Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜನವರಿ 2027 › 2 ಜನವರಿ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 2 ಜನವರಿ 2027

ಶನಿವಾರ · ಕ್ರಿಸ್ಮಸ್ ಕಾಲ

ಹಬ್ಬಗಳು ಮತ್ತು ಸಂತರು

ಜನವರಿ 2

ಸ್ಮರಣೆ · ಆರಾಧನಾ ಬಣ್ಣ: ಬಿಳಿ

ಸಂತರಾದ ಮಹಾನ್ ಬೇಸಿಲ್ ಮತ್ತು ನಾಜಿಯಾನ್ಜಸ್‌ನ ಗ್ರೆಗೊರಿ, ಧರ್ಮಾಧ್ಯಕ್ಷರು ಮತ್ತು ಧರ್ಮಸಭೆಯ ಪಂಡಿತರು · ಸ್ಮರಣೆ

ದಿನದ ವಾಚನಗಳು

ಮೊದಲನೆಯ ವಾಚನ

1 ಯೋಹಾ 2:22–28

22ಸುಳ್ಳುಗಾರನು ಯಾರು? ಯೇಸುವನ್ನು ಕ್ರಿಸ್ತನಲ್ಲ ಎಂದು ಅಲ್ಲಗಳೆಯುವವನು ಸುಳ್ಳುಗಾರನಾಗಿದ್ದಾಯೇ ಹೊರತು ಮತ್ತಾರು ಆಗಿರಲು ಸಾಧ್ಯ? ತಂದೆಯನ್ನೂ ಮಗನನ್ನೂ ಅಲ್ಲಗಳೆಯುವವನು ಕ್ರಿಸ್ತವಿರೋಧಿಯಾಗಿದ್ದಾನೆ. 23ಯಾರು ದೇವರ ಮಗನನ್ನು ಅಲ್ಲಗಳೆಯುವನೋ ಅವನು ದೇವರಿಗೆ ಸೇರಿದವನಲ್ಲ. ಯಾರು ಮಗನನ್ನು ಒಪ್ಪಿಕೊಳ್ಳುವನೋ ಅವನು ತಂದೆಯಾದ ದೇವರಿಗೆ ಸೇರಿದವನಾಗಿದ್ದಾನೆ. 24ನೀವಂತೂ ಯಾವ ಬೋಧನೆಯನ್ನು ಮೊದಲಿನಿಂದ ಕೇಳಿದ್ದೀರೋ ಅದು ನಿಮ್ಮಲ್ಲಿ ನೆಲೆಗೊಂಡಿರಲಿ. ಮೊದಲಿನಿಂದ ನೀವು ಕೇಳಿದ್ದು ನಿಮ್ಮಲ್ಲಿ ನೆಲೆಗೊಂಡಿದ್ದರೆ ನೀವು ಸಹ ಮಗನಲ್ಲಿಯೂ ತಂದೆಯಾದ ದೇವರಲ್ಲಿಯೂ ನೆಲೆಗೊಂಡಿರುತ್ತೀರಿ. 25ಆತನು ನಮಗೆ ಮಾಡಿರುವ ವಾಗ್ದಾನವು ಅದೇನೆಂದರೆ ನಿತ್ಯಜೀವವೇ ಆಗಿದೆ. 26ನಿಮ್ಮನ್ನು ಸನ್ಮಾರ್ಗದಿಂದ ತಪ್ಪಿಸಿ ತಪ್ಪುದಾರಿಗೆ ಎಳೆಯುವವರ ಕುರಿತಾಗಿ ಇವುಗಳನ್ನು ನಾನು ನಿಮಗೆ ಬರೆದಿದ್ದೇನೆ. 27ಆದರೆ ಆತನಿಂದ ನೀವು ಹೊಂದಿದ ಅಭಿಷೇಕವು ನಿಮ್ಮಲ್ಲಿ ನೆಲೆಗೊಂಡಿರುವುದರಿಂದ ಯಾರೂ ನಿಮಗೆ ಬೋಧನೆ ಮಾಡುವುದು ಅಗತ್ಯವಿಲ್ಲ. ಆತನು ನಿಮಗೆ ಮಾಡಿರುವ ಅಭಿಷೇಕವೇ ನಿಮ್ಮನ್ನು ಎಲ್ಲಾ ವಿಷಯಗಳಲ್ಲಿ ಬೋಧನೆ ಮಾಡುವಂಥದ್ದಾಗಿದೆ ಅದು ಸುಳ್ಳಲ್ಲ ಸತ್ಯವಾಗಿದೆ. ಅದು ನಿಮಗೆ ಬೋಧನೆ ಮಾಡಿದ ಪ್ರಕಾರವೇ ಆತನಲ್ಲಿ ನೆಲೆಗೊಂಡಿರುವಿರಿ. 28ಪ್ರಿಯ ಮಕ್ಕಳೇ, ಆತನು ಪ್ರತ್ಯಕ್ಷನಾಗುವಾಗ ನಾವು ಆತನ ಆಗಮನದಲ್ಲಿ ಆತನ ಮುಂದೆ ನಿಲ್ಲಲು ನಾಚಿಕೆಪಡದೆ ಧೈರ್ಯದಿಂದಿರುವಂತೆ ಆತನಲ್ಲಿ ನೆಲೆಗೊಂಡಿರೋಣ.

ಪ್ರತಿವಚನ ಕೀರ್ತನೆ

ಕೀರ್ತ 98:1–4

1ಯೆಹೋವನಿಗೆ ಹೊಸ ಕೀರ್ತನೆಯನ್ನು ಹಾಡಿರಿ; ಆತನು ಅದ್ಭುತಕೃತ್ಯಗಳನ್ನು ನಡೆಸಿದ್ದಾನೆ. ಆತನ ಬಲಗೈಯೂ, ಪರಿಶುದ್ಧಬಾಹುವೂ ಜಯವನ್ನು ಉಂಟುಮಾಡಿವೆ. 2ಯೆಹೋವನು ತನ್ನ ರಕ್ಷಣೆಯನ್ನು ಪ್ರಕಟಿಸಿದ್ದಾನೆ; ಜನಾಂಗಗಳೆದುರಿಗೆ ತನ್ನ ನೀತಿಯನ್ನು ತೋರ್ಪಡಿಸಿದ್ದಾನೆ. 3ಆತನು ಇಸ್ರಾಯೇಲನ ಮನೆತನದವರ ಬಗ್ಗೆ ಇದ್ದ, ತನ್ನ ಪ್ರೀತಿ, ಸತ್ಯತೆಗಳನ್ನು ನೆನಪುಮಾಡಿಕೊಂಡಿದ್ದಾನೆ. ಭೂಲೋಕದ ಎಲ್ಲಾ ಕಡೆಯವರೂ, ನಮ್ಮ ದೇವರ ರಕ್ಷಣಾಕಾರ್ಯವನ್ನು ನೋಡಿದ್ದಾರೆ. 4ಸಮಸ್ತ ಭೂನಿವಾಸಿಗಳೇ, ಯೆಹೋವನಿಗೆ ಜಯಘೋಷಮಾಡಿರಿ; ಹರ್ಷಿಸಿರಿ, ಉತ್ಸಾಹಧ್ವನಿಮಾಡಿ ಹಾಡಿರಿ.

ಸುವಾರ್ತೆ

ಯೋಹಾ 1:19–28

19ಯೆಹೂದ್ಯರು ಯೆರೂಸಲೇಮಿನಿಂದ ಯಾಜಕರನ್ನೂ, ಲೇವಿಯರನ್ನೂ ಯೋಹಾನನ ಬಳಿಗೆ ಕಳುಹಿಸಿ, “ನೀನು ಯಾರು?” ಎಂದು ಕೇಳಿದ್ದಕ್ಕೆ, 20ಅವನು ಮರೆಮಾಡದೆ ಎಲ್ಲರ ಮುಂದೆ, “ನಾನು ಕ್ರಿಸ್ತನಲ್ಲ,” ಎಂದು ಹೇಳಿದನು. 21ಅದಕ್ಕೆ ಅವರು, “ಹಾಗಾದರೆ ನೀನು ಯಾರು? ಎಲೀಯನೋ?” ಎಂದು ಕೇಳಿದರು. ಅದಕ್ಕೆ ಅವನು, “ನಾನು ಎಲೀಯನಲ್ಲ” ಅಂದನು. “ನೀನು ಬರಬೇಕಾದ ಆ ಪ್ರವಾದಿಯೋ?” ಎಂದು ಕೇಳಿದ್ದಕ್ಕೆ “ಅಲ್ಲ,” ಅಂದನು. 22ಆಗ ಅವರು, “ಹಾಗಾದರೆ ನೀನು ಯಾರು? ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರ ಕೊಡಬೇಕಲ್ಲಾ. ನಿನ್ನ ವಿಷಯವಾಗಿ ನೀನು ಏನು ಹೇಳುತ್ತೀ?” ಎಂದು ಕೇಳಿದರು. 23ಅದಕ್ಕೆ ಯೋಹಾನನು, “ಪ್ರವಾದಿಯಾದ ಯೆಶಾಯನು ಹೇಳಿದಂತೆ, ‘ಕರ್ತನ ದಾರಿಯನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವವನ ಧ್ವನಿಯೇ ನಾನು’” ಎಂದು ಉತ್ತರ ಕೊಟ್ಟನು. 24ಅಲ್ಲಿ ಬಂದವರು ಫರಿಸಾಯರ ಕಡೆಯವರಾಗಿದ್ದರು. 25ಅವರು ಅವನಿಗೆ, “ನೀನು ಕ್ರಿಸ್ತನಾಗಲಿ, ಎಲೀಯನಾಗಲಿ ಆ ಪ್ರವಾದಿಯಾಗಲಿ ಆಗಿರದಿದ್ದರೆ, ನೀನು ದೀಕ್ಷಾಸ್ನಾನ ಕೊಡುವುದೇಕೆ?” ಎಂದು ಪ್ರಶ್ನಿಸಿದರು. 26ಅದಕ್ಕೆ ಯೋಹಾನನು, “ನಾನು ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನೀವು ಅರಿಯದೆ ಇರುವ ಒಬ್ಬಾತನು ನಿಮ್ಮ ಮಧ್ಯದಲ್ಲಿದ್ದಾನೆ. 27ಆತನೇ ನನ್ನ ನಂತರ ಬರತಕ್ಕವನು. ಆತನ ಚಪ್ಪಲಿಗಳ ಪಟ್ಟಿ ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ” ಅಂದನು. 28ಇದೆಲ್ಲಾ ಯೋಹಾನನು ದೀಕ್ಷಾಸ್ನಾನ ಮಾಡಿಸುತ್ತಿದ್ದ ಯೊರ್ದನ್ ನದಿಯ ಆಚೆಯಲ್ಲಿರುವ ಬೇಥಾನ್ಯ ಎಂಬ ಊರಿನಲ್ಲಿ ನಡೆಯಿತು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು