Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ನವೆಂಬರ್ 2027 › 7 ನವೆಂಬರ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 7 ನವೆಂಬರ್ 2027

ಭಾನುವಾರ · ಸಾಮಾನ್ಯ ಕಾಲದ 32ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 32ನೇ ಭಾನುವಾರ

ಭಾನುವಾರ · ಆರಾಧನಾ ಬಣ್ಣ: ಹಸಿರು

ದಿನದ ವಾಚನಗಳು

ಮೊದಲನೆಯ ವಾಚನ

1 ಅರಸು 17:10–16

10ಅವನು ಅಲ್ಲಿಂದ ಹೊರಟು ಚಾರೆಪ್ತಾದ ಊರುಬಾಗಿಲಿನ ಸಮೀಪಕ್ಕೆ ಬಂದಾಗ ಸೌದೆಯನ್ನು ಕೂಡಿಸುತ್ತಿರುವ ಒಬ್ಬ ವಿಧವೆಯನ್ನು ಕಂಡನು. ಅವನು ಆಕೆಯನ್ನು ಕೂಗಿ, “ದಯವಿಟ್ಟು ಕುಡಿಯುವುದಕ್ಕೆ ಒಂದು ತಂಬಿಗೆಯಲ್ಲಿ ನೀರು ತೆಗೆದುಕೊಂಡು ಬಾ” ಎಂದು ಹೇಳಿದನು. 11ಆಕೆಯು ಹೋಗುತ್ತಿರುವಾಗ ಪುನಃ ಆಕೆಯನ್ನು ಕರೆದು, “ನೀನು ಬರುವಾಗ ನನಗೋಸ್ಕರ ಒಂದು ತುಂಡು ರೊಟ್ಟಿಯನ್ನೂ ತೆಗೆದುಕೊಂಡು ಬಾ” ಅಂದನು. 12ಆಕೆಯು ಅವನಿಗೆ, “ನಿನ್ನ ದೇವರಾದ ಯೆಹೋವನಾಣೆ, ನನ್ನ ಹತ್ತಿರ ರೊಟ್ಟಿ ಇರುವುದಿಲ್ಲ, ಮಡಿಕೆಯಲ್ಲಿ ಒಂದು ಹಿಡಿ ಹಿಟ್ಟು, ಮೊಗೆಯಲ್ಲಿ ಸ್ವಲ್ಪ ಎಣ್ಣೆ ಇವುಗಳ ಹೊರತಾಗಿ ಬೇರೇನೂ ಇರುವುದಿಲ್ಲ. ಈಗ ಎರಡು ಕಟ್ಟಿಗೆಗಳನ್ನು ಆರಿಸಿಕೊಂಡು ನನಗೋಸ್ಕರವೂ ನನ್ನ ಮಗನಿಗೋಸ್ಕರವೂ ರೊಟ್ಟಿ ಮಾಡುತ್ತೇನೆ, ಬೇರೆ ಹಿಟ್ಟು, ಎಣ್ಣೆ ಇಲ್ಲ ಇದನ್ನು ತಿಂದ ಮೇಲೆ ಆಹಾರವಿಲ್ಲದ ಕಾರಣ ನಾವು ಸಾಯಬೇಕೇ ಹೊರತು ಬೇರೆ ಗತಿಯಿಲ್ಲ” ಎಂದು ಉತ್ತರಕೊಟ್ಟಳು. 13ಆಗ ಎಲೀಯನು ಆಕೆಗೆ, “ಹೆದರಬೇಡ, ನೀನು ಹೇಳಿದಂತೆಯೇ ಮಾಡು. ಆದರೆ ಮೊದಲು ಅದರಿಂದ ನನಗೋಸ್ಕರ ಒಂದು ಚಿಕ್ಕ ರೊಟ್ಟಿಯನ್ನು ಮಾಡಿಕೊಂಡು ಬಾ. ತರುವಾಯ ನಿನಗೂ ನಿನ್ನ ಮಗನಿಗೂ ಮಾಡಿಕೋ. 14ಇಸ್ರಾಯೇಲ್ ದೇವರಾದ ಯೆಹೋವನು ನಿನಗೆ, ‘ನಾನು ದೇಶಕ್ಕೆ ಮಳೆಯನ್ನು ಕಳುಹಿಸುವವರೆಗೆ ನಿನ್ನ ಮಡಿಕೆಯಲ್ಲಿರುವ ಹಿಟ್ಟು ತೀರುವುದಿಲ್ಲ ಮತ್ತು ಮೊಗೆಯಲ್ಲಿರುವ ಎಣ್ಣೆಯು ಮುಗಿದುಹೋಗುವುದಿಲ್ಲ’” ಎಂದು ಹೇಳುತ್ತಾನೆ. 15ಆಕೆಯು ಹೋಗಿ ಅವನು ಹೇಳಿದಂತೆಯೇ ಮಾಡಿದಳು. ಆಕೆಯೂ, ಆಕೆಯ ಮನೆಯವರೂ ಮತ್ತು ಎಲೀಯನು ಅದನ್ನು ಅನೇಕ ದಿನಗಳವರೆಗೆ ಊಟಮಾಡಿದರು. 16ಯೆಹೋವನು ಎಲೀಯನ ಮುಖಾಂತರವಾಗಿ ಹೇಳಿದಂತೆ ಮಡಿಕೆಯಲ್ಲಿದ್ದ ಹಿಟ್ಟು ತೀರಲಿಲ್ಲ ಮತ್ತು ಮೊಗೆಯಲ್ಲಿದ್ದ ಎಣ್ಣೆಯು ಮುಗಿದುಹೋಗಲಿಲ್ಲ.

ಪ್ರತಿವಚನ ಕೀರ್ತನೆ

ಕೀರ್ತ 146:7–10

7ಹಿಂಸೆಗೆ ಗುರಿಯಾದವರ ನ್ಯಾಯವನ್ನು ಸ್ಥಾಪಿಸುವವನೂ, ಹಸಿದವರಿಗೆ ಆಹಾರ ಕೊಡುವವನೂ ಆತನೇ. ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುತ್ತಾನೆ. 8ಯೆಹೋವನು ಕುರುಡರಿಗೆ ಕಣ್ಣು ಕೊಡುತ್ತಾನೆ. ಯೆಹೋವನು ಕುಗ್ಗಿದವರನ್ನು ಉದ್ಧರಿಸುತ್ತಾನೆ. ಯೆಹೋವನು ನೀತಿವಂತರನ್ನು ಪ್ರೀತಿಸುತ್ತಾನೆ. 9ಯೆಹೋವನು ಪರದೇಶದವರನ್ನು ಕಾಪಾಡುತ್ತಾನೆ. ಆತನು ಅನಾಥರಿಗೂ, ವಿಧವೆಯರಿಗೂ ಆಧಾರವಾಗಿದ್ದಾನೆ. ಆದರೆ ದುಷ್ಟರ ಮಾರ್ಗವನ್ನು ಡೊಂಕು ಮಾಡುತ್ತಾನೆ. 10ಯೆಹೋವನು ಸದಾಕಾಲವೂ ಅರಸನಾಗಿರುವನು, ಚೀಯೋನೇ, ನಿನ್ನ ದೇವರು ತಲತಲಾಂತರಕ್ಕೂ ಆಳುವನು, ಯೆಹೋವನಿಗೆ ಸ್ತೋತ್ರ!

ಎರಡನೆಯ ವಾಚನ

ಇಬ್ರಿ 9:24–28

24ಯಾಕೆಂದರೆ ಕ್ರಿಸ್ತನು ನಿಜವಾದ ದೇವಾಲಯಕ್ಕೆ ಪ್ರತಿಬಿಂಬವಾಗಿ ಕೈಯಿಂದ ಕಟ್ಟಲ್ಪಟ್ಟ ಪವಿತ್ರ ಸ್ಥಳವನ್ನು ಪ್ರವೇಶಿಸದೆ, ದೇವರ ಸನ್ನಿಧಿಯಲ್ಲಿ ನಮಗೋಸ್ಕರ ಈಗ ಪ್ರತ್ಯಕ್ಷನಾಗಲು ಪರಲೋಕದೊಳಗೆ ಪ್ರವೇಶಿಸಿದನು. 25ಇದಲ್ಲದೆ, ಮಹಾಯಾಜಕನು ವರ್ಷ ವರ್ಷವೂ ಪ್ರಾಣಿಗಳ ರಕ್ತವನ್ನು ತೆಗೆದುಕೊಂಡು ಅತಿ ಪರಿಶುದ್ಧ ಸ್ಥಳದಲ್ಲಿ ಪ್ರವೇಶಿಸುವ ಪ್ರಕಾರ, ಕ್ರಿಸ್ತನು ತನ್ನನ್ನು ಅನೇಕ ಸಾರಿ ಸಮರ್ಪಿಸುವುದಕ್ಕೆ ಅಲ್ಲಿಗೆ ಪ್ರವೇಶಿಸಲಿಲ್ಲ. 26ಹಾಗೆ ಸಮರ್ಪಿಸಬೇಕಾಗಿದ್ದ ಪಕ್ಷದಲ್ಲಿ ಆತನು ಲೋಕಾದಿಯಿಂದ ಎಷ್ಟೋ ಸಾರಿ ಬಾಧೆಪಡಬೇಕಾಗಿತ್ತು. ಆದರೆ ಒಂದೇ ಸಾರಿ, ಯುಗಗಳ ಸಮಾಪ್ತಿಯವರೆಗೂ, ಆತನು ಪಾಪ ನಿವಾರಣೆ ಮಾಡುವ ಉದ್ದೇಶದಿಂದ ತನ್ನನ್ನು ತಾನೇ ಯಜ್ಞಮಾಡಿಕೊಳ್ಳುವವನಾಗಿ ಪ್ರತ್ಯಕ್ಷನಾದನು. 27ಒಂದೇ ಸಾರಿ ಸಾಯುವುದೂ ಆ ಮೇಲೆ ನ್ಯಾಯತೀರ್ಪು ಮನುಷ್ಯರಿಗೆ ಹೇಗೆ ನೇಮಕವಾಗಿದೆಯೋ, 28ಹಾಗೆಯೇ ಕ್ರಿಸ್ತನು ಸಹ ಬಹು ಜನರ ಪಾಪಗಳನ್ನು ಹೊತ್ತು ಕೊಳ್ಳುವುದಕ್ಕೊಸ್ಕರ ಒಂದೇ ಸಾರಿ ಸಮರ್ಪಿತನಾದನು. ಆತನು ಎರಡನೆಯ ಸಾರಿ ಪ್ರತ್ಯಕ್ಷನಾಗುವಂಥದ್ದು ಪಾಪವನ್ನು ಪರಿಹರಿಸುವುದಕ್ಕಾಗಿಯಲ್ಲ ತನ್ನನ್ನು ನಿರೀಕ್ಷಿಸಿಕೊಂಡಿರುವವರಿಗೆ ರಕ್ಷಣೆಯನ್ನು ಉಂಟುಮಾಡುವುದಕ್ಕಾಗಿಯೇ.

ಸುವಾರ್ತೆ

ಮಾರ್ಕ 12:38–44

38ಆತನು ಉಪದೇಶಮಾಡಿ ಹೇಳಿದ್ದೇನಂದರೆ, “ಶಾಸ್ತ್ರಿಗಳ ವಿಷಯದಲ್ಲಿ ಎಚ್ಚರಿಕೆಯಾಗಿರಿ. ನಿಲುವಂಗಿಯನ್ನು ಧರಿಸಿಕೊಂಡು ತಿರುಗಾಡುತ್ತಾ, 39ಸಂತೆಯ ಬೀದಿಗಳಲ್ಲಿ ನಮಸ್ಕಾರಗಳನ್ನೂ, ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳನ್ನೂ, ಔತಣಗಳಲ್ಲಿ ಪ್ರಥಮ ಸ್ಥಾನಗಳನ್ನೂ ಅವರು ಇಷ್ಟಪಡುವವರಾಗಿದ್ದಾರೆ. 40ಇವರು ವಿಧವೆಯರ ಮನೆಗಳನ್ನು ದೋಚಿ ತೋರಿಕೆಗಾಗಿ ದೇವರಿಗೆ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ. ಇಂಥವರು ಹೆಚ್ಚಿನ ದಂಡನೆಯನ್ನು ಹೊಂದುವರು” ಎಂದನು. 41ಯೇಸು ದೇವಾಲಯದ ಆವರಣದಲ್ಲಿ ಕಾಣಿಕೆ ಪೆಟ್ಟಿಗೆಯ ಎದುರಿಗೆ ಕುಳಿತುಕೊಂಡು ಜನರು ಅದರಲ್ಲಿ ಹಣ ಹಾಕುವುದನ್ನು ಗಮನಿಸುತ್ತಿದ್ದನು. ಅನೇಕ ಮಂದಿ ಐಶ್ವರ್ಯವಂತರು ಹೆಚ್ಚೆಚ್ಚು ಹಣ ಹಾಕುತ್ತಿದ್ದರು. 42ಒಬ್ಬ ಬಡ ವಿಧವೆಯು ಬಂದು, ಎರಡು ಕಾಸು ಬೆಲೆಯುಳ್ಳ ಒಂದು ದುಗ್ಗಾಣಿ ಹಾಕಿದಳು. 43ಆಗ ಯೇಸು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ, “ಈ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಿದವರೆಲ್ಲರಿಗಿಂತಲೂ ಈ ಬಡ ವಿಧವೆಯು ಹೆಚ್ಚಾಗಿ ಹಾಕಿದ್ದಾಳೆ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ. 44ಹೇಗೆಂದರೆ, ಎಲ್ಲರೂ ತಮ್ಮ ಸಮೃದ್ಧಿಯಲ್ಲಿ ಹಾಕಿದರು. ಆದರೆ ಈ ವಿಧವೆಯೋ ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲಾ ಎಂದರೆ, ತನ್ನ ಜೀವನಕ್ಕೆ ಆಧಾರವಾಗಿದ್ದ ಎಲ್ಲವನ್ನೂ ಕಾಣಿಕೆಯಾಗಿ ಹಾಕಿದ್ದಾಳೆ” ಎಂದನು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು