ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜನವರಿ 2027 › 27 ಜನವರಿ
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 27 ಜನವರಿ 2027
ಬುಧವಾರ · ಸಾಮಾನ್ಯ ಕಾಲದ ಮೂರನೆಯ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ ಮೂರನೆಯ ವಾರದ ಬುಧವಾರ
ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಹಸಿರು
ಸಂತ ಏಂಜೆಲಾ ಮೆರಿಚಿ, ಕನ್ಯೆ · ಐಚ್ಛಿಕ ಸ್ಮರಣೆ
ದಿನದ ವಾಚನಗಳು
ಮೊದಲನೆಯ ವಾಚನ
11ಇದಲ್ಲದೆ ಪ್ರತಿಯೊಬ್ಬ ಯಾಜಕನು ಪ್ರತಿದಿನ ಸೇವೆಮಾಡುತ್ತಾ, ಎಂದಿಗೂ ಪಾಪಗಳನ್ನು ತೆಗೆದು ಹಾಕಲಾರದಂಥ, ಒಂದೇ ವಿಧವಾದ ಯಜ್ಞಗಳನ್ನು ಪದೇ ಪದೇ ಸಮರ್ಪಿಸುತ್ತಾ ನಿಂತುಕೊಂಡಿರುವನು. 12ಆದರೆ ಕ್ರಿಸ್ತನು ಪಾಪಗಳಿಗೋಸ್ಕರ ಸದಾಕಾಲಕ್ಕೂ ಒಂದೇ ಯಜ್ಞವನ್ನು ಸಮರ್ಪಿಸಿದ ಮೇಲೆ ದೇವರ ಬಲಗಡೆಯಲ್ಲಿ ಕುಳಿತುಕೊಂಡನು. 13ಅಂದಿನಿಂದ ತನ್ನ ವಿರೋಧಿಗಳು ತನ್ನ ಪಾದಪೀಠವಾಗಿ ಮಾಡಲ್ಪಡುವ ತನಕ ಆತನು ಕಾಯುತ್ತಿರುವನು. 14ಆತನು ಶುದ್ಧೀಕರಿಸಲ್ಪಡುವವರನ್ನು ಒಂದೇ ಸಮರ್ಪಣೆಯಿಂದ ನಿರಂತರವಾಗಿ ಪರಿಪೂರ್ಣರನ್ನಾಗಿ ಮಾಡಿದ್ದಾನೆ. 15ಪವಿತ್ರಾತ್ಮನು ಸಹ ನಮಗೆ ಸಾಕ್ಷಿಕೊಡುವಾತನಾಗಿ, 16“ಆ ದಿನಗಳು ಬಂದ ಮೇಲೆ ನಾನು ಅವರ ಸಂಗಡ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು, ನನ್ನ ಆಜ್ಞೆಗಳನ್ನು ಅವರ ಹೃದಯಗಳಲ್ಲಿ ಇಡುವೆನು, ಅವರ ಮನಸ್ಸಿನಲ್ಲಿ ಅವುಗಳನ್ನು ಬರೆಯುವೆನು ಎಂದು ಕರ್ತನು ನುಡಿಯುತ್ತಾನೆ.” ಎಂಬುದಾಗಿ ಹೇಳಿದ ತರುವಾಯ ಇನ್ನು, 17“ಅವರ ಪಾಪಗಳನ್ನೂ ಅವರ ದುಷ್ಕೃತ್ಯಗಳನ್ನೂ ನನ್ನ ನೆನಪಿಗೆ ಎಂದಿಗೂ ತಂದುಕೊಳ್ಳುವುದಿಲ್ಲ.” ಎಂದು ಹೇಳುತ್ತಾನೆ. 18ಪಾಪ ಕ್ಷಮಾಪಣೆಯಾದಲ್ಲಿ ಇನ್ನೂ ಅವುಗಳ ವಿಷಯದಲ್ಲಿ ಯಜ್ಞಗಳನ್ನು ಸಮರ್ಪಣೆಮಾಡುವಂಥ ಅವಶ್ಯಕತೆ ಇಲ್ಲ.
ಪ್ರತಿವಚನ ಕೀರ್ತನೆ
1ದಾವೀದನ ಕೀರ್ತನೆ. ಯೆಹೋವನು ನನ್ನ ಒಡೆಯನಿಗೆ, “ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಪೀಠವಾಗುವಂತೆ ಮಾಡುವ ತನಕ, ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂದು ನುಡಿದನು. 2ಯೆಹೋವನು ನಿನ್ನ ರಾಜದಂಡದ ಆಳ್ವಿಕೆಯನ್ನು ಚೀಯೋನಿನ ಹೊರಗೂ ಹಬ್ಬಿಸುವನು; ನಿನ್ನ ವೈರಿಗಳ ಮಧ್ಯದಲ್ಲಿ ದೊರೆತನ ಮಾಡು. 3ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ, ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು. ಪರಿಶುದ್ಧ ವಸ್ತ್ರಭೂಷಿತರಾದ ನಿನ್ನ ಯುವ ಸೈನಿಕರು, ಉದಯಕಾಲದ ಇಬ್ಬನಿಯಂತಿರುವರು. 4“ನೀನು ಸದಾಕಾಲವೂ ಮೆಲ್ಕಿಜೆದೇಕನ ತರಹ ಯಾಜಕನಾಗಿರುವೆ” ಎಂದು ಯೆಹೋವನು ಆಣೆಯಿಟ್ಟು ನುಡಿದಿದ್ದಾನೆ; ಪಶ್ಚಾತ್ತಾಪಡುವುದಿಲ್ಲ.
ಸುವಾರ್ತೆ
1ಯೇಸುವು ಪುನಃ ಸಮುದ್ರದ ದಡದಲ್ಲಿ ಉಪದೇಶ ಮಾಡತೊಡಗಿದ್ದನು. ಬಹುಜನರು ಆತನ ಬಳಿಗೆ ಸೇರಿಬಂದಿದ್ದರಿಂದ ಆತನು ಸಮುದ್ರದಲ್ಲಿದ್ದ ದೋಣಿಹತ್ತಿ ಕುಳಿತುಕೊಂಡನು; ಆ ಜನರೆಲ್ಲರು ಸಮುದ್ರದ ದಡದಲ್ಲಿ ಸುತ್ತಲೂ ನೆರೆದುಬಂದಿದ್ದರು. 2ಆಗ ಆತನು ಅವರಿಗೆ ಸಾಮ್ಯರೂಪವಾಗಿ ಅನೇಕ ಸಂಗತಿಗಳನ್ನು ಉಪದೇಶಮಾಡಿದನು. ಆ ಉಪದೇಶದಲ್ಲಿ ಅವರಿಗೆ ಹೇಳಿದ್ದೇನಂದರೆ: 3“ಕೇಳಿರಿ! ಬಿತ್ತುವವನು ಬಿತ್ತುವುದಕ್ಕೆ ಹೊರಟನು. 4ಬಿತ್ತುವಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು; ಪಕ್ಷಿಗಳು ಬಂದು ಅವುಗಳನ್ನು ತಿಂದುಬಿಟ್ಟವು. 5ಬೇರೆ ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಬಂಡೆಯ ನೆಲದ ಮೇಲೆ ಬಿದ್ದವು; ಅಲ್ಲಿ ಮಣ್ಣು ಆಳವಾಗಿಲ್ಲದ್ದರಿಂದ ಅವು ಬೇಗ ಮೊಳೆತವು; 6ಆದರೆ ಬಿಸಿಲೇರಿದಾಗ ಬಾಡಿ, ಬೇರಿಲ್ಲದ ಕಾರಣ ಒಣಗಿ ಹೋದವು. 7ಮತ್ತೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು; ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟದ್ದರಿಂದ ಅವು ಫಲಕೊಡಲಿಲ್ಲ. 8ಇನ್ನು ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದು ಮೊಳೆತು ಬೆಳೆದು ಬಂದು ಫಲಕೊಟ್ಟವು; ಅವುಗಳಲ್ಲಿ ಕೆಲವು ಮೂವತ್ತರಷ್ಟು, ಕೆಲವು ಅರುವತ್ತರಷ್ಟು, ಕೆಲವು ನೂರರಷ್ಟು ಫಲವನ್ನು ಕೊಟ್ಟವು.” 9ಮತ್ತು ಆತನು “ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ” ಅಂದನು. 10ಆತನು ಒಬ್ಬನೇ ಇದ್ದಾಗ, ಆತನಿಗೆ ಹತ್ತಿರವಾಗಿದ್ದವರು ಹನ್ನೆರಡು ಮಂದಿ ಶಿಷ್ಯರ ಸಂಗಡ ಆ ಸಾಮ್ಯಗಳ ವಿಷಯವಾಗಿ ಆತನನ್ನು ಕೇಳಿದರು. 11ಆತನು ಅವರಿಗೆ, “ದೇವರ ರಾಜ್ಯದ ರಹಸ್ಯ ನಿಮಗೆ ದೊರೆತಿದೆ; ಆದರೆ ಹೊರಗಿನವರಿಗೆ ಎಲ್ಲವನ್ನು ಸಾಮ್ಯಗಳ ರೂಪದಲ್ಲಿ ಹೇಳಿದ್ದೇನೆ.” 12“ಅವರು ಕಣ್ಣಾರೆ ಕಂಡರೂ ಗ್ರಹಿಸಲಿಲ್ಲ, ಕಿವಿಯಾರೆ ಕೇಳಿದರೂ ತಿಳಿದುಕೊಳ್ಳಲಿಲ್ಲ, ಹಾಗೆ ಕಂಡು ತಿಳಿದುಕೊಂಡಿದ್ದರೆ ಅವರು ದೇವರ ಕಡೆಗೆ ತಿರುಗಿಕೊಂಡು ಪಾಪಕ್ಷಮೆಯನ್ನು ಹೊಂದುತ್ತಿದ್ದರು.” 13ಅನಂತರ ಆತನು ಅವರಿಗೆ ಹೇಳಿದ್ದೇನಂದರೆ, “ಈ ಸಾಮ್ಯದ ಅರ್ಥ ನಿಮಗೆ ಗೊತ್ತಾಗಲಿಲ್ಲವೋ? ಹಾಗಾದರೆ ಎಲ್ಲಾ ಸಾಮ್ಯಗಳನ್ನು ಹೇಗೆ ತಿಳಿದುಕೊಳ್ಳುವಿರಿ? 14ಆ ಬಿತ್ತುವವನು ವಾಕ್ಯವೆಂಬ ಬೀಜವನ್ನು ಬಿತ್ತುತ್ತಾನೆ. 15ಕೆಲವರು ವಾಕ್ಯವನ್ನು ಕೇಳಿದ ಕೂಡಲೇ ಸೈತಾನನು ಬಂದು ಅವರಲ್ಲಿ ಬಿತ್ತಿದ್ದ ವಾಕ್ಯವನ್ನು ತೆಗೆದುಬಿಡುತ್ತಾನೆ. ಇವರೇ ದಾರಿಯ ಮಗ್ಗುಲಲ್ಲಿ ಬಿತ್ತಲ್ಪಟ್ಟ ಬೀಜವಾಗಿರುವರು. 16“ಅದೇ ಪ್ರಕಾರ ಬೇರೆ ಕೆಲವರು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ; 17ಆದರೆ ಅವರಿಗೆ ಬೇರಿಲ್ಲದ ಕಾರಣ ಇವರು ಸ್ವಲ್ಪ ಕಾಲ ಮಾತ್ರವೇ ಇದ್ದು, ಬಳಿಕ ಆ ವಾಕ್ಯದ ನಿಮಿತ್ತವಾಗಿ ಸಂಕಟವಾಗಲಿ ಹಿಂಸೆಯಾಗಲಿ ಬಂದರೆ ಬೇಗ ಎಡವಿಬೀಳುತ್ತಾರೆ; ಇವರೇ ಬಂಡೆಯ ನೆಲದಲ್ಲಿ ಬಿತ್ತಲ್ಪಟ್ಟ ಬೀಜವಾಗಿರುವರು. 18“ಇನ್ನು ಕೆಲವರು ಮುಳ್ಳುಗಿಡಗಳಲ್ಲಿ ಬಿದ್ದ ಬೀಜವಾಗಿರುವವರು; 19ಇವರು ವಾಕ್ಯವನ್ನು ಕೇಳಿದಾಗ್ಯೂ ಪ್ರಪಂಚದ ಚಿಂತೆಗಳೂ, ಐಶ್ವರ್ಯದಿಂದುಂಟಾಗುವ ವ್ಯಾಮೋಹವೂ, ಇತರ ವಿಷಯಗಳ ಮೇಲಣ ಆಸೆಗಳೂ ಸೇರಿ ಆ ವಾಕ್ಯವನ್ನು ಅಡಗಿಸಿಬಿಡುವುದರಿಂದ ನಿಷ್ಫಲರಾಗಿರುತ್ತಾರೆ. 20ಮತ್ತೆ ಕೆಲವರು ವಾಕ್ಯವನ್ನು ಕೇಳಿ ಕೈಕೊಂಡು ಮೂವತ್ತರಷ್ಟಾಗಲಿ ಅರವತ್ತರಷ್ಟಾಗಲಿ ನೂರರಷ್ಟಾಗಲಿ ಫಲವನ್ನು ಕೊಡುತ್ತಾರೆ; ಇವರೇ ಒಳ್ಳೆಯ ನೆಲದಲ್ಲಿ ಬಿದ್ದ ಬೀಜವಾಗಿರುವವರು” ಅಂದನು.
ಇಂದಿನ ಸಂತರು
- ಸಂತ ಏಂಜೆಲಾ ಮೆರಿಚಿ, ಕನ್ಯೆ
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು