Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮೇ 2027 › 9 ಮೇ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 9 ಮೇ 2027

ಭಾನುವಾರ · ಪಾಸ್ಕ ಕಾಲದ ಏಳನೆಯ ವಾರ

ಹಬ್ಬಗಳು ಮತ್ತು ಸಂತರು

ಪಾಸ್ಕ ಕಾಲದ ಏಳನೆಯ ಭಾನುವಾರ

ಭಾನುವಾರ · ಆರಾಧನಾ ಬಣ್ಣ: ಬಿಳಿ

ದಿನದ ವಾಚನಗಳು

ಮೊದಲನೆಯ ವಾಚನ

ಅ. ಕೃ 1:15–17, 20–26

15ಆ ದಿನಗಳಲ್ಲಿ ಸುಮಾರು ನೂರಿಪ್ಪತ್ತು ಮಂದಿ ವಿಶ್ವಾಸಿಗಳು ಕೂಡಿಬಂದಿರಲಾಗಿ ಪೇತ್ರನು ಅವರ ಮಧ್ಯದಲ್ಲಿ ಎದ್ದು ನಿಂತು ಹೀಗೆಂದನು, 16“ಸಹೋದರರೇ, ಯೇಸುವನ್ನು ಬಂಧಿಸಿದವರಿಗೆ ದಾರೀತೋರಿಸಿದ ಯೂದನ ವಿಷಯವಾಗಿ ಪವಿತ್ರಾತ್ಮನು ದಾವೀದನ ಬಾಯಿಂದ ಮೊದಲೇ ಹೇಳಿಸಿದ ಶಾಸ್ತ್ರವಚನವು ನೆರವೇರುವುದು ಅವಶ್ಯವಾಗಿತ್ತು. 17ಯೂದನು ನಮ್ಮೊಂದಿಗೆ ಸೇರಿ ಈ ಸೇವೆಯಲ್ಲಿ ಪಾಲು ಹೊಂದಿದವನಾಗಿದ್ದನು.” 20ಅವನ ವಿಷಯವಾಗಿ, ಅವನ ಮನೆ ಹಾಳಾಗಲಿ, ಅದು ಜನರಿಲ್ಲದೆ ಪಾಳುಬೀಳಲಿ ಎಂತಲೂ ಅವನ ನಾಯಕತ್ವದ ಹುದ್ದೆಯು ಮತ್ತೊಬ್ಬನಿಗಾಗಲಿ ಎಂತಲೂ ಕೀರ್ತನೆಗಳ ಗ್ರಂಥದಲ್ಲಿ ಬರೆದಿದೆಯಲ್ಲಾ. 21ಆದುದರಿಂದ ಕರ್ತನಾದ ಯೇಸು ನಮ್ಮಲ್ಲಿ ಬರುತ್ತಾ ಹೋಗುತ್ತಾ ಇದ್ದಕಾಲವೆಲ್ಲಾ, ಅಂದರೆ ಯೋಹಾನನು ದೀಕ್ಷಾಸ್ನಾನ ಮಾಡಿಸಿದ್ದು ಮೊದಲುಗೊಂಡು ಯೇಸು ನಮ್ಮ ಬಳಿಯಿಂದ ಪರಲೋಕವನ್ನೇರಿ ಹೋದ ದಿನದ ವರೆಗೂ ನಮ್ಮ ಜೊತೆಯಲ್ಲಿದ್ದವರೊಳಗೆ ಒಬ್ಬನು ನಮ್ಮೊಂದಿಗೆ ಆತನ ಪುನರುತ್ಥಾನದ ವಿಷಯದಲ್ಲಿ ಸಾಕ್ಷಿಹೇಳುವವನಾಗಬೇಕು ಅಂದನು 23ಈ ಮಾತುಗಳನ್ನು ಕೇಳಿ ಅವರು ಯೂಸ್ತನೆನಿಸಿಕೊಳ್ಳುವ ಬಾರ್ನಬನೆಂಬ ಯೋಸೇಫನನ್ನೂ ಮತ್ತೀಯನನ್ನೂ ನಿಲ್ಲಿಸಿ, 24“ಕರ್ತನೇ, ಎಲ್ಲರ ಹೃದಯವನ್ನು ಬಲ್ಲಾತನೇ, ಯೂದನು ಅಪೊಸ್ತಲತನವೆಂಬ ಈ ಸೇವಾಸ್ಥಾನದಿಂದ ಭ್ರಷ್ಟನಾಗಿ ತಾನು ಹೋಗ ತಕ್ಕ ಸ್ಥಳಕ್ಕೆ ಹೋಗಿರುವುದರಿಂದ ಆ ಸ್ಥಾನವನ್ನು ಹೊಂದುವುದಕ್ಕೆ ಈ ಇಬ್ಬರಲ್ಲಿ ನೀನು ಆರಿಸಿ ಕೊಂಡವನನ್ನು ತೋರಿಸಿಕೊಡು” ಎಂದು ಪ್ರಾರ್ಥಿಸಿದರು. 26ಆನಂತರ ಅವರಿಗೋಸ್ಕರ ಚೀಟುಹಾಕಿದರು; ಚೀಟು ಮತ್ತೀಯನ ಪರವಾಗಿ ಬಿದ್ದುದರಿಂದ ಅವನು ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಸೇರಿಕೊಂಡನು.

ಪ್ರತಿವಚನ ಕೀರ್ತನೆ

ಕೀರ್ತ 103:1–2, 11–12, 19–20

1ದಾವೀದನ ಕೀರ್ತನೆ. ನನ್ನ ಮನವೇ, ಯೆಹೋವನನ್ನು ಕೊಂಡಾಡು; ನನ್ನ ಸರ್ವೇಂದ್ರಿಯಗಳೇ, ಆತನ ಪವಿತ್ರ ನಾಮವನ್ನು ಕೀರ್ತಿಸಿರಿ. 2ನನ್ನ ಮನವೇ, ಯೆಹೋವನನ್ನು ಕೊಂಡಾಡು; ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ. 11ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ, ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ಕೃಪೆಯು ಅಷ್ಟು ಅಪಾರವಾಗಿದೆ. 12ಪೂರ್ವಕ್ಕೂ, ಪಶ್ಚಿಮಕ್ಕೂ ಎಷ್ಟು ದೂರವೋ, ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ. 19ಯೆಹೋವನು ಮೇಲಣ ಲೋಕದಲ್ಲಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ; ಆತನು ಸಮಸ್ತವನ್ನೂ ಆಳುತ್ತಾನೆ. 20ದೇವದೂತರೇ, ಆತನ ಶಬ್ದಕ್ಕೆ ಕಿವಿಗೊಡುವವರೆ ಆತನ ಆಜ್ಞೆಯನ್ನು ನೆರವೇರಿಸುವ ಪರಾಕ್ರಮಶಾಲಿಗಳೇ, ಯೆಹೋವನನ್ನು ಕೊಂಡಾಡಿರಿ.

ಎರಡನೆಯ ವಾಚನ

1 ಯೋಹಾ 4:11–16

11ಪ್ರಿಯರೇ, ದೇವರು ನಮ್ಮನ್ನು ಹೀಗೆ ಪ್ರೀತಿಸಿದ ಮೇಲೆ ನಾವೂ ಸಹ ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ. 12ದೇವರನ್ನು ಯಾರೂ ಎಂದೂ ನೋಡಿಲ್ಲ. ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ ದೇವರು ನಮ್ಮಲ್ಲಿ ನೆಲೆಗೊಂಡಿದ್ದಾನೆ, ಮತ್ತು ಆತನ ಪ್ರೀತಿಯು ನಮ್ಮಲ್ಲಿ ಪರಿಪೂರ್ಣಗೊಂಡಿರುತ್ತದೆ. 13ದೇವರು ನಮಗೆ ತನ್ನ ಆತ್ಮವನ್ನು ಕೊಟ್ಟಿರುವುದರಿಂದಲೇ ನಾವು ಆತನಲ್ಲಿ ನೆಲೆಗೊಂಡಿದ್ದೇವೆ ಮತ್ತು ಆತನು ನಮ್ಮಲ್ಲಿ ನೆಲೆಗೊಂಡಿದ್ದಾನೆಂದು ತಿಳಿದುಕೊಳ್ಳುತ್ತೇವೆ. 14ತಂದೆಯು ತನ್ನ ಮಗನನ್ನು ಲೋಕರಕ್ಷಕನನ್ನಾಗಿ ಕಳುಹಿಸಿಕೊಟ್ಟಿರುವುದನ್ನು ನಾವು ತಿಳಿದಿದ್ದೇವೆ ಮತ್ತು ಅದರ ವಿಷಯದಲ್ಲಿ ನಾವು ಸಾಕ್ಷಿ ಹೇಳುತ್ತೇವೆ. 15ಯೇಸುಕ್ರಿಸ್ತನು ದೇವರ ಮಗನಾಗಿದ್ದಾನೆಂದು ಯಾರು ಒಪ್ಪಿಕೊಳ್ಳುತ್ತಾರೋ ಅವರಲ್ಲಿ ದೇವರು ನೆಲೆಗೊಂಡಿರುತ್ತಾನೆ, ಹಾಗೂ ಅವನು ದೇವರಲ್ಲಿ ನೆಲೆಗೊಂಡಿದ್ದಾನೆ. 16ಹೀಗೆ ದೇವರು ನಮ್ಮಲ್ಲಿಟ್ಟಿರುವ ಪ್ರೀತಿಯನ್ನು ನಾವು ತಿಳಿದುಕೊಂಡಿದ್ದೇವೆ. ಅದನ್ನು ನಂಬಿದ್ದೇವೆ. ದೇವರು ಪ್ರೀತಿಸ್ವರೂಪಿ, ಪ್ರೀತಿಯಲ್ಲಿ ನೆಲೆಗೊಂಡಿರುವವನು ದೇವರಲ್ಲಿ ನೆಲೆಗೊಂಡಿದ್ದಾನೆ. ದೇವರು ಅವನಲ್ಲಿ ನೆಲೆಗೊಂಡಿದ್ದಾನೆ.

ಸುವಾರ್ತೆ

ಯೋಹಾ 17:11–19

11ಇನ್ನು ಮೇಲೆ ನಾನು ಲೋಕದಲ್ಲಿ ಇರುವುದಿಲ್ಲ, ಇವರಾದರೋ ಲೋಕದಲ್ಲಿ ಇರುತ್ತಾರೆ. ನಾನು ನಿನ್ನ ಬಳಿಗೆ ಬರುತ್ತೇನೆ. ಪರಿಶುದ್ಧನಾದ ತಂದೆಯೇ, ನಾವು ಒಂದಾಗಿರುವ ಹಾಗೆ ಇವರೂ ಒಂದಾಗಿರಬೇಕೆಂದು, ನೀನು ನನಗೆ ಕೊಟ್ಟ ನಿನ್ನ ಹೆಸರಿನಲ್ಲಿ ಇವರನ್ನು ಕಾಪಾಡು. 12ನಾನು ಇವರ ಜೊತೆ ಇದ್ದಾಗ ನೀನು ನನಗೆ ಕೊಟ್ಟ ನಿನ್ನ ಹೆಸರಿನಲ್ಲಿ ಇವರನ್ನು ಕಾಪಾಡಿ ಸಂರಕ್ಷಿಸಿದೆನು. ಧರ್ಮಶಾಸ್ತ್ರದ ಮಾತು ನೆರವೇರುವಂತೆ ನಾಶಕ್ಕಾಗಿ ಹುಟ್ಟಿದವನೇ ಹೊರತು ಇವರಲ್ಲಿ ಒಬ್ಬನೂ ನಾಶವಾಗಲಿಲ್ಲ. 13“ಆದರೆ ಈಗ ನಾನು ನಿನ್ನ ಬಳಿಗೆ ಬರುತ್ತೇನೆ. ಆದುದರಿಂದ ನನ್ನ ಆನಂದವು ಇವರಲ್ಲಿ ಪರಿಪೂರ್ಣವಾಗಿರುವಂತೆ ನಾನು ಲೋಕದಲ್ಲಿದ್ದು ಈ ಮಾತುಗಳನ್ನಾಡುತ್ತಿದೇನೆ. 14ನಾನು ನಿನ್ನ ವಾಕ್ಯವನ್ನು ಇವರಿಗೆ ಕೊಟ್ಟಿದ್ದೇನೆ, ನಾನು ಈ ಲೋಕದವನಲ್ಲದವನಾಗಿರುವ ಪ್ರಕಾರ ಇವರೂ ಈ ಲೋಕದವರಲ್ಲ. ಆದಕಾರಣ ಲೋಕವು ಇವರನ್ನು ದ್ವೇಷಿಸುತ್ತದೆ. 15ಇವರನ್ನು ಲೋಕದಿಂದ ತೆಗೆಯಬೇಕೆಂದು ನಾನು ಬೇಡಿಕೊಳ್ಳುವುದಿಲ್ಲ, ಆದರೆ ಇವರನ್ನು ಕೆಡುಕನಿಂದ ಕಾಪಾಡಬೇಕೆಂದು ನಾನು ಬೇಡಿಕೊಳ್ಳುತ್ತೇನೆ. 16ನಾನು ಲೋಕದವನಲ್ಲದೆ ಇರುವಂತೆ ಇವರೂ ಲೋಕದವರಲ್ಲ. 17ನೀನು ಸತ್ಯದಿಂದ ಇವರನ್ನು ಪ್ರತಿಷ್ಠೆಪಡಿಸು, ನಿನ್ನ ವಾಕ್ಯವೇ ಸತ್ಯ. 18ನೀನು ನನ್ನನ್ನು ಲೋಕಕ್ಕೆ ಕಳುಹಿಸಿದಂತೆಯೇ, ನಾನು ಸಹ ಇವರನ್ನು ಲೋಕಕ್ಕೆ ಕಳುಹಿಸಿದ್ದೇನೆ. 19ಇವರು ನಿಜವಾಗಿ ಪ್ರತಿಷ್ಠಿರಾಗಬೇಕೆಂದು, ನನ್ನನ್ನು ನಾನೇ ಇವರಿಗೋಸ್ಕರ ಪ್ರತಿಷ್ಠಿಸಿಕೊಂಡಿದ್ದೇನೆ.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು