ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಫೆಬ್ರವರಿ 2027 › 19 ಫೆಬ್ರವರಿ
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 19 ಫೆಬ್ರವರಿ 2027
ಶುಕ್ರವಾರ · ತಪಸ್ಸು ಕಾಲದ ಮೊದಲನೆಯ ವಾರ
ಹಬ್ಬಗಳು ಮತ್ತು ಸಂತರು
ತಪಸ್ಸು ಕಾಲದ ಮೊದಲನೆಯ ವಾರದ ಶುಕ್ರವಾರ
ವಾರದ ದಿನ · ಆರಾಧನಾ ಬಣ್ಣ: ನೇರಳೆ
ಉಪವಾಸ ಮತ್ತು ಪ್ರಾಯಶ್ಚಿತ್ತ
ಮಾಂಸ ವರ್ಜನೆ
ಪ್ರತಿ ಶುಕ್ರವಾರವೂ ಪ್ರಾಯಶ್ಚಿತ್ತದ ದಿನ; ಅದನ್ನು ಹೇಗೆ ಆಚರಿಸಬೇಕು ಎಂಬುದನ್ನು ಪ್ರತಿಯೊಂದು ಬಿಷಪರ ಸಮ್ಮೇಳನ ನಿರ್ಧರಿಸುತ್ತದೆ: ಮಾಂಸ ವರ್ಜನೆ ಅಥವಾ ಬೇರೊಂದು ಪ್ರಾಯಶ್ಚಿತ್ತ ಕಾರ್ಯ. ಉಪವಾಸ 18 ರಿಂದ 59 ವರ್ಷದವರಿಗೆ, ಮಾಂಸ ವರ್ಜನೆ 14 ವರ್ಷದಿಂದ ಕಡ್ಡಾಯ.
ದಿನದ ವಾಚನಗಳು
ಮೊದಲನೆಯ ವಾಚನ
21“ಆದರೆ ದುಷ್ಟನು ತಾನು ಮಾಡುತ್ತಿದ್ದ ಪಾಪಗಳನ್ನೆಲ್ಲಾ ಬಿಟ್ಟುಬಿಟ್ಟು, ನನ್ನ ಸಕಲ ವಿಧಿಗಳನ್ನು ಕೈಕೊಂಡು, ನೀತಿನ್ಯಾಯಗಳನ್ನು ನಡೆಸಿದರೆ ಸಾಯುವುದಿಲ್ಲ, ಖಂಡಿತವಾಗಿ ಜೀವಿಸುವನು. 22ಅವನು ಮಾಡಿದ ಯಾವ ಅಪರಾಧವು ಅವನ ಲೆಕ್ಕಕ್ಕೆ ಸೇರಿಸಲ್ಪಡುವುದಿಲ್ಲ, ಅವನು ಮಾಡುತ್ತಿರುವ ಸದ್ಧರ್ಮದಿಂದಲೇ ಅವನು ಜೀವಿಸುವನು.” 23ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ದುಷ್ಟನ ಸಾವಿನಲ್ಲಿ ನನಗೆ ಸ್ವಲ್ಪವಾದರೂ ಸಂತೋಷವಿಲ್ಲ. ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ. 24ಆದರೆ ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು, ಅಧರ್ಮಮಾಡಿ, ದುಷ್ಟನು ನಡೆಸುವ ದುರಾಚಾರಗಳನ್ನೆಲ್ಲಾ ನಡೆಸಿದರೆ ಅವನು ಜೀವಿಸುವನೋ? ಅವನು ಮಾಡಿದ ಯಾವ ಸುಕೃತ್ಯವು ಅವನ ಲೆಕ್ಕಕ್ಕೆ ಸೇರಿಸಲ್ಪಡುವುದಿಲ್ಲ, ಅವನು ಮಾಡುತ್ತಿರುವ ಪಾಪ ಅಪರಾಧಗಳಿಂದಲೇ ಸಾಯುವನು. 25“ಆದರೆ ನೀವು, ‘ಕರ್ತನ ಕ್ರಮವು ಸರಿಯಲ್ಲ’ ಎಂದು ಹೇಳುತ್ತಿದ್ದೀರಿ; ಇಸ್ರಾಯೇಲ್ ವಂಶದವರೇ, ನನ್ನ ಕ್ರಮವು ಸರಿಯಲ್ಲವೋ? ನಿಮ್ಮ ಕ್ರಮವೇ ಸರಿಯಲ್ಲ. 26ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು, ಅಧರ್ಮಮಾಡಿ, ಅದರಲ್ಲಿ ಸತ್ತರೆ ತಾನು ಮಾಡಿದ ಅಧರ್ಮದಿಂದಲೇ ಸಾಯಬೇಕಾಯಿತು. 27ದುಷ್ಟನು ತಾನು ಮಾಡುತ್ತಿದ್ದ ದುಷ್ಟತನವನ್ನು ಬಿಟ್ಟು, ನೀತಿನ್ಯಾಯಗಳನ್ನು ನಡೆಸಿದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು. 28ಅವನು ಯೋಚಿಸಿ, ತಾನು ಮಾಡುತ್ತಿದ್ದ ಅಪರಾಧಗಳನ್ನೆಲ್ಲಾ ಬಿಟ್ಟದ್ದರಿಂದ ಸಾಯುವುದಿಲ್ಲ, ಖಂಡಿತವಾಗಿ ಜೀವಿಸುವನು.
ಪ್ರತಿವಚನ ಕೀರ್ತನೆ
1ಯಾತ್ರಾಗೀತೆ. ಯೆಹೋವನೇ, ಪಾತಾಳದಲ್ಲಿದ್ದು ನಿನ್ನನ್ನು ಕೂಗಿಕೊಳ್ಳುತ್ತೇನೆ. 2ಕರ್ತನೇ, ನನ್ನ ಮೊರೆಯನ್ನು ಕೇಳು; ನನ್ನ ವಿಜ್ಞಾಪನೆಯ ಶಬ್ದಕ್ಕೆ ಕಿವಿದೆರೆ. 3ಕರ್ತನೇ, ಯೆಹೋವನೇ, ನೀನು ಪಾಪಗಳನ್ನು ಲೆಕ್ಕಿಸುವುದಾದರೆ ನಿನ್ನ ಮುಂದೆ ಯಾರು ನಿಲ್ಲಲು ಸಾಧ್ಯ? 4ನೀನು ಪಾಪವನ್ನು ಕ್ಷಮಿಸುವವನಾದುದರಿಂದ, ಮನುಷ್ಯರ ಭಯಭಕ್ತಿಗೆ ನೀನೇ ಪಾತ್ರನು. 5ನಾನು ಯೆಹೋವನನ್ನು ಎದುರುನೋಡುತ್ತೇನೆ; ನನ್ನ ಪ್ರಾಣವು ಆತನನ್ನು ಕಾದುಕೊಂಡಿದೆ; ಆತನ ನುಡಿಯನ್ನು ನಿರೀಕ್ಷಿಸಿಕೊಂಡಿದ್ದೇನೆ. 6ಕಾವಲುಗಾರರು ಬೆಳಗಾಗುವುದನ್ನು ಮುನ್ನೋಡುತ್ತಾರಲ್ಲಾ; ಕಾವಲುಗಾರರು ಬೆಳಗಾಗುವುದನ್ನು ಮುನ್ನೋಡುವುದಕ್ಕಿಂತ ವಿಶೇಷವಾಗಿ, ನನ್ನ ಅಂತರಾತ್ಮವು ಕರ್ತನನ್ನು ಮುನ್ನೋಡುತ್ತದೆ. 7ಇಸ್ರಾಯೇಲೇ, ಯೆಹೋವನನ್ನು ಎದುರುನೋಡುತ್ತಿರು; ಯೆಹೋವನು ಕೃಪಾಸಂಪನ್ನನು; ಪೂರ್ಣವಿಮೋಚನೆಯು ಆತನಿಂದಲೇ ದೊರಕುವುದು. 8ಆತನೇ ಇಸ್ರಾಯೇಲನ್ನು ಅದರ ಸಕಲ ಪಾಪಗಳಿಂದ ವಿಮೋಚಿಸುವನು.
ಸುವಾರ್ತೆ
20ನಿಮ್ಮ ನೀತಿಯು ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತಲೂ ಉತ್ತಮವಾಗಿರದಿದ್ದರೆ ನೀವು ಪರಲೋಕ ರಾಜ್ಯಕ್ಕೆ ಸೇರಲಾರಿರಿ ಎಂದು ನಿಮಗೆ ಹೇಳುತ್ತೇನೆ. 21“‘ನರಹತ್ಯ ಮಾಡಬಾರದು; ನರಹತ್ಯ ಮಾಡುವವನು ನ್ಯಾಯತೀರ್ಪಿಗೆ ಗುರಿಯಾಗುವನೆಂದು’ ಹಿರಿಯರಿಗೆ ಹೇಳಿಯದೆ ಎಂದು ಕೇಳಿದ್ದೀರಿ. 22ಆದರೆ ನಾನು ನಿಮಗೆ ಹೇಳುವುದೇನಂದರೆ, ತನ್ನ ಸಹೋದರನ ಮೇಲೆ ಸಿಟ್ಟುಗೊಳ್ಳುವ ಪ್ರತಿಯೊಬ್ಬ ಮನುಷ್ಯನು ನ್ಯಾಯತೀರ್ಪಿಗೆ ಗುರಿಯಾಗುವನು; ತನ್ನ ಸಹೋದರನನ್ನು ನೋಡಿ, ‘ಎಲೈ ಮೂರ್ಖನೇ’ ಎಂದು ಅನ್ನುವವನು ನ್ಯಾಯ ಸಭೆಯ ವಿಚಾರಣೆಗೆ ಒಳಗಾಗುವನು; ‘ಎಲೈ ನೀಚನೇ’ ಎಂದು ಅನ್ನುವವನು, ಅಗ್ನಿ ನರಕಕ್ಕೆ ಗುರಿಯಾಗುವನು. 23ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತಿರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವಿದೆ ಎಂಬುದು ನಿನ್ನ ನೆನಪಿಗೆ ಬಂದರೆ, 24ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟು ಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು. 25“ಇನ್ನೂ ದಾರಿಯಲ್ಲಿರುವಾಗಲೇ ನಿನ್ನ ಪ್ರತಿವಾದಿಯೊಂದಿಗೆ ಬೇಗ ಸಂಧಾನ ಮಾಡಿಕೋ; ಇಲ್ಲದಿದ್ದರೆ ಆ ಆಪಾದಕನು ನಿನ್ನನ್ನು ನ್ಯಾಯಾಧಿಪತಿಗೆ ಒಪ್ಪಿಸಾನು ನ್ಯಾಯಾಧಿಪತಿಯು ನಿನ್ನನ್ನು ಸೆರೆಮನೆ ಅಧಿಕಾರಿಯ ಕೈಗೆ ಒಪ್ಪಿಸಿಕೊಟ್ಟಾನು. ಆಗ ನೀನು ಸೆರೆಯಲ್ಲಿ ಎಸೆಯಲ್ಪಡುವಿ. 26ನೀನು ಒಂದು ಕಾಸನ್ನಾದರೂ ಉಳಿಸಿಕೊಳ್ಳದೆ ಎಲ್ಲವನ್ನು ಸಲ್ಲಿಸುವ ತನಕ ಅಲ್ಲಿಂದ ಬರುವುದಕ್ಕಾಗುವುದೇ ಇಲ್ಲ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು