Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಸೆಪ್ಟೆಂಬರ್ 2027 › 2 ಸೆಪ್ಟೆಂಬರ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 2 ಸೆಪ್ಟೆಂಬರ್ 2027

ಗುರುವಾರ · ಸಾಮಾನ್ಯ ಕಾಲದ 22ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 22ನೇ ವಾರದ ಗುರುವಾರ

ವಾರದ ದಿನ · ಆರಾಧನಾ ಬಣ್ಣ: ಹಸಿರು

ದಿನದ ವಾಚನಗಳು

ಮೊದಲನೆಯ ವಾಚನ

ಕೊಲೊ 1:9–14

9ಹೀಗಿರುವುದ್ದರಿಂದ ಈ ನಿಮ್ಮ ಪ್ರೀತಿಯ ಕುರಿತು ನಾವು ಕೇಳಿದ ದಿನದಿಂದ ನಿಮಗೋಸ್ಕರ ಪ್ರಾರ್ಥಿಸುವುದನ್ನು ನಿಲ್ಲಿಸದೆ, ನೀವು ಸಕಲ ಆತ್ಮೀಕ ಗ್ರಹಿಕೆಯಿಂದಲೂ ಜ್ಞಾನದಿಂದಲೂ ದೇವರ ಚಿತ್ತದ ತಿಳಿವಳಿಕೆಯ ಕುರಿತು ಸಂಪೂರ್ಣರಾಗಬೇಕೆಂತಲೂ, 10ಕರ್ತನಿಗೆ ಮೆಚ್ಚಿಕೆಯಾಗುವ ರೀತಿಯಲ್ಲಿ ನೀವು ಯೋಗ್ಯರಾಗಿ ಜೀವಿಸಬೇಕೆಂತಲೂ, ಸಕಲ ಸತ್ಕಾರ್ಯಗಳಲ್ಲಿ ಫಲವನ್ನು ಕೊಡುತ್ತಾ ದೈವಜ್ಞಾನದಲ್ಲಿ ವೃದ್ಧಿಯಾಗಬೇಕೆಂತಲೂ, 11ಆತನ ಮಹಿಮಾ ಶಕ್ತಿಯ ಪ್ರಕಾರ ಎಲ್ಲಾ ಸಾಮರ್ಥ್ಯದಲ್ಲಿ ಬಲಹೊಂದಿ, ಎಲ್ಲವನ್ನೂ ತಾಳ್ಮೆಯಿಂದಲೂ, ದೀರ್ಘಶಾಂತಿಯಿಂದಲೂ ಸಹಿಸಿಕೊಳ್ಳುವವರಾಗಿರಬೇಕೆಂತಲೂ, 12ದೇವಭಕ್ತರಿಗಾಗಿ ಬೆಳಕಿನಲ್ಲಿರುವ ಬಾಧ್ಯತೆಯಲ್ಲಿ ಪಾಲುಗಾರರಾಗುವುದಕ್ಕೆ ನಮ್ಮನ್ನು ಯೋಗ್ಯರನ್ನಾಗಿ ಮಾಡಿದ ತಂದೆಯಾದ ದೇವರಿಗೆ ಆನಂದಪೂರ್ವಕವಾಗಿ ಕೃತಜ್ಞತಾಸ್ತುತಿಯನ್ನು ಸಲ್ಲಿಸುವವರಾಗಬೇಕೆಂತಲೂ ದೇವರನ್ನು ಬೇಡಿಕೊಳ್ಳುತ್ತೇನೆ. 13ದೇವರು ನಮ್ಮನ್ನು ಅಂಧಕಾರದ ಅಧಿಪತ್ಯದಿಂದ ಬಿಡಿಸಿ ತನ್ನ ಪ್ರಿಯ ಕುಮಾರನ ಸಾಮ್ರಾಜ್ಯಕ್ಕೆ ಸೇರಿಸಿದನು. 14ಈ ಕುಮಾರನಲ್ಲಿ ನಮ್ಮ ಪಾಪಗಳು ಕ್ಷಮಿಸಲ್ಪಟ್ಟು ನಮಗೆ ವಿಮೋಚನೆಯಾಯಿತು.

ಪ್ರತಿವಚನ ಕೀರ್ತನೆ

ಕೀರ್ತ 98:2–6

2ಯೆಹೋವನು ತನ್ನ ರಕ್ಷಣೆಯನ್ನು ಪ್ರಕಟಿಸಿದ್ದಾನೆ; ಜನಾಂಗಗಳೆದುರಿಗೆ ತನ್ನ ನೀತಿಯನ್ನು ತೋರ್ಪಡಿಸಿದ್ದಾನೆ. 3ಆತನು ಇಸ್ರಾಯೇಲನ ಮನೆತನದವರ ಬಗ್ಗೆ ಇದ್ದ, ತನ್ನ ಪ್ರೀತಿ, ಸತ್ಯತೆಗಳನ್ನು ನೆನಪುಮಾಡಿಕೊಂಡಿದ್ದಾನೆ. ಭೂಲೋಕದ ಎಲ್ಲಾ ಕಡೆಯವರೂ, ನಮ್ಮ ದೇವರ ರಕ್ಷಣಾಕಾರ್ಯವನ್ನು ನೋಡಿದ್ದಾರೆ. 4ಸಮಸ್ತ ಭೂನಿವಾಸಿಗಳೇ, ಯೆಹೋವನಿಗೆ ಜಯಘೋಷಮಾಡಿರಿ; ಹರ್ಷಿಸಿರಿ, ಉತ್ಸಾಹಧ್ವನಿಮಾಡಿ ಹಾಡಿರಿ. 5ಕಿನ್ನರಿಯೊಡನೆ ಯೆಹೋವನನ್ನು ಸ್ತುತಿಸಿರಿ; ಕಿನ್ನರಿಯನ್ನು ನುಡಿಸುತ್ತಾ ಭಜಿಸಿರಿ. 6ತುತ್ತೂರಿಗಳನ್ನೂ, ಕೊಂಬನ್ನೂ ಊದುತ್ತಾ, ಯೆಹೋವರಾಜನಿಗೆ ಜಯಘೋಷಮಾಡಿರಿ.

ಸುವಾರ್ತೆ

ಲೂಕ 5:1–11

1ಒಮ್ಮೆ ಯೇಸು ಗೆನೆಜರೇತ್ ಸರೋವರದ ದಡದಲ್ಲಿ ನಿಂತಿದ್ದಾಗ ಜನರು ಗುಂಪಾಗಿ ಬಂದು ದೇವರ ವಾಕ್ಯವನ್ನು ಕೇಳುವುದಕ್ಕಾಗಿ ಆತನನ್ನು ಸುತ್ತುವರೆದು ನೂಕಾಡುತ್ತಿದ್ದರು. 2ಯೇಸು ಆ ಸರೋವರದ ದಡದಲ್ಲಿದ್ದ ಎರಡು ದೋಣಿಗಳನ್ನು ಕಂಡನು. ಬೆಸ್ತರು ಅವುಗಳೊಳಗಿಂದ ಹೊರಗೆ ಬಂದು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. 3ಆ ದೋಣಿಗಳಲ್ಲಿ, ಸೀಮೋನನ ದೋಣಿಯನ್ನು ಯೇಸು ಹತ್ತಿ ದಡದಿಂದ ಸ್ವಲ್ಪ ದೂರಕ್ಕೆ ನೂಕಬೇಕೆಂದು ಅವನನ್ನು ಕೇಳಿಕೊಂಡನು. ತರುವಾಯ ಯೇಸು ಕುಳಿತುಕೊಂಡು ದೋಣಿಯೊಳಗಿಂದಲೇ ಆ ಜನರ ಗುಂಪಿಗೆ ಉಪದೇಶಮಾಡಿದನು. 4ಮಾತನಾಡುವುದನ್ನು ಮುಗಿಸಿದ ಮೇಲೆ ಸೀಮೋನನಿಗೆ, “ಆಳವಾದ ಸ್ಥಳಕ್ಕೆ ದೋಣಿಯನ್ನು ನಡೆಸಿ ಮೀನುಹಿಡಿಯಲು ನಿಮ್ಮ ಬಲೆಗಳನ್ನು ಬೀಸಿರಿ” ಎಂದು ಹೇಳಿದನು. 5ಅದಕ್ಕೆ ಸೀಮೋನನು, “ಗುರುವೇ, ನಾವು ರಾತ್ರಿಯೆಲ್ಲಾ ಪ್ರಯತ್ನಪಟ್ಟರೂ ಏನೂ ಸಿಕ್ಕಲಿಲ್ಲ; ಆದರೆ ನಿನ್ನ ಮಾತಿನ ಮೇಲೆ ಬಲೆಗಳನ್ನು ಬೀಸುತ್ತೇವೆ” ಅಂದನು. 6ಅವರು ಬಲೆಗಳನ್ನು ಬೀಸಿದ ಮೇಲೆ ಮೀನುಗಳು ರಾಶಿರಾಶಿಯಾಗಿ ಬಲೆಗೆ ಸಿಕ್ಕಿಕೊಂಡಿದ್ದರ ಪರಿಣಾಮ ಬಲೆಗಳು ಹರಿದುಹೋಗುವಂತ್ತಿದವು. 7ಆಗ ಅವರು ಮತ್ತೊಂದು ದೋಣಿಯಲ್ಲಿದ್ದ ತಮ್ಮ ಸಂಗಡಿಗರನ್ನೂ ಕರೆದು, ನೀವು ಬಂದು ನಮಗೆ ನೆರವಾಗಬೇಕೆಂದು ಸನ್ನೆಮಾಡಿದರು. ಅವರು ಬಂದು ಆ ಎರಡು ದೋಣಿಗಳಲ್ಲಿ ಮೀನುಗಳನ್ನು ತುಂಬಿಸಲು, ಅವು ಮುಳುಗುವ ಹಾಗಾದವು. 8ಸೀಮೋನ್ ಪೇತ್ರನು ಇದನ್ನು ಕಂಡು ಯೇಸುವಿನ ಮೊಣಕಾಲಿಗೆ ಬಿದ್ದು, “ಕರ್ತನೇ, ನಾನು ಪಾಪಾತ್ಮನು; ನನ್ನನ್ನು ಬಿಟ್ಟುಹೋಗು” ಅಂದನು. 9ಏಕೆಂದರೆ ಅವನಿಗೂ ಅವನ ಸಂಗಡ ಇದ್ದವರೆಲ್ಲರಿಗೂ ತಾವು ಹಿಡಿದ ಮೀನುಗಳ ನಿಮಿತ್ತ ಆಶ್ಚರ್ಯಪಟ್ಟಿದ್ದರು. 10ಸೀಮೋನನ ಸಂಗಡಿಗರಾಗಿದ್ದ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೂ ಹಾಗೆಯೇ ಆಶ್ಚರ್ಯಪಟ್ಟರು. ಯೇಸು ಸೀಮೋನನಿಗೆ, “ಅಂಜಬೇಡ, ಇಂದಿನಿಂದ ನೀನು ಮನುಷ್ಯರನ್ನು ಹಿಡಿಯುವ ಬೆಸ್ತನಾಗಿರುವಿ” ಎಂದು ಹೇಳಿದನು. 11ಅವರು ತಮ್ಮ ದೋಣಿಗಳನ್ನು ದಡಕ್ಕೆ ತಂದು ಮತ್ತು ಎಲ್ಲವನ್ನು ಬಿಟ್ಟು ಅಂದಿನಿಂದ ಯೇಸುವನ್ನು ಹಿಂಬಾಲಿಸಿದರು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು