ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಅಕ್ಟೋಬರ್ 2027 › 18 ಅಕ್ಟೋಬರ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 18 ಅಕ್ಟೋಬರ್ 2027
ಸೋಮವಾರ · ಸಾಮಾನ್ಯ ಕಾಲದ 29ನೇ ವಾರ
ಹಬ್ಬಗಳು ಮತ್ತು ಸಂತರು
ಸಂತ ಲೂಕ, ಸುವಾರ್ತಿಕ
ಹಬ್ಬ · ಆರಾಧನಾ ಬಣ್ಣ: ಕೆಂಪು
ದಿನದ ವಾಚನಗಳು
ಮೊದಲನೆಯ ವಾಚನ
9ನೀನು ನನ್ನ ಬಳಿಗೆ ಬೇಗನೇ ಬರುವುದಕ್ಕೆ ಪ್ರಯತ್ನಪಡು, 10ಯಾಕೆಂದರೆ ದೇಮನು ಇಹಲೋಕವನ್ನು ಪ್ರೀತಿಸಿ, ನನ್ನನ್ನು ಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೂ ತೀತನು ದಲ್ಮಾತ್ಯಕ್ಕೂ ಹೋದರು. 11ಲೂಕನು ಮಾತ್ರ ನನ್ನ ಜೊತೆಯಲ್ಲಿದ್ದಾನೆ. ಮಾರ್ಕನನ್ನು ನಿನ್ನ ಸಂಗಡ ಕರೆದುಕೊಂಡು ಬಾ, ಅವನು ನನಗೆ ಸೇವೆಯಲ್ಲಿ ಉಪಯುಕ್ತನಾಗಿದ್ದಾನೆ. 12ತುಖಿಕನನ್ನು ಎಫೆಸಕ್ಕೆ ಕಳುಹಿಸಿದೆನು. ತ್ರೋವದಲ್ಲಿ ನಾನು ಕರ್ಪನ ಬಳಿಯಲ್ಲಿ ಬಿಟ್ಟು ಬಂದ ಮೇಲಂಗಿಯನ್ನೂ, ಪುಸ್ತಕಗಳನ್ನೂ, ಮುಖ್ಯವಾಗಿ ಚರ್ಮದ ಕಾಗದಗಳನ್ನೂ ನೀನು ಬರುವಾಗ ತೆಗೆದುಕೊಂಡು ಬಾ. 14ಕಂಚುಗಾರನಾದ ಅಲೆಕ್ಸಾಂದ್ರನು ನನಗೆ ಬಹಳ ಕೇಡುಮಾಡಿದನು. ಕರ್ತನು ಅವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಅವನಿಗೆ ಕೊಡುವನು. 15ನೀನು ಸಹ ಅವನ ವಿಷಯದಲ್ಲಿ ಎಚ್ಚರಿಕೆಯಾಗಿರು, ಅವನು ನಮ್ಮ ಮಾತುಗಳನ್ನು ಬಹಳವಾಗಿ ಎದುರಿಸಿದನು. 16ನಾನು ಮೊದಲನೆ ಸಾರಿ ಪ್ರತಿವಾದ ಮಾಡಿದಾಗ ಯಾರೂ ನನ್ನ ಸಂಗಡ ಇರಲಿಲ್ಲ, ಎಲ್ಲರೂ ನನ್ನನ್ನು ಕೈಬಿಟ್ಟರು. ಇದು ಅವರಿಗೆ ದೋಷವಾಗಿ ಎಣಿಸಲ್ಪಡದೆ ಇರಲಿ. 17ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸುವಾರ್ತೆಯು ಸಂಪೂರ್ಣವಾಗಿ ಸಾರಲ್ಪಡುವಂತೆಯೂ, ಅನ್ಯ ಜನರೆಲ್ಲರೂ ಅದನ್ನು ಕೇಳುವಂತೆಯೂ ಮಾಡಿದನು. ಇದಲ್ಲದೆ ಆತನು ನನ್ನನ್ನು ಸಿಂಹದ ಬಾಯೊಳಗಿಂದ ತಪ್ಪಿಸಿದನು.
ಪ್ರತಿವಚನ ಕೀರ್ತನೆ
10ಯೆಹೋವನೇ, ನಿನ್ನ ಸೃಷ್ಟಿಯೆಲ್ಲವು ನಿನ್ನನ್ನು ಸ್ತುತಿಸುವುದು, ನಿನ್ನ ಭಕ್ತರು ನಿನ್ನನ್ನು ಕೊಂಡಾಡುವರು. 11ಅವರು ನಿನ್ನ ರಾಜ್ಯಮಹತ್ತನ್ನು ಪ್ರಸಿದ್ಧಪಡಿಸುವರು, ನಿನ್ನ ಪ್ರತಾಪವನ್ನು ವರ್ಣಿಸುವರು. 12ಹೀಗೆ ಮಾನವರು ನಿನ್ನ ಶೂರಕೃತ್ಯಗಳನ್ನೂ, ನಿನ್ನ ರಾಜ್ಯದ ಮಹಾಪ್ರಭಾವವನ್ನೂ ಗ್ರಹಿಸಿಕೊಳ್ಳುವರು. 13ನಿನ್ನ ರಾಜ್ಯವು ಶಾಶ್ವತವಾಗಿದೆ, ನಿನ್ನ ಆಳ್ವಿಕೆಯು ತಲತಲಾಂತರಕ್ಕೂ ಇರುವುದು. 17ಯೆಹೋವನ ಮಾರ್ಗಗಳೆಲ್ಲಾ ನೀತಿಯುಳ್ಳವುಗಳು, ಆತನು ಎಲ್ಲಾ ಕಾರ್ಯಗಳಲ್ಲಿ ಕೃಪೆ ತೋರಿಸುವವನು. 18ಯೆಹೋವನಿಗೆ ಮೊರೆಯಿಡುವವರು, ಯಥಾರ್ಥವಾಗಿ ಮೊರೆಯಿಡುವುದಾದರೆ ಆತನು ಹತ್ತಿರವಾಗಿಯೇ ಇದ್ದಾನೆ.
ಸುವಾರ್ತೆ
1ಇದಾದ ಮೇಲೆ ಕರ್ತನು ಇನ್ನೂ ಎಪ್ಪತ್ತು ಮಂದಿಯನ್ನು ತನ್ನ ಶಿಷ್ಯರನ್ನಾಗಿ ನೇಮಿಸಿ, ಅವರನ್ನು ಇಬ್ಬಿಬ್ಬರಾಗಿ ತಾನು ಹೋಗಬೇಕೆಂದಿದ್ದ ಪ್ರತಿಯೊಂದು ಊರಿಗೂ ಪ್ರತಿಯೊಂದು ಸ್ಥಳಕ್ಕೂ ಮುಂದಾಗಿ ಕಳುಹಿಸಿದನು. 2ಕಳುಹಿಸುವಾಗ ಅವರಿಗೆ ಹೇಳಿದ್ದೇನಂದರೆ, “ಬೆಳೆಯು ಹೇರಳವಾಗಿದೆ, ಕೊಯ್ಲುಗಾರರು ಕೆಲವರೂ ಮಾತ್ರ ಇದ್ದಾರೆ; ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸಬೇಕೆಂದು ಬೆಳೆಯ ಯಜಮಾನನನ್ನು ಬೇಡಿಕೊಳ್ಳಿರಿ. 3ಹೋಗಿರಿ, ತೋಳಗಳ ನಡುವೆ ಕುರಿಮರಿಗಳಂತೆ ನಾನು ನಿಮ್ಮನ್ನು ಕಳುಹಿಸಿಕೊಡುತ್ತಿದ್ದೇನೆ. 4ನೋಡಿರಿ, ನೀವು ಹೋಗುವಾಗ ಹಣದ ಚೀಲವನ್ನಾಗಲಿ, ಪ್ರವಾಸದ ಚೀಲವನ್ನಾಗಲಿ, ಕಾಲಿಗೆ ಕೆರಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ. ದಾರಿಯಲ್ಲಿ ಯಾರಿಗೂ ವಂದಿಸಬೇಡಿರಿ. 5ಇದಲ್ಲದೆ ನೀವು ಯಾವ ಮನೆಯೊಳಗೆ ಹೋದರೂ, ‘ಈ ಮನೆಗೆ ಸಮಾಧಾನವಾಗಲಿ’ ಎಂದು ಮೊದಲು ಹೇಳಿರಿ. 6ಸಮಾಧಾನ ಹೊಂದಲು ಯೋಗ್ಯನು ಆ ಮನೆಯಲ್ಲಿ ಇದ್ದರೆ ನಿಮ್ಮ ಸಮಾಧಾನವು ಅವನ ಮೇಲೆ ನಿಲ್ಲುವುದು, ಇಲ್ಲದಿದ್ದರೆ ಅದು ನಿಮಗೆ ಹಿಂತಿರುಗುವುದು. 7ಆ ಮನೆಯಲ್ಲಿಯೇ ಇದ್ದುಕೊಂಡು ಅವರು ಕೊಡುವಂಥದನ್ನು ಊಟಮಾಡಿರಿ, ಕುಡಿಯಿರಿ. ಆಳು ತನ್ನ ಕೂಲಿಗೆ ಯೋಗ್ಯನಷ್ಟೆ. ಒಂದು ಮನೆಯನ್ನು ಬಿಟ್ಟು ಮತ್ತೊಂದು ಮನೆಗೆ ಹೋಗಿ ಇಳಿದುಕೊಳ್ಳಬೇಡಿರಿ. 8ಮತ್ತು ನೀವು ಯಾವ ಊರಿಗಾದರೂ ಹೋದ ಮೇಲೆ ಆ ಊರಿನ ಜನರು ನಿಮ್ಮನ್ನು ಸೇರಿಸಿಕೊಂಡರೆ ಅವರು ನಿಮಗೆ ಬಡಿಸಿದ್ದನ್ನು ಊಟಮಾಡಿರಿ. 9ಅಲ್ಲಿರುವ ರೋಗಿಗಳನ್ನು ವಾಸಿಮಾಡಿ ಅವರಿಗೆ, ‘ದೇವರ ರಾಜ್ಯವು ನಿಮ್ಮ ಸಮೀಪಕ್ಕೆ ಬಂದಿದೆ’ ಎಂದು ಹೇಳಿರಿ.
ಇಂದಿನ ಸಂತರು
- ಸಂತ ಲೂಕ, ಸುವಾರ್ತಿಕ
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು