Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ನವೆಂಬರ್ 2026 › 14 ನವೆಂಬರ್

ಆರ್ಥೊಡಾಕ್ಸ್ ಪಂಚಾಂಗ · ನವೆಂಬರ್ 1 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 14 ನವೆಂಬರ್ 2026

ಶನಿವಾರ · ಪಂಚಾಶತ್ತಮದ ನಂತರದ 24ನೇ ವಾರ · ಸ್ವರ 6

ಹಬ್ಬಗಳು ಮತ್ತು ಸಂತರು

Holy Wonderworkers and Unmercenaries Cosmas and Damian of Mesopotamia, and their mother, Saint Theodotia (3rd C)

ಉಪವಾಸ

ಉಪವಾಸವಿಲ್ಲ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಪತ್ರಿಕೆ

2 ಕೊರಿ 11:1–6

1ನಾನು ನನ್ನನ್ನು ಹೊಗಳಿಕೊಳ್ಳುವ ಹುಚ್ಚುತನವನ್ನು ನೀವು ಸ್ವಲ್ಪ ಸಹಿಸಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ. ನೀವು ನನ್ನನ್ನು ಸಹಿಸಿಕೊಳ್ಳಿರಿ. 2ಯಾಕೆಂದರೆ ದೇವರಲ್ಲಿರುವಂಥ ಚಿಂತೆಯಿಂದಲೇ ನಾನು ನಿಮ್ಮ ವಿಷಯದಲ್ಲಿ ಚಿಂತಿಸುತ್ತೇನೆ. ನಿಮ್ಮನ್ನು ಕ್ರಿಸ್ತನೆಂಬ ಒಬ್ಬನೇ ಪುರುಷನಿಗೆ ಶುದ್ಧ ಕನ್ಯೆಯಾಗಿ ಒಪ್ಪಿಸಬೇಕೆಂದು ನಿಮ್ಮನ್ನು ಆತನಿಗೆ ನಿಶ್ಚಯಮಾಡಿಸಿದ್ದೇನಲ್ಲ. 3ಆದರೆ ಹೇಗೆ ಹವ್ವಳು ಸರ್ಪದ ಕುಯುಕ್ತಿಗೆ ಒಳಗಾಗಿ ಮೋಸಹೋದಳೋ ಹಾಗೆ ನಿಮ್ಮ ಮನಸ್ಸು ಕ್ರಿಸ್ತನ ವಿಷಯದಲ್ಲಿರಬೇಕಾದ ಯಥಾರ್ಥತ್ವವನ್ನೂ ಶುದ್ಧತ್ವವನ್ನೂ ಬಿಟ್ಟು ಕೆಟ್ಟುಹೋದೀತೆಂದು ನನಗೆ ಭಯವಾಗಿದೆ. 4ಯಾಕೆಂದರೆ ಯಾರಾದರು ಬಂದು ನಾವು ಬೋಧಿಸಿದ ಯೇಸುವನ್ನಲ್ಲದೆ ಮತ್ತೊಬ್ಬ ಯೇಸುವನ್ನು ನಿಮಗೆ ಪ್ರಕಟಿಸುವಾಗಲೂ ಇಲ್ಲವೇ ನೀವು ಹೊಂದದೆ ಇದ್ದ ಬೇರೆ ವಿಧವಾದ ಆತ್ಮಪ್ರೇರಣೆಯನ್ನು ಹೊಂದುವಾಗಲೂ, ನೀವು ಒಪ್ಪಿಕೊಳ್ಳದೆ ಇದ್ದ ಬೇರೊಂದು ಸುವಾರ್ತೆಯನ್ನು ಕೇಳುವಾಗಲೂ ನೀವು ಸಹಿಸಿಕೊಳ್ಳುತ್ತಿರುವುದು ಬಹು ಆಶ್ಚರ್ಯ. 5“ಅತಿಶ್ರೇಷ್ಟರಾದ ಅಪೊಸ್ತಲರು” ಅನ್ನಿಸಿಕೊಳ್ಳುವ ಅವರಿಗಿಂತ ನಾನು ಒಂದರಲ್ಲಾದರೂ ಕಡಿಮೆಯಾದವನಲ್ಲವೆಂದು ಎಣಿಸುತ್ತೇನೆ 6ನಾನು ವಾಕ್ಚಾತುರ್ಯದಲ್ಲಿ ನಿಪುಣನಲ್ಲದಿದ್ದರೂ ಜ್ಞಾನದಲ್ಲಿ ಅಲ್ಪನಲ್ಲ. ಇದನ್ನು ಎಲ್ಲಾ ಸಮಯಸಂದರ್ಭಗಳಲ್ಲೂ ಸ್ಪಷ್ಟಪಡಿಸಿದ್ದೇನೆ.

ಪತ್ರಿಕೆ (ಸಂತರಾದ ಕೊಸ್ಮಸ್ ಮತ್ತು ದಮಿಯಾನ್)

1 ಕೊರಿ 12:27–13:8

27ನೀವು ಕ್ರಿಸ್ತನ ದೇಹವು ಮತ್ತು ಒಬ್ಬೊಬ್ಬರಾಗಿ ಅದಕ್ಕೆ ಅಂಗಗಳಾಗಿದ್ದೀರಿ. 28ದೇವರು ತನ್ನ ಸಭೆಯಲ್ಲಿ ಮೊದಲನೆಯದಾಗಿ ಅಪೊಸ್ತಲರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಬೋಧಕರನ್ನು ಇಟ್ಟಿದ್ದಾನೆ. ಆ ಮೇಲೆ ಮಹತ್ಕಾರ್ಯ ಮಾಡುವ ಶಕ್ತಿಯನ್ನು, ನಾನಾ ರೋಗಗಳನ್ನು ವಾಸಿಮಾಡುವ ವರವನ್ನೂ, ಪರಸಹಾಯ ಮಾಡುವ ಗುಣವನ್ನೂ, ಕಾರ್ಯಗಳನ್ನು ನಿರ್ವಹಿಸುವ ಜ್ಞಾನವನ್ನು ಮತ್ತು ವಿವಿಧ ಭಾಷೆಗಳನ್ನಾಡುವ ವರವನ್ನೂ ಅವರವರಿಗೆ ಬೇರೆ ಬೇರೆಯಾಗಿ ಕೊಟ್ಟಿದ್ದಾನೆ. 29ಎಲ್ಲರು ಅಪೊಸ್ತಲರೋ? ಎಲ್ಲರು ಪ್ರವಾದಿಗಳೋ? ಎಲ್ಲರೂ ಬೋಧಕರೋ? ಎಲ್ಲರೂ ಮಹತ್ಕಾರ್ಯಗಳನ್ನು ಮಾಡುವವರೋ? 30ರೋಗ ವಾಸಿಮಾಡುವ ವರಗಳು ಎಲ್ಲರಿಗೂ ಉಂಟೋ? ಎಲ್ಲರೂ ಅನ್ಯಭಾಷೆಗಳನ್ನಾಡುವರೋ? ಅನ್ಯಭಾಷೆಗಳ ಅರ್ಥವನ್ನು ಹೇಳುವುದಕ್ಕೆ ಎಲ್ಲರಿಗೂ ಶಕ್ತಿಯುಂಟೋ? 31ಇವುಗಳಲ್ಲಿ ಶ್ರೇಷ್ಠ ವರಗಳನ್ನು ಆಸಕ್ತಿಯಿಂದ ಅಪೇಕ್ಷಿಸಿರಿ. ಇನ್ನೂ ಸರ್ವೋತ್ತಮವಾದ ಮಾರ್ಗವೊಂದನ್ನು ನಿಮಗೆ ತೋರಿಸುತ್ತೇನೆ. 13:1ನಾನು ಮನುಷ್ಯರ ಭಾಷೆಗಳನ್ನೂ, ದೇವದೂತರ ಭಾಷೆಗಳನ್ನೂ ಮಾತನಾಡುವವನಾದರೂ ಪ್ರೀತಿಯಿಲ್ಲದವನಾಗಿದ್ದರೆ ನಾದಕೊಡುವ ಕಂಚಿನ ಜಾಗಟೆ, ಗಣಗಣಿಸುವ ಘಂಟೆ ಆಗಿದ್ದೇನೆ. 2ನನಗೆ ಪ್ರವಾದನ ವರವಿದ್ದರೂ, ಎಲ್ಲಾ ರಹಸ್ಯಗಳೂ, ಸಕಲ ವಿಧವಾದ ವಿದ್ಯೆಗಳನ್ನು ತಿಳಿದ್ದರೂ, ಬೆಟ್ಟಗಳನ್ನೂ ತೆಗೆದಿಡುವುಷ್ಟು ನಂಬಿಕೆಯಿದ್ದರೂ, ಪ್ರೀತಿಯಿಲ್ಲದವನಾಗಿದ್ದರೆ ನಾನು ಏನೂ ಅಲ್ಲದವನಾಗಿದ್ದೇನೆ. 3ನನಗಿರುವುದೆಲ್ಲವನ್ನು ಬಡವರಿಗೆ ಅನ್ನದಾನಮಾಡಿದರೂ, ನನ್ನ ದೇಹವನ್ನು ಸುಡುವುದಕ್ಕೆ ಒಪ್ಪಿಸಿದರೂ, ಪ್ರೀತಿಯು ನನಗಿಲ್ಲದಿದ್ದರೆ ನನಗೇನು ಪ್ರಯೋಜನವಿಲ್ಲ. ನಾನು ಬರಿದಾಗಿರುವನು. 4ಪ್ರೀತಿಯು ಬಹು ತಾಳ್ಮೆಯುಳ್ಳದ್ದು, ದಯೆಯುಳ್ಳದ್ದು. ಪ್ರೀತಿಯು ಹೊಟ್ಟೆಕಿಚ್ಚುಪಡುವುದಿಲ್ಲ, ಹೊಗಳಿಕೊಳ್ಳುವುದಿಲ್ಲ. ಅದು ಗರ್ವಪಡುವುದಿಲ್ಲ, ಅಸಭ್ಯವಾಗಿ ನಡೆಯುವುದಿಲ್ಲ. 5ಸ್ವಪ್ರಯೋಜನವನ್ನು ಚಿಂತಿಸುವುದಿಲ್ಲ. ಬೇಗ ಸಿಟ್ಟುಗೊಳ್ಳುವುದಿಲ್ಲ. ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. 6ಅನ್ಯಾಯದಲ್ಲಿ ಸಂತೋಷಪಡುವುದಿಲ್ಲ ಆದರೆ ಸತ್ಯದಲ್ಲಿ ಸಂತೋಷಪಡುತ್ತದೆ. 7ಎಲ್ಲವನ್ನು ತಾಳಿಕೊಳ್ಳುತ್ತದೆ. ಎಲ್ಲವನ್ನು ನಂಬುತ್ತದೆ. ಎಲ್ಲವನ್ನು ನಿರೀಕ್ಷಿಸುತ್ತದೆ. ಎಲ್ಲವನ್ನು ಸಹಿಸಿಕೊಳ್ಳುತ್ತದೆ. 8ಪ್ರೀತಿಯು ಎಂದಿಗೂ ನಿಂತುಹೋಗುವುದಿಲ್ಲ. ಪ್ರವಾದನೆಗಳಾದರೂ ಇಲ್ಲದಂತಾಗುವವು. ಅನ್ಯಭಾಷೆಗಳೋ ನಿಂತುಹೋಗುವವು. ತಿಳಿವಳಿಕೆಯೋ ಇಲ್ಲದಂತಾಗುವುದು.

ಸುವಾರ್ತೆ

ಲೂಕ 8:16–21

16“ಇದಲ್ಲದೆ ಯಾರೂ ದೀಪವನ್ನು ಹಚ್ಚಿ ಪಾತ್ರೆಯಿಂದ ಮುಚ್ಚುವುದಿಲ್ಲ, ಮಂಚದ ಕೆಳಗೂ ಇಡುವುದಿಲ್ಲ. ಮನೆಯೊಳಗೆ ಬರುವವರಿಗೆ ಬೆಳಕು ಕಾಣಿಸುವಂತೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ. 17ಬೆಳಕಿಗೆ ಬಾರದ ಯಾವ ರಹಸ್ಯವೂ ಇಲ್ಲ ಮತ್ತು ಪ್ರಕಟವಾಗದೆ ಇರುವಂಥ ಒಂದು ಗುಟ್ಟೂ ಇರುವುದಿಲ್ಲ, ಅದು ಬಟ್ಟಬಯಲಾಗುವುದು. 18ಆದುದರಿಂದ ನೀವು ಹೇಗೆ ಕಿವಿಗೊಡಬೇಕೋ ನೋಡಿಕೊಳ್ಳಿರಿ, ಏಕೆಂದರೆ ಇದ್ದವನಿಗೆ ಕೊಡಲ್ಪಡುವುದು; ಇಲ್ಲದವನ ಕಡೆಯಿಂದ ಅವನು ತನ್ನದೆಂದು ಎಣಿಸುವಂಥದೂ ತೆಗೆಯಲ್ಪಡುವುದು” ಅಂದನು. 19ಯೇಸುವಿನ ತಾಯಿಯೂ ತಮ್ಮಂದಿರೂ ಆತನಿದ್ದಲ್ಲಿಗೆ ಬಂದು ಜನರ ಗುಂಪಿನ ನಿಮಿತ್ತ ಆತನ ಬಳಿಗೆ ಹೋಗಲಾರದೆ ಇದ್ದರು. 20ಜನರು ಆತನಿಗೆ, “ನಿನ್ನ ತಾಯಿಯು, ನಿನ್ನ ಸಹೋದರರು ನಿನ್ನನ್ನು ಕಾಣಬೇಕೆಂದು ಹೊರಗೆ ನಿಂತಿದ್ದಾರೆ” ಎಂದು ಹೇಳಿದಾಗ, 21ಆತನು ಅವರಿಗೆ, “ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನಗೆ ತಾಯಿಯು ಸಹೋದರರು ಆಗಿದ್ದಾರೆ” ಎಂದು ಉತ್ತರಕೊಟ್ಟನು.

ಸುವಾರ್ತೆ (ಸಂತರಾದ ಕೊಸ್ಮಸ್ ಮತ್ತು ದಮಿಯಾನ್)

ಮತ್ತಾ 10:1, 5–8

1ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ ದೆವ್ವಗಳನ್ನು ಬಿಡಿಸುವುದಕ್ಕೂ ಎಲ್ಲಾ ಬಗೆಯ ರೋಗಗಳನ್ನೂ ಎಲ್ಲಾ ರೀತಿಯ ಬೇನೆಗಳನ್ನೂ ವಾಸಿಮಾಡುವುದಕ್ಕೂ ಅಧಿಕಾರ ಕೊಟ್ಟನು. 5ಈ ಹನ್ನೆರಡು ಮಂದಿಯನ್ನು ಯೇಸು ಕಳುಹಿಸಿದನು; ಕಳುಹಿಸುವಾಗ ಅವರಿಗೆ ಅಪ್ಪಣೆ ಕೊಟ್ಟದ್ದೇನಂದರೆ, “ಅನ್ಯಜನಗಳಿರುವಲ್ಲಿಗೆ ಹೋಗಬೇಡಿರಿ, ಸಮಾರ್ಯದವರ ಊರೊಳಗೆ ಕಾಲಿಡಬೇಡಿರಿ; 6ಇವರನ್ನು ಬಿಟ್ಟು ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲಿನ ಮನೆತನದವರ ಬಳಿಗೆ ಹೋಗಿರಿ. 7‘ಪರಲೋಕ ರಾಜ್ಯವು ಸಮೀಪವಾಯಿತೆಂದು’ ಸಾರಿಹೇಳುತ್ತಾ ಹೋಗಿರಿ. 8ರೋಗಿಗಳನ್ನು ಸ್ವಸ್ಥಮಾಡಿರಿ, ಸತ್ತವರನ್ನು ಬದುಕಿಸಿರಿ, ಕುಷ್ಠರೋಗಿಗಳನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ; ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 1 ನವೆಂಬರ್ ಎಂದರೆ ನಾಗರಿಕ ಪಂಚಾಂಗದ 14 ನವೆಂಬರ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು