Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಅರಸುಗಳು ಮತ್ತು ಪೂರ್ವಕಾಲವೃತ್ತಾಂತ › ಯೆಹೂದದ ಅರಸರು

ಪಕ್ಕಪಕ್ಕದಲ್ಲಿ ಅರಸುಗಳು ಮತ್ತು ಪೂರ್ವಕಾಲವೃತ್ತಾಂತ · ಯೆಹೂದದ ಅರಸರು

ಯೆಹೂದದ ಅರಸನಾದ ಯೋತಾಮ

2 ಅರಸು 15:32–38 · 2 ಪೂರ್ವ 27:1–9

2 ಅರಸುಗಳು

2 ಅರಸು 15:32–38

32ಇಸ್ರಾಯೇಲರ ಅರಸನೂ, ರೆಮಲ್ಯನ ಮಗನೂ ಆದ ಪೆಕಹನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಯೆಹೂದ್ಯರ ಅರಸನಾದ ಉಜ್ಜೀಯನ ಮಗನಾದ ಯೋತಾಮನು ಆಳತೊಡಗಿದನು.

33ಇವನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರ್ಷದವನಾಗಿದ್ದನು. ಇವನು ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಚಾದೋಕನ ಮಗಳಾದ ಯೆರೂಷಾ ಇವನ ತಾಯಿ.

34ಇವನು ತನ್ನ ತಂದೆಯಾದ ಉಜ್ಜೀಯನಂತೆ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದನು.

35ಆದರೆ ಇವನ ಕಾಲದಲ್ಲಿ ಪೂಜಾಸ್ಥಳಗಳು ಇನ್ನೂ ತೆಗೆಯಲ್ಪಟ್ಟಿರಲಿಲ್ಲ. ಆದುದರಿಂದ ಜನರು ಅವುಗಳಲ್ಲಿ ಯಜ್ಞಧೂಪಗಳನ್ನು ಸಮರ್ಪಿಸುತ್ತಿದ್ದರು. ಯೆಹೋವನ ಆಲಯಕ್ಕೆ ಮೇಲಣ ಹೆಬ್ಬಾಗಿಲನ್ನು ಇಡಿಸಿದವನು ಇವನೇ.

36ಯೋತಾಮನ ಉಳಿದ ಚರಿತ್ರೆಯೂ, ಅವನ ಎಲ್ಲಾ ಕೃತ್ಯಗಳೂ ಯೆಹೂದ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಿದೆ.

37ಯೆಹೋವನು ಆ ಕಾಲದಲ್ಲಿ ಅರಾಮ್ಯರ ಅರಸನಾದ ರೆಚೀನನನ್ನೂ, ರೆಮಲ್ಯನ ಮಗನಾದ ಪೆಕಹನನ್ನೂ ಯೆಹೂದ್ಯರಿಗೆ ವಿರೋಧವಾಗಿ ಕಳುಹಿಸತೊಡಗಿದನು.

38ಯೋತಾಮನು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ಅವನ ಪೂರ್ವಿಕನಾದ ದಾವೀದನ ಪಟ್ಟಣದೊಳಗೆ ಅವನ ಪೂರ್ವಿಕರ ಕುಟುಂಬ ಸ್ಮಶಾನದಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಆಹಾಜನು ಅರಸನಾದನು.

2 ಪೂರ್ವಕಾಲವೃತ್ತಾಂತ

2 ಪೂರ್ವ 27:1–9

1ಯೋತಾಮನು ಪಟ್ಟಕ್ಕೆ ಬಂದಾಗ ಅವನು ಇಪ್ಪತ್ತೈದು ವರ್ಷದವನಾಗಿದ್ದನು. ಅವನು ಯೆರೂಸಲೇಮಿನಲ್ಲಿ ಹದಿನಾರು ವರ್ಷಗಳ ಕಾಲ ಆಳಿದನು. ಚಾದೋಕನ ಮಗಳಾದ ಯೆರೂಷ ಎಂಬಾಕೆಯು ಇವನ ತಾಯಿ.

2ಅವನು ತನ್ನ ತಂದೆಯಾದ ಉಜ್ಜೀಯನಂತೆ ಯೆಹೋವನ ಚಿತ್ತಾನುಸಾರವಾಗಿ ನಡೆದನು. ಆದರೆ ಅವನಂತೆ ಯೆಹೋವನ ಆಲಯವನ್ನು ಪ್ರವೇಶಿಸಲಿಲ್ಲ. ಪ್ರಜೆಗಳಾದರೋ ದುರಾಚಾರಿಗಳಾಗಿಯೇ ಇದ್ದರು.

3ಯೆಹೋವನ ಆಲಯಕ್ಕೆ ಮೇಲಣ ಹೆಬ್ಬಾಗಿಲನ್ನು ಇಡಿಸಿ, ಓಫೇಲ್ ಗೋಡೆಯ ಹೆಚ್ಚಿನ ಭಾಗವನ್ನು ಕಟ್ಟಿಸಿದವನು ಇವನೇ.

4ಇದಲ್ಲದೆ, ಇವನು ಯೆಹೂದ ಪರ್ವತ ಪ್ರದೇಶದಲ್ಲಿ ಪಟ್ಟಣಗಳನ್ನೂ, ಕಾಡುಗಳಲ್ಲಿ ದುರ್ಗಗಳನ್ನೂ, ಗೋಪುರಗಳನ್ನೂ ಕಟ್ಟಿಸಿದನು.

5ಅಮ್ಮೋನಿಯರ ಅರಸರೊಡನೆ ಯುದ್ಧ ಮಾಡಿ ಅವರನ್ನು ಗೆದ್ದನು. ಅಮ್ಮೋನಿಯರು ಆ ವರ್ಷದಲ್ಲಿ ಇವನಿಗೆ ನೂರು ತಲಾಂತು ಬೆಳ್ಳಿ, ಹತ್ತು ಸಾವಿರ ಕೋರ್ (ಸಾವಿರ ಮೆಟ್ರಿಕ್ ಟನ್) ಗೋದಿ, ಹತ್ತು ಸಾವಿರ ಕೋರ್ ಜವೆಗೋದಿ ಇವುಗಳನ್ನು ಕೊಡಬೇಕಾಯಿತು. ಅಮ್ಮೋನಿಯರು ಅವನಿಗೆ ಎರಡನೆಯ ಮತ್ತು ಮೂರನೆಯ ವರ್ಷಗಳಲ್ಲಿಯೂ ಹೀಗೆಯೇ ಕೊಟ್ಟರು.

6ಯೋತಾಮನು ತನ್ನ ದೇವರಾದ ಯೆಹೋವನ ಚಿತ್ತಾನುಸಾರವಾಗಿ ನಡೆದುಕೊಂಡದ್ದರಿಂದ ಬಲವುಳ್ಳವನಾದನು.

7ಯೋತಾಮನ ಉಳಿದ ಚರಿತ್ರೆಯೂ, ಅವನು ನಡೆಸಿದ ಯುದ್ಧಗಳು ಹಾಗೂ ಕಾರ್ಯ ಚಟುವಟಿಕೆಗಳು ಇಸ್ರಾಯೇಲರ ಮತ್ತು ಯೆಹೂದ್ಯರ ರಾಜ ಗ್ರಂಥಗಳಲ್ಲಿ ಬರೆಯಲ್ಪಟ್ಟಿದೆ.

8ಅವನು ತನ್ನ ಇಪ್ಪತ್ತೈದನೆಯ ವರ್ಷದಲ್ಲಿ ಪಟ್ಟಕ್ಕೆ ಬಂದು ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳ್ವಿಕೆ ನಡೆಸಿದನು.

9ಯೋತಾಮನು ತನ್ನ ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ದಾವೀದನಗರದಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಆಹಾಜನು ಅರಸನಾದನು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು