Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಏಪ್ರಿಲ್ 2027 › 19 ಏಪ್ರಿಲ್

ಆರ್ಥೊಡಾಕ್ಸ್ ಪಂಚಾಂಗ · ಏಪ್ರಿಲ್ 6 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 19 ಏಪ್ರಿಲ್ 2027

ಸೋಮವಾರ · ಮಹಾ ಉಪವಾಸದ ಆರನೆಯ ವಾರ · ಸ್ವರ 5

ಹಬ್ಬಗಳು ಮತ್ತು ಸಂತರು

Holy Hierarch Eutychius, Patriarch of Constantinople († 582)

ಮಹಾ ಉಪವಾಸ ಕಾಲ

ಕಟ್ಟುನಿಟ್ಟಿನ ಉಪವಾಸ (ಒಣ ಆಹಾರ: ರೊಟ್ಟಿ, ತರಕಾರಿ, ಹಣ್ಣು)

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಆರನೆಯ ತಾಸು

ಯೆಶಾ 48:17–49:4

17ನಿನ್ನ ವಿಮೋಚಕನೂ, ಇಸ್ರಾಯೇಲರ ಸದಮಲಸ್ವಾಮಿಯೂ ಆದ ಯೆಹೋವನು ಹೀಗೆನ್ನುತ್ತಾನೆ, “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ, ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಸುವೆನು. 18ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ, ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು. 19ನಿನ್ನ ಸಂತತಿಯವರು ಮರಳಿನೋಪಾದಿಯಲ್ಲಿಯೂ, ನಿನ್ನ ಹೊಟ್ಟೆಯಲ್ಲಿ ಹುಟ್ಟಿದವರು ಉಸುಬಿನ ಅಣುರೇಣುಗಳಂತೆ ಅಸಂಖ್ಯಾತರಾಗುತ್ತಿದ್ದರು. ಅವರ ಹೆಸರು ನನ್ನ ಮುಂದೆ ನಿರ್ಮೂಲವಾಗಿ ಹಾಳಾಗುತ್ತಿರಲಿಲ್ಲ. 20ಬಾಬೆಲಿನಿಂದ ಹೊರಡಿರಿ! ಕಸ್ದೀಯರ ಕಡೆಯಿಂದ ಹಾರಿಹೋಗಿರಿ! ಹರ್ಷಧ್ವನಿಯಿಂದ ಇದನ್ನು ತಿಳಿಸಿರಿ, ಪ್ರಕಟಿಸಿರಿ. ಭೂಮಿಯ ಕಟ್ಟಕಡೆಯವರೆಗೂ ಪ್ರಚಾರಪಡಿಸಿರಿ. ‘ಯೆಹೋವನು ತನ್ನ ಸೇವಕನಾದ ಯಾಕೋಬನ್ನು ವಿಮೋಚಿಸಿದ್ದಾನೆ’” ಎಂದು ಹೇಳಿರಿ. 21ಆತನು ಅವರನ್ನು ಮರುಭೂಮಿಯಲ್ಲಿ ನಡೆಸಿದಾಗ ಅವರು ದಾಹಗೊಳ್ಳಲಿಲ್ಲ; ಅವರಿಗಾಗಿ ನೀರನ್ನು ಕಲ್ಲಿನೊಳಗಿಂದ ಹರಿಸಿದನು; ಆತನು ಬಂಡೆಯನ್ನು ಸೀಳಲು ಜಲಪಾತವಾಯಿತು. 22“ದುಷ್ಟರಿಗೆ ಸಮಾಧಾನವೇ ಇಲ್ಲ” ಎಂದು ಯೆಹೋವನು ನುಡಿಯುತ್ತಾನೆ. 49:1ದ್ವೀಪನಿವಾಸಿಗಳೇ, ನನ್ನ ಕಡೆಗೆ ಕಿವಿಗೊಡಿರಿ, ದೂರದ ಜನಾಂಗಗಳೇ, ಆಲಿಸಿರಿ! ನಾನು ಗರ್ಭದಲ್ಲಿದ್ದಾಗಲೇ ಯೆಹೋವನು ನನ್ನನ್ನು ಕರೆದನು, ತಾಯಿಯ ಉದರದಲ್ಲಿದ್ದಂದಿನಿಂದಲೂ ನನ್ನ ಹೆಸರನ್ನು ಹೇಳುತ್ತಿದ್ದಾನೆ. 2ನನ್ನ ಬಾಯಿಯನ್ನು ಹದವಾದ ಖಡ್ಗವನ್ನಾಗಿ ಮಾಡಿ, ತನ್ನ ಕೈಯ ನೆರಳಿನಲ್ಲಿ ನನ್ನನ್ನು ಹುದುಗಿಸಿದ್ದಾನೆ. ನನ್ನನ್ನು ಚೂಪಾದ ಬಾಣವನ್ನಾಗಿ ರೂಪಿಸಿ, ತನ್ನ ಬತ್ತಳಿಕೆಯಲ್ಲಿ ಮುಚ್ಚಿಟ್ಟಿದ್ದಾನೆ. 3ಆತನು ನನಗೆ, “ನೀನು ನನ್ನ ಸೇವಕನೂ, ನಾನು ಪ್ರಭಾವಹೊಂದಬೇಕಾದ ಇಸ್ರಾಯೇಲೂ ಆಗಿದ್ದೀ” ಎಂದು ಹೇಳಿದನು. 4ಅದಕ್ಕೆ ನಾನು, “ನಾನು ಪಡುವ ಪ್ರಯಾಸವು ವ್ಯರ್ಥ, ನನ್ನ ಶಕ್ತಿಯನ್ನೆಲ್ಲಾ ಉಪಯೋಗಮಾಡಿದ್ದು ಹಾಳೇ, ಬರಿ ಗಾಳಿಯೇ. ಆದರೂ ನನ್ನ ನ್ಯಾಯವು ಯೆಹೋವನಲ್ಲಿದೆ. ನನಗೆ ಲಾಭವು ನನ್ನ ದೇವರಿಂದಲೇ ಆಗುವುದು” ಎಂದು ಅಂದುಕೊಂಡೆನು.

ಸಂಧ್ಯಾ ಪ್ರಾರ್ಥನೆ: ವಾಚನ

ಆದಿ 27:1–41

1ಇಸಾಕನು ಮುಪ್ಪಿನಿಂದ ಕಣ್ಣು ಕಾಣಲಾರದಷ್ಟು ಮೊಬ್ಬಾಗಿರಲು ಅವನು ತನ್ನ ಹಿರೀಮಗನಾದ ಏಸಾವನನ್ನು ಕರೆದು, “ಮಗನೇ” ಎನ್ನಲು ಏಸಾವನು, “ಇಗೋ ಇದ್ದೇನೆ” ಅಂದನು. 2ಇಸಾಕನು ಅವನಿಗೆ, “ನಾನು ಮುದುಕನಾಗಿದ್ದೇನೆ; ಯಾವಾಗ ಸಾಯುವೆನೋ ಗೊತ್ತಿಲ್ಲ. 3ಆದುದರಿಂದ ನೀನು ಬಿಲ್ಲು ಬತ್ತಳಿಕೆ ಮುಂತಾದ ಆಯುಧಗಳನ್ನು ತೆಗೆದುಕೊಂಡು 4ಕಾಡಿಗೆ ಹೋಗಿ ಬೇಟೆಯಾಡಿ ಬೇಟೆ ಮಾಂಸದಿಂದ ನನಗೆ ಇಷ್ಟವಾಗಿರುವ ರುಚಿಪದಾರ್ಥವನ್ನು ನನ್ನ ಊಟಕ್ಕೆ ಸಿದ್ಧಪಡಿಸು, ಸಾವು ಬರುವುದಕ್ಕಿಂತ ಮೊದಲು ನಾನು ಅದನ್ನು ತಿಂದು ನಿನ್ನನ್ನು ಆಶೀರ್ವದಿಸುತ್ತೇನೆ” ಎಂದು ಹೇಳಿದನು. 5ಇಸಾಕನು ತನ್ನ ಮಗನಾದ ಏಸಾವನಿಗೆ ಹೇಳಿದ ಮಾತು ರೆಬೆಕ್ಕಳ ಕಿವಿಗೆ ಬಿತ್ತು. 6ಏಸಾವನು ಬೇಟೆಯಾಡುವುದಕ್ಕೆ ಕಾಡಿಗೆ ಹೋಗಿದ್ದಾಗ ರೆಬೆಕ್ಕಳು ತನ್ನ ಮಗನಾದ ಯಾಕೋಬನಿಗೆ, “ನಿನ್ನ ತಂದೆಯು ನಿನ್ನ ಅಣ್ಣನಾದ ಏಸಾವನಿಗೆ, 7‘ನೀನು ಹೋಗಿ ಬೇಟೆಯಾಡಿ ಬೇಟೆಯ ಮಾಂಸದಿಂದ ನನ್ನ ಊಟಕ್ಕೆ ರುಚಿಪದಾರ್ಥವನ್ನು ಸಿದ್ಧಮಾಡು; ಸಾವು ಬರುವುದಕ್ಕಿಂತ ಮೊದಲು ನಾನು ನಿನ್ನನ್ನು ಯೆಹೋವನ ಸನ್ನಿಧಿಯಲ್ಲಿ ಆಶೀರ್ವದಿಸುತ್ತೇನೆ’ ಎಂದು ಹೇಳುವುದನ್ನು ಕೇಳಿದ್ದೇನೆ. 8ಆದುದರಿಂದ ಮಗನೇ, ನೀನು ನನ್ನ ಮಾತಿಗೆ ಕಿವಿಗೊಟ್ಟು ನನ್ನ ಅಪ್ಪಣೆಯಂತೆ ಮಾಡು. 9ಆಡಿನ ಹಿಂಡಿನೊಳಗೆ ಹೋಗಿ ಎರಡು ಒಳ್ಳೆ ಆಡಿನ ಮರಿಗಳನ್ನು ಬೇಗ ತೆಗೆದುಕೊಂಡು ಬಾ; ಅವುಗಳಿಂದ ನಿನ್ನ ತಂದೆಗೆ ಇಷ್ಟವಾಗಿರುವ ರುಚಿಪದಾರ್ಥವನ್ನು ನಾನೇ ಸಿದ್ಧಮಾಡುತ್ತೇನೆ. 10ನೀನು ಅದನ್ನು ಅವನ ಬಳಿಗೆ ತೆಗೆದುಕೊಂಡು ಹೋಗಿ ಬಡಿಸಬೇಕು; ಹೀಗೆ ಮಾಡಿದರೆ ಅವನು ಸಾಯುವುದಕ್ಕಿಂತ ಮೊದಲು ನಿನ್ನನ್ನೇ ಆಶೀರ್ವದಿಸುವನು” ಎಂದಳು. 11ಅದಕ್ಕೆ ಯಾಕೋಬನು ತನ್ನ ತಾಯಿ ರೆಬೆಕ್ಕಳಿಗೆ, “ನನ್ನ ಅಣ್ಣನಾದ ಏಸಾವನು ಮೈತುಂಬ ಅಧಿಕವಾಗಿ ರೋಮವುಳ್ಳವನಾಗಿದ್ದಾನೆ. ನಾನು ನುಣುಪಾದ ಚರ್ಮವುಳ್ಳವನು. 12ಒಂದು ವೇಳೆ ತಂದೆಯು ನನ್ನನ್ನು ಮುಟ್ಟಿ ನೋಡಿದರೆ ನಾನು ಅವನಿಗೆ ಮೋಸ ಮಾಡುವವನಾಗಿ ಕಂಡು ಬಂದರೆ, ಆಶೀರ್ವಾದಕ್ಕಿಂತ ಶಾಪವನ್ನೇ ಹೊಂದುವೆನು” ಎಂದನು. 13ಅವನ ತಾಯಿಯು ಅವನಿಗೆ, “ಮಗನೇ, ಅವನು ನಿನಗೆ ಶಾಪಕೊಟ್ಟರೆ ಆ ಶಾಪ ನನಗಿರಲಿ; ನೀನು ನನ್ನ ಮಾತನ್ನು ಕೇಳಿ ಆಡಿನ ಮರಿಗಳನ್ನು ತೆಗೆದುಕೊಂಡು ಬಾ” ಎಂದು ಹೇಳಿದಳು. 14ಅವನು ಹೋಗಿ ಅವುಗಳನ್ನು ತಂದು ತಾಯಿಗೆ ಕೊಟ್ಟನು. ರೆಬೆಕ್ಕಳು ಅವನ ತಂದೆಗೆ ಇಷ್ಟವಾಗಿದ್ದ ಸವಿಯೂಟವನ್ನು ಸಿದ್ಧಪಡಿಸಿದಳು. 15ಆಮೇಲೆ ರೆಬೆಕ್ಕಳು ಮನೆಯಲ್ಲಿ ತನ್ನ ವಶದಲ್ಲಿದ್ದ ಹಿರೀಮಗನಾದ ಏಸಾವನ ಶ್ರೇಷ್ಠ ವಸ್ತ್ರಗಳನ್ನು ತೆಗೆದು, ತನ್ನ ಕಿರಿಯ ಮಗನಾದ ಯಾಕೋಬನಿಗೆ ಹೊದಿಸಿದಳು. 16ಆ ಆಡಿನ ಮರಿಗಳ ಚರ್ಮಗಳನ್ನು ಅವನ ಕೈಗಳಿಗೂ, ನುಣುಪಾದ ಕೊರಳಿಗೂ ಸುತ್ತಿದಳು. 17ನಂತರ ತಾನು ಸಿದ್ಧಮಾಡಿದ್ದ ರುಚಿಪದಾರ್ಥವನ್ನೂ ರೊಟ್ಟಿಯನ್ನೂ ತನ್ನ ಮಗನಾದ ಯಾಕೋಬನ ಕೈಯಲ್ಲಿ ಕೊಟ್ಟಳು. 18ಅವನು ತಂದೆಯ ಬಳಿಗೆ ಹೋಗಿ, “ಅಪ್ಪಾ” ಎಂದು ಕರೆಯಲು, ತಂದೆಯು, “ಏನು ಮಗನೇ, ನೀನು ಯಾರು?” ಎಂದು ಕೇಳಿದನು. 19ಯಾಕೋಬನು ಅವನಿಗೆ, “ನಾನು ನಿನ್ನ ಹಿರೀಮಗನಾದ ಏಸಾವನು; ನಿನ್ನ ಅಪ್ಪಣೆಯಂತೆ ಊಟ ಸಿದ್ಧಪಡಿಸಿಕೊಂಡು ತಂದಿದ್ದೇನೆ. ಎದ್ದು, ಕುಳಿತುಕೊಂಡು ನಾನು ತಂದಿರುವ ಬೇಟೆ ಮಾಂಸವನ್ನು ಊಟಮಾಡಿ ನನ್ನನ್ನು ಆಶೀರ್ವದಿಸು” ಎಂದು ಹೇಳಲು, 20ಇಸಾಕನು, “ಏನು ಮಗನೇ, ಇಷ್ಟು ಬೇಗ ಬೇಟೆ ಹೇಗೆ ಸಿಕ್ಕಿತು” ಎಂದು ಕೇಳಿದ್ದಕ್ಕೆ ಅವನು, “ನಿನ್ನ ದೇವರಾದ ಯೆಹೋವನು ಅದನ್ನು ನನ್ನೆದುರಿಗೆ ಬರಮಾಡಿದನು” ಎಂದನು. 21ಇಸಾಕನು ಯಾಕೋಬನಿಗೆ, “ಕಂದಾ, ನನ್ನ ಬಳಿಗೆ ಬಾ; ನೀನು ನನ್ನ ಮಗನಾದ ಏಸಾವನೋ ಅಲ್ಲವೋ ನಿನ್ನನ್ನು ಮುಟ್ಟಿ ತಿಳಿದುಕೊಳ್ಳಬೇಕು” ಎಂದು ಹೇಳಿದನು. 22ಯಾಕೋಬನು ತನ್ನ ತಂದೆಯ ಹತ್ತಿರಕ್ಕೆ ಬಂದಾಗ ಇಸಾಕನು ಅವನನ್ನು ಮುಟ್ಟಿ ನೋಡಿ, “ಸ್ವರವೇನೋ ಯಾಕೋಬನ ಸ್ವರವಾಗಿದೆ, ಕೈಗಳು ಏಸಾವನ ಕೈಗಳು” ಎಂದು ಹೇಳಿದನು. 23ಯಾಕೋಬನ ಕೈಗಳು ಏಸಾವನ ಕೈಗಳಂತೆ ರೋಮವುಳ್ಳವುಗಳಾಗಿದ್ದರಿಂದ ಇಸಾಕನು ಅವನ ಗುರುತನ್ನು ಹಿಡಿಯಲಾರದೆ ಅವನನ್ನು ಆಶೀರ್ವದಿಸಿದನು. 24ಅವನು, “ನೀನು ನಿಜವಾದ ನನ್ನ ಮಗನಾದ ಏಸಾವನೋ” ಎಂದು ಕೇಳಿದ್ದಕ್ಕೆ ಯಾಕೋಬನು, “ಹೌದು” ಎನ್ನಲು, 25ಇಸಾಕನು, “ಆ ಪದಾರ್ಥವನ್ನು ಹತ್ತಿರಕ್ಕೆ ತೆಗೆದುಕೊಂಡು ಬಾ; ನೀನು ತಂದ ಬೇಟೆ ಮಾಂಸವನ್ನು ನಾನು ಊಟಮಾಡಿದ ಮೇಲೆ ನಿನ್ನನ್ನು ಆಶೀರ್ವದಿಸುವೆನು” ಎಂದು ಹೇಳಿದನು. ಯಾಕೋಬನು ಅದನ್ನು ಅವನ ಹತ್ತಿರಕ್ಕೆ ತೆಗೆದುಕೊಂಡು ಬರಲು ಅವನು ತಿಂದನು; ದ್ರಾಕ್ಷಾರಸವನ್ನು ಕುಡಿದನು. 26ಆಮೇಲೆ ಅವನ ತಂದೆಯಾದ ಇಸಾಕನು ಅವನಿಗೆ, “ಮಗನೇ, ನೀನು ಹತ್ತಿರ ಬಂದು ನನಗೆ ಮುದ್ದಿಡು” ಎಂದು ಹೇಳಲು ಅವನು ಹತ್ತಿರ ಬಂದು ತಂದೆಗೆ ಮುದ್ದಿಟ್ಟನು. 27ಇಸಾಕನು ಅವನ ವಸ್ತ್ರಗಳ ವಾಸನೆಯನ್ನು ಮೂಸಿ ನೋಡಿ ಅವನನ್ನು ಆಶೀರ್ವದಿಸಿ, “ಆಹಾ, ನನ್ನ ಮಗನ ಸುವಾಸನೆಯು, ಯೆಹೋವನು ಆಶೀರ್ವದಿಸಿದ ಹೊಲದ ಸುವಾಸನೆಯಂತಿರುವುದು. 28ದೇವರು ನಿನಗೆ ಆಕಾಶದ ಮಂಜನ್ನೂ, ಸಾರವುಳ್ಳ ಭೂಮಿಯನ್ನೂ ಕೊಟ್ಟು ದವಸಧಾನ್ಯಗಳನ್ನೂ, ದ್ರಾಕ್ಷಾರಸವನ್ನೂ ಹೇರಳವಾಗಿ ಅನುಗ್ರಹಿಸಲಿ. 29ಜನಗಳು ನಿನ್ನನ್ನು ಆರಾಧಿಸಲಿ, ಜನಾಂಗಗಳು ನಿನಗೆ ಅಧೀನವಾಗಲಿ. ನಿನ್ನ ಅಣ್ಣತಮ್ಮಂದಿರಿಗೆ ನೀನು ದೊರೆಯಾಗಿರು, ನಿನ್ನ ತಾಯಿಯ ಮಕ್ಕಳು ನಿನಗೆ ಅಡ್ಡಬೀಳಲಿ. ನಿನ್ನನ್ನು ಶಪಿಸುವವರಿಗೆ ಶಾಪವೂ, ನಿನ್ನನ್ನು ಆಶೀರ್ವದಿಸುವವರಿಗೆ ಆಶೀರ್ವಾದವೂ ಉಂಟಾಗಲಿ” ಎಂದನು. 30ಇಸಾಕನು ಅವನನ್ನು ಆಶೀರ್ವದಿಸಿದ ಮೇಲೆ ಯಾಕೋಬನು ತನ್ನ ತಂದೆಯ ಬಳಿಯಿಂದ ಹೊರಟುಹೋದ ಕ್ಷಣವೇ ಅವನ ಅಣ್ಣನಾದ ಏಸಾವನು ಬೇಟೆಯಿಂದ ಬಂದನು. 31ಅವನೂ ಸವಿಯೂಟವನ್ನು ಸಿದ್ಧಮಾಡಿ ತನ್ನ ತಂದೆಯ ಬಳಿಗೆ ತಂದು ಅವನಿಗೆ, “ಅಪ್ಪಾ, ನೀನು ಎದ್ದು ನಿನ್ನ ಮಗನಾದ ನಾನು ಬೇಟೆಯಿಂದ ತಂದಿರುವ ಮಾಂಸವನ್ನು ಊಟಮಾಡಿ ನನ್ನನ್ನು ಆಶೀರ್ವದಿಸು” ಎಂದು ಹೇಳಿದನು. 32ಅವನ ತಂದೆಯಾದ ಇಸಾಕನು, “ನೀನು ಯಾರು?” ಎಂದು ಅವನನ್ನು ಕೇಳಲು ಅವನು, “ನಾನು ನಿನ್ನ ಚೊಚ್ಚಲ ಮಗನಾದ ಏಸಾವನು” ಎಂದನು. 33ಅದಕ್ಕೆ ಇಸಾಕನು ಬಹಳವಾಗಿ ಗಡಗಡನೆ ನಡುಗುತ್ತಾ, “ಯಾರೋ ಬೇರೊಬ್ಬನು ಬೇಟೆ ಮಾಂಸವನ್ನು ತಂದು ನನಗೆ ಕೊಟ್ಟುಹೋದನಲ್ಲಾ. ನೀನು ಬರುವುದಕ್ಕಿಂತ ಮೊದಲೇ ಅವನು ತಂದಿದ್ದರಲ್ಲಿ ನಾನು ಊಟಮಾಡಿ ಅವನನ್ನೇ ಆಶೀರ್ವದಿಸಿದೆನು; ಅವನಿಗೆ ಮಾಡಿದ ಆಶೀರ್ವಾದ ತಪ್ಪಲಾರದು” ಎಂದನು. 34ಏಸಾವನು ತನ್ನ ತಂದೆಯ ಮಾತುಗಳನ್ನು ಕೇಳಿ ದುಃಖಾಕ್ರಾಂತನಾಗಿ ಬಹಳವಾಗಿ ಅಳುತ್ತಾ, “ಅಪ್ಪಾ, ತಂದೆಯೇ, ನನ್ನನ್ನು ಸಹ ಆಶೀರ್ವದಿಸು” ಎಂದು ಬೇಡಿಕೊಳ್ಳಲು ಇಸಾಕನು, 35“ನಿನ್ನ ತಮ್ಮನು ಮೋಸದಿಂದ ಬಂದು ನಿನಗಾಗಬೇಕಾಗಿದ್ದ ಆಶೀರ್ವಾದವನ್ನು ಪಡೆದುಕೊಂಡನು” ಎಂದನು. 36ಅದಕ್ಕೆ ಏಸಾವನು, “ಯಾಕೋಬನೆಂಬ ಹೆಸರು ಅವನಿಗೆ ಉಂಟಾದದ್ದು ನ್ಯಾಯವಲ್ಲವೋ? ಎರಡು ಸಾರಿ ನನ್ನನ್ನು ವಂಚಿಸಿದ್ದಾನೆ, ಹಿಂದೆ ನನ್ನ ಚೊಚ್ಚಲತನದ ಹಕ್ಕನ್ನು ಅಪಹರಿಸಿದನು; ಈಗ ಬಂದು ನನಗಾಗ ಬೇಕಾಗಿದ್ದ ಆಶೀರ್ವಾದವನ್ನೂ ತೆಗೆದುಕೊಂಡಿದ್ದಾನೆ” ಎಂದು ಹೇಳಿ ತನ್ನ ತಂದೆಯನ್ನು, “ನನಗೋಸ್ಕರವೂ ನಿನ್ನ ಬಳಿ ಆಶೀರ್ವಾದವಿಲ್ಲವೋ” ಎಂದು ಕೇಳಲು, 37ಇಸಾಕನು ಏಸಾವನಿಗೆ, “ನನ್ನ ಮಗನೇ, ಅವನನ್ನು ನಿನ್ನ ದೊರೆಯನ್ನಾಗಿ ನೇಮಿಸಿದ್ದೇನೆ; ಅವನ ಅಣ್ಣತಮ್ಮಂದಿರನ್ನು ಅವನಿಗೆ ಸೇವಕನನ್ನಾಗಿ ಕೊಟ್ಟಿದ್ದೇನೆ; ದವಸಧಾನ್ಯಗಳನ್ನೂ ದ್ರಾಕ್ಷಾರಸವನ್ನೂ ಅವನ ಪೋಷಣೆಗಾಗಿ ಕೊಟ್ಟಿದ್ದೇನೆ ನೋಡು. ಹೀಗಿರುವಲ್ಲಿ ನಾನು ನಿನಗೋಸ್ಕರ ಏನು ಮಾಡಲಿ” ಎಂದನು. 38ಏಸಾವನು ಅವನಿಗೆ, “ಅಪ್ಪಾ, ತಂದೆಯೇ, ನಿನ್ನಲ್ಲಿ ಒಂದೇ ಒಂದು ಆಶೀರ್ವಾದ ಮಾತ್ರ ಇರುವುದೋ? ಅಪ್ಪಾ, ನನ್ನನ್ನೂ ಆಶೀರ್ವದಿಸಬೇಕು” ಎಂದು ಹೇಳಿ ಗೋಳಾಡುತ್ತಾ ಅಳಲು, 39ಅವನ ತಂದೆಯಾದ ಇಸಾಕನು ಅವನಿಗೆ, “ಸಾರವುಳ್ಳ ಭೂಮಿಯೂ ಮೇಲಿನಿಂದ ಬೀಳುವ ಆಕಾಶದ ಮಂಜು ಇರುವ ಸ್ಥಳದಲ್ಲಿ ನಿನ್ನ ನಿವಾಸವಿರುವುದು. 40ನೀನು ಕತ್ತಿಯಿಂದಲೇ ಜೀವನ ಮಾಡುವಿ. ನಿನ್ನ ತಮ್ಮನಿಗೆ ಸೇವಕನಾಗಿರುವಿ. ಆದರೂ ನೀನು ತಾಳ್ಮೆ ಮೀರುವಾಗ, ಅವನು ನಿನ್ನ ಹೆಗಲಿನ ಮೇಲೆ ಹೊರಿಸಿರುವ ನೊಗವನ್ನು ಮುರಿದು ಹಾಕುವಿ” ಎಂದು ಹೇಳಿದನು. 41ತಂದೆಯು ಯಾಕೋಬನಿಗೆ ಮಾಡಿದ ಆಶೀರ್ವಾದದ ನಿಮಿತ್ತ ಏಸಾವನು ಯಾಕೋಬನನ್ನು ಹಗೆಮಾಡಿ ತನ್ನ ಮನಸ್ಸಿನೊಳಗೆ, “ತಂದೆಗೋಸ್ಕರ ದುಃಖಿಸುವ ಕಾಲ ಸಮೀಪಿಸಿತು. ತರುವಾಯ ನನ್ನ ತಮ್ಮನಾದ ಯಾಕೋಬನನ್ನು ಕೊಲ್ಲುವೆನು” ಎಂದುಕೊಂಡನು.

ಸಂಧ್ಯಾ ಪ್ರಾರ್ಥನೆ: ವಾಚನ

ಜ್ಞಾನೋ 19:16–25

16ಆಜ್ಞೆಯನ್ನು ಪಾಲಿಸುವವನು ಆತ್ಮವನ್ನು ಪಾಲಿಸುವನು, ನಡತೆಯನ್ನು ಲಕ್ಷಿಸದವನು ಸಾಯುವನು. 17ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು, ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರ ಮಾಡುವನು. 18ಬುದ್ಧಿ ಬರುವುದೆಂಬ ನಿರೀಕ್ಷೆಯಿಂದ ಮಗನನ್ನು ಶಿಕ್ಷಿಸು, ಹಾಳುಮಾಡಲು ಮನಸ್ಸು ಮಾಡಬೇಡ, 19ಕೋಪಿಷ್ಠನು ತನಗಾಗುವ ದಂಡನೆಯನ್ನು ಅನುಭವಿಸಲಿ, ಬಿಡಿಸಿದರೆ ಪ್ರತಿಬಾರಿಯೂ ಬಿಡಿಸಬೇಕಾಗುವುದು. 20ಬುದ್ಧಿವಾದವನ್ನು ಕೇಳು, ಉಪದೇಶವನ್ನಾಲಿಸು, ಮುಂದೆ ಜ್ಞಾನಿಯಾಗುವಿ. 21ಮನುಷ್ಯನ ಮನಸ್ಸಿನಲ್ಲಿ ಅನೇಕ ಸಂಕಲ್ಪಗಳಿವೆ, ಯೆಹೋವನ ಸಂಕಲ್ಪವೇ ಈಡೇರುವುದು. 22ಮನುಷ್ಯನು ತನ್ನ ಹೃದಯದಲ್ಲಿ ಬಯಸುವಂಥದ್ದು ನಿಷ್ಠೆಯಾಗಿದೆ, ಬಡವನಾಗಿರುವುದು ಉತ್ತಮ. 23ಯೆಹೋವನ ಭಯವು ಜೀವದಾಯಕವು, ಭಯಭಕ್ತಿಯುಳ್ಳವನು ತೃಪ್ತನಾಗಿ ನೆಲೆಗೊಳ್ಳುವನು, ಅವನಿಗೆ ಕೇಡು ಸಂಭವಿಸದು. 24ಮೈಗಳ್ಳನು ಪಾತ್ರೆಯೊಳಗೆ ಕೈ ಮುಳುಗಿಸಿದ ಮೇಲೆ, ತಿರುಗಿ ಬಾಯಿಯ ಹತ್ತಿರಕ್ಕೆ ತರಲಾರನು. 25ಧರ್ಮನಿಂದಕನಿಗೆ ಪೆಟ್ಟುಹೊಡೆ, ನೋಡಿದ ಅವಿವೇಕಿ ಜಾಣನಾಗುವನು, ವಿವೇಕಿಯನ್ನು ಗದರಿಸು, ತಾನೇ ತಿಳಿವಳಿಕೆಯನ್ನು ಗ್ರಹಿಸುವನು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 6 ಏಪ್ರಿಲ್ ಎಂದರೆ ನಾಗರಿಕ ಪಂಚಾಂಗದ 19 ಏಪ್ರಿಲ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು