Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ನವೆಂಬರ್ 2026 › 13 ನವೆಂಬರ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 13 ನವೆಂಬರ್ 2026

ಶುಕ್ರವಾರ · ಸಾಮಾನ್ಯ ಕಾಲದ 32ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 32ನೇ ವಾರದ ಶುಕ್ರವಾರ

ವಾರದ ದಿನ · ಆರಾಧನಾ ಬಣ್ಣ: ಹಸಿರು

ಉಪವಾಸ ಮತ್ತು ಪ್ರಾಯಶ್ಚಿತ್ತ

ಪ್ರಾಯಶ್ಚಿತ್ತದ ದಿನ

ಪ್ರತಿ ಶುಕ್ರವಾರವೂ ಪ್ರಾಯಶ್ಚಿತ್ತದ ದಿನ; ಅದನ್ನು ಹೇಗೆ ಆಚರಿಸಬೇಕು ಎಂಬುದನ್ನು ಪ್ರತಿಯೊಂದು ಬಿಷಪರ ಸಮ್ಮೇಳನ ನಿರ್ಧರಿಸುತ್ತದೆ: ಮಾಂಸ ವರ್ಜನೆ ಅಥವಾ ಬೇರೊಂದು ಪ್ರಾಯಶ್ಚಿತ್ತ ಕಾರ್ಯ. ಉಪವಾಸ 18 ರಿಂದ 59 ವರ್ಷದವರಿಗೆ, ಮಾಂಸ ವರ್ಜನೆ 14 ವರ್ಷದಿಂದ ಕಡ್ಡಾಯ.

ದಿನದ ವಾಚನಗಳು

ಮೊದಲನೆಯ ವಾಚನ

2 ಯೋಹಾ 1:4–9

4ತಂದೆಯಿಂದ ನಾವು ಹೊಂದಿದ ಆಜ್ಞಾನುಸಾರ, ನಿಮ್ಮ ಮಕ್ಕಳಲ್ಲಿ ಕೆಲವರು, ಸತ್ಯವಂತರಾಗಿ ನಡೆಯುವುದನ್ನು ಕಂಡು ನಾನು ಬಹಳ ಸಂತೋಷಪಟ್ಟೆನು. 5ಅಮ್ಮನವರೇ, ನಾನು ಹೊಸ ಆಜ್ಞೆಯನ್ನು ನಿಮಗೆ ಬರೆಯದೆ, ಮೊದಲಿನಿಂದಲೂ ನಮಗೆ ಇದ್ದ ಆಜ್ಞೆಯನ್ನು ನಿಮಗೆ ಬರೆಯುವವನಾಗಿ; ನಾವು ಒಬ್ಬರನ್ನೊಬ್ಬರು ಪ್ರೀತಿಸುವವರಾಗಿರೋಣ ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. 6ದೇವರ ಆಜ್ಞೆಗಳನ್ನು ಅನುಸರಿಸಿ, ವಿಧೇಯರಾಗಿ ನಡೆಯುವುದೇ ಪ್ರೀತಿಯಾಗಿದೆ. ಪ್ರೀತಿಯಲ್ಲಿ ನಡೆಯಬೇಕೆಂಬುದೇ, ನೀವು ಮೊದಲಿನಿಂದಲೂ ಕೇಳಿದ ಆಜ್ಞೆಯಾಗಿದೆ. 7ಏಕೆಂದರೆ, ಯೇಸುಕ್ರಿಸ್ತನು ಮನುಷ್ಯನಾಗಿ ಬಂದನು ಎಂಬುದನ್ನು ಒಪ್ಪದೆ ಇರುವ ಅನೇಕ ಮೋಸಗಾರರು ಲೋಕದೊಳಗೆ ಹೊರಟು ಬಂದಿದ್ದಾರೆ. ಇಂಥವರೇ, ಯೇಸುವನ್ನು ಒಪ್ಪದ ಮೋಸಗಾರರೂ, ಕ್ರಿಸ್ತವಿರೋಧಿಗಳು ಆಗಿದ್ದಾರೆ. 8ನೀವು ಪ್ರಯಾಸಪಟ್ಟು ಮಾಡಿದವುಗಳನ್ನು, ಕಳೆದುಕೊಳ್ಳದೆ ಪೂರ್ಣ ಪ್ರತಿಫಲವನ್ನು ಹೊಂದುವಂತೆ ಜಾಗರೂಕರಾಗಿರಿ. 9ಕ್ರಿಸ್ತನ ಉಪದೇಶದಲ್ಲಿ ನೆಲೆಗೊಳ್ಳದೆ ಅದನ್ನು ಮೀರಿ ಹೋಗುವವನಲ್ಲಿ ದೇವರಿಲ್ಲ. ಆ ಉಪದೇಶದಲ್ಲಿ ನೆಲೆಗೊಂಡಿರುವವನಿಗೆ ತಂದೆಯ ಮತ್ತು ಮಗನ ಅನ್ಯೋನ್ಯತೆ ಇರುತ್ತದೆ.

ಪ್ರತಿವಚನ ಕೀರ್ತನೆ

ಕೀರ್ತ 119:1–2, 10–11, 17–18

1ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸಿ, ಸದಾಚಾರಿಗಳಾಗಿ ನಡೆಯುವವರು ಧನ್ಯರು. 2ಆತನ ಕಟ್ಟಳೆಗಳನ್ನು ಕೈಕೊಂಡು, ಪೂರ್ಣಹೃದಯದಿಂದ ಆತನನ್ನು ಹುಡುಕುವವರು ಭಾಗ್ಯವಂತರು. 10ನಾನು ಪೂರ್ಣಮನಸ್ಸಿನಿಂದ ನಿನ್ನನ್ನು ಹುಡುಕುತ್ತೇನೆ, ನಿನ್ನ ಆಜ್ಞೆಗಳಿಗೆ ತಪ್ಪಿಹೋಗದಂತೆ ನನ್ನನ್ನು ಕಾಪಾಡು. 11ನಿನಗೆ ವಿರುದ್ಧವಾಗಿ ಪಾಪಮಾಡದಂತೆ, ನಿನ್ನ ನುಡಿಗಳನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. 17ನಿನ್ನ ಸೇವಕನಾದ ನನ್ನ ಮೇಲೆ ದಯವಿಡು, ಆಗ ಜೀವದಿಂದಿದ್ದು ನಿನ್ನ ವಾಕ್ಯವನ್ನು ಕೈಗೊಳ್ಳುವೆನು. 18ನನ್ನ ಕಣ್ಣುಗಳನ್ನು ತೆರೆ, ಆಗ ನಿನ್ನ ಧರ್ಮಶಾಸ್ತ್ರದ ಅದ್ಭುತಗಳನ್ನು ಕಂಡುಕೊಳ್ಳುವೆನು.

ಸುವಾರ್ತೆ

ಲೂಕ 17:26–37

26ನೋಹನ ದಿನಗಳಲ್ಲಿ ನಡೆದ ಹಾಗೆಯೇ ಮನುಷ್ಯಕುಮಾರನ ದಿನಗಳಲ್ಲಿಯೂ ನಡೆಯುವುದು. 27ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಮದುವೆಮಾಡಿಕೊಳ್ಳುತ್ತಿದ್ದರು, ಮದುವೆಮಾಡಿಕೊಡುತ್ತಿದ್ದರು. ಆಗ ಜಲಪ್ರಳಯವು ಬಂದು ಎಲ್ಲರನ್ನು ನಾಶಮಾಡಿತು. 28ಮತ್ತು ಲೋಟನ ದಿನಗಳಲ್ಲಿ ನಡೆದ ಪ್ರಕಾರ ನಡೆಯುವುದು. ಅವರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಕೊಂಡುಕೊಳ್ಳುತ್ತಿದ್ದರು, ಮಾರಾಟಮಾಡುತ್ತಿದ್ದರು, ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು. 29ಆದರೆ ಲೋಟನು ಸೊದೋಮ್ ಊರನ್ನು ಬಿಟ್ಟುಹೋದ ದಿನದಲ್ಲಿ, ಆಕಾಶದಿಂದ ಬೆಂಕಿ ಗಂಧಕಗಳು ಸುರಿದು ಅವರೆಲ್ಲರನ್ನು ನಾಶಮಾಡಿದವು. 30ಮನುಷ್ಯಕುಮಾರನು ಪ್ರತ್ಯಕ್ಷವಾಗುವ ದಿನದಲ್ಲಿ ಅದೇ ರೀತಿಯಾಗಿ ಇರುವುದು. 31ಆ ದಿನದಲ್ಲಿ ಮಾಳಿಗೆಯ ಮೇಲೆ ಇರುವವನು ಮನೆಯೊಳಗಿರುವ ತನ್ನ ವಸ್ತುಗಳನ್ನು ತೆಗೆದುಕೊಳ್ಳುವುದಕ್ಕೆ ಇಳಿದು ಬರಬಾರದು. ಅದೇ ಪ್ರಕಾರ ಹೊಲದಲ್ಲಿರುವವನು ಸಹ ತಿರುಗಿ ಹಿಂದಕ್ಕೆ ಹೋಗಬಾರದು. 32ಲೋಟನ ಹೆಂಡತಿಯನ್ನು ನೆನಪಿಗೆ ತಂದುಕೊಳ್ಳಿರಿ. 33ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು, ಪ್ರಾಣವನ್ನು ಕಳೆದುಕೊಂಡವನು ಅದನ್ನು ರಕ್ಷಿಸಿಕೊಳ್ಳುವನು. 34ಆ ರಾತ್ರಿಯಲ್ಲಿ ಇಬ್ಬರು ಒಂದೇ ಹಾಸಿಗೆಯಲ್ಲಿ ಇರುವರು. ಒಬ್ಬನು ತೆಗೆದುಕೊಳ್ಳಲ್ಪಡುವನು, ಮತ್ತೊಬ್ಬನು ಕೈ ಬಿಡಲ್ಪಡುವನು. 35ಇಬ್ಬರು ಹೆಂಗಸರು ಒಂದೇ ಕಲ್ಲಲ್ಲಿ ಬೀಸುತ್ತಿರುವರು. ಒಬ್ಬಳು ತೆಗೆದುಕೊಳ್ಳಲ್ಪಡುವಳು, ಮತ್ತೊಬ್ಬಳು ಬಿಡಲ್ಪಡುವಳು.” 36“ಹೊಲದಲ್ಲಿ ಇಬ್ಬರಿರುವರು; ಒಬ್ಬನು ತೆಗೆದುಕೊಳ್ಳಲ್ಪಡುವನು, ಮತ್ತೊಬ್ಬನು ಬಿಡಲ್ಪಡುವನು” ಅಂದನು. 37ಈ ಮಾತಿಗೆ ಶಿಷ್ಯರು, “ಕರ್ತನೇ, ಅದು ಎಲ್ಲಿ ಆಗುವುದು?” ಎಂದು ಕೇಳಲು ಆತನು ಅವರಿಗೆ, “ಹೆಣ ಎಲ್ಲಿಯೋ ಅಲ್ಲಿಯೇ ರಣಹದ್ದುಗಳು ಬಂದು ಸೇರುವವು” ಎಂದು ಉತ್ತರಕೊಟ್ಟನು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ A, ವಾರದ ದಿನಗಳ ವರ್ಷ II.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು