ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 3 ಮಾರ್ಚ್
ಆರ್ಥೊಡಾಕ್ಸ್ ಪಂಚಾಂಗ · ಫೆಬ್ರವರಿ 18 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 3 ಮಾರ್ಚ್ 2027
ಬುಧವಾರ · ಮಾಂಸ ತ್ಯಾಗದ ವಾರ · ಸ್ವರ 6
ಹಬ್ಬಗಳು ಮತ್ತು ಸಂತರು
ಮಾಂಸ ತ್ಯಾಗದ ವಾರದ ಬುಧವಾರ
ಉಪವಾಸದ ದಿನ
ಮೀನಿಗೆ ಅನುಮತಿ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಪತ್ರಿಕೆ
21ಪ್ರಿಯರೇ, ನಮ್ಮ ಹೃದಯವು ನಮ್ಮನ್ನು ದೋಷಿಗಳೆಂದು ಖಂಡಿಸಿ ನಡೆದರೆ ದೇವರ ಸನ್ನಿಧಿಯಲ್ಲಿ ನಮಗೆ ಭರವಸೆ ದೊರೆಯುತ್ತದೆ. 22ಆತನ ಆಜ್ಞೆಗಳನ್ನು ಕೈಕೊಂಡು ಆತನಿಗೆ ಮೆಚ್ಚಿಕೆಯಾಗುವ ಕಾರ್ಯಗಳನ್ನು ಮಾಡುವವರಾದರೆ ನಾವು ಏನು ಬೇಡಿಕೊಂಡರೂ ಆತನಿಂದ ಹೊಂದುವೆವು. 23ದೇವರ ಆಜ್ಞೆ ಯಾವುದೆಂದರೆ ನಾವು ಆತನ ಮಗನಾದ ಯೇಸು ಕ್ರಿಸ್ತನನ್ನು ನಂಬಿ ಆತನು ನಮಗೆ ಕೊಟ್ಟಿರುವ ಆಜ್ಞೆಗಳ ಪ್ರಕಾರ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ. 24ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವವನು ಆತನಲ್ಲಿ ನೆಲೆಗೊಂಡಿರುತ್ತಾನೆ ಮತ್ತು ದೇವರು ಆತನಲ್ಲಿ ನೆಲೆಗೊಂಡಿರುತ್ತಾನೆ. ಆತನು ಅವನಲ್ಲಿ ನೆಲೆಗೊಂಡಿರುತ್ತಾನೆ. ನಮ್ಮಲ್ಲಿ ನೆಲೆಗೊಂಡಿದ್ದಾನೆಂದು ಆತನು ನಮಗೆ ಅನುಗ್ರಹಿಸಿರುವ ಆತ್ಮನಿಂದ ನಾವು ಬಲ್ಲವರಾಗಿದ್ದೇವೆ. 4:1ಪ್ರಿಯರೇ, ಅನೇಕ ಸುಳ್ಳುಪ್ರವಾದಿಗಳು ಲೋಕದೊಳಗೆ ಬಂದಿರುವುದರಿಂದ ನೀವು ಎಲ್ಲಾ ಆತ್ಮಗಳ ನುಡಿಗಳನ್ನು ನಂಬದೆ ಆಯಾ ಆತ್ಮಗಳ ನುಡಿಗಳು ದೇವರಿಂದ ಪ್ರೇರಿತವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು. 2ದೇವರಾತ್ಮ ಪ್ರೇರಿತವಾದ ನುಡಿಗಳು ಎಂದು ತಿಳಿದುಕೊಳ್ಳುವುದು ಹೇಗೆಂದರೆ, ಯೇಸು ಕ್ರಿಸ್ತನು ಮನುಷ್ಯ ರೂಪವನ್ನು ಧರಿಸಿಕೊಂಡು ಬಂದನು ಎಂದು ಒಪ್ಪಿಕೊಳ್ಳುವ ಆತ್ಮವು ದೇವರಿಂದ ಪ್ರೇರಿತವಾಗಿ ಬಂದದ್ದಾಗಿದೆ. 3ಯೇಸುಕ್ರಿಸ್ತನನ್ನು ಒಪ್ಪಿಕೊಳ್ಳದಿರುವ ಪ್ರತಿಯೊಂದು ಆತ್ಮವು ದೇವರಿಂದ ಬಂದದ್ದಲ್ಲ. ಅದು ಕ್ರಿಸ್ತವಿರೋಧಿಯ ಆತ್ಮವಾಗಿದೆ. ಅದು ಬರುತ್ತದೆಂಬುದನ್ನು ನೀವು ಕೇಳಿದ್ದೀರಲ್ಲಾ. ಅದು ಈಗಾಗಲೇ ಲೋಕದಲ್ಲಿ ಇದೆ. 4ಪ್ರಿಯಮಕ್ಕಳೇ, ನೀವಂತೂ ದೇವರಿಗೆ ಸೇರಿದವರಾಗಿದ್ದೀರಿ. ಮತ್ತು ಲೋಕದಲ್ಲಿರುವವನಿಗಿಂತ ನಿಮ್ಮಲ್ಲಿರುವಾತನು ಉನ್ನತನಾಗಿರುವುದರಿಂದ ನೀವು ಆ ಸುಳ್ಳು ಪ್ರವಾದಿಗಳ ಆತ್ಮವನ್ನು ಜಯಿಸಿದ್ದೀರಿ. 5ಅವರು ಲೋಕಸಂಬಂಧಿಗಳಾಗಿದ್ದಾರೆ. ಈ ಕಾರಣದಿಂದ ಅವರು ಲೌಕಿಕವಾದುದನ್ನೇ ಮಾತನಾಡುತ್ತಾರೆ ಮತ್ತು ಲೋಕದವರು ಅವರ ಮಾತನ್ನು ಕೇಳುತ್ತಾರೆ. 6ನಾವಂತೂ ದೇವರಿಗೆ ಸಂಬಂಧಪಟ್ಟವರಾಗಿದ್ದೇವೆ. ದೇವರನ್ನು ಬಲ್ಲವರು ನಮ್ಮ ಮಾತನ್ನು ಕೇಳುತ್ತಾರೆ. ದೇವರಿಗೆ ಸಂಬಂಧಪಡದವರು ನಮ್ಮ ಮಾತನ್ನು ಕೇಳುವುದಿಲ್ಲ. ಇದರಿಂದಲೇ ಸತ್ಯವನ್ನು ಬೋಧಿಸುವ ಆತ್ಮ ಯಾವುದು ಮತ್ತು ಸುಳ್ಳನ್ನು ಬೋಧಿಸುವ ಆತ್ಮ ಯಾವುದು ಎಂದು ನಾವು ತಿಳಿದುಕೊಳ್ಳುತ್ತೇವೆ.
ಸುವಾರ್ತೆ
43ಯೇಸು ಇನ್ನೂ ಮಾತನಾಡುತ್ತಾ ಇರುವಾಗಲೇ, ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಅಲ್ಲಿಗೆ ಬಂದನು. ಮುಖ್ಯಯಾಜಕರೂ, ಶಾಸ್ತ್ರಿಗಳೂ ಮತ್ತು ಹಿರಿಯರ ಕಡೆಯಿಂದ ಒಂದು ಗುಂಪು ಖಡ್ಗ, ದೊಣ್ಣೆಗಳನ್ನು ಹಿಡಿದುಕೊಂಡು ಅವನೊಂದಿಗೆ ಬಂದರು. 44ಇದಲ್ಲದೆ ಆತನನ್ನು ಹಿಡಿದುಕೊಡುವವನು ಅವರಿಗೆ, “ನಾನು ಯಾರಿಗೆ ಮುದ್ದಿಡುವೆನೊ ಅವನೇ ಆತನು! ಅವನನ್ನು ಹಿಡಿದು ಭದ್ರವಾಗಿ ಕರೆದೊಯ್ಯಿರಿ” ಎಂದು ಮೊದಲೇ ಸೂಚನೆಕೊಟ್ಟಿದ್ದನು. 45ಅದರಂತೆಯೇ ಯೂದನು ಅಲ್ಲಿಗೆ ಬಂದಕೂಡಲೇ ಅವನು ಯೇಸುವಿನ ಬಳಿಗೆ ಹೋಗಿ, “ಗುರುವೇ” ಎಂದು ಹೇಳಿ ಆತನಿಗೆ ಮುದ್ದಿಟ್ಟನು. 46ಅವರು ಯೇಸುವಿನ ಮೇಲೆ ಕೈಹಾಕಿ ಆತನನ್ನು ಹಿಡಿದರು. 47ಆದರೆ ಹತ್ತಿರ ನಿಂತಿದ್ದವರಲ್ಲಿ ಒಬ್ಬನು ತನ್ನ ಖಡ್ಗವನ್ನು ಹಿರಿದು ಮಹಾಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕತ್ತರಿಸಿ ಹಾಕಿದನು. 48ಅವರು ಯೇಸುವನ್ನು ಹಿಡಿದಾಗ ಆತನು ಅವರಿಗೆ, “ದರೋಡೆಗಾರನನ್ನು ಹಿಡಿಯುವುದಕ್ಕೆ ಬಂದಂತೆ ಖಡ್ಗಗಳನ್ನೂ ದೊಣ್ಣೆಗಳನ್ನೂ ತೆಗೆದುಕೊಂಡು ನನ್ನನ್ನು ಹಿಡಿಯುವುದಕ್ಕೆ ಬಂದಿರಾ? 49ನಾನು ಪ್ರತಿದಿನವು ನಿಮ್ಮ ಸಂಗಡ ಇದ್ದು ದೇವಾಲಯದಲ್ಲಿ ಬೋಧಿಸುತ್ತಿದ್ದಾಗ ನೀವು ನನ್ನನ್ನು ಬಂಧಿಸಲಿಲ್ಲ. ಆದರೆ ಶಾಸ್ತ್ರದಲ್ಲಿ ಬರೆದದ್ದು ನೆರವೇರುವಂತೆ ಹೀಗೆಲ್ಲಾ ಆಯಿತು” ಎಂದು ಉತ್ತರ ಕೊಟ್ಟನು. 50ಆಗ ಆತನ ಸಂಗಡವಿದ್ದವರೆಲ್ಲರು ಆತನನ್ನು ಬಿಟ್ಟು ಓಡಿಹೋದರು. 51ಆಗ ಯುವಕನೊಬ್ಬನು ಮೈಮೇಲೆ ನಾರುಮಡಿಯನ್ನು ಮಾತ್ರ ಸುತ್ತಿಕೊಂಡವನಾಗಿ ಯೇಸುವಿನ ಹಿಂದೆ ಬರುತ್ತಿದ್ದನು; 52ಅವರು ಅವನನ್ನು ಹಿಡಿಯಲೂ ಅವನು ಆ ನಾರುಮಡಿಯನ್ನು ಬಿಟ್ಟು ಬರೀ ಮೈಯಲ್ಲಿ ಓಡಿಹೋದನು. 53ಅವರು ಯೇಸುವನ್ನು ಮಹಾಯಾಜಕನ ಬಳಿಗೆ ಕರೆದುಕೊಂಡು ಹೋದರು. ಆತನ ಸಂಗಡ ಮುಖ್ಯಯಾಜಕರೆಲ್ಲರೂ, ಹಿರಿಯರು, ಶಾಸ್ತ್ರಿಗಳು ಕೂಡಿಬಂದರು. 54ಮತ್ತು ಪೇತ್ರನು ದೂರದಿಂದ ಆತನನ್ನು ಹಿಂಬಾಲಿಸುತ್ತಾ ಮಹಾಯಾಜಕನ ಅಂಗಳದೊಳಗೆ ಬಂದು ಕಾವಲುಗಾರರ ಸಂಗಡ ಸೇರಿ ಬೆಂಕಿಯ ಮುಂದೆ ಕುಳಿತು ಚಳಿ ಕಾಯಿಸಿಕೊಳ್ಳುತ್ತಿದ್ದನು. 55ಆಗ ಮುಖ್ಯಯಾಜಕರು ಮತ್ತು ಹಿರೀಸಭೆಯ ಸದಸ್ಯರೆಲ್ಲರೂ ಯೇಸುವನ್ನು ಮರಣದಂಡನೆಗೆ ಗುರಿಪಡಿಸುವ ಸಲುವಾಗಿ ಆತನ ವಿರುದ್ಧವಾಗಿ ಸಾಕ್ಷಿ ಹುಡುಕುತ್ತಾ ಇದ್ದರು. ಆದರೆ ಅವರಿಗೆ ಸರಿಯಾದ ಒಂದು ಸಾಕ್ಷ್ಯವೂ ದೊರಕಲಿಲ್ಲ. 56ಅನೇಕರು ಬಂದು ಆತನ ಮೇಲೆ ಸುಳ್ಳುಸಾಕ್ಷಿ ಹೇಳಿದರೂ ಅವರ ಸಾಕ್ಷಿ ಒಂದಕ್ಕೊಂದು ಸರಿಹೊಂದಲಿಲ್ಲ. 57ತರುವಾಯ ಕೆಲವರು ಎದ್ದು ನಿಂತು, “‘ಇವನು ಕೈಯಿಂದ ಕಟ್ಟಿರುವ ಈ ದೇವಾಲಯವನ್ನು ನಾನು ಕೆಡವಿಬಿಟ್ಟು ಕೈಯಿಂದ ಕಟ್ಟದಿರುವ ಮತ್ತೊಂದು ಆಲಯವನ್ನು ಮೂರು ದಿನಗಳಲ್ಲಿ ಕಟ್ಟುವೆನು’ ಎಂದು ಈತನು ಹೇಳಿದ್ದನ್ನು ನಾವು ಕೇಳಿಸಿಕೊಂಡಿದ್ದೇವೆ” ಎಂಬುದಾಗಿ ಆತನ ಮೇಲೆ ಸುಳ್ಳುಸಾಕ್ಷಿ ಹೇಳಿದರು. 59ಹೀಗೆ ಹೇಳಿದರೂ ಅವರ ಸಾಕ್ಷಿ ಒಂದಕ್ಕೊಂದು ಸರಿಹೊಂದಲಿಲ್ಲ. 60ಆಗ ಮಹಾಯಾಜಕನು ಅವರ ಮಧ್ಯದಲ್ಲಿ ಎದ್ದು ನಿಂತು, “ನೀನೇನೂ ಉತ್ತರ ಹೇಳುವುದಿಲ್ಲವೋ? ಇವರು ನಿನ್ನ ಮೇಲೆ ಹೇಳುವ ಈ ಸಾಕ್ಷಿ ಏನು?” ಎಂದು ಯೇಸುವನ್ನು ಕೇಳಿದನು. 61ಆದರೆ ಯೇಸು ಏನೂ ಉತ್ತರ ಕೊಡದೆ ಮೌನವಾಗಿದ್ದನು. ಪುನಃ ಮಹಾಯಾಜಕನು, “ನೀನು ಕ್ರಿಸ್ತನೋ, ಸ್ತುತಿಗೆ ಪಾತ್ರನಾದ ದೇವರ ಕುಮಾರನೋ?” ಎಂದು ಆತನನ್ನು ಕೇಳಿದನು. 62ಯೇಸುವು “ಹೌದು ನಾನೇ! “ಇದಲ್ಲದೆ ಮನುಷ್ಯಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವುದನ್ನೂ, ಆಕಾಶದ ಮೇಘಗಳಲ್ಲಿ ಬರುವುದನ್ನೂ ನೀವು ನೋಡುವಿರಿ” ಎಂದನು. 63ಇದನ್ನು ಕೇಳಿ ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಇನ್ನೂ ನಮಗೆ ಸಾಕ್ಷಿಗಳ ಅಗತ್ಯವೇನಿದೆ? 64ಇವನು ಮಾಡಿದ ದೇವದೂಷಣೆಯನ್ನು ನೀವು ಕೇಳಿದಿರಲ್ಲಾ, ನಿಮಗೆ ಹೇಗೆ ತೋರುತ್ತದೆ?” ಎಂದು ಕೇಳಲು ಅವರೆಲ್ಲರೂ, ಇವನಿಗೆ ಮರಣದಂಡನೆ ಆಗಬೇಕು ಎಂದು ತೀರ್ಪು ಮಾಡಿದರು. 65ಅನಂತರ ಕೆಲವರು ಆತನ ಮೇಲೆ ಉಗುಳಿ, ಆತನ ಮುಖಕ್ಕೆ ಮುಸುಕನ್ನು ಹಾಕಿ, ಗುದ್ದಿ, ಈಗ “ಪ್ರವಾದಿಸು” ಎಂದರು. ಕಾವಲುಗಾರರು ಆತನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಆತನಿಗೆ ಹೊಡೆದರು. 66ಇತ್ತಲಾಗಿ ಪೇತ್ರನು ಕೆಳಗೆ ಅಂಗಳದಲ್ಲಿ ಇದ್ದಾಗ ಮಹಾಯಾಜಕನ ದಾಸಿಯರಲ್ಲಿ ಒಬ್ಬಳು ಬಂದು ಅವನು ಚಳಿ ಕಾಯಿಸಿಕೊಳ್ಳುತ್ತಿರುವುದನ್ನು ಕಂಡು, 67ಅವನನ್ನು ದೃಷ್ಟಿಸಿ ನೋಡಿ, “ನೀನು ಸಹ ಆ ನಜರೇತಿನ ಯೇಸುವಿನೊಂದಿಗೆ ಇದ್ದವನು” ಎಂದಳು. 68ಆದರೆ ಅವನು ನಿರಾಕರಿಸಿ, “ನೀನು ಏನು ಹೇಳುತ್ತೀಯೋ ಅದು ನನಗೆ ಗೊತ್ತಿಲ್ಲ, ಅರ್ಥವಾಗುತ್ತಲೂ ಇಲ್ಲ!” ಎಂದು ಹೇಳಿ ಮುಖ್ಯದ್ವಾರದೊಳಗಿಂದ ಹೊರಾಂಗಣಕ್ಕೆ ಹೋದನು. 69ಆ ದಾಸಿಯು ಅವನನ್ನು ಪುನಃ ನೋಡಿ ಪಕ್ಕದಲ್ಲಿ ನಿಂತಿದ್ದವರಿಗೆ, “ಇವನು ಅವರಲ್ಲಿ ಒಬ್ಬನು” ಎಂದು ಹೇಳಲಾರಂಭಿಸಿದಳು. 70ಆಗ ಅವನು ಮತ್ತೆ ನಿರಾಕರಿಸಿದನು. ಸ್ವಲ್ಪ ಹೊತ್ತಿನ ಮೇಲೆ ಪಕ್ಕದಲ್ಲಿ ನಿಂತವರು ಪೇತ್ರನಿಗೆ, “ನಿಶ್ಚಯವಾಗಿಯೂ ನೀನು ಅವರಲ್ಲಿ ಒಬ್ಬನು, ಯಾಕೆಂದರೆ ನೀನು ಗಲಿಲಾಯದವನೇ” ಎಂದರು. 71ಆದರೆ ಅವನು, “ನೀವು ಮಾತನಾಡುತ್ತಿರುವ ಈ ಮನುಷ್ಯನನ್ನು ನಾನರಿಯೆ” ಎಂದು ಹೇಳಿ ತನ್ನನ್ನು ಶಪಿಸಿಕೊಳ್ಳುವುದಕ್ಕೂ ಆಣೆಯಿಟ್ಟುಕೊಳ್ಳುವುದಕ್ಕೂ ಆರಂಭಿಸಿದಾಗ, ಕೋಳಿ ಎರಡನೆಯ ಸಾರಿ ಕೂಗಿತು. 72ಆಗ ಪೇತ್ರನು, “ಕೋಳಿ ಎರಡು ಸಾರಿ ಕೂಗುವುದಕ್ಕಿಂತ ಮುಂಚಿತವಾಗಿ ನೀನು ನನ್ನನ್ನು ಮೂರು ಬಾರಿ ನಿರಾಕರಿಸುವೆ” ಎಂದು ಯೇಸು ತನಗೆ ಹೇಳಿದ ಮಾತನ್ನು ನೆನಪಿಗೆ ಬಂದ ಕಾರಣ, ವ್ಯಥೆಪಟ್ಟು ದುಃಖಭರಿತನಾಗಿ ಅತ್ತನು. 15:1ಬೆಳಗಾದ ಕೂಡಲೆ ಮುಖ್ಯಯಾಜಕರೂ, ಹಿರಿಯರೂ, ಶಾಸ್ತ್ರಿಗಳೂ, ಹಿರೀಸಭೆಯ ಸದಸ್ಯರೆಲ್ಲರೂ ಒಟ್ಟುಗೂಡಿ ಆಲೋಚನೆ ಮಾಡಿಕೊಂಡು ಯೇಸುವನ್ನು ಕಟ್ಟಿಸಿ ಕರೆದುಕೊಂಡು ಹೋಗಿ ಪಿಲಾತನಿಗೆ ಒಪ್ಪಿಸಿದರು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 18 ಫೆಬ್ರವರಿ ಎಂದರೆ ನಾಗರಿಕ ಪಂಚಾಂಗದ 3 ಮಾರ್ಚ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು