ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಏಪ್ರಿಲ್ 2027 › 1 ಏಪ್ರಿಲ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 1 ಏಪ್ರಿಲ್ 2027
ಗುರುವಾರ · ಪಾಸ್ಕದ ಅಷ್ಟದಿನ
ಹಬ್ಬಗಳು ಮತ್ತು ಸಂತರು
ಪಾಸ್ಕದ ಅಷ್ಟದಿನದ ಗುರುವಾರ
ಮಹೋತ್ಸವ · ಆರಾಧನಾ ಬಣ್ಣ: ಬಿಳಿ
ದಿನದ ವಾಚನಗಳು
ಮೊದಲನೆಯ ವಾಚನ
11ಗುಣಹೊಂದಿದ ಕುಂಟನು ಪೇತ್ರ ಮತ್ತು ಯೋಹಾನನ್ನು ಹಿಡುಕೊಂಡೇ ಇರುವಾಗ, ಆಶ್ಚರ್ಯಪಡುತ್ತಿರುವ ಆ ಜನರೆಲ್ಲರು ಸೊಲೊಮೋನನದೆಂದು ಹೆಸರುಳ್ಳ ಮಂಟಪಕ್ಕೆ ಒಟ್ಟಾಗಿ ಓಡಿಬಂದರು. 12ಪೇತ್ರನು ಇದನ್ನು ನೋಡಿ ಜನರಿಗೆ; “ಇಸ್ರಾಯೇಲ್ ಜನರೇ, ಈ ಘಟನೆಯಿಂದ ನೀವೇಕೆ ಆಶ್ಚರ್ಯಚಕಿತರಾಗಿದ್ದೀರಿ? ನೀವು ನಮ್ಮನೇಕೆ ಈ ರೀತಿ ದೃಷ್ಟಿಯಿಟ್ಟು ನೋಡುತ್ತಿದ್ದಿರಿ? ನಾವು ನಮ್ಮ ಸ್ವಂತ ಶಕ್ತಿಯಿಂದಾಗಲಿ, ನಮ್ಮ ದೈವಭಕ್ತಿಯಿಂದಾಗಲಿ ಇವನನ್ನು ನಡೆಯುವಂತೆ ಮಾಡಿದೆವೆಂದು ಭಾವಿಸಬೇಡಿರಿ. 13ನಮ್ಮ ಪೂರ್ವಿಕರಾದ ಅಬ್ರಹಾಮ ಇಸಾಕ ಯಾಕೋಬರ ದೇವರು ತನ್ನ ಸೇವಕನಾದ ಯೇಸುವನ್ನು ಮಹಿಮೆಪಡಿಸಿದ್ದಾನೆ. ನೀವಂತೂ ಆತನನ್ನು ಪಿಲಾತನಿಗೆ ಹಿಡಿದುಕೊಟ್ಟಿರಿ; ಮತ್ತು ಪಿಲಾತನು ಆತನನ್ನು ಬಿಡಿಸಬೇಕೆಂದು ನಿರ್ಣಯಿಸಿದಾಗ, ಆತನ ಮುಂದೆ ಆತನನ್ನು ಧಿಕ್ಕರಿಸಿ ಬೇಡವೆಂದು ಕೂಗಿದ್ದೀರಿ. 14ನೀವು ಪರಿಶುದ್ಧನೂ, ನೀತಿವಂತನೂ ಆಗಿರುವ ಯೇಸುವನ್ನು ಬೇಡವೆಂದು ಹೇಳಿ ಕೊಲೆಗಾರನಾದ ಒಬ್ಬನನ್ನು ಬಿಡಿಸಿಕೊಡಬೇಕೆಂದು ಬೇಡಿಕೊಂಡು ಜೀವದಾಯಕನಾದ ಕ್ರಿಸ್ತನನ್ನು ಕೊಲ್ಲಿಸಿದ್ದೀರಿ. 15ಆದರೆ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು; ಈ ವಿಷಯದಲ್ಲಿ ನಾವೇ ಸಾಕ್ಷಿಗಳು. 16ನೀವು ನೋಡುತ್ತಿರುವಂತಹ, ನಿಮಗೆ ಗುರುತಿರುವಂತಹ ಈ ಮನುಷ್ಯನು ಗುಣವಾಗುವುದಕ್ಕೆ ಯೇಸುವಿನ ಹೆಸರಿನಲ್ಲಿ ಇಟ್ಟ ಅವನ ನಂಬಿಕೆಯೇ ಕಾರಣ; ಆ ಹೆಸರೇ ಇವನನ್ನು ಬಲಪಡಿಸಿತು. ಆತನ ಮೂಲಕ ಉಂಟಾಗಿರುವ ನಂಬಿಕೆಯೇ ಇವನಿಗೆ ನಿಮ್ಮೆಲ್ಲರ ಮುಂದೆ ಸಂಪೂರ್ಣಸೌಖ್ಯವನ್ನು ಕೊಟ್ಟಿತು. 17“ಸಹೋದರರೇ, ಅದಿರಲಿ, ನೀವು ಆ ಕಾರ್ಯವನ್ನು ತಿಳಿಯದೆ ಮಾಡಿದಿರೆಂದು ಬಲ್ಲೆನು; ನಿಮ್ಮ ಅಧಿಕಾರಿಗಳೂ ಅದನ್ನು ತಿಳಿಯದೆ ಮಾಡಿದರು. 18ಆದರೆ, ಕ್ರಿಸ್ತನು ಕಷ್ಟಗಳನ್ನನುಭವಿಸಬೇಕೆಂದು, ದೇವರು ಎಲ್ಲಾ ಪ್ರವಾದಿಗಳ ಮೂಲಕ ಮುಂಚಿತವಾಗಿ ಹೇಳಿಸಿದ ಮಾತುಗಳನ್ನು ಹೀಗೆ ನೆರವೇರಿಸಿದನು. 19ಆದುದರಿಂದ ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ. ಹಾಗೆ ತಿರುಗಿದರೆ ಕರ್ತನ, ಸನ್ನಿಧಾನದಿಂದ 20ಪುನರುಜ್ಜೀವನದ ಕಾಲಗಳು ಒದಗಿ ಆತನು ನಿಮಗೆ ನೇಮಕವಾಗಿರುವ ಕ್ರಿಸ್ತನಾದ ಯೇಸುವನ್ನು ಕಳುಹಿಸಿಕೊಡುವನು. 21ಆದರೆ ಸಮಸ್ತವನ್ನು ಸರಿಮಾಡುವ ಕಾಲವು ಬರುವ ತನಕ ಪರಲೋಕವೇ ಕ್ರಿಸ್ತನ ಸ್ಥಾನವಾಗಿರಬೇಕು. ಆ ಕಾಲದ ವಿಷಯವಾಗಿ ದೇವರು ಪೂರ್ವದಲ್ಲಿದ್ದ ತನ್ನ ಪರಿಶುದ್ಧ ಪ್ರವಾದಿಗಳ ಮುಖಾಂತರ ಹೇಳಿಸಿದ್ದಾನೆ. 22ಮೋಶೆಯು ಹೇಳಿದ್ದೇನಂದರೆ, ‘ದೇವರಾಗಿರುವ ಕರ್ತನು ನನ್ನ ಹಾಗೆ ನಿಮ್ಮ ಸಹೋದರರಲ್ಲಿ ಮತ್ತೊಬ್ಬ ಪ್ರವಾದಿಯನ್ನು ನಿಮಗೆ ಎಬ್ಬಿಸುವನು; ಆತನು ಹೇಳುವ ಎಲ್ಲಾ ಮಾತುಗಳಿಗೆ ನೀವು ಕಿವಿಗೊಡಬೇಕು. 23ಆ ಪ್ರವಾದಿಯ ಮಾತನ್ನು ಕೇಳದಿರುವ ಪ್ರತಿಯೊಬ್ಬನು ನಮ್ಮ ಜನರೊಳಗಿಂದ ಸಂಪೂರ್ಣವಾಗಿ ನಾಶವಾಗುವನು’ ಎಂಬುದೇ. 24ಇದಲ್ಲದೆ ಸಮುವೇಲನೂ, ಅವನ ತರುವಾಯ ಬಂದು ಪ್ರವಾದಿಸಿದ ಎಲ್ಲಾ ಪ್ರವಾದಿಗಳೂ ಸಹ ಈಗಿನ ದಿನಗಳನ್ನು ಕುರಿತು ತಿಳಿಸಿರುವರು. 25ನೀವು ಆ ಪ್ರವಾದಿಗಳ ಶಿಷ್ಯರು, ದೇವರು ನಮ್ಮ ಪೂರ್ವಿಕರ ಸಂಗಡ ಮಾಡಿಕೊಂಡ ಒಡಂಬಡಿಕೆಗೆ ಬಾಧ್ಯರೂ ಆಗಿದ್ದೀರಿ. ಆತನು ಅಬ್ರಹಾಮನಿಗೆ ‘ನಿನ್ನ ಸಂತತಿಯ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವುದು’ ಎಂದು ಹೇಳಿ ಆ ಒಡಂಬಡಿಕೆಯನ್ನು ಮಾಡಿಕೊಂಡನಲ್ಲಾ. 26ಮೊದಲು ನಿಮಗಾಗಿಯೇ ದೇವರು ತನ್ನ ಸೇವಕನನ್ನು ಪ್ರತಿಷ್ಠೆಪಡಿಸಿ ಈತನು ನಿಮ್ಮಲ್ಲಿ ಪ್ರತಿಯೊಬ್ಬನನ್ನು ಅವನವನ ಕೆಟ್ಟ ನಡತೆಗಳಿಂದ ತಿರುಗಿಸಿ ನಿಮ್ಮನ್ನು ಆಶೀರ್ವದಿಸಬೇಕೆಂದು ಆತನನ್ನು ಕಳುಹಿಸಿಕೊಟ್ಟಿದ್ದಾನೆ” ಎಂದು ಹೇಳಿದನು.
ಪ್ರತಿವಚನ ಕೀರ್ತನೆ
1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಗಿತ್ತೀಯ ರಾಗದಿಂದ ಹಾಡತಕ್ಕದ್ದು; ದಾವೀದನದು. ನಮ್ಮ ಕರ್ತನಾದ ಯೆಹೋವನೇ, ನಿನ್ನ ನಾಮವು ಭೂಲೋಕದಲ್ಲೆಲ್ಲಾ ಎಷ್ಟೋ ಮಹಿಮೆಯುಳ್ಳದ್ದು. ಆಕಾಶಮಂಡಲದಲ್ಲಿ ನಿನ್ನ ವೈಭವವನ್ನು ಪ್ರಕಾಶಪಡಿಸಿದ್ದೀ. 4ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಏಕೆ ಸ್ಮರಿಸಬೇಕು? ಮಾನವನು ಎಷ್ಟರವನು? ಅವನಲ್ಲಿ ಏಕೆ ಲಕ್ಷ್ಯವಿಡಬೇಕು? 5ಅವನನ್ನು ದೇವರಿಗಿಂತ ಸ್ವಲ್ಪವೇ ಕಡಿಮೆಯಾಗಿ ಸೃಷ್ಟಿ ಮಾಡಿದಿಯಲ್ಲಾ; ಪ್ರಭಾವವನ್ನೂ ಮತ್ತು ಮಾನವನ್ನೂ ಅವನಿಗೆ ಕಿರೀಟವಾಗಿ ಇಟ್ಟಿದ್ದಿ. 6ನೀನು ಸೃಷ್ಟಿಸಿದ ಎಲ್ಲಾ ವಸ್ತುಗಳ ಮೇಲೆ ಪ್ರಭುತ್ವವನ್ನು ಅವನಿಗೆ ಅನುಗ್ರಹಿಸಿದಿ. 7ನೀನು ಎಲ್ಲಾ ಕುರಿ, ದನಗಳನ್ನು ಮಾತ್ರವೇ ಅಲ್ಲದೆ ಕಾಡುಮೃಗಗಳು, 8ಆಕಾಶದ ಪಕ್ಷಿಗಳು, ಸಮುದ್ರದ ಮೀನುಗಳು, ಅದರಲ್ಲಿ ಸಂಚರಿಸುವ ಸಕಲವಿಧವಾದ ಜೀವಜಂತುಗಳು, ಇವೆಲ್ಲವನ್ನೂ ಅವನಿಗೆ ಅಧೀನಮಾಡಿದ್ದೀಯಲ್ಲವೇ.
ಸುವಾರ್ತೆ
35ಆಗ ಅವರಿಬ್ಬರು ದಾರಿಯಲ್ಲಿ ನಡೆದ ಸಂಗತಿಯನ್ನೂ ರೊಟ್ಟಿ ಮುರಿಯುವುದರಲ್ಲಿ ತಾವು ಆತನ ಗುರುತು ಹಿಡಿದೆವೆಂಬುದನ್ನೂ ವಿವರಿಸಿದರು. 36ಅವರು ಈ ಸಂಗತಿಗಳನ್ನು ಕುರಿತು ಮಾತನಾಡುತ್ತಿರುವಾಗ ಯೇಸುವೇ ಅವರ ನಡುವೆ ನಿಂತು, “ನಿಮಗೆ ಸಮಾಧಾನವಾಗಲಿ” ಎಂದು ಅವರಿಗೆ ಹೇಳಿದನು. 37ಅವರು ದಿಗಿಲುಬಿದ್ದು ಭಯಹಿಡಿದವರಾಗಿ ತಾವು ಕಂಡದ್ದನ್ನು ಭೂತವೆಂದು ಭಾವಿಸಿದರು. 38ಆತನು ಅವರಿಗೆ, “ಯಾಕೆ ಕಳವಳಗೊಳ್ಳುತ್ತೀರಿ? ನಿಮ್ಮ ಹೃದಯಗಳಲ್ಲಿ ಅನುಮಾನಗಳು ಹುಟ್ಟುವುದೇಕೆ? 39ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿರಿ. ನಾನೇ ಅಲ್ಲವೇ, ನನ್ನನ್ನು ಮುಟ್ಟಿ ನೋಡಿರಿ. ನಿಮಗೆ ಕಾಣುವ ಪ್ರಕಾರ ನನಗೆ ಮಾಂಸವೂ ಎಲುಬುಗಳೂ ಉಂಟು. ಅವು ಭೂತಕ್ಕಿಲ್ಲ” ಎಂದು ಹೇಳಿದನು. 40ಇದನ್ನು ಹೇಳಿದ ಮೇಲೆ ಆತನು ತನ್ನ ಕೈಗಳನ್ನೂ ಕಾಲುಗಳನ್ನೂ ಅವರಿಗೆ ತೋರಿಸಿದನು. 41ಆದರೆ ಅವರು ಸಂತೋಷಭರಿತರಾಗಿ ಇನ್ನೂ ನಂಬದೇ ಆಶ್ಚರ್ಯಪಡುತ್ತಿರಲಾಗಿ ಆತನು, “ತಿನ್ನತಕ್ಕ ಪದಾರ್ಥವೇನಾದರೂ ನಿಮ್ಮಲ್ಲುಂಟೋ?” ಎಂದು ಅವರನ್ನು ಕೇಳಲು, 42ಅವರು ಸುಟ್ಟ ಮೀನಿನ ಒಂದು ತುಂಡನ್ನು ಆತನಿಗೆ ಕೊಟ್ಟರು. 43ಆತನು ಅದನ್ನು ತೆಗೆದುಕೊಂಡು ಅವರ ಮುಂದೆ ತಿಂದನು. 44ತರುವಾಯ ಯೇಸು, “ನಾನು ನಿಮ್ಮ ಸಂಗಡ ಇದ್ದಾಗ ಇದೆಲ್ಲಾ ನಿಮಗೆ ತಿಳಿಸಲಿಲ್ಲವೇ? ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿಯೂ, ಪ್ರವಾದಿಗಳ ಗ್ರಂಥಗಳಲ್ಲಿಯೂ, ಕೀರ್ತನೆಗಳಲ್ಲಿಯೂ ಬರೆದಿರುವುದೆಲ್ಲಾ ನೆರವೇರುವುದು ಅಗತ್ಯವೆಂದು ನಿಮಗೆ ಹೇಳಲಿಲ್ಲವೇ?” ಅಂದನು. 45ಆ ಮೇಲೆ ಅವರು ಶಾಸ್ತ್ರ ವಚನಗಳನ್ನು ತಿಳಿದುಕೊಳ್ಳುವಂತೆ ಆತನು ಅವರ ಮನಸ್ಸುಗಳನ್ನು ತೆರೆದನು. 46ಅನಂತರ, “ಮೊದಲೇ ಪ್ರಕಟವಾದ ಪ್ರಕಾರ ‘ಕ್ರಿಸ್ತನು ಕಷ್ಟ ಪಟ್ಟು, ಸತ್ತು ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವನೆಂತಲೂ, 47ಅದಲ್ಲದೆ ಜನರು ಪಾಪಕ್ಷಮಾಪಣೆಗೋಸ್ಕರ ಪಶ್ಚಾತ್ತಾಪಟ್ಟು, ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಈ ಸುವಾರ್ತೆಯು ಯೆರೂಸಲೇಮ್ ಮೊದಲುಗೊಂಡು ಸಮಸ್ತ ದೇಶದವರಿಗೂ ಆತನ ಹೆಸರಿನಲ್ಲಿ ಸಾರಲ್ಪಡಬೇಕು’ ಎಂದು ಬರೆದದೆ. 48ಇವುಗಳ ವಿಷಯದಲ್ಲಿ ನೀವೇ ಸಾಕ್ಷಿ ಹೇಳುವವರಾಗಿದ್ದೀರಿ.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು