ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಫೆಬ್ರವರಿ 2027 › 17 ಫೆಬ್ರವರಿ
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 17 ಫೆಬ್ರವರಿ 2027
ಬುಧವಾರ · ತಪಸ್ಸು ಕಾಲದ ಮೊದಲನೆಯ ವಾರ
ಹಬ್ಬಗಳು ಮತ್ತು ಸಂತರು
ತಪಸ್ಸು ಕಾಲದ ಮೊದಲನೆಯ ವಾರದ ಬುಧವಾರ
ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ನೇರಳೆ
ಸರ್ವೈಟ್ ಸಂಘದ ಏಳು ಪವಿತ್ರ ಸ್ಥಾಪಕರು · ಸ್ಮರಣೋಲ್ಲೇಖ
ದಿನದ ವಾಚನಗಳು
ಮೊದಲನೆಯ ವಾಚನ
1ಯೆಹೋವನ ವಾಕ್ಯವು ಯೋನನಿಗೆ ಎರಡನೆಯ ಸಾರಿ ಉಂಟಾಯಿತು. 2ಅದೇನೆಂದರೆ “ನೀನು ಹೊರಟು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ನಾನು ನಿನಗೆ ಆಜ್ಞಾಪಿಸುವ ಸಂದೇಶವನ್ನು ಸಾರು” ಎಂದು ಹೇಳಿದನು. 3ಆಗ ಯೋನನು ಎದ್ದು ಯೆಹೋವನ ಅಪ್ಪಣೆಯಂತೆ ನಿನೆವೆಗೆ ಹೋದನು. ನಿನೆವೆಯು ಮೂರು ದಿನದ ಪ್ರಯಾಣದಷ್ಟು ಅತಿ ವಿಸ್ತಾರವಾದ ಮಹಾದೊಡ್ಡ ಪಟ್ಟಣವಾಗಿತ್ತು. 4ಯೋನನು ಪಟ್ಟಣವನ್ನು ಪ್ರವೇಶಿಸಿ ಒಂದು ದಿನದಷ್ಟು ದೂರ ಪ್ರಯಾಣಮಾಡಿದ ನಂತರ “ನಲವತ್ತು ದಿನಗಳಾದ ಮೇಲೆ ನಿನೆವೆಯು ಕೆಡವಲ್ಪಡುವುದು” ಎಂದು ಸಾರತೊಡಗಿದನು. 5ಇದನ್ನು ಕೇಳಿ ನಿನೆವೆಯವರು ದೇವರಲ್ಲಿ ನಂಬಿಕೆಯಿಟ್ಟು ಉಪವಾಸವನ್ನು ಮಾಡಬೇಕೆಂದು ಸಾರಿ ಹೇಳಿದರು; ದೊಡ್ಡವರು ಮೊದಲುಗೊಂಡು ಚಿಕ್ಕವರ ತನಕ ಎಲ್ಲರೂ ಗೋಣಿತಟ್ಟನ್ನು ಸುತ್ತಿಕೊಂಡರು. 6ಆ ಸುದ್ದಿಯು ನಿನೆವೆಯ ಅರಸನಿಗೆ ತಿಳಿಯಲು ಅವನು ಸಿಂಹಾಸನದಿಂದ ಎದ್ದು, ತನ್ನ ನಿಲುವಂಗಿಯನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕುಳಿತುಕೊಂಡನು. 7ಇದಲ್ಲದೆ ಅರಸನು ತನ್ನ ಮತ್ತು ರಾಜ್ಯಾಧಿಕಾರಿಗಳ ಆಜ್ಞೆಯನ್ನು ನಿನೆವೆಯಲ್ಲಿ ಹೊರಡಿಸಿ ಹೇಳಿದ್ದೇನೆಂದರೆ: “ಜನ, ಪಶು, ಮಂದೆ, ಹಿಂಡು ಇವುಗಳು ಸಹ ಏನೂ ರುಚಿ ನೋಡುವುದಾಗಲೀ, ತಿನ್ನುವುದಾಗಲೀ, ಕುಡಿಯುವುದಾಗಲೀ ಮಾಡಬಾರದು. 8ಜನರಿಗೂ ಪಶುಗಳಿಗೂ ಗೋಣಿತಟ್ಟು ಹೊದಿಕೆಯಾಗಲಿ; ಎಲ್ಲರೂ ದೇವರಿಗೆ ಬಲವಾಗಿ ಮೊರೆಯಿಡಲಿ; ಒಬ್ಬೊಬ್ಬನು ತನ್ನ ತನ್ನ ದುರ್ಮಾರ್ಗಗಳನ್ನೂ, ತಾನು ನಡಿಸುತ್ತಿದ್ದ ಹಿಂಸೆಯನ್ನೂ ತೊರೆದು ಬಿಡಲಿ. 9ದೇವರು ಒಂದು ವೇಳೆ ಮನಮರುಗಿ, ಮನಸ್ಸನ್ನು ಬದಲಾಯಿಸಿಕೊಂಡು ತನ್ನ ಉಗ್ರಕೋಪವನ್ನು ತೊರೆದರೆ, ನಾವು ನಾಶವಾಗದೆ ಉಳಿದೇವು” ಎಂಬುದನ್ನು ನಿನೆವೆಯಲ್ಲೆಲ್ಲಾ ಸಾರಿಸಿದನು. 10ದೇವರು ನಿನೆವೆಯವರ ಕೃತ್ಯಗಳನ್ನು ನೋಡಿ, ಅವರು ತಮ್ಮ ದುರ್ಮಾರ್ಗತನದಿಂದ ತಿರುಗಿಕೊಂಡರೆಂದು ತಿಳಿದು ತನ್ನ ಮನಸ್ಸನ್ನು ಬದಲಾಯಿಸಿ, ತಾನು ಅವರಿಗೆ ಮಾಡುವೆನೆಂದು ಪ್ರಕಟಿಸಿದ್ದ ಕೇಡನ್ನು ಮಾಡದೆ ಬಿಟ್ಟನು.
ಪ್ರತಿವಚನ ಕೀರ್ತನೆ
1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನು ಬತ್ಷೆಬಳ ಬಳಿಗೆ ಹೋದ ಮೇಲೆ ಪ್ರವಾದಿಯಾದ ನಾತಾನನು ಎಚ್ಚರಿಸಿದಾಗ ರಚಿಸಿದ ಕೀರ್ತನೆ. ಪ್ರೀತಿಸ್ವರೂಪನಾದ ದೇವರೇ, ನನ್ನನ್ನು ಕರುಣಿಸು; ಕರುಣಾನಿಧಿಯೇ, ನನ್ನ ದ್ರೋಹವನ್ನೆಲ್ಲಾ ಅಳಿಸಿಬಿಡು. 2ನನ್ನ ಪಾಪವನ್ನು ಸಂಪೂರ್ಣವಾಗಿ ತೊಳೆದುಬಿಡು; ನನ್ನ ದೋಷವನ್ನು ಪರಿಹರಿಸಿ, ನನ್ನನ್ನು ಶುದ್ಧಿಗೊಳಿಸು. 10ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನಪಡಿಸು. 11ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಬೇಡ; ನಿನ್ನ ಪರಿಶುದ್ಧಾತ್ಮವನ್ನು ನನ್ನಿಂದ ತೆಗೆಯಬೇಡ. 16ನಿನಗೆ ಯಜ್ಞಗಳಲ್ಲಿ ಅಪೇಕ್ಷೆಯಿಲ್ಲ, ಇದ್ದರೆ ಸಮರ್ಪಿಸುತ್ತಿದ್ದೆನು; ಸರ್ವಾಂಗಹೋಮಗಳಲ್ಲಿ ನಿನಗೆ ಸಂತೋಷವಿಲ್ಲ. 17ಕುಗ್ಗಿದ ಮನಸ್ಸೇ ದೇವರಿಗೆ ಇಷ್ಟವಾದ ಯಜ್ಞ; ದೇವರೇ, ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು ನೀನು ತಿರಸ್ಕರಿಸುವುದಿಲ್ಲ.
ಸುವಾರ್ತೆ
29ಜನರು ಗುಂಪುಗುಂಪಾಗಿ ಸೇರಿಬರುತ್ತಿರುವಾಗ ಯೇಸು ಹೇಳುವುದಕ್ಕೆ ತೊಡಗಿದ್ದೇನಂದರೆ, “ಈ ಸಂತತಿ ಕೆಟ್ಟ ಸಂತತಿಯೇ; ಇದು ಸೂಚಕಕಾರ್ಯವನ್ನು ಸಂಕೇತವಾಗಿ ನೋಡಬೇಕೆಂದು ಅಪೇಕ್ಷಿಸುತ್ತದೆ. ಆದರೆ ಯೋನನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವುದೂ ಈ ಸಂತತಿಗೆ ಸಿಕ್ಕುವುದಿಲ್ಲ. 30ಹೇಗೆಂದರೆ ಯೋನನು ನಿನೆವೆ ಪಟ್ಟಣದವರಿಗೆ ಗುರುತಾದ ಹಾಗೆಯೇ ಮನುಷ್ಯಕುಮಾರನು ಈ ಸಂತತಿಗೆ ಗುರುತಾಗಿರುವನು. 31ದಕ್ಷಿಣ ದೇಶದ ರಾಣಿಯು ನ್ಯಾಯವಿಚಾರಣೆ ದಿನದಲ್ಲಿ ಈ ಸಂತತಿಯವರೊಂದಿಗೆ ಎದ್ದುನಿಂತು ಇವರನ್ನು ಅಪರಾಧಿಗಳೆಂದು ಖಂಡಿಸುವಳು. ಆಕೆಯು ಸೊಲೊಮೋನನ ಜ್ಞಾನವನ್ನು ತಿಳಿದುಕೊಳ್ಳುವುದಕ್ಕೆ ಭೂಮಿಯ ಕಟ್ಟಕಡೆಯಿಂದ ಬಂದಳು. ಆದರೆ ಇಗೋ, ಸೊಲೊಮೋನನಿಗಿಂತಲೂ ಉನ್ನತನಾದವನು ಇಲ್ಲಿದ್ದಾನೆ. 32ನ್ಯಾಯ ವಿಚಾರಣೆಯಲ್ಲಿ ನಿನೆವೆ ಪಟ್ಟಣದವರು ಈ ಸಂತತಿಯವರೊಂದಿಗೆ ನಿಂತು ಇವರನ್ನು ಅಪರಾಧಿಗಳೆಂದು ಖಂಡಿಸುವರು. ಅವರು ಯೋನನು ಸಾರಿದ ವಾಕ್ಯವನ್ನು ಕೇಳಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡರು. ಆದರೆ ಇಗೋ, ಯೋನನಿಗಿಂತಲೂ ಉನ್ನತನಾದವನು ಇಲ್ಲಿದ್ದಾನೆ.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು