Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮೇ 2027 › 6 ಮೇ

ಆರ್ಥೊಡಾಕ್ಸ್ ಪಂಚಾಂಗ · ಏಪ್ರಿಲ್ 23 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 6 ಮೇ 2027

ಗುರುವಾರ · ಉಜ್ವಲ ವಾರ · ಸ್ವರ 5

ಹಬ್ಬಗಳು ಮತ್ತು ಸಂತರು

ಉಜ್ವಲ ವಾರದ ಗುರುವಾರ

ಉಪವಾಸವಿಲ್ಲದ ವಾರ

ಉಪವಾಸವಿಲ್ಲ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಸಂಧ್ಯಾ ಪ್ರಾರ್ಥನೆ: ವಾಚನ (ಸಂತ ಜಾರ್ಜ್)

ಯೆಶಾ 43:9–14

9ಎಲ್ಲಾ ಜನಾಂಗಗಳು ಒಟ್ಟಿಗೆ ಬರಲಿ, ಸಕಲದೇಶೀಯರು ನೆರೆಯಲಿ, ಇವರ ದೇವರುಗಳಲ್ಲಿ ಯಾರು ಈ ಸಂಗತಿಯನ್ನು ಮುಂತಿಳಿಸಬಲ್ಲರು? ನಡೆದ ಸಂಗತಿಗಳನ್ನು ಯಾರು ವಿವರಿಸಾರು? ತಾವು ಸತ್ಯವಂತರೆಂದು ಸ್ಥಾಪಿಸಿಕೊಳ್ಳುವುದಕ್ಕೆ ಸಾಕ್ಷಿಗಳನ್ನು ಕರೆದುತರಲಿ. ಆ ಸಾಕ್ಷಿಗಳು ಇವರ ಮಾತನ್ನು ಕೇಳಿ ‘ಇದು ನಿಜ’ ಎಂದು ಹೇಳಲಿ. 10ಯೆಹೋವನ ಮಾತೇನೆಂದರೆ, ‘ನೀವು ನನ್ನ ಸಾಕ್ಷಿ, ನಾನು ಆರಿಸಿಕೊಂಡಿರುವ ಸೇವಕನು. ನೀವು ನನ್ನನ್ನು ತಿಳಿದು ನಂಬಿ, ನನ್ನನ್ನೇ ದೇವರು ಎಂದು ಗ್ರಹಿಸುವ ಹಾಗೆ ಇದನ್ನು ನಡೆಸಿದೆನು. ನನಗಿಂತ ಮೊದಲು ಯಾವ ದೇವರೂ ಇರಲಿಲ್ಲ, ನನ್ನ ಅನಂತರದಲ್ಲಿಯೂ ಇರುವುದಿಲ್ಲ. 11ನಾನೇ, ನಾನೇ ಯೆಹೋವನು, ನನ್ನ ಹೊರತು ಯಾವ ರಕ್ಷಕನೂ ಇಲ್ಲ. 12ನಾನೇ ರಕ್ಷಣೆಯನ್ನು ಮುಂತಿಳಿಸಿ ನೆರವೇರಿಸಿ ಪ್ರಕಟಿಸಿದ್ದೇನೆ, ನಿಮ್ಮಲ್ಲಿ ಅನ್ಯದೇವರು ಯಾರೂ ಇರಲಿಲ್ಲವಲ್ಲ; ನೀವೇ ನನ್ನ ಸಾಕ್ಷಿಗಳು, ನಾನೊಬ್ಬನೇ ದೇವರು. 13ಹೌದು, ಇಂದಿನಿಂದ ನಾನೇ ದೇವರು. ನನ್ನ ಕೈಯಿಂದ ಬಿಡಿಸಬಲ್ಲವರು ಯಾರೂ ಇಲ್ಲ. ನನ್ನ ಕೆಲಸಕ್ಕೆ ಯಾರು ಅಡ್ಡಿ ಬರುವರು?’” ಎಂಬುದೇ ಯೆಹೋವನ ಮಾತು. 14ನಿಮ್ಮ ವಿಮೋಚಕನೂ, ಇಸ್ರಾಯೇಲರ ಸದಮಲಸ್ವಾಮಿಯೂ ಆದ ಯೆಹೋವನು ಹೀಗೆನ್ನುತ್ತಾನೆ, “ನಾನು ನಿಮಗೋಸ್ಕರ ದೂತನನ್ನು ಬಾಬಿಲೋನಿಗೆ ಕಳುಹಿಸಿ, ಕಸ್ದೀಯರನ್ನೆಲ್ಲಾ ತಮ್ಮ ವಿನೋದದ ಹಡಗುಗಳ ಮೇಲೆ ಪಲಾಯನ ಮಾಡುವಂತೆ ಅಟ್ಟಿಬಿಡುವೆನು.

ಸಂಧ್ಯಾ ಪ್ರಾರ್ಥನೆ: ವಾಚನ (ಸಂತ ಜಾರ್ಜ್)

ಈ ಅನುವಾದದಲ್ಲಿ ಇಲ್ಲ

ಸಂಧ್ಯಾ ಪ್ರಾರ್ಥನೆ: ವಾಚನ (ಸಂತ ಜಾರ್ಜ್)

ಈ ಅನುವಾದದಲ್ಲಿ ಇಲ್ಲ

ಉದಯಕಾಲದ ಪ್ರಾರ್ಥನೆ: ಸುವಾರ್ತೆ (ಸಂತ ಜಾರ್ಜ್)

ಲೂಕ 12:2–12

2ಮರೆಯಾಗಿರುವಂಥದ್ದು ವ್ಯಕ್ತವಾಗುವುದು. ರಹಸ್ಯವಾಗಿರುವಂಥದ್ದು ಪ್ರಕಟವಾಗುವುದು. 3ಹೀಗಿರುವುದರಿಂದ ನೀವು ಕತ್ತಲಲ್ಲಿ ಹೇಳಿದಂಥದು ಬೆಳಕಿನಲ್ಲಿ ಕೇಳಲಾಗುವುದು. ಮತ್ತು ನೀವು ಕೋಣೆಗಳೊಳಗೆ ಪಿಸುಗುಟ್ಟಿದ್ದು ಮಾಳಿಗೆಗಳ ಮೇಲೆ ಸಾರಲಾಗುವುದು. 4“ನನ್ನ ಸ್ನೇಹಿತರಾದ ನಿಮಗೆ ಹೇಳುತ್ತೇನೆ, ದೇಹವನ್ನು ಕೊಲ್ಲುವವರಿಗೆ ಭಯಪಡಬೇಡಿ. ಕೊಂದು ಹಾಕಿದ ಮೇಲೆ ಹೆಚ್ಚೇನು ಮಾಡಲು ಅವರಿಂದಾಗದು. 5ಆದರೆ ನೀವು ಯಾರಿಗೆ ಭಯಪಡಬೇಕೆಂದು ತೋರಿಸುತ್ತೇನೆ, ಕೇಳಿ. ಸತ್ತ ಮೇಲೆ ನರಕದೊಳಗೆ ಹಾಕುವ ಅಧಿಕಾರವುಳ್ಳಾತನಿಗೆ ಹೆದರಬೇಕು. ಹೌದು ಆತನಿಗೇ ಭಯಪಡಬೇಕೆಂದು ನಿಮಗೆ ಒತ್ತಿಹೇಳುತ್ತೇನೆ. 6ಐದು ಗುಬ್ಬಿಗಳನ್ನು ಎರಡು ದುಡ್ಡಿಗೆ ಮಾರುತ್ತಾರಲ್ಲ? ಆದಾಗ್ಯೂ ಅವುಗಳಲ್ಲಿ ಒಂದನ್ನೂ ದೇವರು ಮರೆತುಹೋಗುವುದಿಲ್ಲ. 7ಅಷ್ಟುಮಾತ್ರವಲ್ಲ, ನಿಮ್ಮ ತಲೆ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಹೆದರಬೇಡಿರಿ, ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು. 8“ನಾನು ನಿಮಗೆ ಹೇಳುತ್ತೇನೆ, ಯಾವನು ಮನುಷ್ಯರ ಮುಂದೆ ತಾನು ನನ್ನವನೆಂದು ಒಪ್ಪಿಕೊಳ್ಳುತ್ತಾನೋ, ಮನುಷ್ಯಕುಮಾರನು ಸಹ ಆ ವ್ಯಕ್ತಿಯನ್ನು ದೇವದೂತರ ಮುಂದೆ ತನ್ನವನೆಂದು ಒಪ್ಪಿಕೊಳ್ಳುವನು. 9ಆದರೆ ಯಾವನು ಮನುಷ್ಯರ ಮುಂದೆ ತಾನು ನನ್ನವನಲ್ಲವೆಂದು ಹೇಳುವನೋ ಅವನನ್ನು ನಾನು ದೇವದೂತರ ಮುಂದೆ ನನ್ನವನಲ್ಲವೆಂದು ಹೇಳುವೆನು. 10ಮನುಷ್ಯಕುಮಾರನ ವಿರುದ್ಧ ಮಾತನಾಡುವ ಪ್ರತಿಯೊಬ್ಬನಿಗೆ ಕ್ಷಮಾಪಣೆಯಾಗುವುದು. ಆದರೆ ಪವಿತ್ರಾತ್ಮನನ್ನು ದೂಷಿಸಿದವನಿಗೆ ಕ್ಷಮಾಪಣೆಯಿಲ್ಲ. 11ಅವರು ನಿಮ್ಮನ್ನು ಸಭಾಮಂದಿರಗಳಿಗೂ, ಸಭಾಮಂದಿರಗಳ ಅಧಿಕಾರಿಗಳ ಎದುರಿಗೂ, ಅಧಿಪತಿಗಳ ಎದುರಿಗೂ, ಹಿಡಿದುಕೊಂಡು ಹೋಗುವಾಗ ಹೇಗೆ ಉತ್ತರ ಕೊಡಬೇಕು? ಏನು ಉತ್ತರ ಕೊಡಬೇಕು? ಏನು ಹೇಳಬೇಕು? ಎಂದು ಚಿಂತೆಮಾಡಬೇಡಿರಿ. 12ಏಕೆಂದರೆ ನೀವು ಹೇಳತಕ್ಕದ್ದನ್ನು ಪವಿತ್ರಾತ್ಮನು ಆ ಗಳಿಗೆಯಲ್ಲಿಯೇ ನಿಮಗೆ ಕಲಿಸಿಕೊಡುವನು” ಅಂದನು.

ಪತ್ರಿಕೆ

ಅ. ಕೃ 2:38–43

38ಪೇತ್ರನು ಅವರಿಗೆ, “ನಿಮ್ಮ ಪಾಪಗಳು ಕ್ಷಮಿಸಲ್ಪಡುವುದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರೂ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿಕೊಳ್ಳಲಿ, ಆಗ ನೀವು ಪವಿತ್ರಾತ್ಮದಾನವನ್ನು ಹೊಂದುವಿರಿ. 39ಆ ವಾಗ್ದಾನವು ನಿಮಗೂ, ನಿಮ್ಮ ಮಕ್ಕಳಿಗೂ, ಅಂತೂ ನಮ್ಮ ದೇವರಾಗಿರುವ ಕರ್ತನು ತನ್ನ ಕಡೆಗೆ ಕರೆಯುವ ದೂರದಲ್ಲಿರುವ ಎಲ್ಲರಿಗೂ ಇರುವುದಾಗಿದೆ” ಎಂದು ಹೇಳಿದನು. 40ಬೇರೆ ಅನೇಕ ವಿಧವಾದ ಮಾತುಗಳಿಂದ ಅವನು ಖಂಡಿತವಾಗಿ ಸಾಕ್ಷಿನುಡಿದು, “ಈ ದುಷ್ಟ ಪೀಳಿಗೆಯಿಂದ ನಿಮ್ಮನ್ನು ಸಂರಕ್ಷಿಸಿಕೊಳ್ಳಿರಿ” ಎಂದು ಅವರನ್ನು ಎಚ್ಚರಿಸಿದನು. 41ಅವನ ಬೋಧನೆಯನ್ನು ಅಂಗೀಕರಿಸಿದ ಅನೇಕರು ದೀಕ್ಷಾಸ್ನಾನಮಾಡಿಸಿ ಕೊಂಡರು. ಆ ದಿನ ಸುಮಾರು ಮೂರು ಸಾವಿರ ಜನರು ಅವರೊಂದಿಗೆ ಸೇರಿಕೊಂಡರು. 42ಅವರು ಅಪೊಸ್ತಲರ ಬೋಧನೆಯಲ್ಲಿಯೂ, ಸಹೋದರರೊಂದಿಗೆ ಅನ್ಯೋನ್ಯತೆಯಲ್ಲಿಯೂ, ರೊಟ್ಟಿಮುರಿಯುವುದರಲ್ಲಿಯೂ, ಪ್ರಾರ್ಥನೆಗಳಲ್ಲಿಯೂ ನಿರತರಾಗಿದ್ದರು. 43ಎಲ್ಲರೂ ಭಯ ಪರವಶರಾದರು. ಇದಲ್ಲದೆ ಅನೇಕ ಅದ್ಭುತಕಾರ್ಯಗಳೂ, ಸೂಚಕಕಾರ್ಯಗಳೂ ಅಪೊಸ್ತಲರ ಮುಖಾಂತರ ನಡೆದವು.

ಪತ್ರಿಕೆ (ಸಂತ ಜಾರ್ಜ್)

ಅ. ಕೃ 12:1–11

1ಆ ಸಮಯದಲ್ಲೇ ಅರಸನಾದ ಹೆರೋದನು ಸಭೆಯವರಲ್ಲಿ ಕೆಲವರನ್ನು ಹಿಂಸೆಪಡಿಸುವುದಕ್ಕೆ ಕೈಹಾಕಿದನು. 2ಯೋಹಾನನ ಅಣ್ಣನಾದ ಯಾಕೋಬನನ್ನು ಕತ್ತಿಯಿಂದ ಕೊಲ್ಲಿಸಿದನು. 3ಇದು ಯೆಹೂದ್ಯರಿಗೆ ಮೆಚ್ಚಿಕೆಯಾಗಿದೆ ಎಂದು ತಿಳಿದು, ಅಷ್ಟಕ್ಕೆ ನಿಲ್ಲದೆ ಪೇತ್ರನನ್ನೂ ಬಂಧಿಸಿದನು. ಆ ಕಾಲದಲ್ಲಿ ಪಸ್ಕಹಬ್ಬ ಅಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬ ನಡೆಯುತ್ತಿತ್ತು. 4ಅವನನ್ನು ಪಸ್ಕ ಹಬ್ಬವಾದ ಮೇಲೆ ಜನರ ಮುಂದೆ ತರಿಸಬೇಕೆಂಬ ಯೋಚನೆಯಿಂದ ಸೆರೆಯಲ್ಲಿ ಹಾಕಿಸಿ ಅವನನ್ನು ಕಾಯಲಿಕ್ಕೆ ನಾಲ್ಕು ನಾಲ್ಕು ಸಿಪಾಯಿಗಳಿದ್ದ ನಾಲ್ಕು ಗುಂಪುಗಳ ವಶಕ್ಕೆ ಕೊಟ್ಟನು. 5ಪೇತ್ರನು ಸೆರೆಮನೆಯೊಳಗೆ ಕಾವಲಲ್ಲಿದ್ದಾಗ, ಸಭೆಯವರು ಅವನಿಗೋಸ್ಕರ ಆಸಕ್ತಿಯಿಂದ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದರು. 6ಹೆರೋದನು ಅವನನ್ನು ಜನರ ಮುಂದೆ ತರಿಸಬೇಕೆಂದಿದ್ದ ದಿನದ ಹಿಂದಿನ ರಾತ್ರಿಯಲ್ಲಿ, ಪೇತ್ರನು ಎರಡು ಸರಪಣಿಗಳಿಂದ ಕಟ್ಟಲ್ಪಟ್ಟವನಾಗಿ, ಇಬ್ಬರು ಸಿಪಾಯಿಗಳ ನಡುವೆ ನಿದ್ದೆಮಾಡುತ್ತಿದ್ದನು. ಕಾವಲುಗಾರರು ಬಾಗಿಲ ಮುಂದೆ ನಿಂತು ಸೆರೆಮನೆಯನ್ನು ಕಾಯುತ್ತಿದ್ದರು. 7ಫಕ್ಕನೆ ಕರ್ತನ ದೂತನು ಪೇತ್ರನೆದುರಿಗೆ ನಿಂತನು; ಅವನಿದ್ದ ಕೋಣೆಯಲ್ಲಿ ಬೆಳಕು ಹೊಳೆಯಿತು. ಅವನು ಪೇತ್ರನ ಪಕ್ಕೆಯನ್ನು ತಟ್ಟಿ ಎಬ್ಬಿಸಿ; “ತಟ್ಟನೆ ಏಳು” ಅಂದನು. ಆಗಲೇ ಅವನ ಕೈಗಳಿಗೆ ಹಾಕಿದ್ದ ಸರಪಣಿಗಳು ಕಳಚಿಬಿದ್ದವು. 8ಆ ದೂತನು ಅವನಿಗೆ; “ನಡುಕಟ್ಟಿಕೊಂಡು, ನಿನ್ನ ಕೆರಗಳನ್ನು ಮೆಟ್ಟಿಕೋ” ಎಂದು ಹೇಳಲು, ಅವನು ಹಾಗೆಯೇ ಮಾಡಿದನು. “ನಿನ್ನ ಮೇಲಂಗಿಯನ್ನು ಹಾಕಿಕೊಂಡು ನನ್ನ ಹಿಂದೆ ಬಾ” ಅಂದನು. 9ಅವನು ಹೊರಗೆ ಬಂದು ಆ ದೂತನ ಹಿಂದೆಯೇ ಹೋಗುತ್ತಾ, ದೂತನ ಮೂಲಕವಾಗಿ ನಡೆದ ಸಂಗತಿ ನಿಜವಾದದ್ದೆಂದು ತಿಳಿಯದೆ ತಾನು ನೋಡಿದ್ದು ಕನಸು ಎಂದು ತಿಳಿದನು. 10ಅವರು ಮೊದಲನೆಯ ಮತ್ತು ಎರಡನೆಯ ಕಾವಲುಗಳನ್ನು ದಾಟಿ, ಪಟ್ಟಣಕ್ಕೆ ಹೋಗುವ ಕಬ್ಬಿಣದ ಬಾಗಿಲಿಗೆ ಬಂದಾಗ ಅದು ತನ್ನಷ್ಟಕ್ಕೆ ತಾನೇ ಅವರಿಗೆ ತೆರೆಯಿತು; ಅವರು ಹೊರಗೆ ಬಂದು ಒಂದು ಬೀದಿಯನ್ನು ದಾಟಿದರು; ಕೂಡಲೇ ಆ ದೂತನು ಅವನನ್ನು ಬಿಟ್ಟು ಹೋದನು. 11ಆಗ ಪೇತ್ರನು ಎಚ್ಚರಗೊಂಡು; “ಕರ್ತನು ತನ್ನ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ, ಯೆಹೂದ್ಯಜನರು ನನಗೆ ಮಾಡಬೇಕೆಂದಿದ್ದ ಕೇಡಿನಿಂದಲೂ, ನನ್ನನ್ನು ಬಿಡಿಸಿದನೆಂದು ನನಗೀಗ ನಿಜವಾಗಿ ತಿಳಿಯಿತು” ಎಂದು ಅಂದುಕೊಂಡನು.

ಸುವಾರ್ತೆ

ಯೋಹಾ 3:1–15

1ಫರಿಸಾಯರಲ್ಲಿ ಯೆಹೂದ್ಯರ ಹಿರೀಸಭೆಯವನಾದ ನಿಕೊದೇಮನೆಂಬ ಒಬ್ಬ ಮನುಷ್ಯನಿದ್ದನು. 2ಅವನು ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದು ಆತನಿಗೆ, “ಗುರುವೇ, ನೀನು ದೇವರ ಬಳಿಯಿಂದ ಬಂದ ಬೋಧಕನೆಂದು ನಾವು ಬಲ್ಲೆವು. ನೀನು ಮಾಡುವಂಥ ಈ ಸೂಚಕ ಕಾರ್ಯಗಳನ್ನು ದೇವರ ಸಹಾಯವಿಲ್ಲದೆ ಮಾಡುವುದು ಯಾರಿಂದಲೂ ಆಗದು” ಎಂದು ಹೇಳಿದನು. 3ಯೇಸು ಅವನಿಗೆ, “ನಾನು ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ಹೊಸದಾಗಿ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು,” ಎಂದು ಉತ್ತರ ಕೊಟ್ಟನು. 4ನಿಕೊದೇಮನು ಆತನನ್ನು, “ಮನುಷ್ಯನು ಮುದುಕನಾದ ಮೇಲೆ ತಿರುಗಿ ಹುಟ್ಟುವುದು ಹೇಗೆ? ಅವನು ತನ್ನ ತಾಯಿಯ ಗರ್ಭದಲ್ಲಿ ಎರಡನೆಯ ಸಾರಿ ಪ್ರವೇಶಿಸಿ ಹುಟ್ಟುವುದಕ್ಕಾದೀತೇ?” ಎಂದು ಕೇಳಿದನು. 5ಅದಕ್ಕೆ ಯೇಸು “ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ನೀರಿನಿಂದಲೂ ಮತ್ತು ಆತ್ಮನಿಂದಲೂ ಹುಟ್ಟದಿದ್ದರೆ ಅವನು ದೇವರ ರಾಜ್ಯದಲ್ಲಿ ಪ್ರವೇಶಿಸಲಾರನು. 6ದೇಹದಿಂದ ಹುಟ್ಟಿದ್ದು ದೇಹವೇ, ಆತ್ಮನಿಂದ ಹುಟ್ಟಿದ್ದು ಆತ್ಮವೇ. 7‘ನೀವು ಹೊಸದಾಗಿ ಹುಟ್ಟಬೇಕು’ ಎಂದು ನಾನು ನಿನಗೆ ಹೇಳಿದ್ದರಿಂದ ಆಶ್ಚರ್ಯಪಡಬೇಡ 8ಗಾಳಿಯು ಇಷ್ಟ ಬಂದ ಕಡೆ ಬೀಸುತ್ತದೆ. ನೀನು ಅದರ ಶಬ್ದವನ್ನು ಕೇಳುತ್ತೀ, ಆದರೆ ಅದು ಎಲ್ಲಿಂದ ಬರುತ್ತದೋ ಎಲ್ಲಿಗೆ ಹೋಗುತ್ತದೋ ನಿನಗೆ ತಿಳಿಯದು. ಆತ್ಮನಿಂದ ಹುಟ್ಟಿದವರೆಲ್ಲರೂ ಅದರಂತೆಯೇ” ಎಂದನು. 9ಅದಕ್ಕೆ ನಿಕೊದೇಮನು “ಇದೆಲ್ಲಾ ಹೇಗೆ ಸಾಧ್ಯ?” ಎಂದಾಗ, 10ಯೇಸು ಅವನಿಗೆ ಹೇಳಿದ್ದೇನಂದರೆ, “ಇಸ್ರಾಯೇಲರಿಗೆ ಬೋಧಕನಾಗಿರುವ ನಿನಗೆ ಈ ಸಂಗತಿಗಳು ತಿಳಿಯುವುದಿಲ್ಲವೋ? 11ನಿನಗೆ ನಿಜನಿಜವಾಗಿ ಹೇಳುತ್ತೇನೆ, ನಾವು ತಿಳಿದಿರುವುದನ್ನು ಮಾತನಾಡುತ್ತೇವೆ ಮತ್ತು ನೋಡಿದ್ದಕ್ಕೆ ಸಾಕ್ಷಿ ಕೊಡುತ್ತೇವೆ. ಆದರೂ ನೀವು ನಮ್ಮ ಸಾಕ್ಷಿಯನ್ನು ಸ್ವೀಕರಿಸುವುದಿಲ್ಲ. 12ನಾನು ಭೂಲೋಕದ ಕಾರ್ಯಗಳನ್ನು ಕುರಿತು ನಿಮಗೆ ಹೇಳಿದರೆ ನೀವು ನಂಬುವುದಿಲ್ಲ, ಪರಲೋಕದ ಕಾರ್ಯಗಳನ್ನು ಕುರಿತು ನಿಮಗೆ ಹೇಳಿದರೆ ಹೇಗೆ ನಂಬುವಿರಿ? 13ಪರಲೋಕದಿಂದ ಇಳಿದು ಬಂದವನೇ, ಅಂದರೆ, ಮನುಷ್ಯಕುಮಾರನೇ ಹೊರತು ಮತ್ತಾರು ಪರಲೋಕಕ್ಕೆ ಏರಿ ಹೋದವರಿಲ್ಲ. 14ಇದಲ್ಲದೆ ಮೋಶೆಯು ಅಡವಿಯಲ್ಲಿ ಕಂಚಿನ ಸರ್ಪವನ್ನು ಮೇಲೆ ಎತ್ತಿ ನಿಲ್ಲಿಸಿದ ಹಾಗೆಯೇ ಮನುಷ್ಯಕುಮಾರನು ಸಹ ಮೇಲಕ್ಕೆ ಎತ್ತಲ್ಪಡಬೇಕು. 15ಹೀಗೆ ಆತನನ್ನು ನಂಬುವವರೆಲ್ಲರೂ ನಿತ್ಯಜೀವವನ್ನು ಹೊಂದುವರು.

ಸುವಾರ್ತೆ (ಸಂತ ಜಾರ್ಜ್)

ಯೋಹಾ 15:17–16:2

17ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂತಲೇ ಇವುಗಳನ್ನು ನಾನು ನಿಮಗೆ ಆಜ್ಞಾಪಿಸುತ್ತಿದ್ದೇನೆ. 18“ಲೋಕವು ನಿಮ್ಮನ್ನು ದ್ವೇಷ ಮಾಡುವುದಾದರೆ ಅದು ಮೊದಲು ನನ್ನನ್ನು ದ್ವೇಷ ಮಾಡಿತ್ತೆಂದು ನೀವು ತಿಳಿದುಕೊಳ್ಳಿರಿ. 19ನೀವು ಲೋಕದವರಾಗಿದ್ದರೆ ಲೋಕವು ನಿಮ್ಮನ್ನು ತನ್ನವರೆಂದು ಪ್ರೀತಿಸುತ್ತಿತ್ತು. ನೀವಾದರೋ ಲೋಕದ ಕಡೆಯವರಲ್ಲ, ನಾನು ನಿಮ್ಮನ್ನು ಆರಿಸಿಕೊಂಡಿದ್ದರಿಂದಲೇ ಲೋಕವು ನಿಮ್ಮನ್ನು ದ್ವೇಷ ಮಾಡುತ್ತದೆ. 20ದಣಿಗಿಂತ ಆಳು ದೊಡ್ಡವನಲ್ಲವೆಂಬುದಾಗಿ ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಕ ಮಾಡಿಕೊಳ್ಳಿರಿ. ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು. ಅವರು ನನ್ನ ಮಾತನ್ನು ಕೈಗೊಂಡಿದ್ದರೆ ನಿಮ್ಮ ಮಾತನ್ನು ಸಹ ಕೈಗೊಳ್ಳುತ್ತಿದ್ದರು. 21ಆದರೆ ಅವರು ನನ್ನನ್ನು ಕಳುಹಿಸಿಕೊಟ್ಟಾತನನ್ನು ತಿಳಿಯದವರಾದ್ದರಿಂದ ಇದನ್ನೆಲ್ಲಾ ನನ್ನ ಹೆಸರಿನ ನಿಮಿತ್ತ ನಿಮಗೆ ಮಾಡುವರು. 22ನಾನು ಬಾರದೆ ಮತ್ತು ಅವರ ಸಂಗಡ ಮಾತನಾಡದೆ ಹೋಗಿದ್ದಾರೆ ಅವರಿಗೆ ಪಾಪವು ಇರುತ್ತಿರಲಿಲ್ಲ. ಆದರೆ ಅವರ ಪಾಪಕ್ಕಾಗಿ ಈಗ ಯಾವ ನೆಪವೂ ಇಲ್ಲ. 23ನನ್ನನ್ನು ದ್ವೇಷಿಸುವವನು ನನ್ನ ತಂದೆಯನ್ನು ಸಹ ದ್ವೇಷಿಸುತ್ತಾನೆ. 24ಬೇರೆ ಯಾರೂ ಮಾಡದಿರುವ ಕ್ರಿಯೆಗಳನ್ನು ನಾನು ಅವರ ನಡುವೆ ಮಾಡದೆಹೋಗಿದ್ದರೆ ಅವರಿಗೆ ಪಾಪವು ಇರುತ್ತಿರಲಿಲ್ಲ. ಆದರೆ ಈಗ ಅವರು ನನ್ನ ಅದ್ಭುತಕಾರ್ಯಗಳನ್ನು ನೋಡಿದ್ದಾರೆ, ಆದರೂ ನನ್ನನ್ನೂ ನನ್ನ ತಂದೆಯನ್ನೂ ದ್ವೇಷಿಸಿದ್ದಾರೆ 25‘ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಿಸಿದರು’ ಎಂದು ಅವರ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ನೆರವೇರುವಂತೆ ಹೀಗಾಯಿತು. 26ಆದರೆ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವ ಸಹಾಯಕನು, ಎಂದರೆ, ತಂದೆಯ ಬಳಿಯಿಂದ ಹೊರಡುವ ಸತ್ಯದ ಆತ್ಮನು ಬಂದಾಗ, ಆತನೇ ನನ್ನ ವಿಷಯವಾಗಿ ಸಾಕ್ಷಿ ಕೊಡುವನು. 27ನೀವು ಮೊದಲಿನಿಂದ ನನ್ನ ಸಂಗಡ ಇದ್ದುದರಿಂದ ನೀವೂ ಸಹ ನನಗೆ ಸಾಕ್ಷಿಗಳಾಗಿದ್ದೀರಿ. 16:1“ನೀವು ನಂಬಿಕೆಯಿಂದ ಎಡವಿ ಬಿದ್ದು ಹೋಗಬಾರದೆಂದು ನಾನು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. 2ಅವರು ನಿಮ್ಮನ್ನು ಸಭಾಮಂದಿರದಿಂದ ಹೊರಗೆ ಹಾಕುವರು; ಅದಲ್ಲದೆ ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಬಲಿಕೊಟ್ಟೆನೆಂದು ಭಾವಿಸುವ ಕಾಲವು ಬರಲಿದೆ.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 23 ಏಪ್ರಿಲ್ ಎಂದರೆ ನಾಗರಿಕ ಪಂಚಾಂಗದ 6 ಮೇ. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು