ಮುಖಪುಟ › ದೈನಂದಿನ ಬೈಬಲ್ ವಾಚನಗಳು › ನವೆಂಬರ್ 2026 › 21 ನವೆಂಬರ್
ಆರ್ಥೊಡಾಕ್ಸ್ ಪಂಚಾಂಗ · ನವೆಂಬರ್ 8 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 21 ನವೆಂಬರ್ 2026
ಶನಿವಾರ · ಪಂಚಾಶತ್ತಮದ ನಂತರದ 25ನೇ ವಾರ · ಸ್ವರ 7
ಹಬ್ಬಗಳು ಮತ್ತು ಸಂತರು
Synaxis of the Chief of the Heavenly Hosts, Archangel Michael and the Other Heavenly Bodiless Powers: Archangels Gabriel, Raphael, Uriel, Selaphiel, Jehudiel, Barachiel, and Jeremiel
ಉಪವಾಸ
ಉಪವಾಸವಿಲ್ಲ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಸಂಧ್ಯಾ ಪ್ರಾರ್ಥನೆ: ವಾಚನ
13ಯೆಹೋಶುವನು ಯೆರಿಕೋವಿನ ಹತ್ತಿರದಲ್ಲಿ ಇದ್ದಾಗ ಒಮ್ಮೆ ತನ್ನ ಕಣ್ಣೆತ್ತಿ ನೋಡಲು ಒಬ್ಬ ಮನುಷ್ಯನು ಹಿರಿದ ಕತ್ತಿಯನ್ನು ಕೈಯಲ್ಲಿ ಹಿಡಿದು ತನ್ನೆದುರಿನಲ್ಲಿ ನಿಂತಿರುವುದನ್ನು ಕಂಡನು. ಯೆಹೋಶುವನು ಅವನ ಸಮೀಪಕ್ಕೆ ಹೋಗಿ “ನೀನು ನಮ್ಮವನೋ ಅಥವಾ ಶತ್ರು ಪಕ್ಷದವನೋ?” ಎಂದು ಕೇಳಲು 14ಆ ಮನುಷ್ಯನು “ನಾನು ಅಂಥವನಲ್ಲ; ಯೆಹೋವನ ಸೇನಾಧಿಪತಿ; ಈಗಲೇ ಬಂದಿದ್ದೇನೆ” ಎಂದು ಉತ್ತರಿಸಿದನು. ಆಗ ಯೆಹೋಶುವನು ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ “ಒಡೆಯಾ, ನಿಮ್ಮ ದಾಸನಾದ ನನಗೆ ಏನು ಆಜ್ಞಾಪಿಸಬೇಕೆಂದಿದ್ದೀರಿ?” ಅನ್ನಲು 15ಯೆಹೋವನ ಸೇನಾಧಿಪತಿಯು “ನಿನ್ನ ಕಾಲಿನ ಕೆರಗಳನ್ನು ತೆಗೆದುಹಾಕು, ಏಕೆಂದರೆ ನೀನು ನಿಂತಿರುವ ಸ್ಥಳವು ಪರಿಶುದ್ಧವಾದದ್ದು” ಎಂದು ಹೇಳಿದನು. ಯೆಹೋಶುವನು ಹಾಗೆಯೇ ಮಾಡಿದನು.
ಸಂಧ್ಯಾ ಪ್ರಾರ್ಥನೆ: ವಾಚನ
2ಮಿದ್ಯಾನ್ಯರ ಹಸ್ತವು ಬಲಗೊಂಡಿದ್ದರಿಂದ ಇಸ್ರಾಯೇಲರು ಅವರಿಗೆ ಹೆದರಿ ಪರ್ವತಗಳಲ್ಲಿ ಗುಹೆಗಳನ್ನು, ಕಂದರಗಳನ್ನು ಮಾಡಿಕೊಂಡು ಅದರಲ್ಲಿ ವಾಸಿಸುತ್ತಿದ್ದರು. 7ಇಸ್ರಾಯೇಲರು ಮಿದ್ಯಾನ್ಯರ ಹಿಂಸೆಯನ್ನು ಸಹಿಸಲಾರದೆ ಯೆಹೋವನಿಗೆ ಮೊರೆಯಿಟ್ಟಾಗ 11ಆ ಮೇಲೆ ಯೆಹೋವನ ದೂತನು ಬಂದು ಒಫ್ರದಲ್ಲಿದ್ದ ಏಲಾ ವೃಕ್ಷದ ಕೆಳಗೆ ಕುಳಿತುಕೊಂಡನು. ಅದು ಅಬೀಯೆಜೆರನ ಗೋತ್ರದವನಾದ ಯೋವಾಷನದಾಗಿತ್ತು. ಅವನ ಮಗನಾದ ಗಿದ್ಯೋನನು ಮಿದ್ಯಾನ್ಯರಿಗೆ ಗೊತ್ತಾಗದ ಹಾಗೆ ಅಲ್ಲಿನ ದ್ರಾಕ್ಷಿಯ ಆಲೆಯ ಮರೆಯಲ್ಲಿ ಗೋದಿಯನ್ನು ಬಡಿಯುತ್ತಿದ್ದನು. 12ಯೆಹೋವನ ದೂತನು ಗಿದ್ಯೋನನಿಗೆ ಪ್ರತ್ಯಕ್ಷನಾಗಿ ಅವನಿಗೆ, “ಪರಾಕ್ರಮಶಾಲಿಯೇ, ಯೆಹೋವನು ನಿನ್ನ ಸಂಗಡ ಇದ್ದಾನೆ” ಅಂದನು. 13ಆಗ ಗಿದ್ಯೋನನು ಅವನಿಗೆ “ಸ್ವಾಮೀ, ಯೆಹೋವನು ನಮ್ಮ ಸಂಗಡ ಇದ್ದರೆ ನಮಗೆ ಇದೆಲ್ಲಾ ಯಾಕೆ ಸಂಭವಿಸಿತು? ನಮ್ಮ ಹಿರಿಯರು, ಯೆಹೋವನು ಅದ್ಭುತಗಳನ್ನು ನಡಿಸಿ ತಮ್ಮನ್ನು ಐಗುಪ್ತದಿಂದ ಬಿಡಿಸಿದನೆಂಬುದಾಗಿ ವಿವರಿಸುತ್ತಿದ್ದರು. ಅಂಥ ಅದ್ಭುತಗಳು ಈಗೆಲ್ಲಿವೆ? ಆತನು ನಮ್ಮನ್ನು ತಿರಸ್ಕರಿಸಿ ಮಿದ್ಯಾನ್ಯರ ಕೈಗೆ ಒಪ್ಪಿಸಿಬಿಟ್ಟಿದ್ದಾನಲ್ಲಾ” ಅಂದನು. 14ಆಗ ಯೆಹೋವನು ಅವನನ್ನು ಚೆನ್ನಾಗಿ ನೋಡಿ, “ನಾನು ನಿನ್ನನ್ನು ಕಳುಹಿಸುತ್ತೇನೆ, ಹೋಗು; ನಿನ್ನ ಈ ಬಲದಿಂದ ಇಸ್ರಾಯೇಲ್ಯರನ್ನು ಮಿದ್ಯಾನ್ಯರಿಂದ ಬಿಡಿಸು” ಎಂದು ಹೇಳಿದನು. 15ಆಗ ಗಿದ್ಯೋನನು ಆತನಿಗೆ, “ಕರ್ತನೇ, ನಾನು ಇಸ್ರಾಯೇಲ್ಯರನ್ನು ರಕ್ಷಿಸುವುದು ಹೇಗೆ? ಮನಸ್ಸೆ ಕುಲದಲ್ಲಿ ನನ್ನ ಮನೆಯು ಕನಿಷ್ಠವಾದದ್ದು; ಮತ್ತು ನಾನು ನಮ್ಮ ಕುಟುಂಬದಲ್ಲಿ ಅಲ್ಪನು” ಅಂದನು. 16ಯೆಹೋವನು ಅವನಿಗೆ, “ನಾನು ನಿನ್ನ ಸಂಗಡ ಇರುವುದರಿಂದ ನೀನು ಮಿದ್ಯಾನ್ಯರನ್ನೂ ಒಬ್ಬ ಮನುಷ್ಯನನ್ನೋ ಎಂಬಂತೆ ಸಂಹರಿಸಿಬಿಡುವಿ” ಅಂದನು. 17ಅವನು ಆತನಿಗೆ, “ಕರ್ತನೇ, ದಯವಿರಲಿ; ನನ್ನೊಂದಿಗೆ ಮಾತನಾಡುತ್ತಿರುವವರು ತಾವೇ ಆಗಿದ್ದೀರೆಂಬುದಕ್ಕೆ ನನಗೊಂದು ಗುರುತನ್ನು ಅನುಗ್ರಹಿಸಬೇಕು. 18ನಾನು ಹೋಗಿ ತಮಗೆ ಕಾಣಿಕೆಯನ್ನು ತೆಗೆದುಕೊಂಡು ಬರುವ ವರೆಗೆ ತಾವು ಈ ಸ್ಥಳವನ್ನು ಬಿಡಬಾರದು” ಎಂದು ಬಿನ್ನವಿಸಲು ಆತನು, “ನೀನು ತಿರುಗಿ ಬರುವ ವರೆಗೆ ನಾನು ಇಲ್ಲೇ ಇರುವೆನು” ಅಂದನು. 19ಗಿದ್ಯೋನನು ಮನೆಗೆ ಹೋಗಿ ಒಂದು ಆಡಿನ ಮರಿಯನ್ನು ತೆಗೆದುಕೊಂಡು, ಒಂದು ಏಫಾ ಅಂದರೆ ಸುಮಾರು ಮೂವ್ವತ್ತು ಸೇರು ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಸುಟ್ಟು, ಮಾಂಸವನ್ನು ಸಿದ್ಧಮಾಡಿ, ಪುಟ್ಟಿಯಲ್ಲಿಟ್ಟು ಅದರ ರಸವನ್ನು ಬಟ್ಟಲಿನಲ್ಲಿ ಹೊಯ್ದು, ಎಲ್ಲವನ್ನೂ ಏಲಾ ಮರದ ಕೆಳಗೆ ಆತನ ಮುಂದೆ ತಂದಿಟ್ಟನು. 20ಆಗ ದೇವದೂತನು ಅವನಿಗೆ, “ಮಾಂಸವನ್ನೂ, ರೊಟ್ಟಿಗಳನ್ನೂ ಆ ಬಂಡೆಯ ಮೇಲಿಟ್ಟು ರಸವನ್ನು ಅದರ ಮೇಲೆ ಹೊಯ್ಯಿ” ಅನ್ನಲು ಅವನು ಹಾಗೆಯೇ ಮಾಡಿದನು. 21ಅನಂತರ ಯೆಹೋವನ ದೂತನು ತನ್ನ ಕೈಕೋಲನ್ನು ಚಾಚಿ ಅದರ ತುದಿಯನ್ನು ಆ ರೊಟ್ಟಿಗಳಿಗೂ, ಮಾಂಸಕ್ಕೂ ಮುಟ್ಟಿಸಲು ಬಂಡೆಯಿಂದ ಬೆಂಕಿಯೆದ್ದು ಅವೆರಡನ್ನೂ ದಹಿಸಿಬಿಟ್ಟಿತು; ಯೆಹೋವನ ದೂತನು ಅದೃಶ್ಯನಾದನು. 22ಆತನು ಯೆಹೋವನ ದೂತನೆಂದು ಗಿದ್ಯೋನನು ತಿಳಿದು ಭಯಪಟ್ಟು, “ಅಯ್ಯೋ ಕರ್ತನೇ, ಯೆಹೋವನೇ, ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ” ಎಂದು ಕೂಗಿದನು. 23ಆದರೆ ಯೆಹೋವನು ಅವನಿಗೆ, “ಸಮಾಧಾನದಿಂದಿರು, ಹೆದರಬೇಡ; ನೀನು ಸಾಯುವುದಿಲ್ಲ” ಅಂದನು. 24ಗಿದ್ಯೋನನು ಅಲ್ಲಿ ಯೆಹೋವನಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿ ಅದಕ್ಕೆ ಯೆಹೋವ ಷಾಲೋಮ್ ಎಂದು ಹೆಸರಿಟ್ಟನು; ಅದು ಈ ವರೆಗೂ ಅಬೀಯೆಜೆರನ ಗೋತ್ರದವರ ಒಫ್ರದಲ್ಲಿರುತ್ತದೆ.
ಸಂಧ್ಯಾ ಪ್ರಾರ್ಥನೆ: ವಾಚನ
7ಭೂಲೋಕವೆಲ್ಲಾ ಶಾಂತವಾಗಿ ವಿಶ್ರಾಂತಿಗೊಂಡಿದೆ, ಅವರು ಹರ್ಷಧ್ವನಿಗೈಯುತ್ತಾರೆ. 8ಹೌದು, ತುರಾಯಿ ಮರಗಳೂ, ಲೆಬನೋನಿನ ದೇವದಾರು ವೃಕ್ಷಗಳೂ, ‘ನೀನು ಸುಮ್ಮನಿರುವುದರಿಂದ ನಮ್ಮನ್ನು ಕಡಿಯಲು ಯಾರೂ ಬರುವುದಿಲ್ಲ’ ಎಂದು ನಿನ್ನ ವಿಷಯವಾಗಿ ಉಲ್ಲಾಸಗೊಳ್ಳುತ್ತವೆ. 9ಬರುತ್ತಿರುವ ನಿನ್ನನ್ನು ಎದುರುಗೊಳ್ಳುವುದಕ್ಕೆ ಪಾತಾಳವು ತಳಮಳಪಡುತ್ತದೆ. ನಿನಗೋಸ್ಕರ ಸತ್ತವರನ್ನು, ಅಂದರೆ ಭೂಲೋಕದಲ್ಲಿ ಮುಖಂಡರಾಗಿದ್ದವರೆಲ್ಲರನ್ನು ಎಚ್ಚರಗೊಳಿಸಿ, ಜನಾಂಗಗಳ ಸಕಲ ಅರಸರನ್ನು ಅವರವರ ಆಸನಗಳಿಂದ ಎಬ್ಬಿಸುತ್ತದೆ. 10ಅವರೆಲ್ಲರು ನಿನ್ನನ್ನು ಕುರಿತು, ‘ನೀನು ಸಹ ನಮ್ಮ ಹಾಗೆ ಬಲಹೀನನಾಗಿದ್ದೀ? ನಮಗೆ ಸರಿಸಮಾನನಾಗಿದ್ದೀ?’ ಎಂದು ಮಾತನಾಡಿಕೊಳ್ಳುವರು. 11ನಿನ್ನ ವೈಭವವೂ ವೀಣಾನಾದದೊಂದಿಗೆ ಪಾತಾಳಕ್ಕೆ ತಳ್ಳಲ್ಪಟ್ಟಿವೆ. ನಿನಗೆ ಹುಳಗಳೇ ಹಾಸಿಗೆ, ಕ್ರಿಮಿಗಳೇ ನಿನ್ನ ಹೊದಿಕೆಯು. 12ಆಹಾ, ಉದಯನಕ್ಷತ್ರವೇ, ಉದಯಪುತ್ರನೇ, ಆಕಾಶದಿಂದ ನೀನು ಹೇಗೆ ಬಿದ್ದೆ! ಜನಾಂಗಗಳನ್ನು ಸ್ವಾಧೀನಪಡಿಸಿಕೊಂಡ ನೀನು ಭೂಮಿಗೆ ಹೇಗೆ ತಳಲ್ಪಟ್ಟಿದ್ದೀ! 13ನೀನು ನಿನ್ನ ಮನಸ್ಸಿನಲ್ಲಿ, ‘ನಾನು ಆಕಾಶಕ್ಕೆ ಏರಿ, ನನ್ನ ಸಿಂಹಾಸನವನ್ನು ದೇವರ ನಕ್ಷತ್ರಗಳಿಗಿಂತ ಘನತೆಗೇರಿಸಿ, ಉತ್ತರದಿಕ್ಕಿನ ಕಟ್ಟಕಡೆಯಿರುವ ಸಮೂಹ ಪರ್ವತದ ಮೇಲೆ ಆಸೀನನಾಗುವೆನು. 14ಉನ್ನತವಾದ ಮೇಘಮಂಡಲದ ಮೇಲೆ ಏರಿ ಮಹೋನ್ನತನಿಗೆ ಸಮಾನನಾಗುವೆನು’ ಎಂದುಕೊಂಡೆಯಲ್ಲಾ! 15ಆದರೆ ನೀನು ಪಾತಾಳಕ್ಕೆ, ಅಧೋಲೋಕದ ಅಗಾಧ ಸ್ಥಳಗಳಿಗೆ ತಳ್ಳಲ್ಪಡುವೆ. 16ನಿನ್ನನ್ನು ನೋಡುವವರು ನಿನ್ನನ್ನು ದಿಟ್ಟಿಸಿ ನೋಡಿ, ಯೋಚಿಸುತ್ತಾ, ‘ಭೂಮಿಯನ್ನು ನಡುಗಿಸಿ, ರಾಜ್ಯಗಳನ್ನು ಕದಲಿಸಿ ಪಟ್ಟಣಗಳನ್ನು ನಾಶಮಾಡಿ, 17ಲೋಕವನ್ನು ಕಾಡನ್ನಾಗಿ ಮಾಡಿ, ಸೆರೆಹಿಡಿದವರನ್ನು ಮನೆಗೆ ಬಿಡದೆ ಇದ್ದವನು ಈ ಮನುಷ್ಯನೋ?’ ಎಂದುಕೊಳ್ಳುವರು. 18ಜನಾಂಗಗಳ ಎಲ್ಲಾ ಅರಸರೂ, ಹೌದು, ಸಕಲ ಅರಸರೂ ತಮ್ಮ ತಮ್ಮ ವೈಭವದೊಡನೆ ಸಮಾಧಿಗಳಲ್ಲಿ ದೀರ್ಘ ನಿದ್ರೆ ಮಾಡುತ್ತಾರೆ. 19ಆದರೆ ನೀನಾದರೋ ನಿನ್ನ ಸಮಾಧಿಗೆ ದೂರವಾಗಿ ಕೆಟ್ಟ ಕೊಂಬೆಯಂತೆ ಬಿಸಾಡಲ್ಪಟ್ಟಿದ್ದೀ; ಕತ್ತಿಯಿಂದ ತಿವಿದು ಗುಂಡಿಯ ಕಲ್ಲುಗಳ ಪಾಲಾಗಿ ಹತರಾದವರ ಹೊದಿಕೆಯಂತೆಯೂ, 20ಕಾಲ ಕೆಳಗೆ ತುಳಿಯಲ್ಪಟ್ಟ ಹೆಣದಂತೆಯೂ, ನೀನು ಆ ಅರಸರೊಡನೆ ಸಮಾಧಿಗೆ ಸೇರುವುದಿಲ್ಲ, ಏಕೆಂದರೆ ನೀನು ದೇಶವನ್ನು ಹಾಳುಮಾಡಿ, ನಿನ್ನ ಪ್ರಜೆಯನ್ನು ಕೊಂದುಹಾಕಿದಿ. ದುಷ್ಟರ ಸಂತಾನವು ಎಂದೆಂದಿಗೂ ಜ್ಞಾಪಕಕ್ಕೆ ಬರುವುದಿಲ್ಲ.”
ಉದಯಕಾಲದ ಪ್ರಾರ್ಥನೆ: ಸುವಾರ್ತೆ
24ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕ ರಾಜ್ಯವು ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ. 25ಆದರೆ ಜನರು ನಿದ್ರೆ ಮಾಡುವ ಸಮಯದಲ್ಲಿ ಅವನ ವೈರಿಯು ಬಂದು ಗೋದಿಯ ನಡುವೆ ಕಳೆಯನ್ನು ಬಿತ್ತಿ ಹೋದನು. 26ಗೋದಿಯು ಬೆಳೆದು ಫಲ ಬಿಟ್ಟಾಗ ಕಳೆಯು ಸಹ ಕಾಣ ಬಂದಿತು. 27ಆಗ ಯಜಮಾನನ ಆಳುಗಳು ಅವನ ಬಳಿಗೆ ಬಂದು, ‘ಅಯ್ಯಾ ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದ್ದಿಯಲ್ಲಾ ಕಳೆ ಎಲ್ಲಿಂದ ಬಂದಿತು?’ ಎಂದು ಕೇಳಿದರು. 28ಅದಕ್ಕೆ ಅವನು, ‘ಇದು ವೈರಿ ಮಾಡಿದ ಕೆಲಸ’ ಎಂದು ಹೇಳಿದನು, ಅದಕ್ಕೆ ಆಳುಗಳು ಅವನಿಗೆ, ‘ಹಾಗಾದರೆ ನಾವು ಹೋಗಿ ಅದನ್ನು ಕಿತ್ತುಹಾಕುವುದು ನಿಮಗೆ ಇಷ್ಟವಿದೆಯೋ?’ ಎಂದು ಕೇಳಿದರು. 29ಅವರಿಗೆ ಅವನು, ‘ಬೇಡ, ಕಳೆಯನ್ನು ಕೀಳುವಾಗ ಅದರ ಸಂಗಡ ಗೋದಿಯನ್ನೆಲ್ಲಾದರೂ ಕಿತ್ತೀರಿ. 30ಸುಗ್ಗಿ ಕಾಲದ ತನಕ ಎರಡೂ ಒಟ್ಟಿಗೆ ಬೆಳೆಯಲಿ. ಸುಗ್ಗಿ ಕಾಲದಲ್ಲಿ ನಾನು ಕೊಯ್ಯುವವರಿಗೆ, ಮೊದಲು ಕಳೆಯನ್ನು ಕಿತ್ತು ತೆಗೆದು ಹೊರೆಕಟ್ಟಿ ಅದನ್ನು ಸುಡುವುದಕ್ಕೆ ಹಾಕಿ, ಗೋದಿಯನ್ನು ಕೂಡಿಸಿ ನನ್ನ ಕಣಜಕ್ಕೆ ತುಂಬಿರಿ ಎಂದು ಹೇಳುವೆನು’” ಅಂದನು. 36ಅನಂತರ ಯೇಸು ಜನರ ಗುಂಪನ್ನು ಬಿಟ್ಟು ಮನೆಯೊಳಗೆ ಹೋದನು. ಆಗ ಆತನ ಶಿಷ್ಯರು ಆತನ ಬಳಿಗೆ ಬಂದು, ಹೊಲದ ಕಳೆಯ ಸಾಮ್ಯದ ಅರ್ಥವನ್ನು ನಮಗೆ ವಿವರಿಸು ಅಂದರು. 37ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಹೇಳಿದ್ದೇನೆಂದರೆ, “ಒಳ್ಳೆಯ ಬೀಜವನ್ನು ಬಿತ್ತುವವನು ಮನುಷ್ಯಕುಮಾರನು. 38ಹೊಲವೆಂದರೆ ಈ ಲೋಕ. ಒಳ್ಳೆಯ ಬೀಜವೆಂದರೆ ರಾಜ್ಯದ ಮಕ್ಕಳು. 39ಕಳೆಯೆಂದರೆ ದುಷ್ಟನ ಮಕ್ಕಳು. ಅದನ್ನು ಬಿತ್ತುವ ವೈರಿ ಎಂದರೆ ಸೈತಾನನು. ಸುಗ್ಗಿಯ ಕಾಲವೆಂದರೆ ಯುಗದ ಸಮಾಪ್ತಿ. ಕೊಯ್ಯುವವರು ಅಂದರೆ ದೇವದೂತರು. 40ಹೀಗಿರಲಾಗಿ ಹೇಗೆ ಕಳೆಯನ್ನು ಆರಿಸಿ ತೆಗೆದು ಸುಟ್ಟುಬಿಡುತ್ತಾರೋ ಹಾಗೆಯೇ ಯುಗದ ಸಮಾಪ್ತಿಯಲ್ಲಿ ಸಂಭವಿಸುವುದು. 41ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿಸುವನು. ಅವರು ಆತನ ರಾಜ್ಯದೊಳಗಿಂದ ಪಾಪಕ್ಕೆ ಕಾರಣವಾದವರೆಲ್ಲರನ್ನೂ ಅಧರ್ಮಿಗಳನ್ನೂ ಕೂಡಿಸಿ ಬೆಂಕಿ ಕೊಂಡದಲ್ಲಿ ಹಾಕುವರು. 42ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು 43ಆಗ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕೇಳುವುದ್ದಕ್ಕೆ ಕಿವಿಗಳುಳ್ಳವನು ಕೇಳಿಸಿಕೊಳ್ಳಲಿ ಅಂದನು.
ಪತ್ರಿಕೆ (ದೇವದೂತರು)
2ಯಾಕೆಂದರೆ, ದೇವದೂತರ ಮೂಲಕ ಹೇಳಲ್ಪಟ್ಟ ಸಂದೇಶವು ಸ್ಥಿರವಾಗಿರಲು, ಅದನ್ನು ಮೀರಿ ಮಾಡಿದ ಪ್ರತಿಯೊಂದು ತಪ್ಪಿಗೂ ಮತ್ತು ಅವಿಧೇಯತ್ವಕ್ಕೂ ಶಿಕ್ಷಾರ್ಹವಾದ ಪ್ರತಿಫಲ ಹೊಂದಿದ್ದರು. 3ನಮ್ಮ ಮುಂದಿಟ್ಟಿರುವ ಈ ಅತ್ಯಂತ ಶ್ರೇಷ್ಠವಾದ ರಕ್ಷಣೆಯನ್ನು ನಾವು ಅಲಕ್ಷ್ಯ ಮಾಡಿದರೆ ತಪ್ಪಿಸಿಕೊಳ್ಳುವುದಾದರೂ ಹೇಗೆ? ಇದು ಕರ್ತನಿಂದ ಮೊದಲು ಹೇಳಲ್ಪಟ್ಟಿತು ಮತ್ತು ಆತನಿಂದ ಕೇಳಿದವರು ಇದನ್ನು ನಮಗೆ ದೃಢಪಡಿಸಿಕೊಟ್ಟರು. 4ಸೂಚಕ ಕಾರ್ಯಗಳಿಂದಲೂ, ಅದ್ಭುತಕಾರ್ಯಗಳಿಂದಲೂ, ನಾನಾ ವಿಧವಾದ ಮಹತ್ಕಾರ್ಯಗಳಿಂದಲೂ ಮತ್ತು ತನ್ನಿಚ್ಛೆಯಂತೆ ಪವಿತ್ರಾತ್ಮವರಗಳನ್ನು ನೀಡುವುದರ ಮೂಲಕವೂ ದೇವರು ತಾನೇ ಅದನ್ನು ಸಾಕ್ಷಿಕರಿಸಿದನು. 5ನಾವು ಪ್ರಸ್ತಾಪಿಸುತ್ತಿರುವ ಭವಿಷ್ಯತ್ತಿನ ಲೋಕವನ್ನು ದೇವರು ತನ್ನ ದೇವದೂತರಿಗೆ ಅಧೀನ ಮಾಡಿಕೊಡಲಿಲ್ಲ. 6“ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಯಾಕೆ ನೆನಪಿಸಿಕೊಳ್ಳಬೇಕು? ಮಾನವನು ಎಷ್ಟರವನು, ಅವನಲ್ಲಿ ಯಾಕೆ ಲಕ್ಷ್ಯವಿಡಬೇಕು? 7ನೀನು ಮನುಷ್ಯನನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಉಂಟುಮಾಡಿದ್ದಿಯಲ್ಲಾ. ಮಹಿಮೆಯನ್ನೂ ಗೌರವವನ್ನೂ ಅವನಿಗೆ ಕಿರೀಟವಾಗಿ ಇಟ್ಟಿದ್ದೀ. 8ಎಲ್ಲವನ್ನೂ ಅವನ ಪಾದಗಳ ಕೆಳಗೆ ಹಾಕಿ ಅವನಿಗೆ ಅಧೀನಮಾಡಿದ್ದೀಯಲ್ಲವೇ” ಎಂದು ಪವಿತ್ರಶಾಸ್ತ್ರದಲ್ಲಿ ಒಬ್ಬನು ಒಂದೆಡೆ ಸಾಕ್ಷಿ ಹೇಳಿದನು. ಆತನು ಎಲ್ಲವನ್ನೂ ಮಾನವಕುಲಕ್ಕೆ ಅಧೀನ ಮಾಡಿದ್ದಾನೆಂಬುದರಲ್ಲಿ ಅವನಿಗೆ ಒಂದನ್ನಾದರೂ ಅಧೀನಮಾಡದೆ ಬಿಡಲಿಲ್ಲವೆಂದು ಹೇಳಿದ ಹಾಗಾಯಿತು. ಆದರೆ ಎಲ್ಲವೂ ಅವನಿಗೆ ಅಧೀನವಾಗಿರುವುದಾಗಿ ನಾವು ಇನ್ನು ಕಂಡಿಲ್ಲ. 9ಆದರೂ ದೇವದೂತರಿಗಿಂತ ಸ್ವಲ್ಪ ಕಡಿಮೆಯಾಗಿ ಮಾಡಲ್ಪಟ್ಟವನಾದ ಯೇಸು ಬಾಧೆಯನ್ನುಭವಿಸಿ ಮೃತಪಟ್ಟದ್ದರಿಂದಲೇ ಮಹಿಮೆಯನ್ನೂ ಗೌರವವನ್ನೂ ಕಿರೀಟವಾಗಿ ಹೊಂದಿರುವುದನ್ನು ನಾವು ನೋಡುತ್ತೇವೆ. ಅದಕ್ಕಾಗಿಯೇ ದೇವರ ಕೃಪೆಯಿಂದ ಯೇಸು ಎಲ್ಲರಿಗೋಸ್ಕರ ಮರಣವನ್ನು ಅನುಭವಿಸಿದ್ದಾನೆ. 10ಸಮಸ್ತವು ಯಾವನಿಗೋಸ್ಕರವೂ ಯಾವನಿಂದಲೂ ಉಂಟಾಯಿತೋ, ಆತನು ಬಹುಮಂದಿ ಪುತ್ರರನ್ನು ಮಹಿಮೆಗೆ ಸೇರಿಸುವುದಕ್ಕಾಗಿ, ಅವರ ರಕ್ಷಣಾನಾಯಕನನ್ನು ಬಾಧೆಗಳ ಮೂಲಕ ಸಿದ್ಧಿಗೆ ತರುವುದು ಆತನಿಗೆ ಯುಕ್ತವಾಗಿತ್ತು.
ಸುವಾರ್ತೆ (ದೇವದೂತರು)
16ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನು ಕೇಳುವವನಾಗಿದ್ದಾನೆ, ನಿಮ್ಮನ್ನು ತಿರಸ್ಕರಿಸುವವನು ನನ್ನನ್ನು ತಿರಸ್ಕರಿಸುವವನಾಗಿದ್ದಾನೆ, ನನ್ನನ್ನು ತಿರಸ್ಕಾರ ಮಾಡುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ತಿರಸ್ಕಾರ ಮಾಡುವವನಾಗಿದ್ದಾನೆ” ಅಂದನು. 17ತರುವಾಯ ಆ ಎಪ್ಪತ್ತು ಮಂದಿಯು ಸಂತೋಷವುಳ್ಳವರಾಗಿ ಹಿಂತಿರುಗಿ ಬಂದು, “ಕರ್ತನೇ, ದೆವ್ವಗಳು ಕೂಡಾ ನಿನ್ನ ಹೆಸರಿನಲ್ಲಿ ನಮಗೆ ಅಧೀನವಾಗುತ್ತವೆ” ಅಂದರು. 18ಯೇಸು ಅವರಿಗೆ, “ಸೈತಾನನು ಮಿಂಚಿನಂತೆ ಆಕಾಶದಿಂದ ಬೀಳುವುದನ್ನು ಕಂಡೆನು. 19ನೋಡಿರಿ, ಹಾವುಗಳನ್ನೂ ಚೇಳುಗಳನ್ನೂ ವೈರಿಯ ಸಮಸ್ತ ಬಲವನ್ನೂ ತುಳಿಯುವುದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವುದೂ ನಿಮಗೆ ಕೇಡು ಮಾಡುವುದೇ ಇಲ್ಲ. 20ಆದರೂ ದೆವ್ವಗಳು ನಮಗೆ ಅಧೀನವಾಗಿವೆ ಎಂದು ಸಂತೋಷಪಡದೆ ನಿಮ್ಮ ಹೆಸರುಗಳು ಪರಲೋಕದಲ್ಲಿ ಬರೆಯಲ್ಪಟ್ಟಿವೆ ಎಂದು ಸಂತೋಷಪಡಿರಿ” ಎಂದು ಹೇಳಿದನು. 21ಅದೇ ಗಳಿಗೆಯಲ್ಲಿ ಆತನು ಪವಿತ್ರಾತ್ಮನನಿಂದ ಉಲ್ಲಾಸಗೊಂಡು ಹೇಳಿದ್ದೇನಂದರೆ, “ತಂದೆಯೇ, ಪರಲೋಕ ಮತ್ತು ಭೂಲೋಕಗಳ ಒಡೆಯನೇ, ನೀನು ಜ್ಞಾನಿಗಳಿಗೂ ಮತ್ತು ವಿವೇಕಿಗಳಿಗೂ ಈ ವಿಷಯಗಳನ್ನು ಮರೆಮಾಡಿ, ಮಕ್ಕಳಿಗೆ ಪ್ರಕಟಮಾಡಿರುವುದರಿಂದ ನಿನ್ನನ್ನು ಕೊಂಡಾಡುತ್ತೇನೆ. ಹೌದು, ತಂದೆಯೇ, ಹೀಗೆ ಮಾಡುವುದೇ ಒಳ್ಳೆಯದೆಂದು ನಿನ್ನ ದೃಷ್ಟಿಗೆ ತೋರಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 8 ನವೆಂಬರ್ ಎಂದರೆ ನಾಗರಿಕ ಪಂಚಾಂಗದ 21 ನವೆಂಬರ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು