ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜುಲೈ 2027 › 12 ಜುಲೈ
ಆರ್ಥೊಡಾಕ್ಸ್ ಪಂಚಾಂಗ · ಜೂನ್ 29 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 12 ಜುಲೈ 2027
ಸೋಮವಾರ · ಪಂಚಾಶತ್ತಮದ ನಂತರದ ನಾಲ್ಕನೆಯ ವಾರ · ಸ್ವರ 2
ಹಬ್ಬಗಳು ಮತ್ತು ಸಂತರು
The Holy Glorious and All-Praised Leaders of the Apostles, Peter and Paul
ಉಪವಾಸ
ಉಪವಾಸವಿಲ್ಲ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಸಂಧ್ಯಾ ಪ್ರಾರ್ಥನೆ: ವಾಚನ
3ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ಸ್ತೋತ್ರವಾಗಲಿ. ಆತನು ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ, ತನ್ನ ಮಹಾ ಕರುಣಾನುಸಾರವಾಗಿ ನಮ್ಮನ್ನು ತಿರುಗಿ ಜೀವಿಸುವಂತೆ ಮಾಡಿ ಜೀವಕರವಾದ ನಿರೀಕ್ಷೆಯನ್ನು ನಮ್ಮಲ್ಲಿ ಹುಟ್ಟಿಸಿ, 4ನಮ್ಮನ್ನು ಲಯ, ಕಳಂಕ, ನಾಶಗಳಿಲ್ಲದ ಬಾಧ್ಯತೆಯನ್ನು ಎದುರು ನೋಡುವವರನ್ನಾಗಿ ಮಾಡಿದನು. ಆ ಬಾಧ್ಯತೆಯು ನಿಮಗೋಸ್ಕರ ಪರಲೋಕದಲ್ಲಿ ಇಡಲ್ಪಟ್ಟಿದೆ. 5ಅಂತ್ಯ ಕಾಲದಲ್ಲಿ ಪ್ರಕಟವಾಗುವುದಕ್ಕೆ ಸಿದ್ಧವಾಗಿರುವ ರಕ್ಷಣೆಯು ನಂಬುವವರಾದ ನಿಮಗೆ ದೊರೆಯಬೇಕೆಂದು ದೇವರು ನಿಮ್ಮನ್ನು ತನ್ನ ಶಕ್ತಿಯಿಂದ ಕಾಪಾಡುತ್ತಾನೆ. 6ಆದ್ದರಿಂದ ನೀವು ಸದ್ಯಕ್ಕೆ ಸ್ವಲ್ಪಕಾಲ ಅಗತ್ಯವಿದ್ದಲ್ಲಿ ನಾನಾ ವಿಧ ಕಷ್ಟಗಳಲ್ಲಿ ದುಃಖಿಸುವವರಾಗಿದ್ದರೂ, ಹರ್ಷಿಸುವವರಾಗಿದ್ದೀರಿ. 7ನಾಶವಾಗುವಂತಹದ್ದೂ, ಬೆಂಕಿಯಿಂದ ಶೋಧಿಸುವಂತಹದ್ದೂ ಆಗಿರುವ ಬಂಗಾರಕ್ಕಿಂತಲೂ ಬಹು ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ, ಮಾನ, ಮಹಿಮೆಗಳನ್ನು ಉಂಟುಮಾಡುವಂತಹದ್ದಾಗಿದೆ. 8ನೀವು ಆತನನ್ನು ಕಣ್ಣಾರೆ ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ. ನೀವು ಈಗ ಆತನನ್ನು ಕಾಣದಿದ್ದರೂ ಆತನಲ್ಲಿ ನಂಬಿಕೆಯಿಟ್ಟು, ನಿಮ್ಮ ನಂಬಿಕೆಯ ಅಂತ್ಯಫಲವಾಗಿರುವ ಆತ್ಮಗಳ ರಕ್ಷಣೆಯನ್ನು ಹೊಂದುವವರಾಗಿ ಹೇಳಲಸಾಧ್ಯವಾದಂತಹ ಮಹಿಮೆಯುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.
ಸಂಧ್ಯಾ ಪ್ರಾರ್ಥನೆ: ವಾಚನ
13ಆದ್ದರಿಂದ ನೀವು ನಿಮ್ಮ ಮನಸ್ಸನ್ನು ದೃಢಪಡಿಸಿಕೊಂಡು, ಸ್ವಸ್ಥಚಿತ್ತರಾಗಿದ್ದು ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ದೊರಕುವ ಕೃಪೆಯ ಮೇಲೆ ನಿಮ್ಮ ನಿರೀಕ್ಷೆಯನ್ನು ಸಂಪೂರ್ಣವಾಗಿ ಇಡಿರಿ. 14ವಿಧೇಯತ್ವವುಳ್ಳ ಮಕ್ಕಳಂತೆ ನಡೆಯಿರಿ, ನೀವು ಮೊದಲು ಅಜ್ಞಾನಿಗಳಾಗಿದ್ದಾಗ ನಿಮಗಿದ್ದ ದುರಾಶೆಗಳನ್ನು ಅನುಸರಿಸಿ ನಡೆದಂತೆ ಇನ್ನು ನಡೆಯುವವರಾಗಿರದೆ, 15ನಿಮ್ಮನ್ನು ಕರೆದಾತನು ಪರಿಶುದ್ಧನಾಗಿರುವ ಪ್ರಕಾರವೇ ನೀವೂ ವಿಧೇಯರಾಗಿದ್ದು ಆತನಿಗೆ ನಿಮ್ಮ ಎಲ್ಲಾ ನಡವಳಿಕೆಗಳಲ್ಲಿ ಪರಿಶುದ್ಧರಾಗಿರಿ. 16ಏಕೆಂದರೆ, “ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು” ಎಂದು ಬರೆದಿದೆಯಲ್ಲಾ. 17ಪ್ರತಿಯೊಬ್ಬನ ನಡತೆಯನ್ನು ನೋಡಿ ಪಕ್ಷಪಾತವಿಲ್ಲದೆ ತೀರ್ಪುಮಾಡುವಾತನನ್ನು ನೀವು ತಂದೆಯೆಂದು ಕರೆಯುವವರಾಗಿರುವುದರಿಂದ ಈ ಲೋಕದಲ್ಲಿನ ನಿಮ್ಮ ಪ್ರವಾಸಕಾಲವನ್ನು ಭಯಭಕ್ತಿಯಿಂದ ಕಳೆಯಿರಿ. 18ನಿಮ್ಮ ಪೂರ್ವಿಕರಿಂದ ಬಂದಿರುವ ವ್ಯರ್ಥವಾದ ಸಂಪ್ರದಾಯಗಳ ನಡವಳಿಕೆಗಳಿಂದ ನಿಮಗೆ ಬಿಡುಗಡೆಯನ್ನುಂಟುಮಾಡಿದ್ದು ಬೆಳ್ಳಿ, ಬಂಗಾರ ಮೊದಲಾದ ನಶಿಸಿಹೋಗುವ ವಸ್ತುಗಳಿಂದಲ್ಲ. 19ಯೇಸು ಕ್ರಿಸ್ತನೆಂಬ ನಿಷ್ಕಳಂಕವೂ, ನಿರ್ಮಲವೂ ಆದ ಕುರಿಮರಿಯ ಅಮೂಲ್ಯವಾದ ರಕ್ತದಿಂದಲೇ ಎಂದು ನೀವು ಬಲ್ಲಿರಲ್ಲವೇ.
ಸಂಧ್ಯಾ ಪ್ರಾರ್ಥನೆ: ವಾಚನ
11ಪ್ರಿಯರೇ, ಪ್ರವಾಸಿಗಳು ಮತ್ತು ಪರದೇಶಸ್ಥರು ಆಗಿರುವ ನೀವು ನಿಮ್ಮ ಆತ್ಮದ ವಿರುದ್ಧವಾಗಿ ಯುದ್ಧ ಮಾಡುವ ಶಾರೀರಿಕ ದುರಾಶೆಗಳಿಗೆ ದೂರವಾಗಿರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 12ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ, ಆಗ ಅವರು ಯಾವ ಸಂಗತಿಗಳನ್ನು ಕುರಿತಾಗಿ ನಿಮ್ಮನ್ನು ಕೆಟ್ಟವರೆಂದು ನಿಂದಿಸುತ್ತಾರೋ ಆ ನಿಮ್ಮ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ಆತನ ಬರೋಣದ ದಿನದಲ್ಲಿ ಅವರು ದೇವರನ್ನು ಕೊಂಡಾಡುವರು. 13ಮನುಷ್ಯರು ನೇಮಿಸಿರುವ ಪ್ರತಿಯೊಂದು ಅಧಿಕಾರಕ್ಕೂ ಕರ್ತನ ನಿಮಿತ್ತ ನೀವು ಅಧೀನರಾಗಿರಿ. ಸರ್ವಾಧಿಕಾರಿಯಾಗಿರುವ ಅರಸನಿಗಾಗಲಿ 14ಅಥವಾ ಅರಸನಿಂದ ಕೆಟ್ಟ ನಡತೆಯುಳ್ಳವರನ್ನು ದಂಡಿಸುವುದಕ್ಕೂ ಒಳ್ಳೆ ನಡತೆಯುಳ್ಳವರನ್ನು ಪ್ರೋತ್ಸಾಹಪಡಿಸುವುದಕ್ಕೂ ಕಳುಹಿಸಲ್ಪಟ್ಟಂಥ ಅಧಿಪತಿಗಳಿಗಾಗಲಿ ನೀವು ಅಧೀನರಾಗಿರಿ. 15ತಿಳಿವಳಿಕೆಯಿಲ್ಲದೆ ಮಾತನಾಡುವ ಮೂಢ ಜನರ ಬಾಯನ್ನು ನೀವು ಒಳ್ಳೆ ನಡತೆಯಿಂದ ಮುಚ್ಚಿಸಬೇಕೆಂಬುದು ದೇವರ ಚಿತ್ತ. 16ಸ್ವತಂತ್ರರಂತೆ ನಡೆದುಕೊಳ್ಳಿರಿ, ಆದರೆ ಕೆಟ್ಟತನವನ್ನು ಮರೆಮಾಡುವುದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಬಳಸಿಕೊಳ್ಳಬೇಡಿರಿ, ಆದರೆ ನೀವು ದೇವರ ದಾಸರಂತೆ ನಡೆದುಕೊಳ್ಳಿರಿ. 17ಎಲ್ಲರನ್ನೂ ಸನ್ಮಾನಿಸಿರಿ. ಸಹೋದರರನ್ನು ಪ್ರೀತಿಸಿರಿ. ದೇವರಿಗೆ ಭಯಪಡಿರಿ. ಅರಸನನ್ನು ಗೌರವಿಸಿರಿ. 18ಸೇವಕರೇ, ನಿಮ್ಮ ಯಜಮಾನರಿಗೆ ಪೂರ್ಣ ಗೌರವದಿಂದ ಅಧೀನರಾಗಿರಿ. ಒಳ್ಳೆಯವರೂ ಸಾತ್ವಿಕರೂ ಆಗಿರುವವರಿಗೆ ಮಾತ್ರವಲ್ಲದೆ ವಕ್ರಬುದ್ಧಿಯುಳ್ಳವರಿಗೂ ವಿಧೇಯರಾಗಿರಿ. 19ಒಬ್ಬನು ಅನ್ಯಾಯವಾಗಿ ಬಾಧೆಪಡುವವನಾಗಿದ್ದು ದೇವರು ನೋಡುತ್ತಾನೆಂದು ಅರಿತು ಆ ಕಷ್ಟವನ್ನು ಸಹಿಸಿಕೊಂಡರೆ ಅದು ಶ್ಲಾಘ್ಯವಾಗಿದೆ. 20ತಪ್ಪುಮಾಡಿ ಗುದ್ದು ತಿನ್ನುವುದರಲ್ಲಿ ನೀವು ಸಹಿಸಿಕೊಂಡರೆ ಅದರಿಂದೇನು ಕೀರ್ತಿ? ಆದರೆ ಒಳ್ಳೆಯದನ್ನು ಮಾಡಿ ಬಾಧೆಪಡುವುದರಲ್ಲಿ ನೀವು ಸಹಿಸಿಕೊಂಡರೆ ಅದು ದೇವರ ಮುಂದೆ ಶ್ಲಾಘ್ಯವಾಗಿದೆ. 21ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿದ್ದೀರಿ. ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ಆತನ ಹೆಜ್ಜೆಯ ಜಾಡಿಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು. 22ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ. 23ಬಯ್ಯುವವರನ್ನು ಆತನು ಪ್ರತಿಯಾಗಿ ಬಯ್ಯಲಿಲ್ಲ, ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ, ನ್ಯಾಯವಾಗಿ ತೀರ್ಪು ಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು. 24ನಾವು ಪಾಪದ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಶಿಲುಬೆಯನ್ನು ಏರಿ ಮರಣ ಹೊಂದಿದನು. ಆತನ ಬಾಸುಂಡೆಗಳಿಂದ ನಮಗೆ ಗುಣವಾಯಿತು.
ಉದಯಕಾಲದ ಪ್ರಾರ್ಥನೆ: ಸುವಾರ್ತೆ
15ಅವರ ಊಟವಾದ ಮೇಲೆ ಯೇಸು ಸೀಮೋನ್ ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ಇವರಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತಿಯೋ?” ಎಂದು ಕೇಳಲು ಅವನು “ಹೌದು, ಕರ್ತನೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂದು ನೀನೇ ಬಲ್ಲೆ” ಎಂದನು. ಆತನು ಅವನಿಗೆ, “ನನ್ನ ಕುರಿಮರಿಗಳನ್ನು ಮೇಯಿಸು” ಎಂದು ಹೇಳಿದನು. 16ಆತನು ತಿರುಗಿ ಎರಡನೆಯ ಸಾರಿ ಅವನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ?” ಎಂದು ಕೇಳಲು, ಅವನು ಹೌದು ಕರ್ತನೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂದು ನೀನೇ ಬಲ್ಲೆ ಎಂದನು. ಆತನು ಅವನಿಗೆ “ನನ್ನ ಕುರಿಗಳನ್ನು ಪಾಲಿಸು” ಎಂದು ಹೇಳಿದನು. 17ಯೇಸು ಮೂರನೆಯ ಸಾರಿ, “ಯೋಹಾನನ ಮಗನಾದ ಸೀಮೋನನೇ ನೀನು ನನ್ನ ಮೇಲೆ ಮಮತೆ ಇಟ್ಟಿದ್ದಿಯೋ?” ಎಂದು ಕೇಳಿದನು, ಮೂರನೆಯ ಸಾರಿ ಆತನು, “ನನ್ನ ಮೇಲೆ ಮಮತೆ ಇಟ್ಟಿದ್ದೀಯೋ?” ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು, “ಕರ್ತನೇ, ನಿನಗೆ ಎಲ್ಲವೂ ತಿಳಿದಿದೆ. ನಾನು ನಿನ್ನ ಮೇಲೆ ಮಮತೆ ಇಟ್ಟೀದ್ದೇನೆಂದು ನಿನಗೆ ತಿಳಿದಿದೆ” ಎಂದನು. ಆಗ ಅವನಿಗೆ ಯೇಸು “ನನ್ನ ಕುರಿಗಳನ್ನು ಮೇಯಿಸು” ಎಂದನು. 18“ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ಯುವಕನಾಗಿದ್ದಾಗ ನೀನೇ ನಿನ್ನ ಉಡುಪನ್ನು ಧರಿಸಿಕೊಂಡು ಇಷ್ಟಬಂದ ಕಡೆಗೆ ತಿರುಗಾಡುತ್ತಿದ್ದೀ. ಆದರೆ ನೀನು ಮುದುಕನಾದಾಗ ನಿನ್ನ ಕೈಗಳನ್ನು ಚಾಚುವಿ, ಆಗ ಮತ್ತೊಬ್ಬನು ನಿನ್ನ ನಡುವನ್ನು ಕಟ್ಟಿ ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ಹೊತ್ತುಕೊಂಡು ಹೋಗುವನು” ಎಂದು ಹೇಳಿದನು. 19ಅವನು ಎಂಥಾ ಮರಣದಿಂದ ದೇವರನ್ನು ಮಹಿಮೆಪಡಿಸುವನು ಎಂಬುದನ್ನು ಯೇಸು ಈ ಮಾತಿನಿಂದ ಸೂಚಿಸಿದನು. ಆತನು ಇದನ್ನು ಹೇಳಿ ಪೇತ್ರನಿಗೆ “ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. 20ಪೇತ್ರನು ಹಿಂತಿರುಗಿ ನೋಡಿದಾಗ, ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಹಿಂದೆ ಬರುವುದನ್ನು ಕಂಡನು. ಆ ಶಿಷ್ಯನು ಊಟದ ಸಮಯದಲ್ಲಿ ಯೇಸುವಿನ ಎದೆಗೆ ಒರಗಿಕೊಂಡು, “ಕರ್ತನೇ, ನಿನ್ನನ್ನು ಹಿಡಿದುಕೊಡುವವನು ಯಾರು?” ಎಂದು ಕೇಳಿದವನೇ. 21ಇವನನ್ನು ಪೇತ್ರನು ನೋಡಿ ಯೇಸುವಿಗೆ, “ಕರ್ತನೇ, ಇವನ ಬಗ್ಗೆ ಏನು ಹೇಳುತ್ತೀಯಾ?” ಎಂದು ಕೇಳಲು, 22ಯೇಸು ಅವನಿಗೆ “ನಾನು ಬರುವ ತನಕ ಇವನು ಉಳಿದಿರಬೇಕೆಂಬುದು ನನಗೆ ಮನಸ್ಸಾಗಿದ್ದರೆ ಅದರಿಂದ ನಿನಗೇನು? ನೀನು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. 23ಆದುದರಿಂದ ಆ ಶಿಷ್ಯನು ಸಾಯುವುದಿಲ್ಲವೆಂಬ ಮಾತು ಸಹೋದರರಲ್ಲಿ ಹಬ್ಬಿತು. ಆದರೆ ಅವನು ಸಾಯುವುದಿಲ್ಲವೆಂದು ಯೇಸು ಅವನಿಗೆ ಹೇಳಲಿಲ್ಲ. “ನಾನು ಬರುವ ತನಕ ಅವನು ಉಳಿದಿರಬೇಕೆಂದು ನನಗೆ ಮನಸ್ಸಿದ್ದರೆ ಅದು ನಿನಗೇನು?” ಎಂದು ಮಾತ್ರ ಹೇಳಿದನು. 24ಈ ವಿಷಯವಾಗಿ ಸಾಕ್ಷಿಕೊಟ್ಟು, ಇವುಗಳನ್ನು ಬರೆದ ಶಿಷ್ಯನು ಇವನೇ. ಇವನ ಸಾಕ್ಷಿಯು ಸತ್ಯವೆಂದು ನಾವು ಬಲ್ಲೆವು. 25ಇದಲ್ಲದೆ ಯೇಸುವು ಮಾಡಿದ ಇನ್ನೂ ಬೇರೆ ಅನೇಕ ಸಂಗತಿಗಳು ಸಹ ಇವೆ. ಅವುಗಳನ್ನೆಲ್ಲಾ ಒಂದೊಂದಾಗಿ ಬರೆಯುವುದಾದರೆ, ಆ ಪುಸ್ತಕಗಳು ಲೋಕವೇ ಹಿಡಿಸಲಾರದಷ್ಟಾಗುವುದು ಎಂದು ನಾನು ಭಾವಿಸುತ್ತೇನೆ.
ಪತ್ರಿಕೆ (ಅಪೊಸ್ತಲರು)
21ನಾವು ಬಲವಿಲ್ಲದವರಾಗಿದ್ದೆವೆಂಬುದನ್ನು ನಾಚಿಕೆಗೇಡಿನಿಂದ ಹೇಳುತ್ತಿದ್ದೇನೆ. ಯಾವ ಆಧಾರದಿಂದ ಯಾವನಾದರೂ ದೊಡ್ಡಸ್ತಿಕೆಯಿಂದ ಹೊಗಳಿಕೊಳ್ಳುತ್ತಾನೋ ಅದರಿಂದಲೇ ನಾನು ಹೊಗಳಿಕೊಳ್ಳುವುದಾಗಿ ಬುದ್ಧಿಹೀನನಂತೆ ಮಾತನಾಡುತ್ತಿದ್ದೇನೆ. 22ಅವರು ಇಬ್ರಿಯರೋ? ನಾನೂ ಇಬ್ರಿಯನು. ಅವರು ಇಸ್ರಾಯೇಲ್ಯರೋ? ನಾನೂ ಇಸ್ರಾಯೇಲ್ಯನು. ಅವರು ಅಬ್ರಹಾಮನ ವಂಶದವರೋ? ನಾನೂ ಅದೇ ವಂಶದವನು. 23ಅವರು ಕ್ರಿಸ್ತನ ಸೇವಕರೋ? ಅವರಿಗಿಂತ ನಾನು ಹೆಚ್ಚಾಗಿ ಸೇವೆಮಾಡುವವನಾಗಿದ್ದೇನೆ. ನಾನು ಬುದ್ಧಿ ಕೆಟ್ಟವನಂತೆಯೇ ಮಾತನಾಡುತ್ತಿದ್ದೇನೆ ಕ್ರಿಸ್ತನ ಸೇವೆಯಲ್ಲಿ ಅವರಿಗಿಂತ ಹೆಚ್ಚಾಗಿ ಪ್ರಯಾಸಪಟ್ಟೆನು, ಹೆಚ್ಚಾಗಿ ಸೆರೆಮನೆಯ ವಾಸವನ್ನು ಅನುಭವಿಸಿದ್ದೇನೆ, ಮಿತಿಮೀರಿ ಏಟುಪೆಟ್ಟುಗಳನ್ನು ತಿಂದಿದ್ದೇನೆ. ಅನೇಕ ಸಾರಿ ಮರಣದ ಬಾಯೊಳಗೆ ಸಿಕ್ಕಿಕೊಂಡಿದ್ದೇನೆ. 24ಐದು ಸಾರಿ ಯೆಹೂದ್ಯರಿಂದ ನನಗೆ ಒಂದು ಕಡಿಮೆ ನಲವತ್ತು ಏಟುಗಳು ಬಿದ್ದವು. 25ಮೂರು ಸಾರಿ ಬಾರುಕೋಲಿನಿಂದ ನನ್ನನ್ನು ಹೊಡೆದರು. ಒಂದು ಸಾರಿ ಜನರು ನನ್ನನ್ನು ಕೊಲ್ಲುವುದಕ್ಕೆ ಕಲ್ಲೆಸೆದರು. ಮೂರು ಸಾರಿ ನಾನಿದ್ದ ಹಡಗು ಒಡೆದು ಹೋಯಿತು. ಒಂದು ರಾತ್ರಿ ಒಂದು ಹಗಲು ಸಮುದ್ರದ ನೀರಿನಲ್ಲಿ ಕಳೆದೆನು. 26ಕ್ರಿಸ್ತನ ಸೇವೆಯಲ್ಲಿ ಎಷ್ಟೋ ಪ್ರಯಾಣಗಳನ್ನು ಮಾಡಿದೆನು. ನದಿಗಳ ಅಪಾಯಗಳೂ, ಕಳ್ಳರ ಅಪಾಯಗಳೂ, ಸ್ವಂತ ಜನರಿಂದ ಅಪಾಯಗಳೂ, ಅನ್ಯಜನರಿಂದ ಅಪಾಯಗಳೂ, ಪಟ್ಟಣದಲ್ಲಿ ಅಪಾಯ, ನಿರ್ಜನ ಸ್ಥಳದಲ್ಲಿ ಅಪಾಯ, ಸಮುದ್ರದಲ್ಲಿ ಅಪಾಯ, ಸುಳ್ಳು ಸಹೋದರರೊಳಗಿನಿಂದಾದ ಅಪಾಯಗಳೂ ನನಗೆ ಸಂಭವಿಸಿದವು. 27ಶ್ರಮೆಪಟ್ಟು ದುಡಿದಿದ್ದೇನೆ, ಎಷ್ಟೋ ಸಾರಿ ನಿದ್ದೆಗೆಟ್ಟಿದ್ದೇನೆ; ಹಸಿವು ನೀರಡಿಕೆಗಳಿಂದ ಬಳಲಿದ್ದೇನೆ; ಅನೇಕ ಸಾರಿ ಊಟ, ಬಟ್ಟೆಯಿಲ್ಲದೆ ಅಲೆದಿದ್ದೇನೆ; ಚಳಿಗಾಳಿಯಲ್ಲಿ ನಡುಗಿದ್ದೇನೆ. 28ಇಂಥ ಇನ್ನಿತರ ಬೇರೆ ಸಂಗತಿಗಳಲ್ಲದೆ, ಎಲ್ಲಾ ಸಭೆಗಳ ಕುರಿತಾದ ಚಿಂತೆಯು ದಿನದಿನ ನನ್ನನ್ನು ಕಾಡಿಸುತ್ತಿತ್ತು. 29ಯಾವನಾದರೂ ಬಲಹೀನನಾಗಿದ್ದರೆ ನಾನೂ ಅವನೊಂದಿಗೆ ಬಲಹೀನನಾಗದೆ ಇದ್ದೆನೋ? ಯಾವನಾದರೂ ತಪ್ಪಿಹೋಗಿದ್ದಲ್ಲಿ ನಾನು ಸಂತಾಪಪಡದೆ ಇದ್ದೆನೋ? 30ನಾನು ಹೊಗಳಿಕೊಳ್ಳುವುದ್ದಾದರೆ ನನ್ನ ಬಲಹೀನತೆಯನ್ನು ಕುರಿತೆ ಹೊಗಳಿಕೊಳ್ಳುತ್ತೇನೆ. 31ನನ್ನ ಮಾತುಗಳು ಸುಳ್ಳಲ್ಲವೆಂಬುದನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ, ತಂದೆಯೂ ಆಗಿರುವಾತನು ನಿರಂತರ ಸ್ತುತಿ ಹೊಂದತಕ್ಕ ದೇವರೇ ಬಲ್ಲನು. 32ದಮಸ್ಕದಲ್ಲಿ ಅರಸನಾದ ಅರೇತನ ಅಧೀನದಲ್ಲಿದ್ದ ಅಧಿಪತಿಯು ನನ್ನನ್ನು ಹಿಡಿಯಬೇಕೆಂದು ದಮಸ್ಕದವರ ಪಟ್ಟಣವನ್ನು ಕಾಯುತ್ತಿರಲು 33ಅವರು ನನ್ನನ್ನು ಒಂದು ಬುಟ್ಟಿಯಲ್ಲಿ ಕುಳ್ಳಿರಿಸಿ ಗೋಡೆಯಲ್ಲಿದ್ದ ಒಂದು ಕಿಟಕಿಯಿಂದ ಇಳಿಸಿಬಿಟ್ಟರು. ಹೀಗೆ ಅವನ ಕೈಯಿಂದ ತಪ್ಪಿಸಿಕೊಂಡು ಓಡಿಹೋದೆನು. 12:1ಹೊಗಳಿಕೊಳ್ಳುವುದು ಹಿತಕರವಲ್ಲ. ಆದರೂ ಹೊಗಳಿಕೊಳ್ಳುವುದು ನನಗೆ ಅನಿವಾರ್ಯವಾಗಿದೆ. ಆದ್ದರಿಂದ ಕರ್ತನು ನನಗೆ ದಯಪಾಲಿಸಿದ ದರ್ಶನಗಳನ್ನೂ ಮತ್ತು ತಿಳಿಯಪಡಿಸಿದ ರಹಸ್ಯಗಳನ್ನೂ ಕುರಿತು ಹೇಳುತ್ತೇನೆ. 2ಕ್ರಿಸ್ತನಲ್ಲಿದ್ದ ಒಬ್ಬ ಮನುಷ್ಯನನ್ನು ಬಲ್ಲೆನು. ಅವನು ಹದಿನಾಲ್ಕು ವರ್ಷಗಳ ಹಿಂದೆ ಮೂರನೆಯ ಸ್ವರ್ಗಕ್ಕೆ ಒಯ್ಯಲ್ಪಟ್ಟನು. ಅವನು ದೇಹಸಹಿತನಾಗಿ ಒಯ್ಯಲ್ಪಟ್ಟನೋ, ಅಥವಾ ದೇಹರಹಿತನಾಗಿ ಒಯ್ಯಲ್ಪಟ್ಟನೋ ನಾನರಿಯೆನು, ದೇವರೇ ಬಲ್ಲನು. 3ಅವನು ಪರದೈಸಿ ತನಕ ಒಯ್ಯಲ್ಪಟ್ಟು ಮನುಷ್ಯರಿಂದ ಉಚ್ಚರಿಸಲೂ, ಆಡಲೂ ಬಾರದಂತಹ ಮಾತುಗಳನ್ನು ಕೇಳಿದನೆಂದೂ ಬಲ್ಲೆನು. ಆ ಸಮಯದಲ್ಲಿ ಆತನು ದೇಹಸಹಿತನಾಗಿದ್ದನೋ ಅಥವಾ ದೇಹರಹಿತನಾಗಿದ್ದನೋ ನಾನರಿಯೆನು, ದೇವರೇ ಬಲ್ಲನು. 5ಅವನನ್ನು ಕುರಿತಾಗಿ ನಾನು ಹೆಮ್ಮೆ ಪಡುವೆನು. ಆದರೆ ನನ್ನನ್ನು ಕುರಿತಂತೆ ನನ್ನ ಬಲಹೀನತೆಯನ್ನು ಕುರಿತಲ್ಲದೆ ಬೇರೆ ಹೊಗಳಿಕೆ ನನಗೆ ಇಲ್ಲ. 6ಹೊಗಳಿಕೊಳ್ಳುವುದಕ್ಕೆ ನನಗೆ ಒಂದು ವೇಳೆ ಮನಸ್ಸಿದ್ದರೂ ಹಾಗೆ ಹೊಗಳಿಕೊಳ್ಳುವುದರಲ್ಲಿ ನಾನು ಬುದ್ಧಿಹೀನನಾಗುವುದಿಲ್ಲ, ಯಾಕೆಂದರೆ ನಾನು ಸತ್ಯವನ್ನೇ ಹೇಳುತ್ತಿರುವೆನು. ಆದರೂ ಯಾರೂ ನನ್ನಲ್ಲಿ ಕಾಣುವುದಕ್ಕಿಂತಲೂ ಅಥವಾ ನನ್ನಿಂದ ಕೇಳುವುದಕ್ಕಿಂತಲೂ ಹೆಚ್ಚಾಗಿ ನನ್ನನ್ನು ಪರಿಗಣಿಸಬಾರದು. 7ಈ ಕಾರಣದಿಂದಲೂ ಮತ್ತು ನನಗೆ ತಿಳಿಸಲ್ಪಟ್ಟ ರಹಸ್ಯಗಳು ಬಹು ವಿಶೇಷವಾಗಿರುವುದರಿಂದಲೂ ನಾನು ಹೊಗಳಿಕೊಳ್ಳದೇ ಸುಮ್ಮನಿರುತ್ತೇನೆ. ನಾನು ನನ್ನನ್ನು ಅತಿಶಯವಾಗಿ ಹೆಚ್ಚಿಸಿಕೊಳ್ಳಬಾರದೆಂದು ಒಂದು ಶೂಲವು ನನ್ನನ್ನು ತಿವಿಯುವುದಕ್ಕಾಗಿ ನನ್ನ ದೇಹದೊಳಗೆ ಇರಿಸಲಾಗಿದೆ. ನಾನು ಅಹಂಕಾರಪಡದ ಹಾಗೆ ಇದು ನನ್ನನ್ನು ತಿವಿತಿವಿದು ಸೈತಾನನ ದೂತನಂತೆ ಕಾಡಿಸುತ್ತಿತ್ತು. 8ಈ ನೋವು ನನ್ನನ್ನು ಬಿಟ್ಟುಹೋಗುವಂತೆ ಮೂರು ಸಾರಿ ಕರ್ತನನ್ನು ಬೇಡಿಕೊಂಡೆನು ಆದರೆ 9ಅದಕ್ಕಾತನು, “ನನ್ನ ಕೃಪೆಯೇ ನಿನಗೆ ಸಾಕು, ಬಲಹೀನತೆಯಲ್ಲಿಯೇ ನನ್ನ ಬಲವು ಪೂರ್ಣಸಾಧಕವಾಗುತ್ತದೆ” ಎಂದು ನನಗೆ ಹೇಳಿದನು. ಹೀಗಿರಲಾಗಿ, ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿರಬೇಕೆಂದು ನನಗುಂಟಾಗುವ ಬಲಹೀನತೆಯಲ್ಲಿಯೂ ಬಹು ಸಂತೋಷವಾಗಿ ಹೆಚ್ಚಳಪಡುವೆನು.
ಸುವಾರ್ತೆ (ಅಪೊಸ್ತಲರು)
13ಯೇಸು ಫಿಲಿಪ್ಪನ ಕೈಸರೈಯ ಎಂಬ ಪಟ್ಟಣದ ಪ್ರಾಂತ್ಯಕ್ಕೆ ಬಂದಾಗ, “ಜನರು ಮನುಷ್ಯಕುಮಾರನಾದ ನನ್ನನ್ನು ಯಾರೆಂದು ಹೇಳುತ್ತಾರೆ” ಎಂದು ತನ್ನ ಶಿಷ್ಯರನ್ನು ಕೇಳಿದನು. 14ಅವರು, “ನಿನ್ನನ್ನು ಕೆಲವರು ಸ್ನಾನಿಕನಾದ ಯೋಹಾನನು ಅನ್ನುತ್ತಾರೆ, ಕೆಲವರು ಎಲೀಯನು ಅನ್ನುತ್ತಾರೆ ಮತ್ತು ಬೇರೆಯವರು ಯೆರಮೀಯನು, ಇಲ್ಲವೆ ಪ್ರವಾದಿಗಳಲ್ಲಿ ಒಬ್ಬನು” ಅನ್ನುತ್ತಾರೆ ಎಂದು ಹೇಳಿದರು. 15ಆತನು ಅವರನ್ನು, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ ಎಂದು ಕೇಳಿದನು?” 16ಆಗ ಸೀಮೋನ ಪೇತ್ರನು, “ನೀನು ಜೀವವುಳ್ಳ ದೇವರ ಕುಮಾರನಾದ ಕ್ರಿಸ್ತನು” ಎಂದು ಉತ್ತರ ಕೊಟ್ಟನು. 17ಅದಕ್ಕೆ ಯೇಸು, “ಯೋನನ ಮಗನಾದ ಸೀಮೋನನೇ, ನೀನು ಧನ್ಯನು. ಏಕೆಂದರೆ ಇದು ಮನುಷ್ಯನಿಂದ ನಿನಗೆ ಪ್ರಕಟವಾಗಿಲ್ಲ, ಪರಲೋಕದಲ್ಲಿರುವ ನನ್ನ ತಂದೆಯೇ ಇದನ್ನೂ ನಿನಗೆ ಪ್ರಕಟಪಡಿಸಿರುವನು” ಎಂದು ಹೇಳಿದನು. 18ನಾನು ಇದನ್ನು ಸಹ ನಿನಗೆ ಹೇಳುತ್ತೇನೆ, “ನೀನು ಪೇತ್ರನು, ಈ ಬಂಡೆಯ ಮೇಲೆ ನಾನು ನನ್ನ ಸಭೆಯನ್ನು ಕಟ್ಟುವೆನು. ಪಾತಾಳದ ಶಕ್ತಿಗಳು ಅದನ್ನು ಸೋಲಿಸಲಾರವು. 19ಪರಲೋಕ ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಭೂಲೋಕದಲ್ಲಿ ನೀನು ಯಾವುದನ್ನು ಕಟ್ಟುತ್ತೀಯೋ ಅದು ಪರಲೋಕದಲ್ಲಿಯೂ ಕಟ್ಟಲ್ಪಟ್ಟಿರುವುದು. ಮತ್ತು ಭೂಲೋಕದಲ್ಲಿ ನೀನು ಯಾವುದನ್ನು ಬಿಚ್ಚುತ್ತೀಯೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪಟ್ಟಿರುವುದು” ಅಂದನು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 29 ಜೂನ್ ಎಂದರೆ ನಾಗರಿಕ ಪಂಚಾಂಗದ 12 ಜುಲೈ. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು