆ ತಿಳಿದುಬಂದಾಗ, ಅವನು ಮೋಶೆಯನ್ನು ಕೊಲ್ಲಬೇಕೆಂದು ಆಲೋಚಿಸುತ್ತಿದ್ದನು. ಆದುದರಿಂದ ಮೋಶೆಯು ಫರೋಹನ ಬಳಿಯಿಂದ ಓಡಿಹೋಗಿ ಮಿದ್ಯಾನ್ ದೇಶದಲ್ಲಿದ್ದ ಒಂದು ಬಾವಿಯ ಬಳಿಯಲ್ಲಿ ಕುಳಿತುಕೊಂಡನು.
ಪ್ರತಿವಚನ ಕೀರ್ತನೆ
2ಆಳವಾದ ಕೆಸರಿನಲ್ಲಿ ಕುಸಿಯುತ್ತಿದ್ದೇನೆ; ನೆಲೆ ಸಿಕ್ಕುತ್ತಿಲ್ಲ. ಜಲರಾಶಿಯೊಳಗೆ ಮುಳುಗುತ್ತಿದ್ದೇನೆ; ಪ್ರವಾಹವು ನನ್ನನ್ನು ಹೊಡೆದುಕೊಂಡು ಹೋಗುತ್ತಿದೆ. 13ಯೆಹೋವನೇ, ನಾನಾದರೋ ನಿನಗೆ ಮೊರೆಯಿಟ್ಟಿದ್ದೇನೆ; ಇದು ನಿನ್ನ ಪ್ರಸನ್ನತೆಗೆ ಸಕಾಲ. ಪ್ರೇಮಪೂರ್ಣನಾದ ದೇವನೇ, ಸತ್ಯವಂತನಾದ ರಕ್ಷಕನೇ, ಸದುತ್ತರವನ್ನು ದಯಪಾಲಿಸು. 29ದೇವರೇ, ನೊಂದು ಕುಗ್ಗಿದವನಾದ ನನ್ನನ್ನಾದರೋ, ನಿನ್ನ ರಕ್ಷಣೆಯು ಭದ್ರಸ್ಥಳದಲ್ಲಿರಿಸುವುದು. 30ನಾನು ಸಂಕೀರ್ತಿಸುತ್ತಾ ದೇವರ ನಾಮವನ್ನು ಕೊಂಡಾಡುವೆನು; ಕೃತಜ್ಞತಾಸ್ತುತಿಯಿಂದ ಘನಪಡಿಸುವೆನು. 32ದೀನರು ಇದನ್ನು ನೋಡಿ ಹರ್ಷಿಸುವರು. ದೇವದರ್ಶನವನ್ನು ಅಪೇಕ್ಷಿಸುವವರೇ, ನಿಮ್ಮ ಆತ್ಮವು ಉಜ್ಜೀವಿಸಲಿ. 33ಯೆಹೋವನು ಬಡವರ ಮೊರೆಗೆ ಲಕ್ಷ್ಯಕೊಡುವನು; ಸೆರೆಯಲ್ಲಿರುವ ತನ್ನವರನ್ನು ತಿರಸ್ಕರಿಸುವುದಿಲ್ಲ.
ಸುವಾರ್ತೆ
20ಅನಂತರ ಆತನು ತನ್ನ ಮಹತ್ಕಾರ್ಯಗಳು ಬಹಳವಾಗಿ ನಡೆದ ಊರುಗಳವರು ಮಾನಸಾಂತರಪಡಲಿಲ್ಲವೆಂದು ಅವುಗಳನ್ನು ಗದರಿಸತೊಡಗಿದನು. 21ಹೇಗೆಂದರೆ, “ಅಯ್ಯೋ ಖೊರಾಜಿನೇ, ಅಯ್ಯೋ ಬೇತ್ಸಾಯಿದವೇ, ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿನವರು ಎಂದೋ ಗೋಣಿತಟ್ಟು ಸುತ್ತಿಕೊಂಡು ಬೂದಿಯಲ್ಲಿ ಕುಳಿತುಕೊಂಡು ಮಾನಸಾಂತರಪಡುತ್ತಿದ್ದರು. 22ಆದರೆ ನ್ಯಾಯವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ ತೂರ್ ಸೀದೋನ್ ಪಟ್ಟಣಗಳ ಗತಿಯು ಹೆಚ್ಚು ಸಹನೀಯವಾಗಿರುವುದು. 23ಎಲೈ ಕಪೆರ್ನೌಮೇ ನೀನು ಪರಲೋಕಕ್ಕೇರುವೇ ಎಂದು ನೆನಸುತ್ತೀಯೋ? ಇಲ್ಲ, ಪಾತಾಳಕ್ಕೆ ಇಳಿಯುವೆ. ನಿನ್ನಲ್ಲಿ ನಡೆದ ಮಹತ್ಕಾರ್ಯಗಳು ಸೊದೋಮಿನಲ್ಲಿ ನಡೆದಿದ್ದರೆ ಅದು ಇಂದಿನ ವರೆಗೆ ಉಳಿದಿರುತ್ತಿತ್ತು. 24ಆದರೆ ನ್ಯಾಯವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ ಸೊದೋಮ್ ಸೀಮೆಯ ಗತಿಯು ಸಹನೀಯವಾಗಿರುವುದು” ಎಂದು ನಿಮಗೆ ಹೇಳುತ್ತೇನೆ ಅಂದನು.
ಇಂದಿನ ಸಂತರು
- ಸಂತ ಹೆನ್ರಿ
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು