ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಏಪ್ರಿಲ್ 2027 › 10 ಏಪ್ರಿಲ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 10 ಏಪ್ರಿಲ್ 2027
ಶನಿವಾರ · ಪಾಸ್ಕ ಕಾಲದ ಎರಡನೆಯ ವಾರ
ಹಬ್ಬಗಳು ಮತ್ತು ಸಂತರು
ಪಾಸ್ಕ ಕಾಲದ ಎರಡನೆಯ ವಾರದ ಶನಿವಾರ
ವಾರದ ದಿನ · ಆರಾಧನಾ ಬಣ್ಣ: ಬಿಳಿ
ದಿನದ ವಾಚನಗಳು
ಮೊದಲನೆಯ ವಾಚನ
1ಆ ದಿನಗಳಲ್ಲಿ ಶಿಷ್ಯರು ಹೆಚ್ಚುತ್ತಾ ಬರಲಾಗಿ ಅವರೊಳಗೆ ಗ್ರೀಕ್ ಭಾಷೆಯವರು ಇಬ್ರಿಯ ಭಾಷೆಯವರ ಮೇಲೆ ದೂರು ನೀಡುತ್ತಾ ಅನುದಿನದ ಉಪಚಾರದಲ್ಲಿ ನಮ್ಮ ವಿಧವೆಯರನ್ನು ಸರಿಯಾಗಿ ಪರಾಂಬರಿಸುವುದಿಲ್ಲವೆಂದು ಗೊಣಗುಟ್ಟಿದರು. 2ಆಗ ಹನ್ನೆರಡು ಮಂದಿ ಅಪೊಸ್ತಲರು ಶಿಷ್ಯರನ್ನು ಒಟ್ಟುಗೂಡಿಸಿ, “ನಾವು ದೇವರ ವಾಕ್ಯೋಪದೇಶವನ್ನು ಬಿಟ್ಟು ಉಪಚಾರಮಾಡುವುದು ಸರಿಯಲ್ಲವಲ್ಲಾ. 3ಆದುದರಿಂದ ಸಹೋದರರೇ, ಪವಿತ್ರಾತ್ಮಭರಿತರೂ, ಜ್ಞಾನಸಂಪನ್ನರೂ ಮತ್ತು ಒಳ್ಳೆಯ ಸಾಕ್ಷಿಯನ್ನುಳಿಸಿಕೊಂಡಿರುವ ಏಳು ಮಂದಿಯನ್ನು ನಿಮ್ಮೊಳಗಿಂದ ನೋಡಿ ಆರಿಸಿಕೊಳ್ಳಿರಿ. ಅವರನ್ನು ಈ ಕೆಲಸಕ್ಕಾಗಿ ನೇಮಿಸುವೆವು. 4ನಾವಾದರೋ ಪ್ರಾರ್ಥನೆಯನ್ನೂ, ವಾಕ್ಯೋಪದೇಶವನ್ನೂ ಮಾಡುವುದರಲ್ಲಿ ನಿರತರಾಗಿರುವೆವು” ಎಂದು ಹೇಳಿದರು. 5ಈ ಮಾತು ಸರ್ವರಿಗೂ ಒಳ್ಳೆಯದೆಂದು ತೋಚಿತು. ಅವರು ಪವಿತ್ರಾತ್ಮಭರಿತರೂ, ನಂಬಿಕೆಯಿಂದ ತುಂಬಿದವರೂ ಆದ ಸ್ತೆಫನ, ಫಿಲಿಪ್ಪ, ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ, ಯೆಹೂದ್ಯ ಮತಾವಲಂಬಿಯಾದ ಅಂತಿಯೋಕ್ಯದ ನಿಕೊಲಾಯ ಎಂಬುವವರನ್ನೂ ಆರಿಸಿಕೊಂಡು ಅಪೊಸ್ತಲರ ಮುಂದೆ ನಿಲ್ಲಿಸಿದರು. 6ಅಪೊಸ್ತಲರು ಅವರ ಮೇಲೆ ಕೈಗಳನ್ನಿಟ್ಟು ಪ್ರಾರ್ಥನೆಮಾಡಿ ಆ ಕಾರ್ಯಕ್ಕಾಗಿ ಅವರನ್ನು ನೇಮಿಸಿದರು. 7ದೇವರ ವಾಕ್ಯವು ಪ್ರಬಲವಾಯಿತು; ಶಿಷ್ಯರ ಸಂಖ್ಯೆಯು ಯೆರೂಸಲೇಮಿನಲ್ಲಿ ಬಹಳವಾಗಿ ಹೆಚ್ಚುತ್ತಾ ಬಂದಿತು. ಯಾಜಕರಲ್ಲಿಯೂ ಬಹುಜನರು ಕ್ರಿಸ್ತ ನಂಬಿಕೆಗೆ ಒಳಗಾಗುತ್ತಾ ಬಂದರು.
ಪ್ರತಿವಚನ ಕೀರ್ತನೆ
1ನೀತಿವಂತರೇ, ಯೆಹೋವನ ವಿಷಯದಲ್ಲಿ ಉಲ್ಲಾಸಪಡಿರಿ; ಯಥಾರ್ಥಚಿತ್ತರು ಆತನನ್ನು ಸ್ತುತಿಸುವುದು ಯುಕ್ತವಾಗಿದೆ. 2ಕಿನ್ನರಿಯನ್ನು ನುಡಿಸುತ್ತಾ ಯೆಹೋವನನ್ನು ಕೊಂಡಾಡಿರಿ; ಹತ್ತುತಂತಿಗಳ ಸ್ವರಮಂಡಲವನ್ನು ನುಡಿಸುತ್ತಾ ಸಂಕೀರ್ತಿಸಿರಿ. 4ಯೆಹೋವನ ವಚನವು ಯಥಾರ್ಥವಾದದ್ದು; ಆತನ ಕೃತ್ಯವೆಲ್ಲಾ ನಂಬಿಕೆಯುಳ್ಳದ್ದಾಗಿವೆ. 5ಆತನು ನೀತಿ ಮತ್ತು ನ್ಯಾಯಗಳನ್ನು ಪ್ರೀತಿಸುವವನು; ಭೂಲೋಕವೆಲ್ಲಾ ಯೆಹೋವನ ಕೃಪೆಯಿಂದ ತುಂಬಿದೆ. 18ಯೆಹೋವನಾದರೋ ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕಟಾಕ್ಷಿಸುತ್ತಾನೆ; ತನ್ನ ಕೃಪೆಯನ್ನು ನಿರೀಕ್ಷಿಸುವವರನ್ನು ಲಕ್ಷಿಸುತ್ತಾನೆ. 19ಅವರ ಪ್ರಾಣವನ್ನು ಮರಣದಿಂದ ತಪ್ಪಿಸುವನು; ಬರಗಾಲದಲ್ಲಿ ಅವರ ಜೀವವನ್ನು ಉಳಿಸುವನು.
ಸುವಾರ್ತೆ
16ಸಂಜೆಯಾದಾಗ ಆತನ ಶಿಷ್ಯರು ಸಮುದ್ರದ ದಡಕ್ಕೆ ಬಂದು, 17ದೋಣಿಯನ್ನು ಹತ್ತಿ, ಸಮುದ್ರ ಮಾರ್ಗವಾಗಿ ಕಪೆರ್ನೌಮಿನ ಕಡೆಗೆ ಹೊರಟರು. ಆಗಲೇ ಕತ್ತಲಾಗಿತ್ತು ಆದರೆ ಯೇಸು ಅವರ ಬಳಿಗೆ ಇನ್ನೂ ಬಂದಿರಲಿಲ್ಲ. 18ಬಿರುಗಾಳಿ ಬೀಸುತ್ತಿದ್ದುದರಿಂದ ಸಮುದ್ರವು ಅಲ್ಲೋಲಕಲ್ಲೋಲವಾಯಿತು. 19ಹೀಗಿರಲಾಗಿ ಅವರು ಹುಟ್ಟು ಹಾಕುತ್ತಾ ಸುಮಾರು ಒಂದು ಹರದಾರಿ ದೂರ ಹೋದ ಬಳಿಕ ಯೇಸು ನೀರಿನ ಮೇಲೆ ನಡೆಯುತ್ತಾ ದೋಣಿಯ ಸಮೀಪಕ್ಕೆ ಬರುವುದನ್ನು ನೋಡಿ ಭಯಪಟ್ಟರು. 20ಆದರೆ ಯೇಸು ಅವರಿಗೆ, “ಭಯಪಡಬೇಡಿರಿ, ನಾನೇ!” ಎಂದನು. 21ಆಗ ಆತನನ್ನು ದೋಣಿಯಲ್ಲಿ ಸೇರಿಸಿಕೊಳ್ಳಬೇಕೆಂದಿದ್ದರು. ಆ ಕ್ಷಣವೇ ದೋಣಿಯು ಅವರು ಹೋಗಬೇಕಾಗಿದ್ದ ದಡಕ್ಕೆ ಮುಟ್ಟಿತು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು