Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಫೆಬ್ರವರಿ 2027 › 2 ಫೆಬ್ರವರಿ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 2 ಫೆಬ್ರವರಿ 2027

ಮಂಗಳವಾರ · ಸಾಮಾನ್ಯ ಕಾಲದ ನಾಲ್ಕನೆಯ ವಾರ

ಹಬ್ಬಗಳು ಮತ್ತು ಸಂತರು

ಕರ್ತನ ಸಮರ್ಪಣೆ

ಹಬ್ಬ · ಆರಾಧನಾ ಬಣ್ಣ: ಬಿಳಿ

ದಿನದ ವಾಚನಗಳು

ಮೊದಲನೆಯ ವಾಚನ

ಮಲಾ 3:1–4

ಅಥವಾ: ಇಬ್ರಿ 2:14–18

1“ಇಗೋ, ನನ್ನ ದೂತನನ್ನು ಕಳುಹಿಸುತ್ತೇನೆ, ಆತನು ನನ್ನ ಮುಂದೆ ದಾರಿಯನ್ನು ಸರಿಮಾಡುವನು; ನೀವು ಹಂಬಲಿಸುವ ಕರ್ತನು ತನ್ನ ಆಲಯಕ್ಕೆ ಪಕ್ಕನೇ ಬರುವನು; ಆಹಾ, ನಿಮಗೆ ಇಷ್ಟನಾದ ಒಡಂಬಡಿಕೆಯ ದೂತನು ಬರುತ್ತಾನೆ” ಇದು ಸೇನಾಧೀಶ್ವರನಾದ ಯೆಹೋವನ ನುಡಿ. 2ಆತನು ಬರುವ ದಿನವನ್ನು ಯಾರು ತಾಳಾರು? ಆತನು ಕಾಣಿಸಿಕೊಳ್ಳುವಾಗ ಯಾರು ನಿಂತಾರು? ಆತನು ಅಕ್ಕಸಾಲಿಗನ ಬೆಂಕಿಗೂ, ಅಗಸನ ಸಾಬೂನಿಗೂ ಸಮಾನನಾಗಿದ್ದಾನೆ. 3ಬೆಳ್ಳಿಯನ್ನು ಶೋಧಿಸುವ ಅಕ್ಕಸಾಲಿಗನಂತೆ ಕುಳಿತು ಲೇವಿ ವಂಶದವರನ್ನು ಶೋಧಿಸಿ ಬೆಳ್ಳಿಬಂಗಾರಗಳನ್ನೋ ಎಂಬಂತೆ ಶುದ್ಧೀಕರಿಸುವನು; ಅವರು ಸದ್ಧರ್ಮಿಗಳಾಗಿ ಯೆಹೋವನಿಗೆ ನೈವೇದ್ಯಗಳನ್ನು ತಂದೊಪ್ಪಿಸುವರು. 4ಆಗ ಯೆಹೂದದ ಮತ್ತು ಯೆರೂಸಲೇಮಿನ ನೈವೇದ್ಯವು, ಪೂರ್ವದಿನಗಳಲ್ಲಿ ಪುರಾತನ ಕಾಲದಲ್ಲಿ ಯೆಹೋವನಿಗೆ ಮೆಚ್ಚಿಕೆಯಾದಂತೆ ಆಗಿರುವುದು.

ಪ್ರತಿವಚನ ಕೀರ್ತನೆ

ಕೀರ್ತ 24:7–10

7ದ್ವಾರಗಳೇ, ಉನ್ನತವಾಗಿರ್ರಿ! ಪುರಾತನವಾದ ಕದಗಳೇ ತೆರೆದುಕೊಂಡಿರ್ರಿ! ಮಹಾಮಹಿಮೆಯುಳ್ಳ ಅರಸನು ಆಗಮಿಸುತ್ತಾನೆ. 8ಮಹಾಮಹಿಮೆಯುಳ್ಳ ಈ ಅರಸನು ಯಾರು? ಮಹಾ ಬಲಿಷ್ಠನೂ, ವಿಶೇಷ ಪರಾಕ್ರಮಿಯೂ ಆಗಿರುವ ಯೆಹೋವ, ಯುದ್ಧವೀರನಾಗಿರುವ ಯೆಹೋವ. 9ದ್ವಾರಗಳೇ, ಉನ್ನತವಾಗಿರ್ರಿ! ಪುರಾತನವಾದ ಕದಗಳೇ, ತೆರೆದುಕೊಂಡಿರ್ರಿ! ಮಹಾಮಹಿಮೆಯುಳ್ಳ ಅರಸನು ಆಗಮಿಸುತ್ತಾನೆ. 10ಮಹಾಮಹಿಮೆಯುಳ್ಳ ಈ ಅರಸನು ಯಾರು? ಸೇನಾಧೀಶ್ವರನಾದ ಯೆಹೋವನೇ, ಮಹಾಮಹಿಮೆಯುಳ್ಳ ಅರಸನು ಈತನೇ. ಸೆಲಾ.

ಸುವಾರ್ತೆ

ಲೂಕ 2:22–40

22ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಅವರ ಶುದ್ಧೀಕರಣದ ದಿನಗಳು ಮುಗಿದ ಮೇಲೆ, “ಚೊಚ್ಚಲು ಗಂಡೆಲ್ಲಾ ಕರ್ತನಿಗೆ ಮೀಸಲೆನಿಸಿಕೊಳ್ಳುವುದು” ಎಂದು ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ, ಅವರು ಆ ಕೂಸನ್ನು ಕರ್ತನಿಗೆ ಸಮರ್ಪಿಸುವುದಕ್ಕಾಗಿ ಯೆರೂಸಲೇಮಿಗೆ ತೆಗೆದುಕೊಂಡು ಹೋದರು. 24ಇದಲ್ಲದೆ ಕರ್ತನ ಧರ್ಮಶಾಸ್ತ್ರದಲ್ಲಿ ಹೇಳಿರುವಂತೆ ಅವರು “ಒಂದು ಜೋಡಿ ಬೆಳವಕ್ಕಿಯನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ” ಬಲಿಕೊಡಬೇಕಾಗಿತ್ತು. 25ಆ ಕಾಲದಲ್ಲಿ ಯೆರೂಸಲೇಮಿನಲ್ಲಿ ಸಿಮೆಯೋನನೆಂಬ ಒಬ್ಬ ಮನುಷ್ಯನಿದ್ದನು. ಈ ಮನುಷ್ಯನು ನೀತಿವಂತನೂ ದೇವಭಕ್ತನೂ ಆಗಿದ್ದನು. ಇಸ್ರಾಯೇಲರನ್ನು ಸಂತೈಸುವವನು ಯಾವಾಗ ಬರುವನೋ ಎಂದು ನಿರೀಕ್ಷಿಸುತ್ತಾ ಇದ್ದನು ಮತ್ತು ಆತನು ಪವಿತ್ರಾತ್ಮಭರಿತನಾಗಿದ್ದನು. 26ಇದಲ್ಲದೆ, ಕರ್ತನು ಕಳುಹಿಸಬೇಕಾದ ಕ್ರಿಸ್ತನನ್ನು ಕಾಣುವುದಕ್ಕಿಂತ ಮುಂಚೆ ನೀನು ಸಾಯುವುದಿಲ್ಲವೆಂದು ಪವಿತ್ರಾತ್ಮನ ಮೂಲಕ ಅವನಿಗೆ ದೈವೋಕ್ತಿ ಉಂಟಾಗಿತ್ತು. 27ಇವನು ಪವಿತ್ರಾತ್ಮನ ಪ್ರೇರಣೆಯಿಂದ ದೇವಾಲಯಕ್ಕೆ ಬಂದನು. ಆಗ ತಂದೆತಾಯಿಗಳು ಮಗುವಾದ ಯೇಸುವನ್ನು ಧರ್ಮಶಾಸ್ತ್ರದಲ್ಲಿ ಹೇಳಿರುವ ಪದ್ಧತಿಯ ಪ್ರಕಾರ ನಡೆಸಬೇಕೆಂದು ಮಗುವನ್ನು ಒಳಕ್ಕೆ ತರಲು, 28ಸಿಮೆಯೋನನು ಆ ಮಗುವನ್ನು ತನ್ನ ಕೈಯಲ್ಲಿ ಎತ್ತಿಕೊಂಡು ದೇವರನ್ನು ಕೊಂಡಾಡುತ್ತಾ, 29“ಕರ್ತನೇ, ನಿನ್ನ ಮಾತು ನೆರವೇರಿತು; ಈಗ ಸಮಾಧಾನದಿಂದ ಹೋಗುವುದಕ್ಕೆ ನಿನ್ನ ದಾಸನಿಗೆ ಅಪ್ಪಣೆಯಾಯಿತು. 30ನೀನು ಎಲ್ಲಾ ಜನರ ಸಮ್ಮುಖದಲ್ಲಿ ಸಿದ್ಧಪಡಿಸಿದ ಆ ರಕ್ಷಣೆಯನ್ನು ನಾನು ಕಣ್ಣಾರೆ ಕಂಡೆನು. 32ಆತನು ಅನ್ಯಜನರಿಗೆ ಜ್ಞಾನೋದಯದ ಬೆಳಕು, ನಿನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೆ ಕೀರ್ತಿ” ಅಂದನು. 33ಆ ಮಗುವಿನ ವಿಷಯವಾಗಿ ಹೇಳಿದ ಈ ಮಾತುಗಳಿಗೆ ಅದರ ತಂದೆತಾಯಿಗಳು ಆಶ್ಚರ್ಯಪಡುತ್ತಿರಲು, 34ಸಿಮೆಯೋನನು ಅವರನ್ನು ಆಶೀರ್ವದಿಸಿ ತಾಯಿಯಾದ ಮರಿಯಳಿಗೆ, “ಇಗೋ, ಈತನು ಇಸ್ರಾಯೇಲ್ ಜನರಲ್ಲಿ ಅನೇಕರು ಬೀಳುವುದಕ್ಕೂ, ಅನೇಕರು ಏಳುವುದಕ್ಕೂ ಕಾರಣನಾಗಿರುವನು ಮತ್ತು ಜನರು ವಿರೋಧಿಸಿ ಮಾತನಾಡುವುದಕ್ಕೂ ಗುರುತಾಗಿರುವನು; 35ಹೀಗೆ ಬಹುಜನರ ಹೃದಯದ ಆಲೋಚನೆಗಳು ಬಹಿರಂಗವಾಗುವವು; ಈ ಕಾರಣಕ್ಕಾಗಿ ಈತನು ಹುಟ್ಟಿದ್ದು. ಇದಲ್ಲದೆ ನಿನ್ನ ಸ್ವಂತ ಮನಸ್ಸಿಗಂತೂ ಅಲಗು ನಾಟಿದಂತೆ ವೇದನೆ ಉಂಟಾಗುತ್ತದೆ” ಎಂದು ಹೇಳಿದನು. 36ಇದಲ್ಲದೆ ಅಸೇರನ ಕುಲದ ಫನುವೇಲನ ಮಗಳಾದ ಅನ್ನಳೆಂಬ ಒಬ್ಬ ಪ್ರವಾದಿನಿ ಇದ್ದಳು. ಆಕೆ ಬಹಳ ಮುಪ್ಪಿನವಳು. ಮದುವೆಯಾಗಿ ಏಳು ವರ್ಷ ಗಂಡನ ಕೂಡ ಸಂಸಾರ ಮಾಡಿ ವಿಧವೆಯಾಗಿದ್ದಳು, 37ಅವಳು ಎಂಭತ್ತುನಾಲ್ಕು ವರ್ಷದವಳಾಗಿದ್ದಳು. ಆಕೆ ದೇವಾಲಯವನ್ನು ಬಿಟ್ಟುಹೋಗದೆ ಉಪವಾಸ ವಿಜ್ಞಾಪನೆಗಳಿಂದ ರಾತ್ರಿ ಹಗಲೂ ದೇವರನ್ನು ಆರಾಧಿಸುತ್ತಿದ್ದಳು. 38ಆಕೆ ಅದೇ ಗಳಿಗೆಯಲ್ಲಿ ಅವರ ಹತ್ತಿರಕ್ಕೆ ಬಂದು ದೇವರಿಂದಾದ ಉಪಕಾರವನ್ನು ನೆನಸಿ ಕೊಂಡಾಡಿದ್ದಲ್ಲದೆ ಯೆರೂಸಲೇಮಿನ ಬಿಡುಗಡೆಯನ್ನು ಹಾರೈಸುತ್ತಿದ್ದವರೆಲ್ಲರ ಸಂಗಡ ಆತನ ವಿಷಯವಾಗಿ ಮಾತನಾಡುವವಳಾದಳು. 39ಇತ್ತಲಾಗಿ ಅವರು ಧರ್ಮಶಾಸ್ತ್ರದಲ್ಲಿ ಹೇಳಿರುವ ಕಾರ್ಯಗಳನ್ನೆಲ್ಲಾ ನೆರವೇರಿಸಿದ ಮೇಲೆ ಗಲಿಲಾಯಕ್ಕೆ ಸೇರಿದ ನಜರೇತೆಂಬ ತಮ್ಮ ಊರಿಗೆ ಹಿಂತಿರುಗಿ ಹೋದರು. 40ಆ ಬಾಲಕನು ಬೆಳೆದು ಬಲಗೊಂಡು ಜ್ಞಾನದಿಂದ ತುಂಬಿದವನಾದನು; ಮತ್ತು ಆತನ ಮೇಲೆ ದೇವರ ಕೃಪೆ ಇತ್ತು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು