ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಡಿಸೆಂಬರ್ 2027 › 6 ಡಿಸೆಂಬರ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 6 ಡಿಸೆಂಬರ್ 2027
ಸೋಮವಾರ · ಆಗಮನ ಕಾಲದ ಎರಡನೆಯ ವಾರ
ಹಬ್ಬಗಳು ಮತ್ತು ಸಂತರು
ಆಗಮನ ಕಾಲದ ಎರಡನೆಯ ವಾರದ ಸೋಮವಾರ
ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ನೇರಳೆ
ಸಂತ ನಿಕೋಲಸ್, ಧರ್ಮಾಧ್ಯಕ್ಷ · ಐಚ್ಛಿಕ ಸ್ಮರಣೆ
ದಿನದ ವಾಚನಗಳು
ಮೊದಲನೆಯ ವಾಚನ
1ಅರಣ್ಯವೂ, ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವುದು. 2ಅದು ಸಮೃದ್ಧಿಯಾಗಿ ಹೂಬಿಟ್ಟು, ಉತ್ಸಾಹ ಧ್ವನಿಮಾಡುವಷ್ಟು ಉಲ್ಲಾಸಿಸುವುದು. ಲೆಬನೋನಿನ ಮಹಿಮೆಯೂ, ಕರ್ಮೆಲಿನ ಮತ್ತು ಶಾರೋನಿನ ವೈಭವವೂ ಅದಕ್ಕೆ ದೊರೆಯುವವು; ಇವೆಲ್ಲಾ ಯೆಹೋವನ ಮಹಿಮೆಯನ್ನೂ, ನಮ್ಮ ದೇವರ ವೈಭವವನ್ನೂ ಕಾಣುವವು. 3ಜೋಲುಬಿದ್ದ ಕೈಗಳನ್ನೂ, ನಡುಗುವ ಮೊಣಕಾಲುಗಳನ್ನೂ ಬಲಗೊಳಿಸಿರಿ. 4ಭಯಭ್ರಾಂತ ಹೃದಯದವರಿಗೆ, “ಬಲಗೊಳ್ಳಿರಿ, ಹೆದರಬೇಡಿರಿ! ಇಗೋ, ನಿಮ್ಮ ದೇವರು ಮುಯ್ಯಿತೀರಿಸುವುದಕ್ಕೂ, ದೈವಿಕ ಪ್ರತಿಫಲವನ್ನು ಕೊಡುವುದಕ್ಕೂ ಬರುವನು. ತಾನೇ ಬಂದು ನಿಮ್ಮನ್ನು ರಕ್ಷಿಸುವನು” ಎಂದು ಹೇಳಿರಿ. 5ಆಗ ಕುರುಡರ ಕಣ್ಣು ಕಾಣುವುದು, ಕಿವುಡರ ಕಿವಿ ಕೇಳುವುದು. 6ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವುದು, ಅರಣ್ಯದಲ್ಲಿ ಒರತೆಗಳು ಒಡೆಯುವವು, ಮರುಭೂಮಿಯಲ್ಲಿ ನದಿಗಳು ಹುಟ್ಟಿ ಹರಿಯುವವು. 7ಬೆಂಗಾಡು ಸರೋವರವಾಗುವುದು, ಒಣನೆಲದಲ್ಲಿ ಬುಗ್ಗೆಗಳು ಹರಿಯುವವು; ನರಿಗಳು ಮಲಗುತ್ತಿದ್ದ ಸ್ಥಳವು ಆಪುಜಂಬುಗಳ ಪ್ರದೇಶವಾಗುವುದು. 8ಅಲ್ಲಿ ರಾಜಮಾರ್ಗವಿರುವುದು. ಅದು ಪರಿಶುದ್ಧ ಮಾರ್ಗ ಎನಿಸಿಕೊಳ್ಳುವುದು. ಯಾವ ಅಶುದ್ಧನೂ ಅದರ ಮೇಲೆ ಹಾದುಹೋಗನು. ಆದರೆ ಅದು ದೇವಜನರಿಗಾಗಿಯೇ ಇರುವುದು. ಅಲ್ಲಿ ಹೋಗುವ ಮೂಢನೂ ದಾರಿತಪ್ಪನು. 9ಸಿಂಹವು ಅಲ್ಲಿ ಇರದು. ಇಲ್ಲವೆ ಕ್ರೂರವಾದ ಮೃಗಗಳು ಅದರ ಮೇಲೆ ಹೋಗುವುದಿಲ್ಲ. ಅದು ಅಲ್ಲಿ ಕಾಣುವುದೇ ಇಲ್ಲ. ಬಿಡುಗಡೆಯಾದವರೇ ಅಲ್ಲಿ ನಡೆಯುವರು. 10ಯೆಹೋವನು ವಿಮೋಚಿಸಿದವರು ಹಿಂದಿರುಗಿ, ಶಾಶ್ವತ ಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು ಉತ್ಸಾಹಧ್ವನಿಯೊಡನೆ ಚೀಯೋನಿಗೆ ಸೇರುವರು. ಅವರು ಹರ್ಷಾನಂದಗಳನ್ನು ಅನುಭವಿಸುವರು, ದುಃಖವೂ, ನಿಟ್ಟುಸಿರೂ ಓಡಿಹೋಗುವವು.
ಪ್ರತಿವಚನ ಕೀರ್ತನೆ
8ಯೆಹೋವ ದೇವರು ಏನು ಹೇಳುತ್ತಾನೋ ಕೇಳುತ್ತೇನೆ. ಆತನು ತನ್ನ ಭಕ್ತಜನರಿಗೆ ಸಮಾಧಾನದ ವಾಕ್ಯವನ್ನು ಹೇಳುತ್ತಾನಲ್ಲಾ. ಅವರಾದರೋ ತಿರುಗಿ ಮೂರ್ಖತನದಲ್ಲಿ ಬೀಳದಿರಲಿ. 9ಭಯಭಕ್ತಿಯುಳ್ಳ ಜನರಿಗೆ ಆತನ ರಕ್ಷಣೆಯು ಹತ್ತಿರವಿರುವುದು ಸತ್ಯ. ಇದರಿಂದ ಆತನ ಮಹಿಮೆ ನಮ್ಮ ದೇಶದಲ್ಲಿ ನೆಲೆಗೊಳ್ಳುವುದು. 10ಆತನ ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆ ಒಂದನ್ನೊಂದು ಕೂಡಿರುವವು; ನೀತಿಯು, ಸಮಾಧಾನವು ಮುದ್ದಿಟ್ಟುಕೊಳ್ಳುವವು. 11ಸತ್ಯತೆಯು ಭೂಮಿಯಿಂದ ಹುಟ್ಟುವುದು; ನೀತಿಯು ಆಕಾಶದಿಂದ ಕೆಳಗೆ ದೃಷ್ಟಿಸುವುದು. 12ನಿಜವಾಗಿ ಯೆಹೋವನು ಒಳ್ಳೆಯದನ್ನು ಅನುಗ್ರಹಿಸುವನು; ನಮ್ಮ ದೇಶವು ತನ್ನ ಬೆಳೆ ಕೊಡುವುದು. 13ನೀತಿಯು ಆತನ ಮುಂದೆ ಹೋಗುತ್ತಾ, ನಾವು ಆತನ ಹೆಜ್ಜೆಹಿಡಿದು ನಡೆಯುವಂತೆ ದಾರಿ ಮಾಡುವುದು.
ಸುವಾರ್ತೆ
17ಒಮ್ಮೆ ಆತನು ಉಪದೇಶಮಾಡುತ್ತಿರಲು ಗಲಿಲಾಯ ಮತ್ತು ಯೂದಾಯದ ಎಲ್ಲಾ ಗ್ರಾಮಗಳಿಂದಲೂ ಯೆರೂಸಲೇಮಿನಿಂದಲೂ ಬಂದಿದ್ದ ಫರಿಸಾಯರೂ ಧರ್ಮೋಪದೇಶಕರೂ ಆತನ ಹತ್ತಿರ ಕುಳಿತುಕೊಂಡಿದ್ದರು. ಮತ್ತು ಅವರನ್ನು ಗುಣಮಾಡುವ ದೇವರ ಶಕ್ತಿಯು ಆತನಲ್ಲಿತ್ತು. 18ಹೀಗಿರುವಲ್ಲಿ ಕೆಲವು ಮಂದಿ ಗಂಡಸರು ಒಬ್ಬ ಪಾರ್ಶ್ವವಾಯು ರೋಗಿಯನ್ನು ದೋಲಿಯಲ್ಲಿ ಹೊತ್ತುಕೊಂಡು ಬಂದರು. ಅವನನ್ನು ಒಳಗೆ ತೆಗೆದುಕೊಂಡು ಹೋಗಿ ಆತನ ಮುಂದೆ ಇರಿಸಬೇಕೆಂದು ಪ್ರಯತ್ನಿಸಿದರು. 19ಜನರ ಗುಂಪು ದಟ್ಟವಾಗಿದ್ದ ಕಾರಣ ಅವನನ್ನು ಒಳಗೆ ತೆಗೆದುಕೊಂಡುಹೋಗುವ ಮಾರ್ಗವನ್ನು ಕಾಣದೆ ಮನೆಯ ಮೇಲೆ ಹತ್ತಿ ಹಂಚುಗಳನ್ನು ತೆಗೆದು ಅವನನ್ನು ಹಾಸಿಗೆಯ ಸಹಿತವಾಗಿ ಜನರ ನಡುವೆ ಯೇಸುವಿನ ಮುಂದೆ ಇಳಿಸಿದರು. 20ಯೇಸು ಅವರ ನಂಬಿಕೆಯನ್ನು ನೋಡಿ, “ಸ್ನೇಹಿತನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಅಂದನು. 21ಅದಕ್ಕೆ ಆ ಶಾಸ್ತ್ರಿಗಳೂ ಮತ್ತು ಫರಿಸಾಯರೂ, “ದೇವದೂಷಣೆಯ ಮಾತನಾಡುವ ಇವನು ಎಷ್ಟರವನು? ಪಾಪಗಳನ್ನು ಕ್ಷಮಿಸಲು ದೇವರೊಬ್ಬನಿಂದ ಹೊರತು ಮತ್ತಾರಿಂದಾದೀತು?” ಎಂದು ಅಂದುಕೊಳ್ಳುತ್ತಿದ್ದರು. 22ಆದರೆ ಅವರು ಹಾಗಂದುಕೊಳ್ಳುವುದನ್ನು ಯೇಸುವು ತಿಳಿದುಕೊಂಡು ಅವರಿಗೆ, “ನೀವು ನಿಮ್ಮ ಮನಸ್ಸಿನಲ್ಲಿ ಅಂದುಕೊಳ್ಳುವುದೇನು? 23ಯಾವುದು ಸುಲಭ? ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅನ್ನುವುದೋ? ಎದ್ದು ನಡೆ ಅನ್ನುವುದೋ? 24ಆದರೆ ಪಾಪಗಳನ್ನು ಕ್ಷಮಿಸುವುದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬುದು ನಿಮಗೆ ತಿಳಿಯಬೇಕು” ಎಂದು ಹೇಳಿ, ಆ ಪಾರ್ಶ್ವವಾಯು ರೋಗಿಯನ್ನು ನೋಡಿ, “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು” ಎಂದು ಹೇಳಿದನು. 25ಕೂಡಲೆ ಅವನು ಅವರ ಮುಂದೆ ಎದ್ದು ತಾನು ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು ದೇವರನ್ನು ಕೊಂಡಾಡುತ್ತಾ ಮನೆಗೆ ಹೋದನು. 26ನೋಡಿದವರೆಲ್ಲರೂ ಬೆರಗಾಗಿ ದೇವರನ್ನು ಕೊಂಡಾಡಿದರು ಮತ್ತು ಅವರು ಭಯ ಹಿಡಿದವರಾಗಿ, “ನಾವು ಈ ಹೊತ್ತು ಅಪೂರ್ವ ಸಂಗತಿಯನ್ನು ಕಂಡೆವು” ಅಂದರು.
ಇಂದಿನ ಸಂತರು
- ಸಂತ ನಿಕೋಲಸ್, ಧರ್ಮಾಧ್ಯಕ್ಷ
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ C, ವಾರದ ದಿನಗಳ ವರ್ಷ II.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು