ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಆಗಸ್ಟ್ 2027 › 19 ಆಗಸ್ಟ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 19 ಆಗಸ್ಟ್ 2027
ಗುರುವಾರ · ಸಾಮಾನ್ಯ ಕಾಲದ 20ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 20ನೇ ವಾರದ ಗುರುವಾರ
ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಹಸಿರು
ಸಂತ ಜಾನ್ ಯೂಡ್ಸ್, ಧರ್ಮಗುರು · ಐಚ್ಛಿಕ ಸ್ಮರಣೆ
ದಿನದ ವಾಚನಗಳು
ಮೊದಲನೆಯ ವಾಚನ
29ಆಗ ಯೆಹೋವನ ಆತ್ಮವು ಯೆಪ್ತಾಹನ ಮೇಲೆ ಬಂದಿತು. ಅವನು ಗಿಲ್ಯಾದ್ ಪ್ರಾಂತ್ಯ, ಮನಸ್ಸೆಯ ದೇಶ ಇವುಗಳಲ್ಲಿ ಸಂಚರಿಸಿ ತಿರುಗಿ ಗಿಲ್ಯಾದಿನ ಮಿಚ್ಪೆಗೆ ಬಂದು, ಅಲ್ಲಿಂದ ಅಮ್ಮೋನಿಯರ ಮೇಲೆ ಯುದ್ಧಕ್ಕೆ ಹೋದನು. 30ಇದಲ್ಲದೆ ಅವನು ಯೆಹೋವನಿಗೆ, “ನೀನು ಅಮ್ಮೋನಿಯರನ್ನು ನನ್ನ ಕೈಗೆ ಒಪ್ಪಿಸುವುದಾದರೆ 31ನಾನು ಸುರಕ್ಷಿತವಾಗಿ ಮನೆಗೆ ಸೇರುವಾಗ ನನ್ನನ್ನು ಎದುರುಗೊಳ್ಳುವುದಕ್ಕಾಗಿ ನನ್ನ ಮನೆಯ ಬಾಗಿಲಿನಿಂದ ಮೊದಲು ಬರುವಂಥ ಪ್ರಾಣಿಯು ನಿನ್ನದೇ ಎಂದು ಅದನ್ನು ನಿನಗೋಸ್ಕರ ಯಜ್ಞವಾಗಿ ಅರ್ಪಿಸುವೆನು” ಎಂದು ಹರಕೆಮಾಡಿದನು. 32ಯೆಪ್ತಾಹನು ಅಮ್ಮೋನಿಯರಿಗೆ ವಿರೋಧವಾಗಿ ಯುದ್ಧಕ್ಕೆ ಹೋಗಲು ಯೆಹೋವನು ಅವರನ್ನು ಅವನ ಕೈಗೆ ಒಪ್ಪಿಸಿದನು. 33ಅವನು ಅವರನ್ನು ಸೋಲಿಸಿ ಅರೋಯೇರಿನಿಂದ ಮಿನ್ನೀತಿನ ದಾರಿಯವರೆಗೂ ಆಬೇಲ್ ಕೆರಾಮೀಮಿನವರೆಗೂ ಇಪ್ಪತ್ತು ಪಟ್ಟಣಗಳನ್ನು ಹಾಳುಮಾಡಿಬಿಟ್ಟನು. ಹೀಗೆ ದೊಡ್ಡ ಜಯವಾಗಿ ಅಮ್ಮೋನಿಯರು ಇಸ್ರಾಯೇಲರ ಮುಂದೆ ತಗ್ಗಿಸಲ್ಪಟ್ಟರು. 34ಯೆಪ್ತಾಹನು ಮಿಚ್ಪೆಯಲ್ಲಿದ್ದ ತನ್ನ ಮನೆಯನ್ನು ಸಮೀಪಿಸಿದಾಗ ಅವನ ಮಗಳು ದಮ್ಮಡಿಬಡಿಯುತ್ತಾ, ನೃತ್ಯಮಾಡುತ್ತಾ ಅವನನ್ನು ಎದುರುಗೊಳ್ಳುವುದಕ್ಕಾಗಿ ಬಂದಳು. ಆಕೆಯು ಅವನಿಗೆ ಒಬ್ಬಳೇ ಮಗಳಾಗಿದ್ದಳು. ಆಕೆಯ ಹೊರತು ಅವನಿಗೆ ಬೇರೆ ಗಂಡು ಹೆಣ್ಣು ಮಕ್ಕಳೇ ಇರಲಿಲ್ಲ. 35ಆಕೆಯನ್ನು ಕಾಣುತ್ತಲೇ ಅವನು ತನ್ನ ಬಟ್ಟೆಯನ್ನು ಹರಿದುಕೊಂಡು, “ಅಯ್ಯೋ, ನನ್ನ ಮಗಳೇ, ನೀನು ನನ್ನನ್ನು ಕುಗ್ಗಿಸೇಬಿಟ್ಟೆಯಲ್ಲಾ; ನನಗೆ ಮಹಾಸಂಕಟವನ್ನು ಉಂಟುಮಾಡಿದಿ. ನಾನು ಬಾಯ್ದೆರೆದು ಯೆಹೋವನಿಗೆ ಹರಕೆಮಾಡಿದ್ದೇನೆ; ಅದಕ್ಕೆ ಹಿಂದೆಗೆಯಲಾರೆನು” ಎಂದು ಕೂಗಿಕೊಳ್ಳಲು 36ಆಕೆಯು ಅವನಿಗೆ, “ನನ್ನ ತಂದೆಯೇ, ನೀನು ಬಾಯ್ದೆರೆದು ಯೆಹೋವನಿಗೆ ಹರಕೆಮಾಡಿದ ಮೇಲೆ ಆತನು ನಿನ್ನ ಶತ್ರುಗಳಾದ ಅಮ್ಮೋನಿಯರಿಗೆ ಮುಯ್ಯಿತೀರಿಸಿದ್ದರಿಂದ ನಿನ್ನ ಬಾಯಿಂದ ಹೊರಟದ್ದನ್ನೇ ನೆರವೇರಿಸು” ಎಂದಳು. 37ಆಕೆಯು ತಿರುಗಿ ತನ್ನ ತಂದೆಗೆ, “ನನ್ನ ಬಿನ್ನಹವನ್ನು ಲಾಲಿಸು; ಎರಡು ತಿಂಗಳುಗಳ ಕಾಲ ನನ್ನನ್ನು ಬಿಡು. ನಾನು ನನ್ನ ಗೆಳತಿಯರೊಡನೆ ಬೆಟ್ಟದ ಪ್ರದೇಶಗಳಿಗೆ ಹೋಗಿ, ನನ್ನ ಕನ್ಯಾವಸ್ಥೆಗೋಸ್ಕರ ಗೋಳಾಡುವೆನು” ಎಂದಳು. 38ಅವನು, “ಎರಡು ತಿಂಗಳ ತನಕ ಹೋಗಿ ಬಾ” ಎಂದು ಕಳುಹಿಸಿದನು. ಆಕೆಯು ಸಖಿಯರ ಸಹಿತವಾಗಿ ಬೆಟ್ಟದ ಪ್ರದೇಶಗಳಿಗೆ ಹೋಗಿ ತನ್ನ ಕನ್ಯಾವಸ್ಥೆಗೋಸ್ಕರ ಗೋಳಾಡಿದಳು. 39ಎರಡು ತಿಂಗಳು ಕಳೆದ ನಂತರ ಆಕೆ ಪುನಃ ತಂದೆಯ ಹತ್ತಿರ ಬರಲು ಅವನು ತನ್ನ ಹರಕೆಯನ್ನು ತೀರಿಸಿದನು. ಆಕೆಯು ಪುರುಷನನ್ನರಿಯದವಳು.
ಪ್ರತಿವಚನ ಕೀರ್ತನೆ
4ಯಾರು ಅಹಂಕಾರಿಗಳ ಜೊತೆಯಲ್ಲಿಯೂ, ಸುಳ್ಳುದೇವರನ್ನು ಹಿಂಬಾಲಿಸುವವರಲ್ಲಿಯೂ ಸೇರದೆ, ಯೆಹೋವನನ್ನೇ ನಂಬುತ್ತಾನೋ, ಅವನೇ ಧನ್ಯನು. 6ಯಜ್ಞನೈವೇದ್ಯಗಳು ನಿನಗೆ ಇಷ್ಟವಿಲ್ಲ; ಸರ್ವಾಂಗಹೋಮಗಳನ್ನಾಗಲಿ, ದೋಷಪರಿಹಾರಕ ಯಜ್ಞಗಳನ್ನಾಗಲಿ ನೀನು ಅಪೇಕ್ಷಿಸಲಿಲ್ಲ. ಆದರೆ ಶ್ರವಣಶಕ್ತಿಯನ್ನು ನನಗೆ ಅನುಗ್ರಹಿಸಿದಿ. 7ಆಗ ನಾನು, “ಇಗೋ ಇದ್ದೇನೆ; ನನ್ನ ಕರ್ತವ್ಯವು ಗ್ರಂಥದ ಸುರುಳಿಯಲ್ಲಿ ಬರೆದದೆ. 8ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವುದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ” ಅಂದೆನು. 9ನೀನು ನೀತಿಯನ್ನು ಸಾಧಿಸಿದ ಶುಭಸಮಾಚಾರವನ್ನು, ಧಾರಳವಾಗಿ ಮಹಾಸಭೆಯಲ್ಲಿ ಪ್ರಕಟಿಸಿದೆನು; ಯೆಹೋವನೇ, ನೀನೇ ಬಲ್ಲೆ.
ಸುವಾರ್ತೆ
1ಯೇಸು ಪುನಃ ಅವರ ಸಂಗಡ ಮಾತನಾಡುತ್ತಾ ಸಾಮ್ಯರೂಪವಾಗಿ ಅವರಿಗೆ ಹೇಳಿದ್ದೇನೆಂದರೆ, 2“ಪರಲೋಕ ರಾಜ್ಯವು ತನ್ನ ಮಗನ ಮದುವೆಯ ಔತಣವನ್ನು ಏರ್ಪಡಿಸಿದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ. 3ಅವನು ಮದುವೆಗೆ ಆಹ್ವಾನಿತರಾಗಿದ್ದವರನ್ನು ಕರೆಯುವುದಕ್ಕೆ ತನ್ನ ಆಳುಗಳನ್ನು ಕಳುಹಿಸಿದನು, ಆದರೆ ಬರುವುದಕ್ಕೆ ಅವರಿಗೆ ಮನಸ್ಸಿರಲಿಲ್ಲ. 4ಅರಸನು ತಿರುಗಿ ಬೇರೆ ಆಳುಗಳನ್ನು ಕರೆದು, ‘ನೀವು ಊಟಕ್ಕೆ ಆಹ್ವಾನಿತರ ಬಳಿಗೆ ಹೋಗಿ ಇಗೋ, ಔತಣ ಸಿದ್ಧವಾಗಿದೆ; ನನ್ನ ಎತ್ತುಗಳನ್ನೂ, ಕೊಬ್ಬಿದ ಹೋರಿಗಳನ್ನೂ ವಧಿಸಿದ್ದೇನೆ; ಎಲ್ಲಾ ಸಿದ್ಧವಾಗಿದೆ; ಮದುವೆಯ ಔತಣಕ್ಕೆ ಬನ್ನಿರಿ’ ಎಂಬುದಾಗಿ ಅವರಿಗೆ ಹೇಳಿರೆಂದು ಅಪ್ಪಣೆ ಕೊಟ್ಟು ಕಳುಹಿಸಿದನು. 5ಆದರೆ ಅವರು ಆಹ್ವಾನವನ್ನು ಅಲಕ್ಷ್ಯಮಾಡಿ, ಒಬ್ಬನು ತನ್ನ ಹೊಲಕ್ಕೆ ಒಬ್ಬನು ತನ್ನ ವ್ಯಾಪಾರಕ್ಕೆ ಹೋಗಿಬಿಟ್ಟರು; 6ಉಳಿದವರು ಅವನ ಆಳುಗಳನ್ನು ಹಿಡಿದು ಅವಮಾನಮಾಡಿ ಕೊಂದು ಹಾಕಿದರು. 7ಅರಸನು ಅದನ್ನು ಕೇಳಿ, ಸಿಟ್ಟುಗೊಂಡು, ತನ್ನ ಸೈನ್ಯಗಳನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿ ಅವರ ಪಟ್ಟಣವನ್ನು ಸುಟ್ಟುಬಿಟ್ಟನು. 8ಆಗ ತನ್ನ ಆಳುಗಳಿಗೆ, ‘ಮದುವೆಯ ಔತಣವು ಸಿದ್ಧವಾಗಿದೆ ಸರಿ, ಆದರೆ ಆಹ್ವಾನಿತರು ಯೋಗ್ಯರಾಗಿರಲಿಲ್ಲ. 9ಆದುದರಿಂದ ನೀವು ಈಗ ಮುಖ್ಯರಸ್ತೆಗೆ ಹೋಗಿ ಕಂಡ ಕಂಡವರನ್ನೆಲ್ಲಾ ಮದುವೆಯ ಔತಣಕ್ಕೆ ಕರೆಯಿರಿ’ ಎಂದು ಹೇಳಿದನು. 10ಆ ಆಳುಗಳು ಮುಖ್ಯರಸ್ತೆಗಳಿಗೆ ಹೋಗಿ ಕೆಟ್ಟವರು ಒಳ್ಳೆಯವರೆನ್ನದೇ ಕಂಡವರನ್ನೆಲ್ಲಾ ಒಟ್ಟುಗೂಡಿಸಿ ಕರೆದುಕೊಂಡು ಬಂದರು. ಹೀಗೆ ಮದುವೆಯ ಮಂಟಪವು ಅತಿಥಿಗಳಿಂದ ತುಂಬಿಹೋಯಿತು. 11ಆಮೇಲೆ ಅರಸನು ಅತಿಥಿಗಳನ್ನು ನೋಡುವುದಕ್ಕಾಗಿ ಒಳಗೆ ಬಂದನು, ಮದುವೆಯ ಔತಣಕ್ಕೆ ತಕ್ಕ ವಸ್ತ್ರವನ್ನು ಹಾಕಿಕೊಳ್ಳದ ಒಬ್ಬನನ್ನು ಕಂಡು ಅರಸನು, 12ಅವನಿಗೆ ‘ಸ್ನೇಹಿತನೇ, ಮದುವೆಯ ಬಟ್ಟೆ ಇಲ್ಲದೆ ನೀನಿಲ್ಲಿ ಹೇಗೆ ಒಳಕ್ಕೆ ಬಂದೆ?’ ಎಂದು ಕೇಳಲು ಅವನು ಮೌನವಾಗಿದ್ದನು. 13ಆಗ ಅರಸನು ಸೇವಕರಿಗೆ, ‘ಅವನ ಕೈಕಾಲು ಕಟ್ಟಿ ಅವನನ್ನು ಹೊರಗೆ ಕತ್ತಲೆಗೆ ನೂಕಿರಿ ಎಂದು ಹೇಳಿದನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು.’ 14ಹೀಗೆ ಕರೆಯಲ್ಪಟ್ಟವರು ಬಹು ಜನ, ಆರಿಸಲ್ಪಟ್ಟವರು ಸ್ವಲ್ಪ ಜನ” ಅಂದನು.
ಇಂದಿನ ಸಂತರು
- ಸಂತ ಜಾನ್ ಯೂಡ್ಸ್, ಧರ್ಮಗುರು
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು