ಮುಖಪುಟ › ದೈನಂದಿನ ಬೈಬಲ್ ವಾಚನಗಳು › ನವೆಂಬರ್ 2026 › 15 ನವೆಂಬರ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 15 ನವೆಂಬರ್ 2026
ಭಾನುವಾರ · ಸಾಮಾನ್ಯ ಕಾಲದ 33ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 33ನೇ ಭಾನುವಾರ
ಭಾನುವಾರ · ಆರಾಧನಾ ಬಣ್ಣ: ಹಸಿರು
ದಿನದ ವಾಚನಗಳು
ಮೊದಲನೆಯ ವಾಚನ
10ಗುಣವತಿಯಾದ ಸತಿಯು ಎಲ್ಲಿ ಸಿಕ್ಕುವಳು? ಆಕೆಯು ಹವಳಕ್ಕಿಂತಲೂ ಬಹೂ ಅಮೂಲ್ಯಳು. 11ಪತಿಯ ಹೃದಯವು ಆಕೆಯಲ್ಲಿ ಭರವಸವಿಡುವುದು, ಅವನು ಕೊಳ್ಳೆ ಕೊಳ್ಳೆಯಾಗಿ ಸಂಪಾದಿಸುವನು. 12ಆಕೆಯು ಜೀವಮಾನದಲ್ಲೆಲ್ಲಾ ಅವನಿಗೆ ಅಹಿತವನ್ನು ಮಾಡದೆ, ಹಿತವನ್ನೇ ಮಾಡುತ್ತಿರುವಳು. 13ಉಣ್ಣೆಯನ್ನೂ, ಸೆಣಬನ್ನೂ ಹುಡುಕಿ ತಂದು, ಕೈಕೆಲಸವನ್ನು ಆಸಕ್ತಿಯಿಂದ ಮಾಡುವಳು. 19ರಾಟೆಯ ಮೇಲೆ ಕೈ ಹಾಕಿ, ಕದರನ್ನು ಹಿಡಿಯುವಳು. 20ಬಡವರಿಗಾಗಿ ಕೈ ಬಿಚ್ಚಿ, ದಿಕ್ಕಿಲ್ಲದವರಿಗೆ ಕೈ ನೀಡುವಳು. 30ಸೌಂದರ್ಯವು ನೆಚ್ಚತಕ್ಕದ್ದಲ್ಲ, ಲಾವಣ್ಯವು ನೆಲೆಯಲ್ಲ, ಯೆಹೋವನಲ್ಲಿ ಭಯಭಕ್ತಿಯುಳ್ಳವಳೇ ಸ್ತೋತ್ರಪಾತ್ರಳು. 31ಆಕೆಯ ಕೈಕೆಲಸಕ್ಕೆ ಪ್ರತಿಫಲವನ್ನು ಸಲ್ಲಿಸಿರಿ, ಆಕೆಯ ಕಾರ್ಯಗಳೇ ಪುರದ್ವಾರಗಳಲ್ಲಿ ಆಕೆಯನ್ನು ಪ್ರಶಂಸಿಸಲಿ.
ಪ್ರತಿವಚನ ಕೀರ್ತನೆ
1ಯಾತ್ರಾಗೀತೆ. ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ, ಆತನ ಮಾರ್ಗಗಳಲ್ಲಿ ನಡೆಯುವವನು ಧನ್ಯನು. 2ನಿನ್ನ ಕಷ್ಟಾರ್ಜಿತವನ್ನು ನೀನೇ ಅನುಭವಿಸುವಿ, ನೀನು ಧನ್ಯನು, ನಿನಗೆ ಶುಭವಿರುವುದು. 3ಅಂತಃಪುರದಲ್ಲಿರುವ ನಿನ್ನ ಹೆಂಡತಿಯು, ಫಲಭರಿತವಾದ ದ್ರಾಕ್ಷಾಲತೆಯಂತೆ ಇರುವಳು; ನಿನ್ನ ಸಂಗಡ ಊಟದ ಮಣೆಯ ಸುತ್ತಲೂ ಕುಳಿತುಕೊಳ್ಳುವ ನಿನ್ನ ಮಕ್ಕಳು, ಎಣ್ಣೇಮರದ ಸಸಿಗಳ ಹಾಗೆ ಇರುವರು. 4ಇಗೋ, ಯೆಹೋವನಲ್ಲಿ ಭಯಭಕ್ತಿಯುಳ್ಳ ಪುರುಷನು, ಈ ರೀತಿಯಾಗಿ ಆಶೀರ್ವಾದ ಹೊಂದುವನು. 5ಚೀಯೋನಿನಲ್ಲಿರುವ ಯೆಹೋವನು ನಿನ್ನನ್ನು ಆಶೀರ್ವದಿಸಲಿ; ಜೀವಮಾನವೆಲ್ಲಾ ಯೆರೂಸಲೇಮಿನ ಸೌಭಾಗ್ಯವನ್ನು ನೋಡುವವನಾಗು.
ಎರಡನೆಯ ವಾಚನ
1ಸಹೋದರರೇ, ಈ ಸಂಗತಿಗಳು ನಡೆಯಬೇಕಾಗಿರುವ ಕಾಲಗಳನ್ನೂ ಗಳಿಗೆಗಳನ್ನೂ ಕುರಿತು ನಿಮಗೆ ಬರೆಯುವುದು ಅಗತ್ಯವಿಲ್ಲ. 2ರಾತ್ರಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವುದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ. 3“ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆಂದು” ಜನರು ಹೇಳುತ್ತಿರುವಾಗಲೇ ನಾಶನವು ಅವರ ಮೇಲೆ ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವುದು, ಅವರು ಹೇಗೂ ತಪ್ಪಿಸಿಕೊಳ್ಳಲಾರರು. 4ಆದರೆ ಸಹೋದರರೇ, ಆ ದಿನವು ಕಳ್ಳನಂತೆ ನಿಮ್ಮ ಮೇಲೆ ಬರತಕ್ಕದ್ದಲ್ಲ, ಯಾಕೆಂದರೆ ನೀವು ಕತ್ತಲೆಯಲ್ಲಿರುವವರಲ್ಲ. 5ನೀವೆಲ್ಲರೂ ‘ಬೆಳಕಿನ ಮಕ್ಕಳು’ ಹಾಗೂ ‘ಹಗಲಿನ ಮಕ್ಕಳು’ ಆಗಿದ್ದೀರಷ್ಟೆ, ನಾವು ರಾತ್ರಿಯವರೂ ಅಲ್ಲ, ಕತ್ತಲೆಯವರೂ ಅಲ್ಲ. 6ಆದಕಾರಣ ನಾವು ಇತರರಂತೆ ನಿದ್ರೆಮಾಡದೆ ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿರೋಣ.
ಸುವಾರ್ತೆ
14“ದೇವರ ರಾಜ್ಯವು ಹೇಗೆಂದರೆ ದೇಶಾಂತರಕ್ಕೆ ಹೊರಟ್ಟಿದ್ದ ಒಬ್ಬ ಮನುಷ್ಯನು ತನ್ನ ಸೇವಕರನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿಕೊಟ್ಟಂತಿರುವುದು. 15ಅವನು ಒಬ್ಬನಿಗೆ ಐದು ತಲಾಂತು, ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು, ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ತಲಾಂತನ್ನು ವಹಿಸಿಕೊಟ್ಟು ತನ್ನ ಪ್ರಯಾಣಕ್ಕೆ ಹೋದನು. 16ತಕ್ಷಣವೇ ಐದು ತಲಾಂತು ಹೊಂದಿದವನು ಹೋಗಿ ಅದನ್ನು ವ್ಯಾಪಾರಕ್ಕೆ ಹಾಕಿ ಇನ್ನೂ ಐದು ತಲಾಂತು ಗಳಿಸಿಕೊಂಡನು. 17ಹಾಗೆಯೇ ಎರಡು ತಲಾಂತು ಹೊಂದಿದವನು ಇನ್ನೂ ಎರಡು ಸಂಪಾದಿಸಿಕೊಂಡನು. 18ಆದರೆ ಒಂದು ತಲಾಂತು ಹೊಂದಿದವನು ಹೋಗಿ ಭೂಮಿಯನ್ನು ಅಗೆದು ತನ್ನ ಯಜಮಾನನ ಹಣವನ್ನು ಬಚ್ಚಿಟ್ಟನು. 19ಬಹುಕಾಲದ ಮೇಲೆ ಆ ಸೇವಕರ ಯಜಮಾನನು ಬಂದು ಅವರಿಂದ ಲೆಕ್ಕ ತೆಗೆದುಕೊಳ್ಳಲು 20ಐದು ತಲಾಂತುಗಳು ಹೊಂದಿದವನು ಮುಂದೆ ಬಂದು ಇನ್ನೂ ಐದು ತಲಾಂತುಗಳನ್ನು ತಂದು, ‘ಯಜಮಾನನೇ, ನೀನು ಐದು ತಲಾಂತಗಳನ್ನು ನನಗೆ ಕೊಟ್ಟಿದ್ದೆಯಲ್ಲಾ, ಇಗೋ, ಇನ್ನು ಐದು ತಲಾಂತು ಸಂಪಾದಿಸಿದ್ದೇನೆ’ ಅಂದನು. 21ಅವನ ಯಜಮಾನನು ಅವನಿಗೆ, ‘ಭಲಾ, ನಂಬಿಗಸ್ತನಾದ ಒಳ್ಳೆಯ ಸೇವಕನೇ; ನೀನು ಸ್ವಲ್ಪ ಕೆಲಸದಲ್ಲಿ ಪ್ರಾಮಾಣಿಕನಾಗಿದ್ದಿ; ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಒಡೆಯನ ಸಂತೋಷದಲ್ಲಿ ಸೇರು’ ಅಂದನು. 22ಆಗ ಎರಡು ತಲಾಂತು ಹೊಂದಿದವನು ಮುಂದೆ ಬಂದು, ‘ಯಜಮಾನನೇ, ನೀನು ಎರಡು ತಲಾಂತನ್ನು ನನಗೆ ಒಪ್ಪಿಸಿದ್ದೆಯಲ್ಲಾ; ಇಗೋ, ಇನ್ನು ಎರಡು ತಲಾಂತು ಸಂಪಾದಿಸಿದ್ದೇನೆ’ ಅಂದನು. 23ಅವನ ಯಜಮಾನನು ಅವನಿಗೆ, ‘ಭಲಾ, ನಂಬಿಗಸ್ತನಾದ ಒಳ್ಳೆಯ ಸೇವಕನೇ; ನೀನು ಸ್ವಲ್ಪ ಕೆಲಸದಲ್ಲಿ ಪ್ರಾಮಾಣಿಕನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಒಡೆಯನ ಸಂತೋಷದಲ್ಲಿ ಸೇರು’ ಎಂದು ಹೇಳಿದನು. 24ತರುವಾಯ ಒಂದು ತಲಾಂತು ಹೊಂದಿದವನು ಸಹ ಮುಂದೆಬಂದು, ‘ಯಜಮಾನನೇ, ನೀನು ಬಿತ್ತದಿರುವಲ್ಲಿ ಕೊಯ್ಯುವವನು, ನೀನು ತೂರದಿರುವಲ್ಲಿ ರಾಶಿಮಾಡಿಕೊಳ್ಳುವವನು ಆಗಿರುವ ಕಠಿಣ ಮನುಷ್ಯನು ಎಂದು ನಾನು ತಿಳಿದು 25ಹೆದರಿ, ಹೊರಟುಹೋಗಿ ನಿನ್ನ ತಲಾಂತನ್ನು ಭೂಮಿಯಲ್ಲಿ ಬಚ್ಚಿಟ್ಟೆನು; ಇಗೋ, ನಿನ್ನದು ನಿನಗೇ ಸಲ್ಲಿಸುತ್ತಿದ್ದೇನೆ’ ಅಂದನು. 26ಆಗ ಅವನ ಯಜಮಾನನು ಅವನಿಗೆ, ‘ಮೈಗಳ್ಳನಾದ ದುಷ್ಟ ಸೇವಕನೇ; ನೀನು ನನ್ನನ್ನು ಬಿತ್ತದಿರುವಲ್ಲಿ ಕೊಯ್ಯುವವನು ತೂರದಿರುವಲ್ಲಿ ರಾಶಿಮಾಡಿಕೊಳ್ಳುವವನು ಎಂದು ತಿಳಿದಿದ್ದೇಯಾ? 27ಹಾಗಾದರೆ, ನೀನು ನನ್ನ ಹಣವನ್ನು ಸಾಹುಕಾರರಲ್ಲಿ ಬಡ್ಡಿಗೆ ಹಾಕಬೇಕಾಗಿತ್ತು; ನಾನು ಬಂದು ನನ್ನದನ್ನು ಬಡ್ಡಿ ಸಹಿತ ಪಡೆದುಕೊಳ್ಳುತ್ತಿದ್ದೆನು ಎಂದು ಹೇಳಿ, 28ಅವನಿಂದ ಆ ತಲಾಂತನ್ನು ತೆಗೆದು ಹತ್ತು ತಲಾಂತು ಇರುವ ಸೇವಕನಿಗೆ ಕೊಟ್ಟನು. 29ಇದ್ದವರಿಗೆ ಇನ್ನೂ ಹೆಚ್ಚಾಗಿ ಕೊಡಲ್ಪಡುವುದು, ಅವರಿಗೆ ಇನ್ನೂ ಹೆಚ್ಚಾಗುವುದು; ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವುದು. 30ಮತ್ತು ನಿಷ್ಪ್ರಯೋಜಕನಾದ ಈ ಸೇವಕನನ್ನು ಹೊರಗೆ ಕಗ್ಗತ್ತಲೆಗೆ ಹಾಕಿಬಿಡಿರಿ ಎಂದು ಅಪ್ಪಣೆಕೊಟ್ಟನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲುಕಡಿಯೋಣವೂ ಇರುವವು.’
ಇಂದಿನ ಸಂತರು
- ಮಹಾನ್ ಸಂತ ಆಲ್ಬರ್ಟ್, ಧರ್ಮಾಧ್ಯಕ್ಷ ಮತ್ತು ಧರ್ಮಸಭೆಯ ಪಂಡಿತ
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ A, ವಾರದ ದಿನಗಳ ವರ್ಷ II.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು