Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ನವೆಂಬರ್ 2026 › 7 ನವೆಂಬರ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 7 ನವೆಂಬರ್ 2026

ಶನಿವಾರ · ಸಾಮಾನ್ಯ ಕಾಲದ 31ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 31ನೇ ವಾರದ ಶನಿವಾರ

ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಹಸಿರು

ಶನಿವಾರದ ಪೂಜ್ಯ ಕನ್ಯೆ ಮರಿಯಳ ಸ್ಮರಣೆ · ಐಚ್ಛಿಕ ಸ್ಮರಣೆ

ದಿನದ ವಾಚನಗಳು

ಮೊದಲನೆಯ ವಾಚನ

ಫಿಲಿಪ್ಪಿ 4:10–19

10ನನ್ನ ವಿಷಯದಲ್ಲಿ ನಿಮಗಿರುವ ಕಾಳಜಿಯು ಇಷ್ಟು ದಿನಗಳಾದ ಮೇಲೆ ಪುನಃ ಚಿಗುರಿದಕ್ಕೆ ನಾನು ಕರ್ತನಲ್ಲಿ ಹೆಚ್ಚಾಗಿ ಸಂತೋಷಪಡುತ್ತೇನೆ. ಇಂಥ ಯೋಚನೆ ನಿಮ್ಮಲ್ಲಿ ಈ ಮೊದಲೇ ಇದ್ದಿದ್ದರೂ, ಸಹಾಯ ಮಾಡುವುದಕ್ಕೆ ಸರಿಯಾದ ಸಂದರ್ಭ ಒದಗಿ ಬಂದಿರಲಿಲ್ಲ. 11ನನ್ನ ಅಗತ್ಯಗಳ ಕುರಿತಾಗಿ ನಾನು ಇದನ್ನು ಹೇಳುತ್ತಿಲ್ಲ, ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತೃಪ್ತನಾಗಿರುವುದನ್ನು ಕಲಿತುಕೊಂಡಿದ್ದೇನೆ. 12ಬಡವನಾಗಿರಲೂ ಬಲ್ಲೆನು, ಸಮೃದ್ಧಿಯುಳ್ಳವನಾಗಿರಲೂ ಬಲ್ಲೆನು. ನಾನು ತೃಪ್ತನಾಗಿದ್ದರೂ, ಹಸಿದವನಾಗಿದ್ದರೂ, ಸಮೃದ್ಧಿಯುಳ್ಳವನಾದರೂ, ಕೊರತೆಯುಳ್ಳವನಾದರೂ ಯಾವ ತರದ ಸ್ಥಿತಿಯಲ್ಲಿರುವವನಾದರೂ ಅದರ ಗುಟ್ಟು ನನಗೆ ತಿಳಿದಿದೆ. 13ನನ್ನನ್ನು ಬಲಪಡಿಸುವವನ ಮುಖಾಂತರ ನಾನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದೇನೆ. 14ಹೀಗಿದ್ದರೂ ನೀವು ನನ್ನ ಸಂಕಟದಲ್ಲಿ ಸಹಭಾಗಿಗಳಾಗಿದ್ದದ್ದು ಒಳ್ಳೆಯದಾಯಿತು. 15ಫಿಲಿಪ್ಪಿಯವರೇ, ನಾನು ಪ್ರಾರಂಭದಲ್ಲಿ ನಿಮ್ಮಲ್ಲಿ ಸುವಾರ್ತೆಯನ್ನು ಸಾರಿ, ಮಕೆದೋನ್ಯದಿಂದ ಹೊರಟುಹೋದಾಗ ಕೊಡುವ, ಕೊಳ್ಳುವ ವಿಷಯದಲ್ಲಿ ನಿಮ್ಮ ಹೊರತು ಬೇರೆ ಯಾವ ಸಭೆಯೂ ನನಗೆ ಬೆಂಬಲಿಸಲ್ಲಿಲ್ಲವೆಂಬುದನ್ನು ನೀವೂ ಬಲ್ಲಿರಿ. 16ನಾನು ಥೆಸಲೋನಿಕದಲ್ಲಿದ್ದಾಗಲೂ ನೀವು ಒಂದೆರಡು ಸಾರಿ ನನ್ನ ಕೊರತೆಯನ್ನು ನೀಗಿಸುವುದಕ್ಕೆ ಸಹಾಯವನ್ನು ಕೊಟ್ಟುಕಳುಹಿಸಿದಿರಲ್ಲಾ. 17ನಾನು ನಿಮ್ಮಿಂದ ದಾನವನ್ನು ಅಪೇಕ್ಷಿಸುವುದಿಲ್ಲ, ನಿಮ್ಮ ಲೆಕ್ಕಕ್ಕೆ ಸಮೃದ್ಧಿಯುಂಟಾಗುವ ಫಲವನ್ನೇ ಅಪೇಕ್ಷಿಸುತ್ತೇನೆ. 18ಬೇಕಾದದ್ದೆಲ್ಲಾ ನನಗುಂಟು, ಸಮೃದ್ಧಿಹೊಂದಿದ್ದೇನೆ. ಎಪಫ್ರೊದೀತನ ಕೈಯಿಂದ ನೀವು ಕೊಟ್ಟು ಕಳುಹಿಸಿದ್ದು ನನಗೆ ತಲುಪಲಾಗಿ ನಾನು ತುಂಬಿತುಳುಕಿದವನಾಗಿದ್ದೇನೆ. ಅದು ದೇವರಿಗೆ ಮೆಚ್ಚಿಕೆಯಾದದ್ದು, ಸುಗಂಧವಾಸನೆಯೇ, ಇಷ್ಟ ಯಜ್ಞವೇ. 19ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಗಳನ್ನೂ ನೀಗಿಸುವನು.

ಪ್ರತಿವಚನ ಕೀರ್ತನೆ

ಕೀರ್ತ 112:1–2, 5–6, 8–9

1ಯೆಹೋವನಿಗೆ ಸ್ತೋತ್ರ! ಯಾರು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ, ಆತನ ಆಜ್ಞೆಗಳಲ್ಲಿ ಅತ್ಯಾನಂದಪಡುವನೋ ಅವನೇ ಧನ್ಯನು. 2ಅವನ ಸಂತಾನವು ಲೋಕದಲ್ಲಿ ಬಲಿಷ್ಠವಾಗುವುದು; ನೀತಿವಂತನ ವಂಶವು ಶುಭಹೊಂದುವುದು. 5ದಯಾಳುವಾಗಿ ಧನಸಹಾಯ ಮಾಡುವವನೂ, ತನ್ನ ಕಾರ್ಯಗಳನ್ನು ನೀತಿಯಿಂದ ನಡೆಸುವವನೂ ಭಾಗ್ಯವಂತನು. 6ಅವನು ಎಂದಿಗೂ ಕದಲುವುದಿಲ್ಲ; ನೀತಿವಂತನನ್ನು ಯಾವಾಗಲೂ ಸ್ಮರಿಸುವರು. 8ದುಷ್ಟರಿಗಾಗುವ ಶಿಕ್ಷೆಯನ್ನು ಕಣ್ಣಾರೆ ಕಾಣುವೆನೆಂಬ ಭರವಸೆ ಇರುವುದರಿಂದ ಅವನ ಮನಸ್ಸು ದೃಢವಾಗಿದೆ, ಹೆದರುವುದಿಲ್ಲ. 9ಬಡವರಿಗೆ ಉದಾರವಾಗಿ ಕೊಡುತ್ತಾನೆ; ಅವನ ನೀತಿಯ ಫಲವು ಸದಾಕಾಲವೂ ಇರುವುದು. ಮಹಿಮೆಯೊಡನೆ ಅವನ ಕೊಂಬು ಎತ್ತಲ್ಪಡುವುದು.

ಸುವಾರ್ತೆ

ಲೂಕ 16:9–15

9“ಅನ್ಯಾಯದ ಧನದ ಮೂಲಕವಾಗಿ ನಿಮಗೆ ಸ್ನೇಹಿತರನ್ನು ಮಾಡಿಕೊಳ್ಳಿರಿ. ಹೀಗೆ ಮಾಡಿದರೆ ಅದು ನಿಮ್ಮ ಕೈಬಿಟ್ಟುಹೋದಾಗ ಅವರು ನಿಮ್ಮನ್ನು ಶಾಶ್ವತವಾದ ವಾಸಸ್ಥಾನಗಳಲ್ಲಿ ಸೇರಿಸಿಕೊಳ್ಳುವರು ಎಂದು ನಾನು ನಿಮಗೆ ಹೇಳುತ್ತೇನೆ. 10ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು. ಸಣ್ಣ ವಿಷಯಗಳಲ್ಲಿ ಅಪ್ರಾಮಾಣಿಕನಾಗಿರುವವನು ಬಹಳವಾದದ್ದರಲ್ಲಿಯೂ ಅಪ್ರಾಮಾಣಿಕನಾಗಿರುವನು. 11ಹೀಗಿರುವುದರಿಂದ ಅನ್ಯಾಯದ ಧನದ ವಿಷಯದಲ್ಲಿ ನೀವು ನಂಬಿಗಸ್ತರಲ್ಲದವರಾದರೆ ನಿಜವಾದ ಧನವನ್ನು ನಿಮ್ಮ ವಶಕ್ಕೆ ಯಾರು ಒಪ್ಪಿಸಿಕೊಟ್ಟಾರು? 12ಮತ್ತೊಬ್ಬನ ಸೊತ್ತಿನ ವಿಷಯದಲ್ಲಿ ನೀವು ನಂಬಿಗಸ್ತರಲ್ಲದವರಾದರೆ ನಿಮ್ಮದನ್ನು ನಿಮಗೆ ಯಾರು ಒಪ್ಪಿಸಿಕೊಟ್ಟಾರು? 13ಯಾವ ಆಳಾದರೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು, ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು, ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು. ನೀವು ದೇವರನ್ನೂ ಧನವನ್ನೂ ಒಟ್ಟಿಗೆ ಸೇವಿಸಲಾರಿರಿ” ಅಂದನು. 14ಫರಿಸಾಯರು ಹಣದಾಸೆಯುಳ್ಳವರಾಗಿದ್ದರಿಂದ ಈ ಮಾತುಗಳನ್ನೆಲ್ಲಾ ಕೇಳಿ ಆತನನ್ನು ಹಾಸ್ಯ ಮಾಡಿದರು. 15ಆಗ ಆತನು ಅವರಿಗೆ ಹೇಳಿದ್ದೇನಂದರೆ, “ಮನುಷ್ಯರ ಮುಂದೆ ನೀತಿವಂತರೆಂದು ತೋರಿಸಿಕೊಳ್ಳುವವರು ನೀವು, ಆದರೆ ದೇವರು ನಿಮ್ಮ ಹೃದಯಗಳನ್ನು ಬಲ್ಲವನಾಗಿದ್ದಾನೆ. ಮನುಷ್ಯರ ದೃಷ್ಟಿಯಲ್ಲಿ ಶ್ರೇಷ್ಠವೆನಿಸಿಕೊಳ್ಳುವಂಥದು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿದೆ.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ A, ವಾರದ ದಿನಗಳ ವರ್ಷ II.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು