ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜುಲೈ 2027 › 4 ಜುಲೈ
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 4 ಜುಲೈ 2027
ಭಾನುವಾರ · ಸಾಮಾನ್ಯ ಕಾಲದ 14ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 14ನೇ ಭಾನುವಾರ
ಭಾನುವಾರ · ಆರಾಧನಾ ಬಣ್ಣ: ಹಸಿರು
ದಿನದ ವಾಚನಗಳು
ಮೊದಲನೆಯ ವಾಚನ
2ಆತನು ಈ ಮಾತನ್ನು ಹೇಳುವಾಗ ದೇವರಾತ್ಮವು ನನ್ನೊಳಗೆ ಪ್ರವೇಶಿಸಿ, ನಾನು ಎದ್ದು ನಿಂತುಕೊಳ್ಳುವಂತೆ ಮಾಡಿತು; ಆಗ ನನ್ನೊಡನೆ ಮಾತನಾಡಿದಾತನ ನುಡಿಯನ್ನು ಕೇಳಿದೆನು. 3ಆತನು ನನಗೆ ಹೀಗೆ ಹೇಳಿದನು, “ನರಪುತ್ರನೇ, ನನ್ನ ವಿರುದ್ಧವಾಗಿ ತಿರುಗಿಬಿದ್ದು ದ್ರೋಹಮಾಡಿದ ಜನಾಂಗದವರಾದ ಇಸ್ರಾಯೇಲರ ಬಳಿಗೆ ನಿನ್ನನ್ನು ಕಳುಹಿಸುತ್ತೇನೆ; ಈ ದಿನದವರೆಗೆ ಅವರೂ, ಅವರ ಪೂರ್ವಿಕರೂ ನನ್ನ ವಿರುದ್ಧವಾಗಿ ಪಾಪಮಾಡುತ್ತಲೇ ಇದ್ದಾರೆ. 4“ನಾನು ಯಾವ ಸಂತಾನದವರ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಆ ಸಂತಾನದವರು ನಾಚಿಕೆಗೆಟ್ಟವರೂ, ಹಟಗಾರರೂ ಆಗಿರುತ್ತಾರೆ; ನೀನು ಅವರಿಗೆ, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ’ ಎಂದು ನುಡಿ. 5ಅವರು ಕೇಳಲಿ ಅಥವಾ ಕೇಳದೇ ಇರಲಿ ಏಕೆಂದರೆ ಅವರು ತಿರುಗಿ ಬೀಳುವ ವಂಶದವರು. ಆದರೆ ಒಬ್ಬ ಪ್ರವಾದಿಯು ತಮ್ಮ ಮಧ್ಯದಲ್ಲಿ ಇದ್ದಾನೆಂದು ತಿಳಿದುಕೊಳ್ಳುವರು.”
ಪ್ರತಿವಚನ ಕೀರ್ತನೆ
1ಯಾತ್ರಾಗೀತೆ. ಪರಲೋಕದಲ್ಲಿ ಆಸೀನನಾಗಿರುವಾತನೇ, ನನ್ನ ಕಣ್ಣುಗಳನ್ನು ನಿನ್ನ ಕಡೆಗೆ ಎತ್ತಿದ್ದೇನೆ. 2ಯಜಮಾನನ ಕೈಯನ್ನು ದಾಸನ ಕಣ್ಣುಗಳು, ಯಜಮಾನಿಯ ಕೈಯನ್ನು ದಾಸಿಯ ಕಣ್ಣುಗಳು ನೋಡುವ ಪ್ರಕಾರವೇ, ನಮ್ಮ ಕಣ್ಣುಗಳು ನಮ್ಮ ಯೆಹೋವ ದೇವರನ್ನು ನೋಡುತ್ತಾ, ಆತನ ಕಟಾಕ್ಷವನ್ನು ನಿರೀಕ್ಷಿಸಿಕೊಂಡಿವೆ. 3ಯೆಹೋವನೇ, ನಮ್ಮನ್ನು ಕಟಾಕ್ಷಿಸು, ಕಟಾಕ್ಷಿಸು. ಅವಮಾನ ಹೊಂದಿ ಹೊಂದಿ ನಮಗೆ ಸಾಕಾಯಿತು; 4ಲೋಕಭೋಗಿಗಳ ಹಾಸ್ಯದಿಂದಲೂ, ಗರ್ವಿಷ್ಠರ ನಿಂದೆಯಿಂದಲೂ ನಮ್ಮ ಮನಸ್ಸು ಬೇಸತ್ತು ಹೋಯಿತು.
ಎರಡನೆಯ ವಾಚನ
7ಈ ಕಾರಣದಿಂದಲೂ ಮತ್ತು ನನಗೆ ತಿಳಿಸಲ್ಪಟ್ಟ ರಹಸ್ಯಗಳು ಬಹು ವಿಶೇಷವಾಗಿರುವುದರಿಂದಲೂ ನಾನು ಹೊಗಳಿಕೊಳ್ಳದೇ ಸುಮ್ಮನಿರುತ್ತೇನೆ. ನಾನು ನನ್ನನ್ನು ಅತಿಶಯವಾಗಿ ಹೆಚ್ಚಿಸಿಕೊಳ್ಳಬಾರದೆಂದು ಒಂದು ಶೂಲವು ನನ್ನನ್ನು ತಿವಿಯುವುದಕ್ಕಾಗಿ ನನ್ನ ದೇಹದೊಳಗೆ ಇರಿಸಲಾಗಿದೆ. ನಾನು ಅಹಂಕಾರಪಡದ ಹಾಗೆ ಇದು ನನ್ನನ್ನು ತಿವಿತಿವಿದು ಸೈತಾನನ ದೂತನಂತೆ ಕಾಡಿಸುತ್ತಿತ್ತು. 8ಈ ನೋವು ನನ್ನನ್ನು ಬಿಟ್ಟುಹೋಗುವಂತೆ ಮೂರು ಸಾರಿ ಕರ್ತನನ್ನು ಬೇಡಿಕೊಂಡೆನು ಆದರೆ 9ಅದಕ್ಕಾತನು, “ನನ್ನ ಕೃಪೆಯೇ ನಿನಗೆ ಸಾಕು, ಬಲಹೀನತೆಯಲ್ಲಿಯೇ ನನ್ನ ಬಲವು ಪೂರ್ಣಸಾಧಕವಾಗುತ್ತದೆ” ಎಂದು ನನಗೆ ಹೇಳಿದನು. ಹೀಗಿರಲಾಗಿ, ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿರಬೇಕೆಂದು ನನಗುಂಟಾಗುವ ಬಲಹೀನತೆಯಲ್ಲಿಯೂ ಬಹು ಸಂತೋಷವಾಗಿ ಹೆಚ್ಚಳಪಡುವೆನು. 10ಆದ್ದರಿಂದ ಕ್ರಿಸ್ತನ ನಿಮಿತ್ತ ನನಗೆ ಬಲಹೀನತೆಯಲ್ಲಿಯೂ, ತಿರಸ್ಕಾರದಲ್ಲಿಯೂ, ಕೊರತೆಯಲ್ಲಿಯೂ, ಹಿಂಸೆಯಲ್ಲಿಯೂ ಮತ್ತು ಇಕ್ಕಟ್ಟೂ ಸಂಭವಿಸಿದಾಗಲೂ ಸಂತುಷ್ಟನಾಗಿದ್ದೇನೆ. ಯಾಕೆಂದರೆ ನಾನು ಯಾವಾಗ ದುರ್ಬಲನಾಗಿರುವೆನೋ, ಆವಾಗಲೇ ಬಲವುಳ್ಳವನೂ ಆಗಿರುತ್ತೇನೆ.
ಸುವಾರ್ತೆ
1ಯೇಸು ಅಲ್ಲಿಂದ ಹೊರಟು ತನ್ನ ಊರಿಗೆ ಬಂದನು; ಆತನ ಶಿಷ್ಯರು ಆತನನ್ನು ಹಿಂಬಾಲಿಸಿದರು. 2ಸಬ್ಬತ್ ದಿನ ಬಂದಾಗ ಆತನು ಅಲ್ಲಿಯ ಸಭಾಮಂದಿರದಲ್ಲಿ ಉಪದೇಶಮಾಡತೊಡಗಿದನು. ಅಲ್ಲಿ ನೆರದಿದ್ದ ಜನರು ಯೇಸುವಿನ ಬೋಧನೆಯನ್ನು ಕೇಳಿ ಬೆರಗಾದರು. “ಈತನಿಗೆ ಈ ಬೋಧನೆಯ ಮಾತುಗಳು ಎಲ್ಲಿಂದ ಬಂದಿತು? ಈತನು ಪಡೆದಿರುವ ಜ್ಞಾನವಾದರೂ ಎಂಥದ್ದು? ಈತನ ಕೈಯಿಂದ ಇಂತಹ ಅದ್ಭುತಕಾರ್ಯಗಳು ಆಗುವುದಾದರು ಹೇಗೆ? 3ಈತನು ಆ ಬಡಗಿಯಲ್ಲವೇ? ಈತನು ಮರಿಯಳ ಮಗನಲ್ಲವೇ? ಈತನು ಯಾಕೋಬ, ಯೋಸೆ, ಯೂದ, ಸೀಮೋನ ಇವರ ಅಣ್ಣನಲ್ಲವೇ? ಈತನ ತಂಗಿಯರು ಇಲ್ಲಿ ನಮ್ಮಲ್ಲಿಯೇ ಇದ್ದಾರಲ್ಲವೇ?” ಎಂದು ಹೇಳುತ್ತಾ ಯೇಸುವನ್ನು ತಾತ್ಸಾರ ಮಾಡಿದರು. 4ಯೇಸು ಅವರಿಗೆ, “ಪ್ರವಾದಿಯು ಬೇರೆ ಎಲ್ಲಿದ್ದರೂ ಅವನಿಗೆ ಗೌರವ ಉಂಟು; ಆದರೆ ಸ್ವಂತ ದೇಶದಲ್ಲಿಯೂ, ಸ್ವಂತ ಜನರಲ್ಲಿಯೂ, ಸ್ವಂತ ಮನೆಯಲ್ಲಿಯೂ ಗೌರವವಿಲ್ಲ” ಎಂದು ಹೇಳಿದನು. 5ಆತನು ಅಲ್ಲಿ ಕೆಲವು ರೋಗಿಗಳ ಮೇಲೆ ಕೈಯಿಟ್ಟು ಸ್ವಸ್ಥಮಾಡಿದನೇ ಹೊರತು ಬೇರೆ ಯಾವ ಮಹತ್ಕಾರ್ಯವನ್ನೂ ಮಾಡುವುದಕ್ಕಾಗಲಿಲ್ಲ. 6ಅವರ ಅಪನಂಬಿಕೆಗೆ ಆತನು ಆಶ್ಚರ್ಯಪಟ್ಟನು. ಆ ನಂತರ ಯೇಸು ಸುತ್ತಮುತ್ತಲಿನ ಊರುಗಳಲ್ಲಿ ಬೋಧಿಸಿದನು.
ಇಂದಿನ ಸಂತರು
- ಪೋರ್ಚುಗಲ್ನ ಸಂತ ಎಲಿಜಬೆತ್
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು