ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜೂನ್ 2027 › 4 ಜೂನ್
ಆರ್ಥೊಡಾಕ್ಸ್ ಪಂಚಾಂಗ · ಮೇ 22 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 4 ಜೂನ್ 2027
ಶುಕ್ರವಾರ · ಪಾಸ್ಕದ ಐದನೆಯ ವಾರ · ಸ್ವರ 4
ಹಬ್ಬಗಳು ಮತ್ತು ಸಂತರು
Martyr Basiliscus the Bishop of Comana († c. 308)
ಉಪವಾಸದ ದಿನ
ಮೀನಿಗೆ ಅನುಮತಿ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಪತ್ರಿಕೆ
5ಆದರೆ ಫರಿಸಾಯ ಮತದವರಲ್ಲಿ ಯೇಸುವನ್ನು ನಂಬಿದ್ದ ಕೆಲವರು ಎದ್ದು; “ದೇವರ ಕಡೆಗೆ ತಿರುಗಿಕೊಂಡಿರುವ ಅನ್ಯಜನರಿಗೆ ಸುನ್ನತಿಮಾಡಿಸಬೇಕು, ಮತ್ತು ಮೋಶೆಯ ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯುವುದಕ್ಕೆ ಅವರಿಗೆ ಅಪ್ಪಣೆಕೊಡಬೇಕು” ಎಂದು ಹೇಳಿದರು. 6ಅಪೊಸ್ತಲರೂ ಸಭೆಯ ಹಿರಿಯರೂ ಈ ವಿಷಯವನ್ನು ಕುರಿತು ಆಲೋಚಿಸುವುದಕ್ಕೆ ಸೇರಿ ಬಂದಾಗ, ಅವರಲ್ಲಿ ಬಹು ವಿವಾದವು ನಡೆದ ಮೇಲೆ ಪೇತ್ರನು ಎದ್ದು ಅವರಿಗೆ; 7“ಸಹೋದರರೇ, ಅನ್ಯಜನರು ನನ್ನ ಬಾಯಿಂದ ಸುವಾರ್ತೆಯ ವಾಕ್ಯವನ್ನು ಕೇಳಿ ನಂಬಬೇಕೆಂದು ದೇವರು ಬಹಳ ದಿನಗಳ ಹಿಂದೆ ನಿಮ್ಮೊಳಗಿಂದ ನನ್ನನ್ನು ಆರಿಸಿಕೊಂಡದ್ದು ನಿಮಗೇ ತಿಳಿದಿದೆ. 8ಮತ್ತು ಹೃದಯವನ್ನು ಬಲ್ಲವನಾಗಿರುವ ದೇವರು ಹೇಗೆ ಪವಿತ್ರಾತ್ಮವರವನ್ನು ನಮಗೆ ದಯಪಾಲಿಸಿದನೋ ಹಾಗೆಯೇ ಅವರಿಗೂ ದಯಪಾಲಿಸಿ ಸಾಕ್ಷಿಕೊಟ್ಟನು. 9ಇದಲ್ಲದೆ ಆತನು ನಮಗೂ, ಅವರಿಗೂ ಏನೂ ಭೇದಮಾಡದೆ ಅವರ ಹೃದಯಗಳನ್ನೂ ನಂಬಿಕೆಯ ಮೂಲಕವಾಗಿ ಶುದ್ಧೀಕರಿಸಿದನು. 10ಹೀಗಿರುವುದರಿಂದ ನಮ್ಮ ಪೂರ್ವಿಕರಾಗಲಿ, ನಾವಾಗಲಿ ಹೊರಲಾಗದ ನೋಗವನ್ನು ನೀವು ಶಿಷ್ಯರ ಹೆಗಲಿನ ಮೇಲೆ ಹಾಕಿ ದೇವರನ್ನು ಪರೀಕ್ಷಿಸುವುದು ಏಕೆ? 11ಕರ್ತನಾದ ಯೇಸುವಿನ ಕೃಪೆಯಿಂದಲೇ ನಾವು ರಕ್ಷಣೆ ಹೊಂದುವೆವೆಂಬುದಾಗಿ ನಂಬುತ್ತೇವಲ್ಲಾ; ಹಾಗೆಯೇ ಅವರೂ ಹೊಂದುವರು” ಎಂದು ಹೇಳಿದನು. 12ಗುಂಪುಸೇರಿದ್ದವರೆಲ್ಲರೂ ಈ ಮಾತುಗಳನ್ನು ಕೇಳಿ ಮೌನವಾಗಿದ್ದು ಬಾರ್ನಬನೂ ಪೌಲನೂ ತಮ್ಮ ಮೂಲಕವಾಗಿ ದೇವರು ಅನ್ಯಜನರಲ್ಲಿ ಮಾಡಿದ್ದ ಎಲ್ಲಾ ಸೂಚಕ ಕಾರ್ಯಗಳನ್ನೂ, ಅದ್ಭುತಕಾರ್ಯಗಳನ್ನೂ ವಿವರಿಸಿದ್ದನ್ನು ಕಿವಿಗೊಟ್ಟು ಕೇಳಿದರು. 13ಅವರು ಮಾತನಾಡುವುದನ್ನು ಮುಗಿಸಿದ ಮೇಲೆ ಯಾಕೋಬನು ಆ ಸಂಗತಿಯನ್ನು ಕುರಿತು ಹೇಳಿದ್ದೇನಂದರೆ; 14“ಸಹೋದರರೇ, ನಾನು ಹೇಳುವುದನ್ನು ಕೇಳಿರಿ. ದೇವರು ಮೊದಲು ಅನ್ಯಜನರನ್ನು ಕೃಪಾಕಟಾಕ್ಷದಿಂದ ನೋಡಿ ತನ್ನ ಹೆಸರಿಗಾಗಿ ಅವರೊಳಗಿನಿಂದ ಒಬ್ಬ ಪ್ರಜೆಯನ್ನು ಆರಿಸಿಕೊಂಡ ವಿಧವನ್ನು ಸಿಮೆಯೋನನು ವಿವರಿಸಿದನಷ್ಟೆ. 15ಇದಕ್ಕೆ ಪ್ರವಾದಿಗಳ ಮಾತುಗಳೂ ಒಪ್ಪುತ್ತವೆ. ಹೇಗೆಂದರೆ; 16“‘ಇದಾದ ಮೇಲೆ ನಾನು ಹಿಂತಿರುಗಿ ಬಂದು ದಾವೀದನ ಬಿದ್ದುಹೋಗಿರುವ ಗುಡಾರವನ್ನು ಪುನಃ ಕಟ್ಟುವೆನು. ಪಾಳು ಬಿದ್ದದ್ದನ್ನು ಜೀರ್ಣೋದ್ಧಾರಮಾಡಿ ಸುಭದ್ರವಾಗಿ ನಿಲ್ಲಿಸುವೆನು. 17ಮನುಷ್ಯರಲ್ಲಿ ಉಳಿದ ಜನರು ಅಂದರೆ ದೇವಜನರೆನಿಸಿಕೊಳ್ಳುವ ಸಕಲ ಜನಾಂಗಗಳೂ ಕರ್ತನನ್ನು ಹುಡುಕುವರು ಎಂದು 18ಅನಾದಿಕಾಲದಿಂದ ಈ ಕಾರ್ಯಗಳನ್ನು ತಿಳಿಯಪಡಿಸುವ ಕರ್ತನು ನುಡಿಯುತ್ತಾನೆ’ ಎಂದು ಬರೆದದೆ. 19“ಹೀಗಿರಲಾಗಿ ನನ್ನ ಅಭಿಪ್ರಾಯ ಏನೆಂದರೆ; ಅನ್ಯಜನರಲ್ಲಿ ದೇವರ ಕಡೆಗೆ ತಿರುಗಿಕೊಳ್ಳುವವರನ್ನು ತೊಂದರೆಪಡಿಸಬಾರದು. 20ಆದರೆ ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ, ಹಾದರವನ್ನೂ, ಕುತ್ತಿಗೆ ಹಿಸುಕಿ ಕೊಂದದ್ದನ್ನೂ, ರಕ್ತವನ್ನೂ ವಿರ್ಜಿಸಬೇಕೆಂದು ನಾವು ಅವರಿಗೆ ಪತ್ರವನ್ನು ಬರೆಯೋಣ ಎಂದು ತೀರ್ಮಾನಿಸಿದರು. 21ಏಕೆಂದರೆ ಪುರಾತನಕಾಲದಿಂದ ಎಲ್ಲಾ ಪಟ್ಟಣಗಳಲ್ಲಿ ಮೋಶೆಯ ಧರ್ಮಶಾಸ್ತ್ರವನ್ನು ಬೋಧಿಸುವವರು ಇದ್ದಾರೆ; ಅದು ಪ್ರತಿ ಸಬ್ಬತ್ ದಿನವೂ ಸಭಾಮಂದಿರಗಳಲ್ಲಿ ಪಾರಾಯಣವಾಗುತ್ತದಲ್ಲಾ” ಎಂದು ಹೇಳಿದನು. 22ಆಗ ಅಪೊಸ್ತಲರೂ, ಸಭೆಯ ಹಿರಿಯರೂ ಸರ್ವಸಭೆಯ ಅನುಮತಿಯಿಂದ ತಮ್ಮಲ್ಲಿ ಕೆಲವರನ್ನು ಆರಿಸಿಕೊಂಡು ಪೌಲ ಮತ್ತು ಬಾರ್ನಬರ ಜೊತೆಯಲ್ಲಿ ಅಂತಿಯೋಕ್ಯಕ್ಕೆ ಕಳುಹಿಸುವುದು ಯುಕ್ತವೆಂದು ತೀರ್ಮಾನಿಸಿದರು. ಆದಕಾರಣ ಸಹೋದರರಲ್ಲಿ ಮುಖ್ಯರಾಗಿದ್ದ ಬಾರ್ಸಬ್ಬನೆನಿಸಿಕೊಳ್ಳುವ ಯೂದನನ್ನೂ, ಸೀಲನನ್ನೂ ಆರಿಸಿಕೊಂಡು, 23ಅವರ ಕೈಯಲ್ಲಿ ಬರೆದುಕೊಟ್ಟದ್ದೇನಂದರೆ; “ಸಹೋದರರೂ, ಅಪೊಸ್ತಲರೂ ಮತ್ತು ಹಿರಿಯರೂ, ಅಂತಿಯೋಕ್ಯ, ಸಿರಿಯ, ಕಿಲಿಕ್ಯ ಸೀಮೆಗಳಲ್ಲಿ ವಾಸಿಸುವ ಅನ್ಯಜನರೊಳಗಿಂದ ಸಹೋದರರಾದವರಿಗೂ ಮಾಡುವ ವಂದನೆ; 24“ನಮ್ಮೊಳಗಿಂದ ಹೊರಟು ಕೆಲವರು ನಮ್ಮಿಂದ ಯಾವ ಅಪ್ಪಣೆಯನ್ನು ಹೊಂದದೆ ತಮ್ಮ ಮಾತುಗಳಿಂದ ನಿಮ್ಮಲ್ಲಿ ಅಸಮಾಧಾನವನ್ನು ಹುಟ್ಟಿಸಿ ನಿಮ್ಮ ಮನಸ್ಸುಗಳನ್ನು ಕಳವಳಗೊಳಿಸಿದ್ದಾರೆಂಬುದನ್ನು ಕೇಳಿದ್ದರಿಂದ, 25ನಾವು ಕೆಲವರನ್ನು ಆರಿಸಿಕೊಂಡು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನ ನಿಮಿತ್ತ ಜೀವದ ಹಂಗನ್ನು ತೊರೆದವರಾದ, 26ನಮ್ಮ ಪ್ರಿಯ ಬಾರ್ನಬ ಪೌಲರ ಜೊತೆಯಲ್ಲಿ ನಿಮ್ಮ ಬಳಿಗೆ ಕಳುಹಿಸಿ ಕೊಡುವುದು ಯುಕ್ತವೆಂದು ನಾವೆಲ್ಲರೂ ಒಮ್ಮನಸ್ಸಿನಿಂದ ತೀರ್ಮಾನಿಸಿದೆವು. 27ಆದುದರಿಂದ ಯೂದನನ್ನೂ, ಸೀಲನನ್ನೂ ಕಳುಹಿಸಿಕೊಡುತ್ತಿದ್ದೇವೆ. ಅವರು ನಾವು ಬರೆದಿರುವ ಈ ಸಂಗತಿಗಳನ್ನು ಬಾಯಿಮಾತಿನಿಂದಲೂ ನಿಮಗೆ ತಿಳಿಸುವರು. 28ಅವು ಯಾವುವೆಂದರೆ, ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ, ರಕ್ತವನ್ನೂ, ಕುತ್ತಿಗೆ ಹಿಸುಕಿ ಕೊಂದದ್ದನ್ನೂ, ಅನೈತಿಕತೆಯನ್ನೂ ವಿಸರ್ಜಿಸುವುದು ಅಗತ್ಯವಾಗಿದೆ. 29ಇದಕ್ಕಿಂತ ಹೆಚ್ಚಿನ ಹೊರೆಯನ್ನು ನಿಮ್ಮ ಮೇಲೆ ಹೊರಿಸಬಾರದೆಂದು ಪವಿತ್ರಾತ್ಮನಿಗೂ ನಮಗೂ ಹಿತವಾಗಿ ತೋರಿತು; ನೀವು ಎಚ್ಚರವಾಗಿದ್ದು ಇವುಗಳ ಗೊಡವೆಗೆ ಹೋಗದಿದ್ದರೆ ನಿಮಗೆ ಒಳ್ಳೆಯದಾಗುವುದು. ಶುಭವಾಗಲಿ.” 30ಹೀಗೆ ಅವರು ಅಪ್ಪಣೆ ತೆಗೆದುಕೊಂಡು ಅಂತಿಯೋಕ್ಯಕ್ಕೆ ಬಂದು ಸಭೆಯನ್ನು ಸೇರಿಸಿ ಆ ಪತ್ರವನ್ನು ಅವರಿಗೆ ಒಪ್ಪಿಸಿದರು. 31ಅವರು ಓದಿ ಅದರಿಂದ ಧೈರ್ಯ ತಂದುಕೊಂಡು ಸಂತೋಷಪಟ್ಟರು. 32ಯೂದನೂ, ಸೀಲನೂ ತಾವೇ ಪ್ರವಾದಿಗಳಾಗಿದ್ದುದರಿಂದ ಸಹೋದರರನ್ನು ಅನೇಕ ಮಾತುಗಳಿಂದ ಉತ್ತೇಜಿಸಿ ದೃಢಪಡಿಸಿದರು. 33ಅಲ್ಲಿ ಕೆಲವು ಕಾಲ ಕಳೆದ ನಂತರ ತಮ್ಮನ್ನು ಕಳುಹಿಸಿದವರ ಬಳಿಗೆ ಪುನಃ ಹೋಗುವುದಕ್ಕೆ ಸಹೋದರರಿಂದ ಅಪ್ಪಣೆ ತೆಗೆದುಕೊಂಡರು. 34ಆದರೆ ಸೀಲನಿಗೆ ಅಲ್ಲೇ ಇರುವುದು ಒಳ್ಳೆಯದೆಂದು ತೋಚಿತು.
ಸುವಾರ್ತೆ
17ತಂದೆಯು ನನ್ನನ್ನು ಪ್ರೀತಿಸುತ್ತಾನೆ ಏಕೆಂದರೆ, ನಾನು ನನ್ನ ಪ್ರಾಣವನ್ನು ಮರಳಿ ಪಡೆದುಕೊಳ್ಳುವಂತೆ ಅದನ್ನು ಕೊಡುತ್ತಿದ್ದೇನೆ. 18ನನ್ನ ಪ್ರಾಣವನ್ನು ಯಾರೂ ನನ್ನಿಂದ ತೆಗೆದುಕೊಳ್ಳುವುದಿಲ್ಲ. ಆದರೆ ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ. ಅದನ್ನು ಕೊಡುವುದಕ್ಕೆ ನನಗೆ ಅಧಿಕಾರ ಉಂಟು. ಅದನ್ನು ಪುನಃ ಪಡೆದುಕೊಳ್ಳುವುದಕ್ಕೂ ನನಗೆ ಅಧಿಕಾರವಿದೆ. ಈ ಆಜ್ಞೆಯನ್ನು ನಾನು ನನ್ನ ತಂದೆಯಿಂದ ಹೊಂದಿದ್ದೇನೆ” ಎಂದನು. 19ಈ ಮಾತುಗಳ ದೆಸೆಯಿಂದ ಯೆಹೂದ್ಯರ ಮಧ್ಯದಲ್ಲಿ ಪುನಃ ಬೇಧ ಉಂಟಾಯಿತು. 20ಅವರಲ್ಲಿ ಅನೇಕರು ಆತನಿಗೆ, “ದೆವ್ವ ಹಿಡಿದಿದೆ, ಹುಚ್ಚನಾಗಿದ್ದಾನೆ, ನೀವು ಏಕೆ ಆತನ ಮಾತುಗಳನ್ನು ಕೇಳುತ್ತೀರಿ?” ಎಂದರು. 21ಇನ್ನು ಕೆಲವರು, “ಇವು ದೆವ್ವಹಿಡಿದವನ ಮಾತುಗಳಲ್ಲ, ದೆವ್ವವು ಕುರುಡನ ಕಣ್ಣುಗಳನ್ನು ತೆರೆಯಲು ಸಾಧ್ಯವೇ?” ಎಂದರು. 22ಆನಂತರ ಯೆರೂಸಲೇಮಿನಲ್ಲಿ ದೇವಾಲಯದ ಪ್ರತಿಷ್ಠೆಯ ಹಬ್ಬವು ನಡೆಯಿತು. ಅದು ಚಳಿಗಾಲವಾಗಿತ್ತು. 23ಯೇಸು ದೇವಾಲಯದೊಳಗೆ ಸೊಲೊಮೋನನ ಮಂಟಪದಲ್ಲಿ ತಿರುಗಾಡುತ್ತಾ ಇರುವಾಗ, 24ಯೆಹೂದ್ಯರು ಆತನನ್ನು ಸುತ್ತುವರೆದು ಆತನಿಗೆ, “ಇನ್ನು ಎಷ್ಟು ಕಾಲ ನಮ್ಮನ್ನು ಸಂದಿಗ್ಧದಲ್ಲಿ ಇಡುತ್ತಿ? ನೀನು ಕ್ರಿಸ್ತನಾಗಿದ್ದರೆ ಅದನ್ನು ನಮಗೆ ಸ್ಪಷ್ಟವಾಗಿ ಹೇಳು” ಎಂದರು. 25ಅದಕ್ಕೆ ಯೇಸು, “ನಾನು ನಿಮಗೆ ಹೇಳಿದೆನು, ಆದರೆ ನೀವು ನಂಬುವುದಿಲ್ಲ. ನನ್ನ ತಂದೆಯ ಹೆಸರಿನಲ್ಲಿ ನಾನು ಮಾಡುವ ಕ್ರಿಯೆಗಳೇ ನನ್ನ ವಿಷಯವಾಗಿ ಸಾಕ್ಷಿಯಾಗಿವೆ. 26ಆದರೂ, ನೀವು ನಂಬದೆ ಇದ್ದೀರಿ, ಏಕೆಂದರೆ ನೀವು ನನ್ನ ಕುರಿಗಳಲ್ಲ. 27ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ನಾನು ಅವುಗಳನ್ನು ಬಲ್ಲೆನು. ಅವು ನನ್ನನ್ನು ಹಿಂಬಾಲಿಸುತ್ತವೆ. 28ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದೆಂದಿಗೂ ನಾಶವಾಗುವುದೇ ಇಲ್ಲ. ಅವುಗಳನ್ನು ಯಾರೂ ನನ್ನ ಕೈಯಿಂದ ಕಸಿದುಕೊಳ್ಳಲಾರರು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 22 ಮೇ ಎಂದರೆ ನಾಗರಿಕ ಪಂಚಾಂಗದ 4 ಜೂನ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು