ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮೇ 2027 › 27 ಮೇ
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 27 ಮೇ 2027
ಗುರುವಾರ · ಸಾಮಾನ್ಯ ಕಾಲದ ಎಂಟನೆಯ ವಾರ
ಹಬ್ಬಗಳು ಮತ್ತು ಸಂತರು
ಕ್ರಿಸ್ತನ ಅತಿಪವಿತ್ರ ಶರೀರ ಮತ್ತು ರಕ್ತ
ಮಹೋತ್ಸವ · ಆರಾಧನಾ ಬಣ್ಣ: ಬಿಳಿ
ದಿನದ ವಾಚನಗಳು
ಮೊದಲನೆಯ ವಾಚನ
3ಮೋಶೆ ಜನರ ಬಳಿಗೆ ಬಂದು ಯೆಹೋವನ ಎಲ್ಲಾ ಮಾತುಗಳನ್ನೂ ಮತ್ತು ಅಜ್ಞಾವಿಧಿಗಳನ್ನೂ ವಿವರಿಸಲು ಜನರೆಲ್ಲರೂ, “ಯೆಹೋವನ ಮಾತುಗಳನ್ನೆಲ್ಲಾ ಅನುಸರಿಸಿ ನಡೆಯುವೆವು” ಎಂದು ಒಕ್ಕೊರಳಿನಿಂದ ಉತ್ತರಕೊಟ್ಟರು. 4ಮೋಶೆಯು ಯೆಹೋವನ ಆಜ್ಞೆಗಳನ್ನೆಲ್ಲಾ ಬರೆದಿಟ್ಟನು. ಬೆಳಿಗ್ಗೆ ಎದ್ದು ಆ ಬೆಟ್ಟದ ತಪ್ಪಲಲ್ಲಿ ಯಜ್ಞವೇದಿಯನ್ನು ಕಟ್ಟಿಸಿ ಇಸ್ರಾಯೇಲರ ಹನ್ನೆರಡು ಕುಲಗಳಿಗೆ ಸರಿಯಾಗಿ ಹನ್ನೆರಡು ಕಲ್ಲಿನ ಕಂಬಗಳನ್ನು ಸ್ಥಾಪನೆಮಾಡಿಸಿದನು. 5ಇಸ್ರಾಯೇಲರ ಯೌವನಸ್ಥರಿಗೆ ನೀವು ಯೆಹೋವನಿಗೋಸ್ಕರ ಸರ್ವಾಂಗಹೋಮಗಳನ್ನು ಮಾಡಿ ಸಮಾಧಾನ ಯಜ್ಞಕ್ಕಾಗಿ ಹೋರಿಗಳನ್ನು ಸಮರ್ಪಿಸಬೇಕೆಂದು ಅಪ್ಪಣೆಕೊಟ್ಟು ಕಳುಹಿಸಿದನು. 6ಅನಂತರ ಮೋಶೆ ಆ ರಕ್ತದಲ್ಲಿ ಅರ್ಧವನ್ನು ತೆಗೆದುಕೊಂಡು ಬಟ್ಟಲುಗಳಲ್ಲಿ ತುಂಬಿ ಅರ್ಧವನ್ನು ಯಜ್ಞವೇದಿಯ ಮೇಲೆ ಪ್ರೋಕ್ಷಿಸಿದನು. 7ತರುವಾಯ ಒಡಂಬಡಿಕೆಯ ಗ್ರಂಥವನ್ನು ತೆಗೆದುಕೊಂಡು ಜನರಿಗೆ ಕೇಳಿಸುವಂತೆ ಓದಿದನು. ಅವರು ಕೇಳಿ, “ಯೆಹೋವನ ಆಜ್ಞೆಗಳನ್ನೆಲ್ಲಾ ನಾವು ಅನುಸರಿಸಿ ವಿಧೇಯರಾಗುವೆವು” ಅಂದರು. 8ಆಗ ಮೋಶೆಯು ಆ ರಕ್ತವನ್ನು ತೆಗೆದುಕೊಂಡು ಜನರ ಮೇಲೆ ಚಿಮುಕಿಸಿ, “ಇಗೋ ಈ ಗ್ರಂಥದಲ್ಲಿ ಹೇಳಿರುವ ಎಲ್ಲಾ ಆಜ್ಞೆಗಳ ಪ್ರಕಾರ ಯೆಹೋವನು ನಿಮ್ಮ ಸಂಗಡ ಮಾಡಿಕೊಂಡ ಒಡಂಬಡಿಕೆಯ ರಕ್ತವು ಇದೇ” ಅಂದನು.
ಪ್ರತಿವಚನ ಕೀರ್ತನೆ
12ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ? 13ರಕ್ಷಣಾಪಾತ್ರೆಯನ್ನು ತೆಗೆದುಕೊಂಡು, ಯೆಹೋವನ ನಾಮವನ್ನು ಪ್ರಖ್ಯಾತಿಪಡಿಸುವೆನು. 15ಯೆಹೋವನು ತನ್ನ ಭಕ್ತರ ಮರಣವನ್ನು ಅಲ್ಪವೆಂದು ಎಣಿಸುವುದಿಲ್ಲ. 16ಯೆಹೋವನೇ, ಕರುಣಿಸು, ನಾನು ನಿನ್ನ ಸೇವಕನು; ನಿನ್ನ ದಾಸಿಯ ಮಗನೂ, ನಿನ್ನ ದಾಸನೂ ಆಗಿದ್ದೇನೆ. ನನ್ನ ಬಂಧನಗಳನ್ನು ಬಿಚ್ಚಿಬಿಟ್ಟಿದ್ದಿ. 17ನಾನು ನಿನಗೆ ಕೃತಜ್ಞತಾ ಯಜ್ಞಗಳನ್ನು ಸಮರ್ಪಿಸುವೆನು; ಯೆಹೋವನ ನಾಮವನ್ನು ಪ್ರಖ್ಯಾತಿಪಡಿಸುವೆನು. 18ಯೆರೂಸಲೇಮೇ, ನಿನ್ನ ಮಧ್ಯದಲ್ಲಿ, ಯೆಹೋವನ ಮಂದಿರದ ಅಂಗಳಗಳಲ್ಲಿ,
ಎರಡನೆಯ ವಾಚನ
11ಕ್ರಿಸ್ತನಾದರೋ ಈಗ ದೊರೆತಿರುವ ಶುಭಗಳ ಮಹಾಯಾಜಕನಾಗಿ ಬಂದು, ಮನುಷ್ಯರ ಕೈಯಿಂದ ಕಟ್ಟಲ್ಪಡದಂಥದೂ, ಇಹಲೋಕದ ಸೃಷ್ಟಿಗೆ ಸಂಬಂಧಪಡದಂಥದೂ, ಶ್ರೇಷ್ಠವಾದುದೂ, ಬಹು ಪರಿಪೂರ್ಣವಾದುದೂ ಆಗಿರುವ ಗುಡಾರದಲ್ಲಿ ಸೇವೆ ಮಾಡುವವನಾಗಿ, 12ಹೋತಗಳ ಮತ್ತು ಹೋರಿಕರುಗಳ ರಕ್ತದ ಮೂಲಕವಲ್ಲ ತನ್ನ ಸ್ವಂತ ರಕ್ತದ ಮೂಲಕ ಒಂದೇ ಸಾರಿ ಎಲ್ಲರಿಗೋಸ್ಕರ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಿ ನಿತ್ಯ ವಿಮೋಚನೆಯನ್ನು ಸಾಧಿಸಿದನು. 13ಹೋತ ಹೋರಿಗಳ ರಕ್ತವೂ ಅಶುದ್ಧರಾದವರ ಮೇಲೆ ಚಿಮುಕಿಸುವ ಕಡಸಿನ ಬೂದಿಯೂ ಶರೀರವನ್ನು ಶುದ್ಧೀಕರಿಸುವುದಾದರೆ, 14ನಿತ್ಯಾತ್ಮನಿಂದ ತನ್ನನ್ನು ತಾನೇ ನಿರ್ದೋಷಿಯನ್ನಾಗಿ, ದೇವರಿಗೆ ಸಮರ್ಪಿಸಿಕೊಂಡ ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ, ನಮ್ಮನ್ನು ನಿರ್ಜೀವ ಕ್ರಿಯೆಗಳಿಂದ ಬಿಡಿಸಿ, ನಾವು ಜೀವವುಳ್ಳ ದೇವರನ್ನು ಆರಾಧಿಸುವಂತೆ ನಮ್ಮ ಮನಸ್ಸಾಕ್ಷಿಯನ್ನು ಶುದ್ಧೀಕರಿಸುತ್ತದಲ್ಲವೇ? 15ದೇವರಿಂದ ಕರೆಯಲ್ಪಟ್ಟ ಜನರು, ದೇವರ ವಾಗ್ದಾನವಾದ ನಿತ್ಯಬಾಧ್ಯತೆಯನ್ನು ಹೊಂದಿಕೊಳ್ಳಲೆಂದು ಕ್ರಿಸ್ತನು ಈ ಹೊಸ ಒಡಂಬಡಿಕೆಗೆ ಮಧ್ಯಸ್ಥನಾದನು. ಏಕೆಂದರೆ ಮೊದಲನೆ ಒಡಂಬಡಿಕೆಯ ಕಾಲದಲ್ಲಿ ಮಾಡಿದ ಪಾಪಗಳಿಂದ ಅವರನ್ನು ಬಿಡುಗಡೆಗೊಳಿಸುವುದಕ್ಕಾಗಿ ಕ್ರಿಸ್ತನು ಮರಣ ಹೊಂದಿದನು.
ಸುವಾರ್ತೆ
12ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನ ಅಂದರೆ ಪಸ್ಕದ ಕುರಿಮರಿಯನ್ನು ಕೊಯ್ಯುವ ದಿನವಾಗಿತ್ತು. ಶಿಷ್ಯರು ಯೇಸುವಿಗೆ, “ನೀನು ಪಸ್ಕದ ಭೋಜನ ಮಾಡಲು ನಾವು ಎಲ್ಲಿ ಸಿದ್ಧಮಾಡಬೇಕೆಂದು ಹೇಳು” ಎಂದು ಕೇಳಿದರು. 13ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು ಅವರಿಗೆ, “ನೀವು ಪಟ್ಟಣದೊಳಗೆ ಹೋಗಿರಿ. ಅಲ್ಲಿ ತುಂಬಿದ ನೀರಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬ ಮನುಷ್ಯನು ನಿಮ್ಮನ್ನು ಸಂಧಿಸುವನು. ಅವನನ್ನು ಹಿಂಬಾಲಿಸಿರಿ. 14ಅವನು ಯಾವ ಮನೆಯೊಳಗೆ ಹೋಗುವನೋ ಆ ಮನೆಯ ಯಜಮಾನನಿಗೆ, ‘ನಮ್ಮ ಗುರು, ತನ್ನ ಶಿಷ್ಯರ ಸಂಗಡ ಪಸ್ಕದ ಭೋಜನ ಮಾಡಲು ಕೊಠಡಿ ಎಲ್ಲಿದೆ?’ ಎಂಬುದಾಗಿ ಕೇಳುತ್ತಿದ್ದಾನೆ ಎಂದು ಹೇಳಿರಿ. 15“ಅವನು ಸಜ್ಜುಗೊಳಿಸಿ ಸಿದ್ಧಮಾಡಿರುವ ಮೇಲಂತಸ್ತಿನ ವಿಶಾಲವಾದ ಕೊಠಡಿಯನ್ನು ನಿಮಗೆ ತೋರಿಸುವನು. ಅಲ್ಲಿ ನಮಗೆ ಭೋಜನಕ್ಕೆ ಸಿದ್ಧಮಾಡಿರಿ” ಎಂದು ಹೇಳಿ ಅವರನ್ನು ಕಳುಹಿಸಿ ಕೊಟ್ಟನು. 16ಶಿಷ್ಯರು ಹೊರಟು ಪಟ್ಟಣದೊಳಗೆ ಹೋಗಿ ಯೇಸು ತಮಗೆ ಹೇಳಿದಂತೆ ಎಲ್ಲವನ್ನು ಕಂಡು ಪಸ್ಕವನ್ನು ಸಿದ್ಧಮಾಡಿದರು. 22ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಮುರಿದು ಶಿಷ್ಯರಿಗೆ ಕೊಡುತ್ತಾ “ಇದನ್ನು ತೆಗೆದುಕೊಳ್ಳಿರಿ, ಇದು ನನ್ನ ದೇಹ” ಎಂದನು. 23ತರುವಾಯ ಪಾನಪಾತ್ರೆಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸುತ್ತಿ ಸಲ್ಲಿಸಿ, ಅದನ್ನು ಅವರಿಗೆ ಕೊಟ್ಟನು. ಅವರೆಲ್ಲರೂ ಅದರಿಂದ ಕುಡಿದರು. 24ಯೇಸು ಅವರಿಗೆ, “ಇದು ನನ್ನ ರಕ್ತ, ಬಹು ಜನರಿಗಾಗಿ ಸುರಿಸಲ್ಪಡುವ ಒಡಂಬಡಿಕೆಯ ರಕ್ತ. 25ನಿಮಗೆ ಸತ್ಯವಾಗಿ ಹೇಳುತ್ತೇನೆ; ನಾನು ದೇವರ ರಾಜ್ಯದಲ್ಲಿ ದ್ರಾಕ್ಷಾರಸವನ್ನು ಹೊಸದಾಗಿ ಕುಡಿಯುವ ದಿನದವರೆಗೂ ಅದನ್ನು ಇನ್ನು ಕುಡಿಯುವುದೇ ಇಲ್ಲ” ಎಂದನು. 26ಬಳಿಕ ಅವರು ಒಂದು ಕೀರ್ತನೆ ಹಾಡಿ ಎಣ್ಣೆಮರಗಳ ಗುಡ್ಡಕ್ಕೆ ಹೊರಟು ಹೋದರು.
ಇಂದಿನ ಸಂತರು
- ಕ್ಯಾಂಟರ್ಬರಿಯ ಸಂತ ಅಗಸ್ಟೀನ್, ಧರ್ಮಾಧ್ಯಕ್ಷ
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು