ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜನವರಿ 2027 › 29 ಜನವರಿ
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 29 ಜನವರಿ 2027
ಶುಕ್ರವಾರ · ಸಾಮಾನ್ಯ ಕಾಲದ ಮೂರನೆಯ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ ಮೂರನೆಯ ವಾರದ ಶುಕ್ರವಾರ
ವಾರದ ದಿನ · ಆರಾಧನಾ ಬಣ್ಣ: ಹಸಿರು
ಉಪವಾಸ ಮತ್ತು ಪ್ರಾಯಶ್ಚಿತ್ತ
ಪ್ರಾಯಶ್ಚಿತ್ತದ ದಿನ
ಪ್ರತಿ ಶುಕ್ರವಾರವೂ ಪ್ರಾಯಶ್ಚಿತ್ತದ ದಿನ; ಅದನ್ನು ಹೇಗೆ ಆಚರಿಸಬೇಕು ಎಂಬುದನ್ನು ಪ್ರತಿಯೊಂದು ಬಿಷಪರ ಸಮ್ಮೇಳನ ನಿರ್ಧರಿಸುತ್ತದೆ: ಮಾಂಸ ವರ್ಜನೆ ಅಥವಾ ಬೇರೊಂದು ಪ್ರಾಯಶ್ಚಿತ್ತ ಕಾರ್ಯ. ಉಪವಾಸ 18 ರಿಂದ 59 ವರ್ಷದವರಿಗೆ, ಮಾಂಸ ವರ್ಜನೆ 14 ವರ್ಷದಿಂದ ಕಡ್ಡಾಯ.
ದಿನದ ವಾಚನಗಳು
ಮೊದಲನೆಯ ವಾಚನ
32ಹೀಗಿರಲಾಗಿ ನೀವು ಜ್ಞಾನಪ್ರಕಾಶವನ್ನು ಹೊಂದಿದ ಮೇಲೆ ಕಷ್ಟಾನುಭವವೆಂಬ ಬಹು ಹೋರಾಟವನ್ನು ಸಹಿಸಿಕೊಂಡ ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿರಿ. 33ಕೆಲವು ಸಾರಿ ನೀವು ನಿಂದೆಗಳನ್ನೂ, ಸಂಕಟಗಳನ್ನೂ, ಅನುಭವಿಸಿ ಹಾಸ್ಯಕ್ಕೆ ಗುರಿಯಾದಿರಿ. ಕೆಲವು ಸಾರಿ ಅಂಥವುಗಳನ್ನು ಅನುಭವಿಸಿದವರಲ್ಲಿ ಪಾಲುಗಾರರಾಗಿದ್ದು ಕಷ್ಟಾನುಭವಿಗಳಾದಿರಿ. 34ನೀವು ಸೆರೆಯವರಿಗೆ ಅನುತಾಪ ತೋರಿಸಿ, ನಿಮಗೋಸ್ಕರವಾಗಿ ಉತ್ತಮವಾಗಿಯೂ, ಸ್ಥಿರವಾಗಿಯೂ ಇರುವ ಆಸ್ತಿಯುಂಟೆಂದು ಚೆನ್ನಾಗಿ ಅರಿತುಕೊಂಡು, ನಿಮ್ಮ ಸೊತ್ತನ್ನು ಸುಲುಕೊಳ್ಳುವವರಿಗೆ ಸಂತೋಷದಿಂದ ಬಿಟ್ಟು ಕೊಟ್ಟಿದ್ದೀರಿ. 35ಆದ್ದರಿಂದ ನಿಮ್ಮ ಧೈರ್ಯವನ್ನು ಬಿಟ್ಟುಬಿಡಬೇಡಿರಿ. ಅದಕ್ಕೆ ಮಹಾ ಪ್ರತಿಫಲ ಉಂಟು. 36ನೀವು ದೇವರ ಚಿತ್ತವನ್ನು ನೆರವೇರಿಸಿದ ಮೇಲೆ ವಾಗ್ದಾನವನ್ನು ಹೊಂದಬೇಕಾದರೆ ನಿಮಗೆ ತಾಳ್ಮೆಯು ಅವಶ್ಯವಾಗಿದೆ. 37“ಬರುವಾತನು ಇನ್ನು ಸ್ವಲ್ಪ ಕಾಲದಲ್ಲಿ ಬರುವನು ತಡಮಾಡುವುದಿಲ್ಲ. 38ಆದರೆ ನನ್ನವನಾಗಿರುವ ನೀತಿವಂತನು ನಂಬಿಕೆಯಿಂದಲೇ ಬದುಕುವನು, ಅವನು ಅದರಿಂದ ಹಿಂಜರಿದರೆ ಅವನಲ್ಲಿ ನನಗೆ ಮೆಚ್ಚಿಕೆಯಿರುವುದಿಲ್ಲ.” 39ನಾವಾದರೋ ಹಿಂಜರಿದವರಾಗಿ ನಾಶವಾಗುವವರಲ್ಲ, ನಂಬುವವರಾಗಿ ಆತ್ಮರಕ್ಷಣೆಯನ್ನು ಹೊಂದುವವರಾಗಿದ್ದೇವೆ.
ಪ್ರತಿವಚನ ಕೀರ್ತನೆ
3ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು; ದೇಶದಲ್ಲಿ ವಾಸವಾಗಿದ್ದು ನಂಬಿಕೆಯನ್ನು ಅನುಸರಿಸು. 4ನೀನು ಯೆಹೋವನಲ್ಲಿ ಸಂತೋಷಿಸು; ಆಗ ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು. 5ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು. 6ಆತನು ನಿನ್ನ ನೀತಿಯನ್ನು ಉದಯದ ಬೆಳಕಿನಂತೆಯೂ, ನಿನ್ನ ನ್ಯಾಯವನ್ನು ಮಧ್ಯಾಹ್ನದ ತೇಜಸ್ಸಿನಂತೆಯೂ ಪ್ರಕಾಶಗೊಳಿಸುವನು. 23ಸತ್ಪುರುಷನ ಗತಿಸ್ಥಾಪನೆಯು ಯೆಹೋವನಿಂದಲೇ ಆಗಿದೆ, ಆತನು ಅವನ ಪ್ರವರ್ತನೆಯನ್ನು ಮೆಚ್ಚುತ್ತಾನೆ. 24ಅವನು ಕೆಳಗೆ ಬಿದ್ದರೂ ಏಳದೆ ಹೋಗುವುದಿಲ್ಲ; ಯೆಹೋವನು ಅವನನ್ನು ಕೈಹಿಡಿದು ಉದ್ಧಾರ ಮಾಡುವನು. 39ನೀತಿವಂತರ ರಕ್ಷಣೆ ಯೆಹೋವನಿಂದಲೇ; ಇಕ್ಕಟ್ಟಿನಲ್ಲಿ ಆತನೇ ಅವರಿಗೆ ದುರ್ಗಸ್ಥಾನ. 40ಯೆಹೋವನು ಸಹಾಯಕನಾಗಿ ಅವರನ್ನು ತಪ್ಪಿಸಿ ಬಿಡುವನು; ಅವರು ಆತನ ಆಶ್ರಿತರಾದುದರಿಂದ, ಆತನು ಅವರನ್ನು ದುಷ್ಟರ ಕೈಯಿಂದ ತಪ್ಪಿಸಿ ರಕ್ಷಿಸುವನು.
ಸುವಾರ್ತೆ
26ಇದಲ್ಲದೆ ಆತನು ಅವರಿಗೆ ಮತ್ತೆ ಹೇಳಿದೇನಂದರೆ; “ಒಬ್ಬನು ಭೂಮಿಯಲ್ಲಿ ಬೀಜವನ್ನು ಬಿತ್ತಿದ ನಂತರ ಅವನು ರಾತ್ರಿಯಲ್ಲಿ ಮಲಗಿದ್ದಾಗಲೂ, ಹಗಲು ಎಚ್ಚರವಿರುವಾಗಲೂ 27ಅವನಿಗೆ ತಿಳಿಯದ ರೀತಿಯಲ್ಲಿ ಆ ಬೀಜದ ಸಸಿ ಮೊಳೆತು ಬೆಳೆಯುವುದು. ಇದರಂತೆ ದೇವರ ರಾಜ್ಯವೂ ಕೂಡ. 28ಭೂಮಿಯು ಮೊದಲು ಮೊಳಕೆಯನ್ನೂ, ಆ ಮೇಲೆ ತೆನೆಯನ್ನೂ, ತರುವಾಯ ತೆನೆಯಲ್ಲಿ ತುಂಬಾ ಕಾಳನ್ನೂ ತನ್ನಷ್ಟಕ್ಕೆ ತಾನೇ ಹುಟ್ಟಿಸುತ್ತದೆ. 29ಆದರೆ ಫಲಮಾಗಿದಾಗ ಸುಗ್ಗಿಕಾಲ ಬಂದಿತೆಂದು ವ್ಯವಸಾಯಗಾರನು ಅದನ್ನು ಕೊಯ್ಯಲು ಕುಡುಗೋಲನ್ನು ಬಳಸುತ್ತಾನೆ” ಅಂದನು. 30ಇನ್ನೂ ಆತನು ಹೇಳಿದ್ದು; “ದೇವರ ರಾಜ್ಯವನ್ನು ಯಾವುದಕ್ಕೆ ಹೋಲಿಸೋಣ? ಯಾವ ಸಾಮ್ಯದಿಂದ ಅದನ್ನು ತೋರಿಸಿಕೊಡೋಣ? 31ಅದು ಸಾಸಿವೆ ಕಾಳಿನಂತಿರುತ್ತದೆ. ನೆಲದಲ್ಲಿ ಬಿತ್ತುವಾಗ ಅದು ಭೂಮಿಯಲ್ಲಿರುವ ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದೆ. 32ಬಿತ್ತಿದ ಮೇಲೆ ಅದು ಬೆಳೆದು ಎಲ್ಲಾ ಗಿಡಗಳಿಗಿಂತ ದೊಡ್ಡದಾಗಿ ದೊಡ್ಡದೊಡ್ಡ ಕೊಂಬೆಗಳನ್ನು ಬಿಡುವುದರಿಂದ ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ನೆರಳಿನಲ್ಲಿ ವಾಸಮಾಡುವುದಕ್ಕಾಗುತ್ತದೆ” ಅಂದನು. 33ಆತನು ಈ ರೀತಿಯ ಅನೇಕ ಸಾಮ್ಯಗಳಿಂದ ಜನರಿಗೆ ಅರ್ಥವಾಗುವ ಹಾಗೆ ದೇವರ ವಾಕ್ಯವನ್ನು ಹೇಳುತ್ತಿದ್ದನು. 34ಸಾಮ್ಯಗಳಿಲ್ಲದೆ ಆತನು ಒಂದನ್ನೂ ಹೇಳಲಿಲ್ಲಾ. ಆದರೆ ಏಕಾಂತವಾಗಿರುವಾಗ ಆತನು ತನ್ನ ಆಪ್ತ ಶಿಷ್ಯರಿಗೆ ಎಲ್ಲವನ್ನು ವಿವರಿಸಿ ಹೇಳುತ್ತಿದ್ದನು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು