ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಏಪ್ರಿಲ್ 2027 › 9 ಏಪ್ರಿಲ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 9 ಏಪ್ರಿಲ್ 2027
ಶುಕ್ರವಾರ · ಪಾಸ್ಕ ಕಾಲದ ಎರಡನೆಯ ವಾರ
ಹಬ್ಬಗಳು ಮತ್ತು ಸಂತರು
ಪಾಸ್ಕ ಕಾಲದ ಎರಡನೆಯ ವಾರದ ಶುಕ್ರವಾರ
ವಾರದ ದಿನ · ಆರಾಧನಾ ಬಣ್ಣ: ಬಿಳಿ
ಉಪವಾಸ ಮತ್ತು ಪ್ರಾಯಶ್ಚಿತ್ತ
ಪ್ರಾಯಶ್ಚಿತ್ತದ ದಿನ
ಪ್ರತಿ ಶುಕ್ರವಾರವೂ ಪ್ರಾಯಶ್ಚಿತ್ತದ ದಿನ; ಅದನ್ನು ಹೇಗೆ ಆಚರಿಸಬೇಕು ಎಂಬುದನ್ನು ಪ್ರತಿಯೊಂದು ಬಿಷಪರ ಸಮ್ಮೇಳನ ನಿರ್ಧರಿಸುತ್ತದೆ: ಮಾಂಸ ವರ್ಜನೆ ಅಥವಾ ಬೇರೊಂದು ಪ್ರಾಯಶ್ಚಿತ್ತ ಕಾರ್ಯ. ಉಪವಾಸ 18 ರಿಂದ 59 ವರ್ಷದವರಿಗೆ, ಮಾಂಸ ವರ್ಜನೆ 14 ವರ್ಷದಿಂದ ಕಡ್ಡಾಯ.
ದಿನದ ವಾಚನಗಳು
ಮೊದಲನೆಯ ವಾಚನ
34ಆದರೆ ಎಲ್ಲಾ ಜನರಿಂದ ಗೌರವಿಸಲ್ಪಟ್ಟ ಧರ್ಮಶಾಸ್ತ್ರಿಯಾದ ಗಮಲಿಯೇಲನೆಂಬ ಒಬ್ಬ ಫರಿಸಾಯನು ಹಿರೀಸಭೆಯಲ್ಲಿ ಎದ್ದುನಿಂತು ಈ ಮನುಷ್ಯರನ್ನು ಸ್ವಲ್ಪ ಹೊತ್ತು ಹೊರಗೆ ಕಳುಹಿಸಬೇಕೆಂದು ಅಪ್ಪಣೆಕೊಟ್ಟನು. 35ಅನಂತರ ಸಭೆಯವರಿಗೆ, “ಇಸ್ರಾಯೇಲ್ ಜನರೇ, ನೀವು ಈ ಮನುಷ್ಯರ ವಿಷಯದಲ್ಲಿ ತೆಗೆದುಕೊಳ್ಳುವ ನಿರ್ಧಾರದ ಕುರಿತು ಎಚ್ಚರಿಕೆಯುಳ್ಳವರಾಗಿರಿ. 36ಇದಕ್ಕಿಂತ ಮೊದಲು ಥೈದನು ಎಂಬ ಒಬ್ಬನು ಎದ್ದು ತಾನೊಬ್ಬ ಮಹಾಪುರುಷನೆಂದು ಹೇಳಿಕೊಂಡನು. ಅವನ ಪಕ್ಷಕ್ಕೆ ಸುಮಾರು ನಾನೂರು ಜನರು ಸೇರಿಕೊಂಡರು, ಅವನು ಕೊಲ್ಲಲ್ಪಟ್ಟನು, ಮತ್ತು ಅವನನ್ನು ನಂಬಿದವರೆಲ್ಲರು ಚದರಿಸಲ್ಪಟ್ಟು ಇಲ್ಲವಾದರು. 37ಅವನ ತರುವಾಯ ಜನಗಣತಿ ಕಾಲದಲ್ಲಿ ಗಲಿಲಾಯದ ಯೂದನು ತಿರುಗಿಬೀಳುವುದಕ್ಕೆ ಎದ್ದು, ಜನರನ್ನು ತನ್ನ ಪಕ್ಷ ಸೇರುವುದಕ್ಕೆ ಅನೇಕರನ್ನು ಪ್ರೇರೇಪಿಸಿದನು. ಅವನೂ ನಾಶವಾದನು, ಮತ್ತು ಅವನನ್ನು ನಂಬಿದವರೆಲ್ಲರು ಚದರಿಹೋದರು. 38ಹೀಗಿರುವುದರಿಂದ ನಾನು ನಿಮಗೆ ಹೇಳುವುದೇನಂದರೆ ನೀವು ಆ ಮನುಷ್ಯರ ಗೊಡವೆಗೆ ಹೋಗಬೇಡಿರಿ, ಅವರನ್ನು ಬಿಡಿರಿ. ಏಕೆಂದರೆ ಈ ಯೋಚನೆಯು ಅಥವಾ ಈ ಕೆಲಸವು ಮನುಷ್ಯರಿಂದಾಗಿದ್ದರೆ ತಾನೇ ಕೆಡುವುದು; 39ಅದು ದೇವರಿಂದಾಗಿದ್ದರೆ ಅದನ್ನು ಕೆಡಿಸುವುದಕ್ಕೆ ನಿಮ್ಮಿಂದ ಸಾಧ್ಯವಾಗುವುದಿಲ್ಲ; ನೀವು ಒಂದು ವೇಳೆ ದೇವರ ವಿರುದ್ಧ ಯುದ್ಧಮಾಡುವವರಾಗಿ ಕಾಣಿಸಿಕೊಂಡೀರಿ” ಎಂದು ಹೇಳಿದನು. 40ಅವರು ಅವನ ಮಾತಿಗೆ ಒಪ್ಪಿ ಅಪೊಸ್ತಲರನ್ನು ಕರೆಯಿಸಿ, ಹೊಡಿಸಿ ಯೇಸುವಿನ ಹೆಸರನ್ನು ಹೇಳಿ ಮಾತನಾಡಲೇಬಾರದೆಂದು ಅಪ್ಪಣೆಕೊಟ್ಟು ಅವರನ್ನು ಬಿಟ್ಟುಬಿಟ್ಟರು. 41ಅಪೊಸ್ತಲರು ತಾವು ಯೇಸುವಿನ ಹೆಸರಿನ ನಿಮಿತ್ತವಾಗಿ ಅವಮಾನಪಡುವುದಕ್ಕೆ ಯೋಗ್ಯರೆನಿಸಿಕೊಂಡೆವೆಂದು ಸಂತೋಷಪಟ್ಟರು. 42ಹಿರೀಸಭೆಯ ಎದುರಿನಿಂದ ಹೊರಟುಹೋಗಿ, ಪ್ರತಿದಿನ ಎಡೆಬಿಡದೆ ದೇವಾಲಯದಲ್ಲಿಯೂ, ಮನೆಮನೆಗಳಲ್ಲಿಯೂ, ಉಪದೇಶಮಾಡುತ್ತಾ ಕ್ರಿಸ್ತನಾದ ಯೇಸುವಿನ ಕುರಿತು ಶುಭವರ್ತಮಾನವನ್ನು ಸಾರುತ್ತಾ ಇದ್ದರು.
ಪ್ರತಿವಚನ ಕೀರ್ತನೆ
1ದಾವೀದನ ಕೀರ್ತನೆ. ಯೆಹೋವನು ನನಗೆ ಬೆಳಕೂ, ರಕ್ಷಕನೂ ಆಗಿದ್ದಾನೆ; ನಾನು ಯಾರಿಗೆ ಭಯಪಟ್ಟೆನು? ಯೆಹೋವನು ನನ್ನ ಪ್ರಾಣದ ಆಧಾರವು; ನಾನು ಯಾರಿಗೆ ಹೆದರೇನು? 4ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ, ಆತನ ಪ್ರಸನ್ನತೆಯನ್ನು ನೋಡುವುದಕ್ಕೂ, ಆತನ ಮಂದಿರದಲ್ಲಿ ಧ್ಯಾನ ಮಾಡುವುದಕ್ಕೂ ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಯೆಹೋವನಿಂದ ಕೇಳಿಕೊಂಡು ಅದನ್ನೇ ಎದುರು ನೋಡುತ್ತಿರುವೆನು. 13ಜೀವಲೋಕದಲ್ಲಿಯೇ ಯೆಹೋವನ ದಯೆಯನ್ನು ಅನುಭವಿಸುವೆನು ಎಂದು ದೃಢವಾಗಿ ನಂಬಿದ್ದೇನೆ. 14ಯೆಹೋವನನ್ನು ನಿರೀಕ್ಷಿಸಿಕೊಂಡಿರು, ದೃಢವಾಗಿರು; ನಿನ್ನ ಹೃದಯವು ಧೈರ್ಯದಿಂದಿರಲಿ; ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು.
ಸುವಾರ್ತೆ
1ತರುವಾಯ ಯೇಸು ಗಲಿಲಾಯದ ಸಮುದ್ರವನ್ನು ದಾಟಿ, ಆಚೆ ದಡಕ್ಕೆ ಹೋದನು. ಅದಕ್ಕೆ ತಿಬೇರಿಯ ಸಮುದ್ರವೆಂತಲೂ ಹೇಳುತ್ತಾರೆ. 2ಬಹು ಜನರು ಆತನು ರೋಗಿಗಳಲ್ಲಿ ಮಾಡಿದ ಸೂಚಕಕಾರ್ಯಗಳನ್ನು ನೋಡಿದ್ದರಿಂದ, ಜನರ ದೊಡ್ಡಗುಂಪು ಆತನನ್ನು ಹಿಂಬಾಲಿಸುತ್ತಿತ್ತು. 3ಆದರೆ ಯೇಸು ಬೆಟ್ಟವನ್ನೇರಿ ಅಲ್ಲಿ ತನ್ನ ಶಿಷ್ಯರೊಂದಿಗೆ ಕುಳಿತುಕೊಂಡನು. 4ಆಗ ಯೆಹೂದ್ಯರ ಪಸ್ಕದ ಹಬ್ಬವು ಹತ್ತಿರವಾಗಿತ್ತು. 5ಹೀಗಿರಲಾಗಿ ಯೇಸು ಕಣ್ಣೆತ್ತಿ ನೋಡಿದಾಗ ಜನರ ದೊಡ್ಡಗುಂಪು ತನ್ನ ಕಡೆಗೆ ಬರುವುದನ್ನು ನೋಡಿ “ಇವರ ಊಟಕ್ಕೆ ನಾವು ಎಲ್ಲಿಂದ ರೊಟ್ಟಿ ಕೊಂಡು ತರೋಣ?” ಎಂದು ಫಿಲಿಪ್ಪನನ್ನು ಕೇಳಿದನು. 6ತಾನು ಮಾಡಲಿದ್ದಕಾರ್ಯ ಯೇಸುವಿಗೆ ತಿಳಿದಿದ್ದರೂ, ಫಿಲಿಪ್ಪನನ್ನು ಪರೀಕ್ಷಿಸುವ ಸಲುವಾಗಿ, ಆ ಪ್ರಶ್ನೆಯನ್ನು ಕೇಳಿದನು. 7ಅದಕ್ಕೆ ಫಿಲಿಪ್ಪನು, “ಪ್ರತಿಯೊಬ್ಬನಿಗೆ ಸ್ವಲ್ಪ ಸ್ವಲ್ಪ ಸಿಕ್ಕಬೇಕಾದರೂ ಇನ್ನೂರು ದಿನಾರಿ ಮೌಲ್ಯದ ರೊಟ್ಟಿಯಾದರೂ ಅವರಿಗೆ ಸಾಲುವುದಿಲ್ಲ” ಎಂದನು. 8ಆಗ ಆತನ ಶಿಷ್ಯರಲ್ಲಿ ಒಬ್ಬನಾಗಿರುವ ಸೀಮೋನ್ ಪೇತ್ರನ ತಮ್ಮನಾದ ಅಂದ್ರೆಯನು ಆತನಿಗೆ; 9“ಇಲ್ಲಿ ಒಬ್ಬ ಹುಡುಗನ ಬಳಿಯಲ್ಲಿ ಐದು ಜವೆಗೋದಿಯ ರೊಟ್ಟಿಗಳೂ, ಎರಡು ಮೀನುಗಳೂ ಇವೆ. ಆದರೆ ಇಷ್ಟೊಂದು ಜನರಿಗೆ ಅವು ಯಾತಕ್ಕಾದಾವು?” ಎಂದು ಹೇಳಲು, 10ಯೇಸು “ಆ ಜನರನ್ನು ಊಟಕ್ಕೆ ಕುಳ್ಳಿರಿಸಿರಿ” ಎಂದನು. ಆ ಸ್ಥಳದಲ್ಲಿ ಬಹಳ ಹುಲ್ಲು ಬೆಳೆದಿತ್ತು. ಜನರು ಹುಲ್ಲಿನ ಮೇಲೆ ಕುಳಿತುಕೊಂಡರು. ಗಂಡಸರ ಸಂಖ್ಯೆ ಹೆಚ್ಚುಕಡಿಮೆ ಐದು ಸಾವಿರವಿತ್ತು. 11ಆಮೇಲೆ ಯೇಸು ಆ ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿ, ಕುಳಿತಿದ್ದವರಿಗೆ ಹಂಚಿದನು. ಅದೇ ರೀತಿ ಮೀನುಗಳನ್ನು ಅವರಿಗೆ ಬೇಕಾದಷ್ಟು ಹಂಚಿದನು. 12ಅವರಿಗೆ ತೃಪ್ತಿಯಾದ ಮೇಲೆ ಯೇಸು ತನ್ನ ಶಿಷ್ಯರಿಗೆ, “ಮಿಕ್ಕ ತುಂಡುಗಳನ್ನು ಕೂಡಿಸಿರಿ, ಇದರಲ್ಲಿ ಯಾವುದೂ ವ್ಯರ್ಥವಾಗಬಾರದು” ಎಂದು ಹೇಳಿದನು. 13ಅವರು ಆ ಐದು ಜವೆಗೋದಿಯ ರೊಟ್ಟಿಗಳಲ್ಲಿ ಜನರು ತಿಂದು ಮಿಕ್ಕ ತುಂಡುಗಳನ್ನು ಕೂಡಿಸಿ, ಹನ್ನೆರಡು ಪುಟ್ಟಿಗಳಿಗೆ ತುಂಬಿಸಿದರು. 14ಆತನು ಮಾಡಿದ ಈ ಸೂಚಕಕಾರ್ಯವನ್ನು ಆ ಜನರು ನೋಡಿ, “ನಿಜವಾಗಿಯೂ ಲೋಕಕ್ಕೆ ಬರಬೇಕಾಗಿದ್ದ ಪ್ರವಾದಿಯು ಈತನೇ” ಎಂದು ಹೇಳಿಕೊಂಡರು. 15ಆಗ ಯೇಸು, ಅವರು ಬಂದು ತನ್ನನ್ನು ಹಿಡಿದುಕೊಂಡು ಹೋಗಿ ಅರಸನನ್ನಾಗಿ ಮಾಡಬೇಕೆಂದಿದ್ದಾರೆಂದು ತಿಳಿದುಕೊಂಡು ಪುನಃ ತಾನೊಬ್ಬನೇ ಬೆಟ್ಟಕ್ಕೆ ಹೋಗಿಬಿಟ್ಟನು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು