Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಅಕ್ಟೋಬರ್ 2027 › 10 ಅಕ್ಟೋಬರ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 10 ಅಕ್ಟೋಬರ್ 2027

ಭಾನುವಾರ · ಸಾಮಾನ್ಯ ಕಾಲದ 28ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 28ನೇ ಭಾನುವಾರ

ಭಾನುವಾರ · ಆರಾಧನಾ ಬಣ್ಣ: ಹಸಿರು

ದಿನದ ವಾಚನಗಳು

ಮೊದಲನೆಯ ವಾಚನ

ಈ ಅನುವಾದದಲ್ಲಿ ಇಲ್ಲ

ಪ್ರತಿವಚನ ಕೀರ್ತನೆ

ಕೀರ್ತ 90:12–17

12ನಮ್ಮ ದಿನಗಳು ಕೊಂಚವೇ ಎಂದು ಎಣಿಸಿಕೊಳ್ಳುವ ಹಾಗೆ ನಮಗೆ ಕಲಿಸು; ಆಗ ಜ್ಞಾನದ ಹೃದಯವನ್ನು ಪಡೆದುಕೊಳ್ಳುವೆವು. 13ಯೆಹೋವನೇ, ಮನಸ್ಸನ್ನು ಬೇರೆ ಮಾಡಿಕೋ; ಎಷ್ಟರವರೆಗೆ ಕೋಪ ಮಾಡುವಿ? ನಿನ್ನ ಸೇವಕರ ಮೇಲೆ ಕರುಣೆಯಿರಲಿ. 14ಮುಂಜಾನೆಯಲ್ಲಿ ನಿನ್ನ ಕೃಪೆಯಿಂದ ನಮ್ಮನ್ನು ಸಂತೃಪ್ತಿಪಡಿಸು; ಆಗ ಜೀವಮಾನದಲ್ಲೆಲ್ಲಾ ಉಲ್ಲಾಸಿಸಿ ಹರ್ಷಿಸುವೆವು. 15ನೀನು ನಮ್ಮನ್ನು ಕುಗ್ಗಿಸಿದ ದಿನಗಳಿಗೂ, ನಾವು ಕೇಡನ್ನು ಅನುಭವಿಸಿದ ವರ್ಷಗಳಿಗೂ ತಕ್ಕಂತೆ ನಮ್ಮನ್ನು ಸಂತೋಷಪಡಿಸು. 16ನಿನ್ನ ಸೇವಕರಿಗೆ ನಿನ್ನ ರಕ್ಷಣಾ ಕಾರ್ಯವೂ, ಅವರ ಮಕ್ಕಳಿಗೋಸ್ಕರ ನಿನ್ನ ಮಹತ್ತೂ ಪ್ರಕಟವಾಗಲಿ. 17ನಮ್ಮ ಯೆಹೋವ ದೇವರ ಪ್ರಸನ್ನತೆಯು ನಮ್ಮ ಮೇಲೆ ಇರಲಿ. ನಾವು ಕೈ ಹಾಕಿದ ಕೆಲಸವನ್ನು ನಮಗೆ ಸಫಲಪಡಿಸು; ನಾವು ಕೈಹಾಕಿದ ಕೆಲಸವನ್ನು ಸಫಲ ವಾಗುವಂತೆ ಮಾಡು.

ಎರಡನೆಯ ವಾಚನ

ಇಬ್ರಿ 4:12–13

12ಏಕೆಂದರೆ ದೇವರ ವಾಕ್ಯವು ಸಜೀವವಾದದ್ದು, ಸಕ್ರಿಯವಾದದ್ದು ಮತ್ತು ಯಾವ ಇಬ್ಬಾಯಿ ಕತ್ತಿಗಿಂತಲೂ ಹರಿತವಾದದ್ದು ಆಗಿದ್ದು, ಪ್ರಾಣ ಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದಾಗಿದ್ದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದೂ ಆಗಿದೆ. 13ಆತನ ದೃಷ್ಟಿಗೆ ಮರೆಯಾಗಿರುವ ಒಂದು ಸೃಷ್ಟಿಯೂ ಇಲ್ಲ. ಆತನ ಕಣ್ಣಿಗೆ ಮರೆಯಾದದ್ದು ಒಂದೂ ಇಲ್ಲ ಎಲ್ಲವೂ ನಗ್ನವಾಗಿಯೂ ಬಟ್ಟಬಯಲಾಗಿಯೂ ಇದೆ. ಅಂಥವನಿಗೆ ನಾವು ಲೆಕ್ಕಕೊಡಬೇಕಾಗಿದೆ.

ಸುವಾರ್ತೆ

ಮಾರ್ಕ 10:17–30

17ಅಲ್ಲಿಂದ ಯೇಸು ಪ್ರಯಾಣವನ್ನು ಪ್ರಾರಂಭಿಸಿದಾಗ, ದಾರಿಯಲ್ಲಿ ಒಬ್ಬನು ಓಡುತ್ತಾ ಆತನ ಎದುರಿಗೆ ಬಂದು ಮೊಣಕಾಲೂರಿ, “ಒಳ್ಳೆಯ ಬೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯಸ್ಥನಾಗಬೇಕಾದರೆ ಏನು ಮಾಡಬೇಕೆಂದು” ಆತನನ್ನು ಕೇಳಿದನು. 18ಯೇಸು ಅವನಿಗೆ, “ನನ್ನನ್ನು ಒಳ್ಳೆಯವನೆಂದು ಯಾಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಮತ್ತಾರೂ ಒಳ್ಳೆಯವರಲ್ಲ. 19ನರಹತ್ಯಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು. ಮೋಸಮಾಡಬಾರದು, ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು ಎಂಬ ದೇವರಾಜ್ಞೆಗಳು ನಿನಗೆ ಗೊತ್ತಿವೆಯಷ್ಟೆ” ಎಂದು ಹೇಳಿದನು. 20ಅವನು ಆತನಿಗೆ, “ಬೋಧಕನೇ, ನಾನು ಚಿಕ್ಕಂದಿನಿಂದಲೂ ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ” ಎಂದು ಹೇಳಲು, 21ಯೇಸು ಅವನನ್ನು ದೃಷ್ಟಿಸಿ ನೋಡಿ ಪ್ರೀತಿಸಿ ಅವನಿಗೆ, “ನಿನಗೆ ಒಂದು ಕಡಿಮೆಯಾಗಿದೆ. ಹೋಗು ನಿನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಬಡವರಿಗೆ ಕೊಡು ಆಗ ಪರಲೋಕದಲ್ಲಿ ನಿನಗೆ ಸಂಪತ್ತಿರುವುದು. ಅನಂತರ ನೀನು ಬಂದು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. 22ಆದರೆ ಅವನು ಬಹಳ ಆಸ್ತಿಯುಳ್ಳವನಾಗಿದ್ದುದರಿಂದ ಈ ಮಾತಿಗೆ ವ್ಯಸನಗೊಂಡು ದುಃಖದಿಂದ ಹೊರಟುಹೋದನು. 23ಆಗ ಯೇಸುವು ಸುತ್ತಲೂ ನೋಡಿ ತನ್ನ ಶಿಷ್ಯರಿಗೆ, “ಐಶ್ವರ್ಯವಂತರು ದೇವರ ರಾಜ್ಯದಲ್ಲಿ ಸೇರುವುದು ತುಂಬಾ ಕಷ್ಟ” ಎಂದು ಹೇಳಿದನು. 24ಶಿಷ್ಯರು ಆತನ ಮಾತುಗಳನ್ನು ಕೇಳಿ ಅಶ್ಚರ್ಯಪಟ್ಟರು. ಆದರೆ ಯೇಸು ಪುನಃ ಅವರಿಗೆ, “ಮಕ್ಕಳೇ, ದೇವರ ರಾಜ್ಯದಲ್ಲಿ ಸೇರುವುದು ಬಹಳ ಕಷ್ಟ. 25ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಕಣ್ಣಿನಲ್ಲಿ ನುಗ್ಗುವುದು ಸುಲಭ” ಎಂದು ಹೇಳಿದನು. 26ಈ ಮಾತಿಗೆ ಅವರು ಇನ್ನಷ್ಟು ಆಶ್ಚರ್ಯಪಟ್ಟು, “ಹಾಗಾದರೆ ಯಾರಿಗೆ ರಕ್ಷಣೆಯಾದೀತು” ಎಂದು ತಮ್ಮತಮ್ಮೊಳಗೆ ಅಂದುಕೊಂಡರು. 27ಯೇಸು ಅವರನ್ನು ದೃಷ್ಟಿಸಿ ನೋಡಿ “ಇದು ಮನುಷ್ಯರಿಗೆ ಅಸಾಧ್ಯ; ದೇವರಿಗೆ ಅಸಾಧ್ಯವಲ್ಲ. ದೇವರಿಗೆ ಎಲ್ಲವೂ ಸಾಧ್ಯವೇ” ಅಂದನು. 28ಪೇತ್ರನು ಆತನಿಗೆ, “ಇಗೋ ನಾವು ಎಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ” ಎಂದು ಹೇಳುವುದಕ್ಕೆ ಪ್ರಾರಂಭಿಸಿದನು. 29ಅದಕ್ಕೆ ಯೇಸು, “ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾರು ನನ್ನ ನಿಮಿತ್ತವೂ, ಸುವಾರ್ತೆಯ ನಿಮಿತ್ತವೂ ಮನೆಯನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಾಯಿಯನ್ನಾಗಲಿ, ತಂದೆಯನ್ನಾಗಲಿ, ಮಕ್ಕಳನ್ನಾಗಲಿ, ಹೊಲಗದ್ದೆಗಳನ್ನಾಗಲಿ ಬಿಟ್ಟು ಬಿಟ್ಟಿರುವನೋ, 30ಅವನಿಗೆ ಈ ಕಾಲದಲ್ಲಿಯೇ ಮನೆ, ಸಹೋದರರು, ಸಹೋದರಿಯರು, ತಾಯಿ, ಮಕ್ಕಳು, ಹೊಲಗದ್ದೆಗಳು ಇವೆಲ್ಲವೂ ಹಿಂಸೆಗಳ ಸಹಿತವಾಗಿ ನೂರರಷ್ಟು ಸಿಕ್ಕೇ ಸಿಗುತ್ತವೆ ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವುದು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು